ಬೈಲಹೊಂಗಲ (ಬೆಳಗಾವಿ): ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಮಾವೇಶ, ರ‍್ಯಾಲಿ ಹಾಗೂ ರೋಡ್ ಶೋಗಳ ಮೂಲಕ ಅಬ್ಬರದ ಪ್ರಚಾರ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಿಳಿಸುವ ಜತೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ನಡೆದ ಚುನಾವಣೆ ಸಮಾವೇಶದಲ್ಲಿ ಕೂಡ ಅವರು ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಹರಿಹಾಯ್ದರು, “ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಕರ್ನಾಟಕದ ಅಭಿವೃದ್ಧಿ ಸಾಧ್ಯವಿಲ್ಲ” ಎಂದು ಹೇಳಿದರು.
“ಕಾಂಗ್ರೆಸ್ ಗ್ಯಾರಂಟಿ ಹೆಸರಿನಲ್ಲಿ ಸುಳ್ಳು ಹೇಳುತ್ತಿದೆ. ದಶಕಗಳಿಂದಲೂ ಸುಳ್ಳು ಹೇಳುತ್ತಿರುವ ಕಾಂಗ್ರೆಸ್, ದೇಶದ ಜನರ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಿರಲಿಲ್ಲ. 2014ರಲ್ಲಿ ನಾನು ಪ್ರಧಾನಿಯಾಗಿ ದೆಹಲಿಗೆ ತೆರಳಿದಾಗ ದೇಶದ 2.5 ಕೋಟಿ ಜನರ ಮನೆಗಳಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ. ಅಷ್ಟೇ ಏಕೆ, ಬೆಳಗಾವಿ ಜಿಲ್ಲೆಯಲ್ಲಿ 40 ಸಾವಿರ ಜನರು ಕತ್ತಲಲ್ಲಿಯೇ ಕಾಲ ಕಳೆಯುತ್ತಿದ್ದರು. ಅವರ ಎಲ್ಲರ ಮನೆಗೆ ನಾವು ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇವೆ” ಎಂದು ನರೇಂದ್ರ ಮೋದಿ ತಿಳಿಸಿದರು.
“ಕಳೆದ ಒಂಬತ್ತು ವರ್ಷಗಳಲ್ಲಿ ಎಥೆನಾಲ್ ಉತ್ಪಾದನೆ, ಪೆಟ್ರೋಲ್‌ಗೆ ಮಿಶ್ರಣ ಹೆಚ್ಚಿಸಿದ್ದೇವೆ. ಆ ಮೂಲಕ ಪರಿಸರ ಸ್ನೇಹಿ ಇಂಧನ ಉತ್ಪಾದನೆ ಮಾಡುತ್ತದ್ದೇವೆ. ಕಾಂಗ್ರೆಸ್ ಆಡಳಿತದಲ್ಲಿ ಎಥೆನಾಲ್ ಮಿಶ್ರಣವು ಶೇ.5ರಷ್ಟು ಇತ್ತು. ಆದರೆ, ಬಿಜೆಪಿ ಸರ್ಕಾರವು ಶೇ.10ರಷ್ಟು ಎಥೆನಾಲ್ ಮಿಶ್ರಣದ ಗುರಿಯನ್ನು ಅವಧಿಗೂ ಮೊದಲೇ ಸಾಧಿಸಿದ್ದೇವೆ. ಎಥೆನಾಲ್ ಮಿಶ್ರಣ ಎಂದರೆ, ರೈತರಿಗೆ ಆದಾಯ ಎಂದರ್ಥವಾಗಿದೆ. ಹೆಚ್ಚಿನ ಫಸಲು ಬಂದರೂ, ಕಡಿಮೆ ಫಸಲು ಬಂದರೂ ರೈತರಿಗೆ ನಷ್ಟವಾಗುವುದಿಲ್ಲ. ಆದರೆ, ಕಾಂಗ್ರೆಸ್‌ಗೆ ಇಂತಹ ದೂರಾಲೋಚನೆ ಇಲ್ಲ” ಎಂದು ಕುಟುಕಿದರು.
ಮೋದಿ ಭಾಷಣದ ಲೈವ್
ಕನ್ನಡಕ್ಕೆ ಕೇಂದ್ರ ಆದ್ಯತೆ
“ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಕೇಂದ್ರದ ನೇಮಕಾತಿಯು ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ನಡೆಯುತ್ತಿತ್ತು. ಆದರೆ, ನಾವು ಅಧಿಕಾರಕ್ಕೆ ಬಂದ ಮೇಲೆ, ಸ್ಥಳೀಯ ಭಾಷೆಗಳಲ್ಲೂ ಕೇಂದ್ರ ಸರ್ಕಾರದ ನೇಮಕಾತಿ ಪರೀಕ್ಷೆಗಳನ್ನು ನಡೆಸಲು ಅವಕಾಶ ನೀಡಿದ್ದೇವೆ. ಕನ್ನಡ ಸೇರಿ ಎಲ್ಲ ಸ್ಥಳೀಯ ಭಾಷೆಗಳಿಗೂ ನಾವು ಪ್ರಾಮುಖ್ಯತೆ ನೀಡಿದ್ದೇವೆ. ಸೇನೆಯಲ್ಲೂ ನಾರಿಶಕ್ತಿಗೆ ಅವಕಾಶ ನೀಡಿದ್ದೇವೆ” ಎಂದು ನರೇಂದ್ರ ಮೋದಿ ಹೇಳಿದರು.
ಇದನ್ನೂ ಓದಿ: Modi In Karnataka: ‘ಕರಾವಳಿ’ಯಲ್ಲಿ ಮೋದಿ ‘ಅಲೆ’; ಇಲ್ಲಿವೆ ಮನಮೋಹಕ ಫೋಟೊಗಳು
ವೀರೇಂದ್ರ ಪಾಟೀಲ್ ಅವರಿಗೆ ಕಾಂಗ್ರೆಸ್ ಅವಮಾನ
“ದೇಶಕ್ಕಾಗಿ ದುಡಿದವರಿಗೆ ಕಾಂಗ್ರೆಸ್ ಎಂದಿಗೂ ಅವಮಾನ ಮಾಡಿದೆ. ವೀರ ಸಾವರ್ಕರ್, ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಅಪಮಾನ ಎಸಗಿದೆ. ಅಷ್ಟೇ ಅಲ್ಲ, ಕರ್ನಾಟಕದಲ್ಲಿ ವೀರೇಂದ್ರ ಪಾಟೀಲ್, ನಿಜಲಿಂಗಪ್ಪ ಅವರಿಗೂ ಕಾಂಗ್ರೆಸ್ ಅವಮಾನ ಮಾಡಿದೆ. ಇದರ ಜತೆಗೆ ಸುಳ್ಳು ಹೇಳುವ ರೂಢಿಯೂ ಕಾಂಗ್ರೆಸ್‌ಗೆ ಇದೆ. ಹಾಗಾಗಿಯೇ, ಜನರಿಗೆ ಸುಳ್ಳು ಭರವಸೆ ನೀಡುತ್ತಿದೆ” ಎಂದರು. ಬೈಲಹೊಂಗಲದಲ್ಲೂ ಮೋದಿ ಅವರು ಬಜರಂಗ ಬಲಿಯನ್ನು ನೆನೆದರು. ಆ ಮೂಲಕ ಬಜರಂಗದಳವನ್ನು ನಿಷೇಧಿಸುತ್ತೇವೆ ಎಂದ ಕಾಂಗ್ರೆಸ್‌ಗೆ ಪರೋಕ್ಷವಾಗಿ ತಿರುಗೇಟು ನೀಡಿದರು. ನೆರೆದಿದ್ದ ಜನ ಕೂಡ ಬಜರಂಗಬಲಿ ಕಿ ಜೈ ಎಂದು ಘೋಷಣೆ ಕೂಗಿದರು.