ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಬೆಂಗಳೂರಿನ ಕೊಮ್ಮಘಟ್ಟಕ್ಕೆ ಭೇಟಿ ನೀಡಿ, ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕು ಸ್ಥಾಪನೆ ನೆರವೇರಿಸಿದರು.
ಬೆಂಗಳೂರು ಸಬ್ ಅರ್ಬನ್ ರೈಲ್ವೆ ಯೋಜನೆಗಳು ಮತ್ತು NHAI ಯೋಜನೆಗಳ ಪ್ರದರ್ಶನವನ್ನು ವೀಕ್ಷಿಸಿ, ಬೆಂಗಳೂರಿನ ಸರ್. ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್, ಯಲಹಂಕ- ಪೆನುಕೊಂಡ ಮತ್ತು ಅರಸೀಕೆರೆ-ತುಮಕೂರು ಜೋಡಿ ರೈಲು ಮಾರ್ಗ ಹಾಗೂ 100% ವಿದ್ಯುದೀಕರಣಗೊಂಡ ಕೊಂಕಣ ರೈಲು ಮಾರ್ಗವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.
ಇದನ್ನೂ ಓದಿ | Modi in Karnataka | ಜ್ಞಾನಭಾರತಿಯಲ್ಲಿ ಅಂಬೇಡ್ಕರ್ ಪ್ರತಿಮೆ ಅನಾವರಣ ಮಾಡಿದ ಮೋದಿ
ತುಮಕೂರು, ಅರಸೀಕೆರೆ, ಯಲಹಂಕ, ರತ್ನಗಿರಿ, ಮಡಗಾಂವ್ ಮತ್ತು ಉಡುಪಿಗೆ ಹೊಸ ರೈಲು ಸೇವೆಗೆ ವಿಡಿಯೋ ಲಿಂಕ್ ಮೂಲಕ ಹಸಿರು ನಿಶಾನೆಯನ್ನು ತೋರಿದರು. ಬೆಂಗಳೂರು ಉಪ ನಗರ ರೈಲು ಯೋಜನೆ, ಬೆಂಗಳೂರು ಕಂಟೋನ್‌ಮೆಂಟ್ ರೈಲು ನಿಲ್ದಾಣ ಮತ್ತು ಯಶವಂತಪುರ ರೈಲು ನಿಲ್ದಾಣದ ಪುನರಾಭಿವೃದ್ಧಿ, ಬೆಂಗಳೂರಿನ ವರ್ತುಲ ರಸ್ತೆ-2 ಪ್ಯಾಕೇಜ್‌ಗಳು, ನೆಲಮಂಗಲ ತುಮಕೂರು ವಿಭಾಗದ 6-ಲೈನಿಂಗ್, NH-73 ರ ಪುಂಜಾಲಕಟ್ಟೆಯಿಂದ ಚಾರ್ಮಾಡಿ ಭಾಗದವರೆಗೂ ರಸ್ತೆ ಅಗಲೀಕರಣ, NH-69 ರ ಮಧುಗಿರಿ-ಗೌರಿಬಿದನೂರು-ಚಿಕ್ಕಬಳ್ಳಾಪುರ ವಿಭಾಗದ ಪುನರ್ವಸತಿ ಮತ್ತು ಉನ್ನತೀಕರಣ, ಬೆಂಗಳೂರಿನಲ್ಲಿ ಮಲ್ಟಿ ಮಾಡೆಲ್ ಲಾಜಿಸ್ಟಿಕ್ ಪಾರ್ಕ್ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದರು. ಬೆಂಗಳೂರು ಉಪ ನಗರ ರೈಲು ಯೋಜನೆಯ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ರಾಜ್ಯಪಾಲ ಥಾವರ್ ಚಂದ್ ಗೊಹ್ಲೋಟ್, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ಸಂಸದರಾದ ಪಿ.ಸಿ.ಮೋಹನ್, ಡಿ.ವಿ.ಸದಾನಂದಗೌಡ, ಎಲ್.ಎಸ್. ತೇಜಸ್ವಿ ಸೂರ್ಯ, ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ವಿ.ಸೋಮಣ್ಣ, ಎಸ್.ಟಿ.ಸೋಮಶೇಖರ್ ಸೇರಿದಂತೆ ಅಧಿಕಾರಿಗಳು, ಮತ್ತಿತರರ ಗಣ್ಯರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ಅನೇಕರು ಹಿಂದೆ ಘೋಷಣೆಗಳನ್ನು ಕೊಟ್ಟರು. ಆದರೆ ನಮ್ಮ ಪ್ರಧಾನಿಗಳು ಪ್ರತಿ ೧೫ ದಿನಕ್ಕೊಂದು ಯೋಜನೆ ನೀಡಿದರು. ಇಂದು ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೆರವೇರಿಸಿದ್ದಾರೆ. ೮ ವರ್ಷ ಆಡಳಿತದ ನಂತರ ಪ್ರಧಾನಿಯವರು ಬಸವಣ್ಣ, ಕನಕದಾಸ, ಸಂಗೊಳ್ಳಿ ರಾಯಣ್ಣ, ಸರ್. ಎಂ. ವಿಶ್ವೇಶ್ವರಯ್ಯ, ಚೆನ್ನಮ್ಮನ ಪುಣ್ಯ ಭೂಮಿಯ ಪರವಾಗಿ ಸ್ವಾಗತ ಮಾಡುತ್ತೇವೆ ಎಂದರು.
ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜಕಾರಣೀಯ ಕಣ್ಣು ಮುಂದಿನ ಚುನಾವಣೆ ಮೇಲಿರುತ್ತದೆ. ಆದರೆ ಮುತ್ಸದ್ದಿಯ ಕಣ್ಣು ಮುಂದಿನ ಜನಾಂಗದ ಮೇಲಿರುತ್ತದೆ. ಅಂತಹ ಒಬ್ಬ ಮುತ್ಸದ್ದಿ ಪ್ರಧಾನಿ ಮೋದಿಯವರನ್ನು ನಾವು ಹೊಂದಿದ್ದೇವೆ ಎಂದರು. ಮೋದಿಯವರಿಗೆ ಕಾಮಧೇನುವಿನ ವಿಗ್ರಹವನ್ನು ಉಡುಗೊರೆಯಾಗಿ ನೀಡಲಾಯಿತು.
ಇದನ್ನೂ ಓದಿ | Modi In Karnataka | ಯಾಕಿಷ್ಟು ಸಣಕಲಾಗಿದ್ದೀರಾ?: ಎಂಟಿಬಿ ನಾಗರಾಜ್‌ಗೆ ಮೋದಿ ಪ್ರಶ್ನೆ!