Site icon Vistara News

Modi in bengaluru | ಇನ್ನೂ ಬಹಳಷ್ಟಿದೆ 108 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆಯ ವೈಶಿಷ್ಟ್ಯ!

Kempegowda statue

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಪ್ರಧಾನಿ ನರೇಂದ್ರ ಮೋದಿ ಇಂದು ಅನಾವರಣಗೊಳಿಸುತ್ತಿರುವ 108 ಅಡಿ ಎತ್ತರದ ರಾಜಧಾನಿ ನಗರ ನಿರ್ಮಾತೃ ಕೆಂಪೇಗೌಡರ ಪ್ರತಿಮೆಯ ವೈಶಿಷ್ಟ್ಯಗಳು ಹಲವಾರಿವೆ.

ಈ ಪ್ರತಿಮೆ, ಇದುವರೆಗಿನ ಸ್ಥಾಪನೆಯಾಗಿರುವ ನಗರ ಸಂಸ್ಥಾಪಕರ ಪ್ರತಿಮೆಗಳಲ್ಲೆಲ್ಲಾ ಅತೀ ಎತ್ತರದ ಕಂಚಿನ ಪ್ರತಿಮೆ ಎಂಬ ಹೆಗ್ಗಳಿಕೆ ಹೊಂದಿದೆ. 108 ಅಡಿ ಎತ್ತರದ ಈ ಪ್ರತಿಮೆ ತೂಕ 218 ಟನ್. ಕಂಚಿನ ಪ್ರತಿಮೆಯ ಖಡ್ಗದ ತೂಕವೇ 4 ಟನ್​​ ಇದೆ. 64 ಕೋಟಿ ರೂಪಾಯಿ ವೆಚ್ಚದಲ್ಲಿ ಇದರ ನಿರ್ಮಾಣವಾಗಿದೆ.

ಈ ಪ್ರತಿಮೆ ವರ್ಲ್ಡ್​ ಬುಕ್ ಆಫ್​ ರೆಕಾರ್ಡ್ಸ್ ಸೇರಿದೆ. ಪ್ರತಿಮೆಯ ಸುತ್ತಮುತ್ತ 23 ಎಕರೆಯಲ್ಲಿ ಕೆಂಪೇಗೌಡ ಥೀಮ್ ಪಾರ್ಕ್​ ನಿರ್ಮಿಸಲಾಗಿದ್ದು, ಇದೆಲ್ಲವೂ ಸೇರಿ 87 ಕೋಟಿ ರೂ. ವೆಚ್ಚವಾಗಿದೆ. ಇದನ್ನು ʼಪ್ರಗತಿ ಪ್ರತಿಮೆʼ ಎಂದು ಕರೆಯಲಾಗಿದೆ.

ಇದರ ನಿರ್ಮಾಣಕ್ಕೆ 2020ರ ಜೂನ್ 26ರಂದು ಅಂದಿನ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ಪ್ರತಿಮೆಯ ಕೆಲಸಕ್ಕೆ ಮತ್ತಷ್ಟು ಚುರುಕು ದೊರೆತಿತ್ತು. ಈ ಪ್ರತಿಮೆಗೆ 98 ಟನ್‌ ಕಂಚು ಮತ್ತು 120 ಟನ್ ಉಕ್ಕು ಬಳಕೆ ಮಾಡಲಾಗಿದೆ. ಪ್ರತಿಮೆ ನಿರ್ಮಾಣಕ್ಕೆ ಬರೋಬ್ಬರಿ 2 ವರ್ಷ 5 ತಿಂಗಳ ಸಮಯ ತೆಗೆದುಕೊಂಡಿದ್ದು, 85 ಎಂಜಿನಿಯರ್​ಗಳು ಕೆಲಸ ಮಾಡಿದ್ದಾರೆ.

ಇದನ್ನೂ ಓದಿ | Modi in Bengaluru | ವಿಧಾನ ಸೌಧದ ಆವರಣದಲ್ಲಿ ಕನಕ, ವಾಲ್ಮೀಕಿ ಪ್ರತಿಮೆಗಳಿಗೆ ನಮನ ಸಲ್ಲಿಸಿದ ಮೋದಿ

ಪ್ರತಿಮೆಯ ಹಿಂದಿರುವ ವಾಸ್ತುಶಿಲ್ಪಿಗಳು ಪದ್ಮವಿಭೂಷಣ ರಾಮ ಸುತಾರ್‌ ಆರ್ಟ್ಸ್‌ ಆ್ಯಂಡ್‌ ಕ್ರಿಯೇಷನ್ಸ್‌ ಸಂಸ್ಥೆ. ರಾಮ ಸುತಾರ್‌ ಅವರ ಪುತ್ರ ಅನಿಲ್‌ ಸುತಾರ್‌ ಪ್ರತಿಮೆಯ ವಿನ್ಯಾಸ ಮಾಡಿದ್ದಾರೆ. ಮೊದಲು ಇವರು ತಯಾರಿಸಿದ್ದ ಪ್ರತಿಮೆಯ ಮಾದರಿಯನ್ನು ಆದಿಚುಂಚನಗಿರಿ ಶ್ರೀಗಳು ಹಾಗೂ ಅಶ್ವತ್ಥ ನಾರಾಯಣ ಅವರು ವೀಕ್ಷಿಸಿ ಹಸಿರು ನಿಶಾನೆ ನೀಡಿದ ಬಳಿಕ, 9 ಅಡಿಗಳ ಪ್ರತಿಮೆ ನಿರ್ಮಾಣ ಮಾಡಲಾಗಿತ್ತು. ಇದನ್ನೂ ಶ್ರೀಗಳ ನೇತೃತ್ವದ ಸಮಿತಿ ನೋಡಿ ಸಮ್ಮತಿಸಿದ ಬಳಿಕವೇ ಅಸಲಿ ಪ್ರತಿಮೆ ಮಾಡಲಾಗಿದೆ.

ಮೊದಲು ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ನಲ್ಲಿ ಪ್ರತಿಮೆ ಮಾಡಿ, ಆ ಬಳಿಕ ಕಂಚಿನ ಎರಕ ಹೊಯ್ಯಲಾಗಿದೆ. ಎಲ್ಲ ಭಾಗಗಳೂ ಬೇರೆ ಕಡೆ ತಯಾರಾಗಿ, ಬೆಂಗಳೂರಿನಲ್ಲಿ ತಂದು ಸೇರಿಸಲಾಗಿದೆ. ಈ ಪ್ರತಿಮೆ ನಿರ್ಮಾಣಕ್ಕೆ ಮುನ್ನ ಕೆಂಪೇಗೌಡರ ಕಾಲದ ಇತಿಹಾಸದ ವರ್ಣಚಿತ್ರಗಳನ್ನು ಅಧ್ಯಯನ ಮಾಡಲಾಗಿದೆ. ಅವರು ಉಡುಪು ಧರಿಸುತ್ತಿದ್ದ ರೀತಿ, ಅವರ ಉದ್ದೇಶ ಹಾಗೂ ಸಾಧನೆ ಎಲ್ಲವನ್ನೂ ಶಿಲ್ಪಿಗಳು ಅಧ್ಯಯನ ನಡೆಸಿದ್ದಾರೆ. ಹೀಗಾಗಿ ಕೆಂಪೇಗೌಡರ ಪ್ರತಿಮೆ ನೈಜವೆನ್ನಿಸುವಂತೆ ಬಂದಿದೆ.

ಈ ಪ್ರತಿಮೆಯನ್ನು ನಿರ್ಮಿಸಿದ ಸುತಾರ ಸಂಸ್ಥೆಯೇ ಗುಜರಾತ್‌ನ ಏಕತಾ ಪ್ರತಿಮೆ ಹಾಗೂ ಕರ್ನಾಟಕ ವಿಧಾನಸೌಧದ ಮುಂಭಾಗದ ಮಹಾತ್ಮ ಗಾಂಧಿ ಪ್ರತಿಮೆಯನ್ನೂ ನಿರ್ಮಿಸಿದೆ.

ಇದನ್ನೂ ಓದಿ | Kempegowda Statue | ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ, ಪ್ರಧಾನಿ ಸಾರ್ವಜನಿಕ ಸಭೆಗೆ ಸಕಲ ಸಿದ್ಧತೆ

Exit mobile version