ಮೈಸೂರು: ಹುಲಿಗಳ ಸಂರಕ್ಷಣೆ ಕುರಿತ ಯೋಜನೆಯ (Project Tiger) ಸುವರ್ಣ ಸಂಭ್ರಮ (50 ವರ್ಷ) ಹಿನ್ನೆಲೆಯಲ್ಲಿ ಮೈಸೂರು, ಚಾಮರಾಜನಗರದಲ್ಲಿ ಇಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರಿಗೆ ಶನಿವಾರ ರಾತ್ರಿ ಪ್ರಧಾನಿ ಬಂದಿಳಿದಿದ್ದಾರೆ. ( Modi in Karnataka) ಇಂದು ಬೆಳಗ್ಗೆ 7ರಿಂದ 9.40ರವರೆಗೆ ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಅವರು ಭೇಟಿ ನೀಡಲಿದ್ದಾರೆ. ಸಫಾರಿ ಮಾಡುವ ಮೂಲಕ ಹುಲಿ ಸಂರಕ್ಷಣೆಯ ಸಂದೇಶ ಸಾರಲಿದ್ದಾರೆ.
ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ಭಾಗವಹಿಸುವಿಕೆಗೆ ನಿರ್ಬಂಧ ವಿಧಿಸಲಾಗಿದೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಬಂಡೀಪುರ ಮಾರ್ಗವಾಗಿ ಕೇರಳಕ್ಕೆ ತೆರಳುವ ವಾಹನ ಸಂಚಾರಕ್ಕೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ.
ಬಂಡೀಪುರ, ಮಧುಮಲೈ ಕಾಡಿಗೆ ಭೇಟಿ ನೀಡಿದ ಬಳಿಕ ಪ್ರಧಾನಿ ಮೋದಿಯವರು ಮೈಸೂರಿಗೆ ವಾಪಸಾಗಲಿದ್ದಾರೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಹುಲಿ ಯೋಜನೆ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವಿದೇಶಗಳ ಆಹ್ವಾನಿತರು, ದೇಶದ ಅರಣ್ಯಾಧಿಕಾರಿಗಳು, ಅರಣ್ಯ ಮತ್ತು ಹುಲಿ ಸಂರಕ್ಷಣೆಯಲ್ಲಿ ತೊಡಗಿರುವವರು ಪಾಲ್ಗೊಳ್ಳಲಿದ್ದಾರೆ. ಪ್ರಧಾನ ಭಾಷಣವನ್ನು ನರೇಂದ್ರ ಮೋದಿ ಮಾಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಇಂದಿನ ಕಾರ್ಯಕ್ರಮಗಳ ವೇಳಾಪಟ್ಟಿ ಇಲ್ಲಿದೆ:
ಬೆಳಗ್ಗೆ 6.20ಕ್ಕೆ ಮೈಸೂರು ವಿಶೇಷ ಹೆಲಿಪ್ಯಾಡ್ನಿಂದ ಚಾಮರಾಜನಗರದತ್ತ ಪಯಣ.
ಬೆಳಗ್ಗೆ 7 ಗಂಟೆಗೆ ಮೇಲುಕಾಮನಹಳ್ಳಿ ಹೆಲಿಪ್ಯಾಡ್ಗೆ ಆಗಮನ.
ಬೆಳಗ್ಗೆ 7.15ಕ್ಕೆ ಬಂಡೀಪುರಕ್ಕೆ ಭೇಟಿ, ಸಫಾರಿ ನಡೆಸಲಿರುವ ಮೋದಿ.
ಅಲ್ಲಿಂದ ರಸ್ತೆ ಮಾರ್ಗವಾಗಿ ತೆಪ್ಪಕಾಡು ಆನೆ ಕ್ಯಾಂಪ್ಗೆ ಭೇಟಿ.
ಸುಮಾರು 2 ಗಂಟೆಗಳ ಕಾಲ ಅರಣ್ಯದಲ್ಲಿ ಕಾಲ ಕಳೆಯಲಿರುವ ಪ್ರಧಾನಿ.
ಬೆಳಗ್ಗೆ 10.20ಕ್ಕೆ ಮೈಸೂರಿಗೆ ವಾಪಸ್ ಆಗಲಿರುವ ನರೇಂದ್ರ ಮೋದಿ.
ಮೈಸೂರು ವಿಶ್ವವಿದ್ಯಾನಿಲಯದ ಓವೆಲ್ ಮೈದಾನದ ವಿಶೇಷ ಹೆಲಿಪ್ಯಾಡ್ಗೆ ಇಳಿಯಲಿರುವ ಮೋದಿ.
ಬೆಳಗ್ಗೆ 10.30ಕ್ಕೆ ಕರ್ನಾಟಕ ಮುಕ್ತ ವಿವಿ ಘಟಿಕೋತ್ಸವ ಭವನಕ್ಕೆ ಆಗಮನ.
ಹುಲಿ ಯೋಜನೆ 50ನೇ ವರ್ಷದ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗಿ.
ಕಾರ್ಯಕ್ರಮದಲ್ಲಿ ದೇಶ ವಿದೇಶಗಳ ಗಣ್ಯರು ಭಾಗಿ.
ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿಷೇಧ.
12.10 ಹೆಲಿಕಾಪ್ಟರ್ ಮೂಲಕ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ವಾಪಸ್.
12.40ಕ್ಕೆ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ದೆಹಲಿಗೆ ಪಯಣ.