ಬೆಂಗಳೂರು: ಸಂತ ಕನಕದಾಸರ “ಕುಲ ಕುಲವೆಂದು ಹೊಡೆದಾಡದಿರಿ” ಕಾವ್ಯದ ಸಾಲನ್ನು ಪ್ರಸ್ತಾಪಿಸುವ ಮೂಲಕ ಜಾತಿ ವ್ಯವಸ್ಥೆಯನ್ನು ತೊಡೆದುಹಾಕಬೇಕೆಂದು ಪ್ರಧಾನಿ ನರೇಂದ್ರ ಮೋದಿ (Modi in Bengaluru) ಹೇಳುತ್ತಿದ್ದಂತೆ ಸೇರಿದ್ದ ಜನಸ್ತೋಮ ಕರತಾಡನ ಮಾಡುವ ಮೂಲಕ ಸ್ವಾಗತಿಸಿದವು. ಅಲ್ಲದೆ, ಸಿರಿಧಾನ್ಯಗಳ ಮಹತ್ವವನ್ನು ಆಗಲೇ ತಮ್ಮ ರಾಮಧಾನ್ಯ ಚರಿತೆಯಲ್ಲಿ ಉಲ್ಲೇಖಿಸಿದ್ದರು ಎಂದು ಬಣ್ಣಿಸಿದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಲೋಕಾರ್ಪಣೆ, ಕೆಂಪೇಗೌಡರ ೧೦೮ ಅಡಿ ಎತ್ತರದ ಪ್ರತಿಮೆ ಅನಾವರಣ ನಡೆಸಿದ ಪ್ರಧಾನಿ ಮೋದಿ ಅವರು ಬಳಿಕ ಏರ್ಪೋರ್ಟ್ ಸಮೀಪದ ಭುವನಹಳ್ಳಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿ, ಜಾತಿ ವ್ಯವಸ್ಥೆ ಬಗ್ಗೆ ಆಗಲೇ ಕನಕದಾಸರು ಹೇಳಿದ್ದರು ಎಂದು ಕನಕದಾಸರ ಜಯಂತಿಯ ಸಂದರ್ಭದಲ್ಲಿ ಅವರ ಮಹತ್ವದ ಬಗ್ಗೆ ಉಲ್ಲೇಖಿಸಿದರು.
ದೈವ ಭಕ್ತಿ, ಸಾಮಾಜಿಕ ಶಕ್ತಿಯಿಂದ ಸಮಾಜವನ್ನು ನಾವು ಹೇಗೆ ಜೋಡಿಸಬಹುದು ಎಂಬ ಪ್ರೇರಣೆಯನ್ನು ನಾವು ಸಂತ ಕನಕದಾಸರಿಂದ ಪಡೆದುಕೊಂಡಿದ್ದೇವೆ. ಅವರು ಕೃಷ್ಣನ ಭಕ್ತಿಯ ಕಡೆಗೆ ಮಾರ್ಗವನ್ನು ತೋರಿದ್ದು ಮಾತ್ರವಲ್ಲದೆ, “ಕುಲ ಕುಲವೆಂದು ಹೊಡೆದಾಡದಿರಿ.. ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ” ಎಂಬ ಸಾಲನ್ನು ಉಲ್ಲೇಖಿಸಿದ ಪ್ರಧಾನಿಯವರು, ಕನಕದಾಸರು ಈ ಸಂದೇಶವನ್ನು ನೀಡುವ ಮೂಲಕ ಜಾತಿಯ ಹೆಸರಿನಲ್ಲಿ ಇರುವ ಭೇದ-ಭಾವವನ್ನು ಕಿತ್ತೊಗೆಯಲು ಮುಂದಾಗಿದ್ದರು ಎಂದು ಬಣ್ಣಿಸಿದರು.
ಇಂದು ಸಿರಿಧಾನ್ಯಗಳ ಬಗ್ಗೆ ನಾವು ಬಹಳವಾಗಿಯೇ ಚರ್ಚೆ ಮಾಡುತ್ತಿದ್ದೇವೆ. ಆದರೆ, ಸಂತ ಕನಕದಾಸರು ಇದರ ಮಹತ್ವವನ್ನು ಅಂದಿನ ಕಾಲದಲ್ಲಿಯೇ ಸಾರಿದ್ದಾರೆ. ಅವರು ತಮ್ಮ ರಾಮಧಾನ್ಯ ಚರಿತ್ರೆಯಲ್ಲಿ ರಾಗಿ ಬಗ್ಗೆ ಉಲ್ಲೇಖಿಸಿದ್ದರು. ರಾಗಿ ಧಾನ್ಯದ ಬಗ್ಗೆ ಅವರು ವಿವರಣೆಯನ್ನು ನೀಡುವ ಮೂಲಕ ಸಾಮಾಜಿಕ ಸಮಾನತೆಯ ಸಂದೇಶವನ್ನು ಸಾರಿ ಹೇಳಿದರು ಎಂಬುದಾಗಿ ಪ್ರಧಾನಿ ಮೋದಿ ಅವರು ಕನಕದಾಸರ ಕೊಡುಗೆಯನ್ನು ಸ್ಮರಿಸಿದರು.
ಇದನ್ನೂ ಓದಿ | Modi in Bengaluru | ಎಂಟೇ ವರ್ಷದಲ್ಲಿ ದೇಶದ ವಿಮಾನ ನಿಲ್ದಾಣಗಳ ಸಂಖ್ಯೆ ಡಬಲ್: ನರೇಂದ್ರ ಮೋದಿ