Site icon Vistara News

Modi in Bengaluru | ಡಬ್ಬಲ್‌ ಎಂಜಿನ್‌ ಸರ್ಕಾರದಿಂದ ರಾಜ್ಯಕ್ಕೆ ಲಾಭ; ಮತ್ತೆ ಮೋದಿ ಪ್ರತಿಪಾದನೆ

modi programme

ಬೆಂಗಳೂರು: ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿರುವುದರಿಂದ ರಾಜ್ಯದ ಜನತೆಗೆ ಲಾಭವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತೆ ಪ್ರತಿಪಾದಿಸಿದ್ದಾರೆ. “ಡಬ್ಬಲ್‌ ಎಂಜಿನ್‌ ಸರ್ಕಾರʼʼ ಜಾರಿಗೆ ತಂದ ವಿವಿಧ ಯೋಜನೆಗಳನ್ನು ಪ್ರಸ್ತಾಪಿಸಿದ ಅವರು, ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಕೊಡುಗೆಗಳನ್ನು ವಿವರಿಸಿದ್ದಾರೆ.

ಬೆಂಗಳೂರು ನಗರ ನಿರ್ಮಾತೃ, ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಭವ್ಯ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದ ಬಳಿಕ ನಡೆದ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಜಲ್‌ ಜೀವನ್‌, ಮನೆ ಮನೆಗೆ ಗಂಗೆ, ಆಯುಷ್ಮಾನ್‌ ಭಾರತ್‌, ಪಿಎಂ ಕಿಸಾನ್‌, ಪಿಎಂ ಸ್ವನಿಧಿ ಯೋಜನೆಗಳ ರಾಜ್ಯದ ಫಲಾನುಭವಿಗಳ ಕುರಿತು ಮಾಹಿತಿ ನೀಡಿದರು.

ರಾಜ್ಯ ಸರ್ಕಾರ ಜಾರಿಗೆ ತಂದಿರುವ, ಇಂದು ತಾವು ಉದ್ಘಾಟಿಸಿದ “ಕರ್ನಾಟಕ- ಭಾರತ್‌ ಗೌರವ್‌ ಕಾಶಿ ದರ್ಶನ್‌” ರೈಲು ಯಾತ್ರೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ದೇಶವನ್ನು ಸಾಂಸ್ಕೃತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಜೋಡಿಸುವ ಈ ಯಾತ್ರೆಯು ಏಕ ಮತ್ತು ಬಲಿಷ್ಠ ಭಾರತ ನಿರ್ಮಾಣದಲ್ಲಿ ಮಹತ್ತರ ಕೊಡುಗೆ ನೀಡಲಿದೆ ಎಂದರು.

ಈಗಾಗಲೇ ಶಿರಡಿ ಸಾಯಿಬಾಬಾ ಮಂದಿರ, ರಾಮನ ತೀರ್ಥ ಕ್ಷೇತ್ರಗಳಿಗೆ ತೆರಳಲು ಈ ರೀತಿಯ ಯಾತ್ರೆಗಳನ್ನು ರೈಲ್ವೆಯು ಆರಂಭಿಸಿದೆ. ಈ ಯಾತ್ರೆಯಲ್ಲಿ ತೆರಳಿದವರು ಈಗಾಗಲೇ ಸುಖದ ಅನುಭವವನ್ನು ವ್ಯಕ್ತಪಡಿಸುತ್ತಿದ್ದಾರೆ. ಕರ್ನಾಟಕ ಸರ್ಕಾರವು ಕಾಶಿ, ಆಯೋಧ್ಯೆ, ಪ್ರಯಾಗ್ ರಾಜ್‌ಗೆ ತೆರಳಲು ರೈಲ್ವೆ ಸೌಕರ್ಯವನ್ನು ಒದಗಿಸಿದ್ದು, ಇದು ರಾಜ್ಯದ ಜನತೆಗೆ ಅನುಕೂಲವಾಗಲಿದೆ ಎಂದಿದ್ದಾರೆ.

ಇದನ್ನೂ ಓದಿ | Modi in Bengaluru | ಬೆಂಗಳೂರು ಬೆಳೆದಿದ್ದರೂ, ಕೆಂಪೇಗೌಡರು ಕಟ್ಟಿದ ಪೇಟೆಗಳು ಈಗಲೂ ಸಕ್ರಿಯ: ಪ್ರಧಾನಿ ಮೋದಿ

Exit mobile version