ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚೆನ್ನೈ- ಬೆಂಗಳೂರು ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಉದ್ಘಾಟಿಸಿದರು.
ಚೆನ್ನೈ- ಬೆಂಗಳೂರು ನಡುವೆ, ದಕ್ಷಿಣ ಭಾರತದ ಮೊದಲ ಹಾಗೂ ಭಾರತದ ಐದನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಯಾಣಿಸಲಿದೆ. ಚೆನ್ನೈನಿಂದ ಮೈಸೂರಿಗೆ ಈಗ ಇರುವ ಶತಾಬ್ದಿ ಎಕ್ಸ್‌ಪ್ರೆಸ್ ೭ ಗಂಟೆಯಲ್ಲಿ ಪ್ರಯಾಣ ಪೂರ್ತಿಗೊಳಿಸಿದರೆ ವಂದೇ ಭಾರತ್ ರೈಲು ಕೇವಲ ಆರು ಗಂಟೆಯಲ್ಲಿ ಕ್ರಮಿಸಲಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ಗಂಟೆಗೆ 75-77 ಕಿ.ಮೀ ವೇಗದಲ್ಲಿ ಸಂಚರಿಸಲಿದ್ದು, 504 ಕಿ.ಮೀ ದೂರವನ್ನು 6 ಗಂಟೆ ಮೂವತ್ತು ನಿಮಿಷಗಳಲ್ಲಿ ತಲುಪಲಿದೆ. ಮೇಕ್ ಇನ್ ಇಂಡಿಯಾ ಭಾಗವಾಗಿ ಇದು ಸಂಚರಿಸಲಿದ್ದು, ಪ್ರವಾಸೋದ್ಯಮ ವೃದ್ಧಿಗೆ ನೆರವಾಗುವ ನಿರೀಕ್ಷೆ ಇದೆ.
ಇದರ ವೇಳಾಪಟ್ಟಿ ಹೀಗಿದೆ: ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಬೆಳಗ್ಗೆ 5.50ಕ್ಕೆ ಪ್ರಯಾಣ ಪ್ರಾರಂಭ ಮಾಡಲಿದ್ದು, 10.25ಕ್ಕೆ ಬೆಂಗಳೂರು ತಲುಪಲಿದೆ. 10.30ಕ್ಕೆ ಬೆಂಗಳೂರು ಬಿಟ್ಟು 12.30ಕ್ಕೆ ಮೈಸೂರು ತಲುಪಲಿದೆ. ವಾಪಸ್ ಪ್ರಯಾಣದಲ್ಲಿ ಮಧ್ಯಾಹ್ನ 1.05ಕ್ಕೆ ಮೈಸೂರು ಬಿಡಲಿದ್ದು, 2.55ಕ್ಕೆ ಬೆಂಗಳೂರು, 3 ಗಂಟೆಗೆ ಬೆಂಗಳೂರು ಬಿಟ್ಟು ರಾತ್ರಿ 7.35ಕ್ಕೆ ಚೆನ್ನೈ ತಲುಪಲಿದೆ.
ರೈಲಿನ ವಿಶೇಷತೆಗಳೇನು?
ಇದು ಸಂಪೂರ್ಣ ಸ್ವದೇಶಿ ನಿರ್ಮಿತ ರೈಲು. 15% ಸಲಕರಣೆಗಳನ್ನು ಮಾತ್ರ ಆಮದು ಮಾಡಿಕೊಳ್ಳಲಾಗಿದೆ. ವಂದೇ ಭಾರತ್ ರೈಲು ಗರಿಷ್ಠ 180 km ವೇಗದಲ್ಲಿ ಸಂಚಾರ ಮಾಡುತ್ತದೆ. ಇತರ ರೈಲಿಗಿಂತ ಪ್ರಯಾಣ ಅವಧಿ 45% ಕಡಿಮೆ ಆಗಲಿದೆ. ಎಲ್ಲಾ ಕೋಚ್‌ಗಳಿಗೆ ಆಟೋಮ್ಯಾಟಿಕ್ ಡೋರ್ ವ್ಯವಸ್ಥೆ ಇರಲಿದೆ. ಜಿಪಿಎಸ್ ಆಧಾರಿತ ಆಡಿಯೋ ವಿಶುವಲ್ ಮಾಹಿತಿಯನ್ನು ಪ್ರಯಾಣಿಕರಿಗೆ ನೀಡುತ್ತದೆ.
ಉಚಿತ ವೈಫೈ ವ್ಯವಸ್ಥೆ ಇರಲಿದೆ. ಆರಾಮದಾಯಕ ಆಸನಗಳು, ಪ್ರತಿ ಆಸನಕ್ಕೂ ಪ್ರತ್ಯೇಕ ಬೆಳಕು, ಬಯೋ ವ್ಯಾಕ್ಯೂಮ್ ಟಾಯ್ಲೆಟ್ ವ್ಯವಸ್ಥೆ ಇರಲಿದೆ. ಪ್ರಯಾಣಿಕರಿಗೆ ಬಿಸಿ ಊಟ, ತಂಪು ಪಾನೀಯಗಳು ಲಭ್ಯವಾಗುತ್ತವೆ. ಪ್ರತಿ ಕೋಚ್‌ಗೂ ಸಿಸಿಟಿವಿ ಕ್ಯಾಮರಾ, ತುರ್ತು ನಿರ್ಗಮನದ ಕಿಟಕಿ ಇರುತ್ತವೆ. ರೈಲು ಘರ್ಷಣೆ ತಪ್ಪಿಸಲು ಕವಚ್ ತಂತ್ರಜ್ಞಾನ ಹೊಂದಿದೆ. ಈ ರೈಲು ಎಂಜಿನ್ ಹೊಂದಿಲ್ಲ. ಡಿಸ್ಟ್ರಿಬ್ಯೂಟ್ ಟ್ರಾಕ್ಷನ್ ಪವರ್ ಸಿಸ್ಟಮ್‌ನಲ್ಲಿ ಸಂಚಾರ ಮಾಡಲಿದೆ.
ಇದನ್ನೂ ಓದಿ | Modi in Bengaluru | ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲಿಗೆ ಮೋದಿ ಚಾಲನೆ, ಭಾರಿ ಸಂಭ್ರಮ