ಬೆಂಗಳೂರು: ನಾಡಪ್ರಭು ಕೆಂಪೇಗೌಡ ಅವರ ಚಿಂತನೆ, ವಿಚಾರಧಾರೆ, ನೀತಿ-ರೀತಿಯ ಮಾರ್ಗದಲ್ಲಿ ನಾವು ಈ ನಾಡನ್ನು ಕಟ್ಟುತ್ತೇವೆ ಎಂಬ ಸಂಕಲ್ಪವನ್ನು ನಾವು ಈ ದಿನ ಮಾಡುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Modi in Bengaluru) ಅವರು ಪ್ರಗತಿಯ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಲೋಕಾರ್ಪಣೆ, ಕೆಂಪೇಗೌಡರ ೧೦೮ ಅಡಿ ಎತ್ತರದ ಪ್ರತಿಮೆ ಅನಾವರಣ ಬಳಿಕ ಏರ್ಪೋರ್ಟ್ ಸಮೀಪದ ಭುವನಹಳ್ಳಿಯಲ್ಲಿ ಏರ್ಪಡಿಸಲಾಗಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಕೆಂಪೇಗೌಡರು ಒಬ್ಬರು ವಿಕಾಸ ಪುರುಷರಾಗಿದ್ದಾರೆ. ಹೀಗಾಗಿ ಈಗ ನಿರ್ಮಾಣ ಮಾಡಲಾಗಿರುವ ಪ್ರತಿಮೆಗೆ ಪ್ರಗತಿಯ ಪ್ರತಿಮೆ ಎಂದು ಹೆಸರನ್ನು ಇಟ್ಟಿದ್ದೇವೆ. ಇದನ್ನು ನಾವು ಸಮೃದ್ಧಿಯ ಪ್ರತಿಮೆ ಎಂದೂ ಕರೆಯಬಹುದಾಗಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ತವರು ನಾಡಿನಲ್ಲಿ ಸರ್ಧಾರ್ ವಲ್ಲಭಬಾಯಿ ಅವರ ಏಕತೆಯ ಪ್ರತಿಮೆ ಇದ್ದರೆ, ನಾವು ನಮ್ಮ ರಾಜ್ಯದ ಸರ್ಧಾರ ಕೆಂಪೇಗೌಡರ ಪ್ರಗತಿಯ ಪ್ರತಿಮೆಯನ್ನು ಸ್ಥಾಪನೆ ಮಾಡಿದ್ದೇವೆ ಎಂದು ಬಣ್ಣಿಸಿದರು.
ವಿಜಯನಗರ ಸಾಮ್ರಾಜ್ಯದಲ್ಲಿದ್ದ ಸುವರ್ಣಯುಗವನ್ನು ಈ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ತಂದುಕೊಟ್ಟಿರುವ ಕೀರ್ತಿ ಕೆಂಪೇಗೌಡ ಅವರಿಗೆ ಸಲ್ಲುತ್ತದೆ. ಅವರ ದೂರದೃಷ್ಟಿಯಿಂದ ಇಂದು ಬೆಂಗಳೂರು ನಗರ ಇಡೀ ವಿಶ್ವದ ಗಮನ ಸೆಳೆದಿದೆ. ಯೋಜನಾಬದ್ಧವಾಗಿ ಅವರು ಬೆಂಗಳೂರನ್ನು ಕಟ್ಟಿಕೊಟ್ಟಿದ್ದಾರೆ. ಕೆರೆ-ಕಟ್ಟೆಗಳ ಸಹಿತ ವ್ಯಾಪಾರ-ವಹಿವಾಟಿಗೆ ಎಲ್ಲ ಸೌಕರ್ಯವನ್ನು ಕಟ್ಟಿಕೊಟ್ಟಿದ್ದಾರೆ. ಈ ಕಾರ್ಯಕ್ರಮದ ಮೂಲಕ ಈ ನಾಡಿನ ಸಂಸ್ಕೃತಿ, ಪರಂಪರೆ, ಇತಿಹಾಸ ಮತ್ತು ಕೆಂಪೇಗೌಡ ಪ್ರಗತಿಪರ ಚಿಂತನೆಗೆ ನಾವು ಗೌರವವನ್ನು ಅರ್ಪಿಸಿದ್ದೇವೆ ಎಂದು ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ | Modi in Bengaluru | ಪ್ರಧಾನಿ ನರೇಂದ್ರ ಮೋದಿ ಧರಿಸುವ ಕೆಂಪೇಗೌಡ ಪೇಟದ ವಿಶೇಷತೆ ಏನು?
ನಾಡಿಗೆ ಶ್ರೇಷ್ಠರಾದ ಸಂತರಾಗಿರುವ ಕನಕದಾಸರು ಹಾಗೂ ಮಹರ್ಷಿ ವಾಲ್ಮೀಕಿ ಅವರ ಪುತ್ಥಳಿಗೆ ಪ್ರಧಾನಿ ಮೋದಿ ಅವರು ಪುಷ್ಪನಮನ ಸಲ್ಲಿಸಿ ಗೌರವ ನಮನ ಸಲ್ಲಿಸಿದ್ದಾರೆ. ಇದಲ್ಲದೆ, ಒನಕೆ ಓಬವ್ವ ಅವರಿಗೂ ಗೌರವಾರ್ಪಣೆ ಮಾಡಿದ್ದಾರೆ. ಇವರ ಮೂಲಕ ಕೆಂಪೇಗೌಡ ಅವರ ಪ್ರಗತಿಯ ಪ್ರತಿಮೆ ಲೋಕಾರ್ಪಣೆಗೊಳ್ಳುತ್ತಿರುವ ನಮ್ಮ ಪುಣ್ಯ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ವಂದೇ ಭಾರತ್ ರೈಲನ್ನು ಉದ್ಘಾಟನೆ ಮಾಡಿ ಬೆಂಗಳೂರು-ಮೈಸೂರು- ಚೆನ್ನೈಗೆ ಮಾರ್ಗಕ್ಕೆ ಚಾಲನೆ ನೀಡಿದ್ದು, ಬಹು ವರ್ಷಗಳ ಬೇಡಿಕೆಯನ್ನು ಪ್ರಧಾನಿಯವರು ಈಡೇರಿಸಿದ್ದಾರೆ. ಇನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸುವ ಮೂಲಕ ದೇಶದ ಎರಡನೇ ಅತಿದೊಡ್ಡ ಏರ್ಪೋರ್ಟ್ ಅನ್ನು ಸಾರ್ವಜನಿಕ ಮುಕ್ತ ಮಾಡಿದ್ದಾರೆ. ಈ ಖ್ಯಾತಿಯನ್ನು ತಂದುಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಧನ್ಯವಾದವನ್ನು ಅರ್ಪಿಸುತ್ತೇನೆ ಎಂದು ಹೇಳಿದರು.
ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕವಾಗಿ ಭಾರತವನ್ನು ಸಬಲಗೊಳಿಸಿದ್ದಾರೆ. ಜಗತ್ತೇ ಈಗ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿದ್ದರೆ, ಪ್ರಧಾನಿ ಮೋದಿ ಅವರು ನಮ್ಮ ದೇಶವನ್ನು ಅಭಿವೃದ್ಧಿಯತ್ತ ಮುನ್ನಡೆಸುತ್ತಿದ್ದಾರೆ. ಆತ್ಮನಿರ್ಭರ್ ಭಾರತ ಮೂಲಕ ಜನರನ್ನು ಸ್ವಾವಲಂಬಿಯನ್ನಾಗಿ ಮಾಡಿದ್ದಾರೆ. ಈಗ ವಂದೇ ಭಾರತ ರೈಲು ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ೨ನೇ ಟರ್ಮಿನಲ್ ಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಈ ಹಿಂದೆ ಕರಾವಳಿಯಲ್ಲಿ ಬಂದರನ್ನು ಕೊಡುಗೆಯಾಗಿ ನೀಡಿದ್ದಾರೆ. ಇಲ್ಲಿ ಸಬರ್ಬನ್ ರೈಲು ಕೊಟ್ಟಿದ್ದಾರೆ. ಈ ಮೂಲಕ ಕರ್ನಾಟಕದ ಅಭಿವೃದ್ಧಿಯಲ್ಲಿ ಬಹಳ ದೊಡ್ಡ ಕೊಡುಗೆಯನ್ನು ಕೊಟ್ಟಿದ್ದಾರೆ. ಅವರಿಗೆ ನನ್ನ ಅಭಿನಂದನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
೪ ಕೋಟಿ ಜನರಿಂದ ಸಂಗ್ರಹವಾಗಿರುವ ಮೃತ್ತಿಕೆ
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ವಂದೇ ಭಾರತ್ ರೈಲು, ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ೨ನೇ ಟರ್ಮಿನಲ್ ಹಾಗೂ ನಾಡಪ್ರಭು ಕೆಂಪೇಗೌಡ ಅವರ ಪ್ರಗತಿಯ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಿದರು. ಅಲ್ಲದೆ, ಸುಮಾರು ೪ ಕೋಟಿ ಜನರಿಂದ ಸಂಗ್ರಹಿಸಿದ ಪವಿತ್ರ ಮೃತ್ತಿಕೆಯನ್ನು ಕೆಂಪೇಗೌಡ ಟರ್ಮಿನಲ್‌ನ ಥೀಮ್ ಪಾರ್ಕ್‌ಗೆ ಮೋದಿ ಅವರು ಅರ್ಪಿಸಿದ್ದಾರೆ. ಇದು ಅತ್ಯಂತ ಸ್ಮರಣೀಯ ದಿನವಾಗಿದೆ ಎಂದು ಹೇಳಿದರು.
ಇದನ್ನೂ ಒದಿ | Modi in Bengaluru| ಕೆಂಪೇಗೌಡರ ನೈಜ ಅನುಯಾಯಿ ಕಾಂಗ್ರೆಸ್, ಬಿಜೆಪಿ ಅಲ್ಲ ಎಂದ ಸಿದ್ದರಾಮಯ್ಯ
ಈ ಹಿಂದೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಒಂದನೇ ಟರ್ಮಿನಲ್ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ಆಗಿದ್ದರೆ, ಈಗ ೨ನೇ ಟರ್ಮಿನಲ್ ಪ್ರಧಾನಿ ನರೇಂದ್ರ ಮೋದಿ ಅವರ ಈ ಕಾಲಪರ್ವದಲ್ಲಿ ನಡೆದಿದೆ. ಇದೇ ರೀತಿ ಬೆಂಗಳೂರಿಗೆ ಹಲವಾರು ಯೋಜನೆಗಳನ್ನು ನಮ್ಮ ಕೇಂದ್ರ ಸರ್ಕಾರ ಕೊಟ್ಟಿದೆ. ಬೆಂಗಳೂರಿಗೆ ಮೆಟ್ರೋ, ಪ್ರಸ್ತುತ ಸಬರ್ಬನ್ ರೈಲು ಸೇರಿದಂತೆ ಅನೇಕ ಯೋಜನೆಗಳನ್ನು ಕರ್ನಾಟಕಕ್ಕೆ ಕೊಡುಗೆಯಾಗಿ ಪ್ರಧಾನಿ ಮೋದಿ ಅವರು ನೀಡಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಮೂಲತಃ ಬೆಳಗಾವಿಯ ಚಿಕ್ಕೋಡಿಯವರಾದ ಥಾಣೆದಾರ್ ಅವರು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟಿವ್ ಆಗಿ ಆಯ್ಕೆಯಾಗಿದ್ದು, ಅವರಿಗೂ ಅಭಿನಂದನೆ ಸಲ್ಲಿಸುವುದಾಗಿ ಜೋಶಿ ಹೇಳಿದರು.
ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಶ್ರೀಗಳು, ತುಮಕೂರಿನ ಸ್ಪಟಿಕಪುರಿ ಮಹಾಸಂಸ್ಥಾನದ ನಂಜಾವದೂತ ಶ್ರೀಗಳು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ರಾಜ್ಯದ ನಾನಾ ಭಾಗಗಳಿಂದ ಬಂದಿರುವ ಸುಮಾರು ೩ ಲಕ್ಷ ಮಂದಿ ಭಾಗವಹಿಸಿದ್ದರು.
ಇದನ್ನೂ ಓದಿ | Modi in Bengaluru | ಬೆಂಗಳೂರು ನಿರ್ಮಾತೃ ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಲೋಕಾರ್ಪಣೆ