ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ (Karnataka Congress Government) ಅಧಿಕಾರಕ್ಕೆ ಬಂದು ಕೆಲವೇ ತಿಂಗಳಲ್ಲಿ ಬೆಂಗಳೂರಿನ ಪರಿಸ್ಥಿತಿಯನ್ನು ಹಾಳು ಮಾಡಿದೆ. ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಆಕ್ರೋಶವನ್ನು ಹೊರಹಾಕಿದರು. ಬೆಂಗಳೂರಿನಲ್ಲಿ ಏರ್ಪಡಿಸಲಾಗಿದ್ದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡ ಮೋದಿ (Modi in Karnataka) ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬೆಂಗಳೂರು ಸೇರಿದಂತೆ ಕರ್ನಾಟಕದ ಎಲ್ಲ ಕಡೆ ಬಜೆಟ್ ಕಡಿತ ಮಾಡಲಾಗುತ್ತಿದೆ. ಅಭಿವೃದ್ಧಿ ಗೌಣವಾಗಿದೆ. ಎಲ್ಲೆಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಜನರ ಸಮಸ್ಯೆ ಬಗ್ಗೆ ಈ ಸರ್ಕಾರ ಗಮನ ಕೊಡುತ್ತಿಲ್ಲ. ಕರ್ನಾಟಕದಲ್ಲಿ ಹೆಣ್ಣು ಮಕ್ಕಳ ಮೇಲೆ ಹಲ್ಲೆ ಆಗುತ್ತಿದೆ. ಭಜನೆ ಮಾಡಿದರೂ ಹಲ್ಲೆ ಮಾಡಲಾಗುತ್ತಿದೆ. ಬೀದಿಗಳಲ್ಲಿ ಬಾಂಬ್ ಸ್ಫೋಟಗೊಳ್ಳುತ್ತಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ನಾವು ಅಧಿಕಾರಕ್ಕೆ ಬರುವಾಗ ಭಾರತವು ಆರ್ಥಿಕವಾಗಿ ಭಾರಿ ಹಿಂದಿತ್ತು. ಈಗ ಜಾಗತಿಕವಾಗಿ ಆರ್ಥಿಕ ಪ್ರಗತಿಯಲ್ಲಿ 5ನೇ ಸ್ಥಾನದಲ್ಲಿದ್ದೇವೆ. ಇದಕ್ಕೆ ಕಾರಣವಾಗಿದ್ದು, ನಿಮ್ಮ ಮತ. ಕಳೆದ 10 ವರ್ಷದಲ್ಲಿ ಭಾರತವು ಸಾಕಷ್ಟು ಸುಧಾರಣೆಯನ್ನು ಕಂಡಿದ್ದಲ್ಲದೆ, ಆರ್ಥಿಕ ಕ್ರಾಂತಿಯಾಗಿದೆ. ಈಗ ಭಾರತವು ಹಿಂಬಾಲಿಸುವ ದೇಶವಾಗಿ ಉಳಿದಿಲ್ಲ. 2014 ಹಾಗೂ 2019ರಲ್ಲಿ ಪೂರ್ಣ ಬಹುಮತಗಳೊಂದಿಗೆ ಭರ್ಜರಿ ಗೆಲುವನ್ನು ನಮಗೆ ಕೊಟ್ಟಿದ್ದೀರಿ. ಈ ಬಾರಿಯೂ ಅಂಥದ್ದೇ ಗೆಲುವನ್ನು ನೀವು ಕೊಡುತ್ತೀರಿ ಎಂಬ ವಿಶ್ವಾಸ ನನಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನೀವೀಗ ಎನ್‌ಡಿಎ ಹಾಗೂ ಇಂಡಿಯಾ ಅಲೆಯನ್ಸ್ ಪ್ರಚಾರಗಳನ್ನು ನೋಡಿದ್ದೀರಿ. ಆದರೆ, ಇಂಡಿ ಅಲೆಯನ್ಸ್‌ನವರು ಸುಳ್ಳು ಆರೋಪವನ್ನು ಮಾಡುತ್ತಲೇ ಬರುತ್ತಿದ್ದಾರೆ. ಆದರೆ, ನಿಮ್ಮ ಮೋದಿ ಉದ್ದೇಶ ಏನು? ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದೇ ನನ್ನ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕಡಿಮೆ ವೆಚ್ಚದಲ್ಲಿ ಸಿಗುತ್ತಿದೆ 1 GB ಡೇಟಾ
ನಾವು ನಮ್ಮ ಕೆಲಸ ಹಾಗೂ ಟ್ರ್ಯಾಕ್ ರೆಕಾರ್ಡ್ ಇಟ್ಟುಕೊಂಡು ಮತ ಕೇಳುತ್ತಿದ್ದೇವೆ. ನಮ್ಮ ಸರ್ಕಾರ ರೇರಾ ಕಾಯ್ದೆಯನ್ನು ಜಾರಿಗೆ ತಂದಿದ್ದೇವೆ. ಇದರಿಂದ ಸಾಮಾನ್ಯರಿಗೆ ಆಗುತ್ತಿದ್ದ ಅನ್ಯಾಯವನ್ನು ತಡೆದಿದ್ದೇವೆ. 2014ಕ್ಕಿಂತ ಮೊದಲು ನಿಮಗೆ 2.5 ಲಕ್ಷ ರೂಪಾಯಿ ಇದ್ದರೂ ನೀವು ತೆರಿಗೆ ಕಟ್ಟಬೇಕಿತ್ತು. ಆದರೆ, ಇಂದು ನೀವು 7 ಲಕ್ಷದ ವರೆಗೆ ಆದಾಯ ಹೊಂದಿದರೂ ಒಂದು ರೂಪಾಯಿ ಟ್ಯಾಕ್ಸ್ ಕಟ್ಟುತ್ತಿಲ್ಲ. ಇನ್ನು ಜಿಎಸ್‌ಟಿ ಜಾರಿಯಿಂದ ಪರೋಕ್ಷ ತೆರಿಗೆ ಕಟ್ಟುವುದು ತಪ್ಪಿದೆ. ಇದೆಲ್ಲವೂ ಸಾಧ್ಯವಾಗಿದ್ದು ನಮ್ಮ ಸರ್ಕಾರದಿಂದ ಮಾತ್ರ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
Live : ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಜಯ ಸಂಕಲ್ಪ ಸಮಾವೇಶವನ್ನುದ್ದೇಶಿಸಿ ಪ್ರಧಾನಿ ಶ್ರೀ @narendramodi#NaMoAgainInKarnataka #ಮತ್ತೊಮ್ಮೆಮೋದಿಸರ್ಕಾರ https://t.co/lcOPEXsfdv
— BJP Karnataka (@BJP4Karnataka) April 20, 2024
ಎಲ್‌ಇಡಿ ಬಲ್ಬ್ ಅಂದು 400 ರೂಪಾಯಿ ಇತ್ತು. ಆದರೆ, ಇಂದು ನಾವದನ್ನು 40 ರೂಪಾಯಿವರೆಗೆ ಇಳಿಸಿದ್ದೇವೆ. ಇಂದು ಈ ಬಲ್ಬ್‌ಗಳು ಅದೆಷ್ಟೋ ಮಧ್ಯಮ ವರ್ಗದ ಮನೆಯಲ್ಲಿ ಉರಿಯುತ್ತಿದೆ. ಅವರಿಗೆ ಪ್ರಕಾಶಮಾನವಾದ ಬೆಳಕಿನ ಜತೆಗೆ ವಿದ್ಯುತ್ ಬಿಲ್‌ನಲ್ಲಿಯೂ ಉಳಿತಾಯ ಆಗುತ್ತಿದೆ. 20 ಸಾವಿರ ಕೋಟಿ ರೂಪಾಯಿ ಪ್ರತಿ ವರ್ಷ ಉಳಿತಾಯವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕಡಿಮೆ ವೆಚ್ಚದಲ್ಲಿ ಸಿಗುತ್ತಿದೆ ಡೇಟಾ
ಎನ್‌ಡಿಎ ಸರ್ಕಾರ ಸಾಮಾಜಿಕ, ಆರ್ಥಿಕ ಹಾಗೂ ಡಿಜಿಟಲ್‌ಗೆ ದಾಖಲೆ ರೂಪದಲ್ಲಿ ಹಣವನ್ನು ಹೂಡಿಕೆ ಮಾಡಿದೆ. ಎಲೆಕ್ಟ್ರಿಕ್ ವೆಹಿಕಲ್ ಬರುವುದಕ್ಕೆ ನಾವು ಕಾರಣ. ಭಾರತದಲ್ಲಿ ಆಗಿರುವ ಡಿಜಿಟಲ್ ಕ್ರಾಂತಿಯಲ್ಲಿ ಬೆಂಗಳೂರಿಗರ ಕೊಡುಗೆ ಇದೆ. ಬೆಂಗಳೂರು ಡಿಜಿಟಲ್ ಹಬ್ ಆಗಿದೆ. ಈ ಮೊದಲು 1 GB ಡೇಟಾ 250 ರೂಪಾಯಿ ಆಸುಪಾಸಿನಲ್ಲಿತ್ತು. ಇಂದು ಅದೇ 1 GB ಡೇಟಾಗೆ 10 ರೂಪಾಯಿ ಆಸುಪಾಸು ಆಗಿದೆ. ನಾವು ನಿಮಗೆ ಕಡಿಮೆ ವೆಚ್ಚದಲ್ಲಿ ಡೇಟಾ ಕೊಡುತ್ತಿದೆ. ಮೊಬೈಲ್ ಬಿಲ್ ಈಗ 500 ರೂಪಾಯಿಗಿಂತ ಕಡಿಮೆ ಬರುತ್ತಿದೆ. ಇದರಿಂದ ಮಾಸಿಕವಾಗಿ ಐದಾರು ಸಾವಿರ ರೂಪಾಯಿ ಉಳಿತಾಯ ಆಗುತ್ತಿದೆ. ನಮ್ಮ ಸರ್ಕಾರವು ಡೇಟಾ ಸುರಕ್ಷತೆಗೆ ಬಲವಾದ ಕಾನೂನು ತಂದಿದೆ. ಎಂದು ನರೇಂದ್ರ ಮೋದಿ ಹೇಳಿದರು.
70 ವರ್ಷ ಮೇಲ್ಪಟ್ಟವರಿಗೂ ಆಯುಷ್ಮಾನ್ ಭಾರತ್
ಮಧ್ಯಮ ಮತ್ತು ಬಡತನ ರೇಖೆ ಕೆಳಗೆ ಇರುವವರಿಗೆ ಆಯುಷ್ಮಾನ್ ಭಾರತ ಯೋಜನೆ ಅಡಿಯಲ್ಲಿ 5 ಲಕ್ಷ ರೂಪಾಯಿವರೆಗೂ ಉಚಿತ ಚಿಕಿತ್ಸೆ ನೀಡಿದ್ದೇವೆ. ಇದನ್ನು 70 ವರ್ಷ ಮೇಲ್ಪಟ್ಟವರಿಗೂ ವಿಸ್ತರಣೆ ಮಾಡಲು ಮುಂದಾಗಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಬುಲೆಟ್ ಟೈನ್ ತಂದು ಸಮಯ ಉಳಿಸಿದ್ದೇವೆ
ಈ ಮೊದಲು ಕಾಂಗ್ರೆಸ್ ಮಾಫಿಯಾ ಮಾಡೋದರಲ್ಲಿ ಲೀನವಾಗಿತ್ತು. ಭ್ರಷ್ಟಾಚಾರ ಮಾಡುವುದರಲ್ಲಿ ತಲ್ಲೀನವಾಗಿದೆ. ಆದರೆ, ನಾವು 70 ಕಿ.ಮೀ. ವರೆಗೆ ನಮ್ಮ ಮೇಟ್ರೋ ಯೋಜನೆಗೆ ಚಾಲನೆ ನೀಡಿದ್ದೇವೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಗ್ಗೆ ವಿದೇಶಗಳಲ್ಲೂ ಚರ್ಚೆ ಆಗುತ್ತಿದೆ. ಬುಲೆಟ್ ಟೈನ್ ಅನ್ನು ತಂದು ನಿಮ್ಮ ಸಮಯವನ್ನು ಉಳಿಸಿದ್ದೇವೆ. ಇದರಿಂದ ಬೆಂಗಳೂರಿಗೆ ಬಂದು ಕೆಲಸ ಮಾಡುವವರಿಗೆ ಅನುಕೂಲವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎನ್‌ಡಿಎ ಸರ್ಕಾರದ ಸಾಧನೆಗಳ ಮಾಹಿತಿ ನೀಡಿದರು.
ದೊಡ್ಡ ದೊಡ್ಡ ಪ್ರಾಜೆಕ್ಟ್ ಪಡೆಯುತ್ತಿರುವ ಎಚ್‌ಎಎಲ್
ಕಾಂಗ್ರೆಸ್ ಎಚ್‌ಎಎಲ್ ವಿಚಾರದಲ್ಲಿ ಏನೆಲ್ಲ ಆರೋಪ ಮಾಡಿತ್ತು? ಮೋದಿ ಹೆಸರು ಕೆಡಿಸಲು ಕಾಂಗ್ರೆಸ್ ಮುಂದಾಗಿತ್ತು. ಅದೇ ಎಚ್‌ಎಎಲ್ ಈಗ ಅನೇಕ ಸಾಧನೆ ಮಾಡಿದೆ. ರಾಜ್ಯದಲ್ಲಿ ದೊಡ್ಡ ಹೆಲಿಕಾಪ್ಟರ್ ನಿರ್ಮಾಣ ಕೈಗಾರಿಕೆಯನ್ನು ಎಚ್ಎಎಲ್ ಸ್ಥಾಪಿಸಿದೆ. ಎಚ್‌ಎಎಲ್ ಇಂದು ಹೆಚ್ಚು ಹೆಚ್ಚು ಪ್ರಾಜೆಕ್ಟ್‌ಗಳನ್ನು ಪಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕಾಂಗ್ರೆಸ್‌ಗೆ ತಕ್ಕ ಉತ್ತರ ನೀಡಿ
ಮೆಟ್ರೋ, ಕೋಚ್, ರೈಲು ಬೋಗಿಗಳನ್ನು ರಫ್ತು ಮಾಡುತ್ತಿದ್ದೇವೆ. ಮೊದಲ ಹಂತದ ಮಿಸೈಲ್ ಅನ್ನು ಫಿಲಿಪ್ಪೀನ್ಸ್‌ಗೆ ಕಳಿಸಿದ್ದೇವೆ. ಅಮೆರಿಕದ ಬಳಿಕ ಬೋಯಿಂಗ್ ಕರ್ನಾಟಕದಲ್ಲಿ ನಿರ್ಮಾಣ ಆಗುತ್ತಿದೆ. ಕಾಂಗ್ರೆಸ್ ಡಿಜಿಟಲ್ ಇಂಡಿಯಾವನ್ನು ವಿರೋಧ ಮಾಡಿತ್ತು. ಕೊರೊನಾ ವ್ಯಾಕ್ಸಿನ್ ಬಗ್ಗೆ ವ್ಯಂಗ್ಯ ಮಾಡಿತ್ತು. ಇಂದು ನಿಮ್ಮ ನರೇಂದ್ರ ಮೋದಿ ದೇಶದಲ್ಲಿ 6 G ತರಲು ಪ್ರಯತ್ನ ಮಾಡುತ್ತಿದ್ದರೆ, ಕಾಂಗ್ರೆಸ್ ಮೋದಿಯನ್ನು ಇಳಿಸುತ್ತೇನೆ ಎಂದು ಹೊರಟಿದೆ. ಇದಕ್ಕೆ ನೀವು ತಕ್ಕ ಉತ್ತರ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.
ಇದನ್ನೂ ಓದಿ: Modi in Karnataka: ಕಿಸಾನ್ ಸಮ್ಮಾನ್ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್: ಮೋದಿ ಕಿಡಿ
ನಾನು ನನ್ನ ಭಾಷಣವನ್ನು ಕನ್ನಡದಲ್ಲಿ ಅನುವಾದಿಸಿ ಟ್ವಿಟರ್‌ನಲ್ಲಿ ಅಪ್ಲೋಡ್ ಮಾಡುತ್ತಿದ್ದೇನೆ. ಇದಕ್ಕೆ ಕಾರಣವಾಗಿದ್ದು, AI ತಂತ್ರಜ್ಞಾನವಾಗಿದೆ ಎಂದು ಮೋದಿ ತಿಳಿಸಿದರು. ನನ್ನ ಒಂದು ವೈಯಕ್ತಿಕ ಕೆಲಸವನ್ನು ಮಾಡಿಕೊಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಎಲ್ಲರ ಮನೆಗೆ ಹೋಗಿ ಮೋದಿ ನಿಮಗೆ ಪ್ರಣಾಮವನ್ನು ಸಲ್ಲಿಸಲು ಹೇಳಿದ್ದಾರೆ ಎಂಬುದನ್ನು ಹೇಳಿ ಎಂದು ಕೇಳಿಕೊಂಡರು.