ಚಾಮರಾಜನಗರ: ಹುಲಿಗಳ ಸಂರಕ್ಷಣೆ ಕುರಿತ ಯೋಜನೆಯ(Project Tiger) ಸುವರ್ಣ ಸಂಭ್ರಮದ ನಿಮಿತ್ತ ಪ್ರಧಾನಿ ನರೇಂದ್ರ ಮೋದಿಯವರು (PM Modi) ಇಂದು ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಸುಮಾರು 22 ಕಿಮೀಗಳ ದೂರ ಹುಲಿ ಸಫಾರಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿಯವರು ಅಭಯಾರಣ್ಯದಲ್ಲಿ ಸಫಾರಿ ಜೀಪ್ನಲ್ಲಿ ಡ್ರೈವರ್ ಪಕ್ಕವೇ ನಿಂತು ಸಾಗಿದ್ದಾರೆ. ಅವರ ಸಫಾರಿ ಮುಗಿಯುತ್ತಿದ್ದಂತೆ ವಾಹನ ಚಾಲಕ ಮಧು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಸಂತಸ ವ್ಯಕ್ತಪಡಿಸಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿಯವರ ಸಫಾರಿ ವಾಹನಕ್ಕೆ ಚಾಲಕನಾಗಿದ್ದು ಖುಷಿತಂದಿದೆ. ಮೊದಮೊದಲು ಸ್ವಲ್ಪ ಭಯವಾಯಿತು. ಆಮೇಲೆ ಸರಿಯಾಯಿತು. ಮೋದಿ ಜೀ ಅವರ ಪಕ್ಕವೇ ಕುಳಿತಿದ್ದು ಸಂತೋಷ ಕೊಟ್ಟಿದೆ. ಸಫಾರಿ ವೇಳೆ ಬಹುತೇಕ ಎಲ್ಲ ಪ್ರಾಣಿಗಳೂ ಕಾಣಿಸಿಕೊಂಡಿವೆ ಎಂದಿದ್ದಾರೆ. ಮಧು ಅವರು ಬಂಡೀಪುರದಲ್ಲಿ 8ವರ್ಷಗಳಿಂದ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ: Modi in Karnataka : ಬಂಡಿಪುರದಲ್ಲಿ ಪ್ರಧಾನಿ ಮೋದಿ ಟೈಗರ್ ಸಫಾರಿ
ಕರ್ನಾಟಕ ವಿಧಾನಸಭೆ ಚುನಾವಣೆ ಮೇ 10ಕ್ಕೆ ನಡೆಯಲಿದ್ದು, ನೀತಿ ಸಂಹಿತೆ ಜಾರಿಯಾಗಿದೆ. ಹೀಗಾಗಿ ಇಂದು ಯಾವುದೇ ಹೊಸ ಯೋಜನೆಗಳನ್ನೇನೂ ಅವರು ಉದ್ಘಾಟನೆ/ಶಂಕು ಸ್ಥಾಪನೆ ಮಾಡುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾತ್ರಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ನೀತಿಸಂಹಿತೆ ಜಾರಿಯಾಗಿರುವ ಕಾರಣ ಯಾವುದೇ ರಾಜಕಾರಣಿಗಳೂ ಬಂದು ಅವರನ್ನು ಸ್ವಾಗತಿಸಲಿಲ್ಲ. ಬದಲಿಗೆ ಮೈಸೂರು ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಎಸ್ಪಿ ಸೀಮಾ ಲಾಟ್ಕರ್ ಸೇರಿ ವಿವಿಧ ಅಧಿಕಾರಿಗಳು ಹೂಗುಚ್ಛ ನೀಡಿ ಸ್ವಾಗತಿಸಿದರು. ಇಂದು ಅವರು ಸಫಾರಿಯನ್ನು ಮುಗಿಸಿ ತೆಪ್ಪಕಾಡು ಆನೆ ಕ್ಯಾಂಪ್‌ಗೆ ಭೇಟಿ ನೀಡಿದರು. ಬಳಿಕ ಅಲ್ಲಿಂದ ಮೈಸೂರಿನ ಕರ್ನಾಟಕ ಮುಕ್ತ ವಿವಿ ಘಟಿಕೋತ್ಸವ ಭವನಕ್ಕೆ ಆಗಮಿಸಿದ್ದಾರೆ. ಹುಲಿ ಯೋಜನೆ 50ನೇ ವರ್ಷದ ಸ್ಮರಣಾರ್ಥ ಹುಲಿಗಣತಿ ವರದಿಯನ್ನು ಇಲ್ಲಿ ಬಿಡುಗಡೆಗೊಳಿಸಲಿದ್ದಾರೆ.