ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Prime minister Narendra Modi) ಅವರು ರಾಜ್ಯ ವಿಧಾನಸಭಾ ಚುನಾವಣೆಯ ಪ್ರಚಾರ ಕಣವನ್ನು ಶನಿವಾರ ಅಧಿಕೃತವಾಗಿ (Modi in Karnataka) ಪ್ರವೇಶಿಸಿದರು. ಈ ಹಿಂದೆ 15ಕ್ಕೂ ಹೆಚ್ಚು ಬಾರಿ ರಾಜ್ಯದ ಮೂಲೆ ಮೂಲೆ ಸುತ್ತಿ ಚುನಾವಣೆಯ ಪ್ರಚಾರವನ್ನೇ ಮಾಡಿದ್ದರೂ ಅದರ ಹಿಂದೆ ಫಲಾನುಭವಿಗಳ ಸಮಾವೇಶ, ಅಭಿವೃದ್ಧಿ ಕಾಮಗಾರಿಗಳ ಚಾಲನೆ, ಅಡಿಗಲ್ಲು ಎಂಬ ನೆಪಗಳಿದ್ದವು. ಆದರೆ, ಚುನಾವಣೆ ಘೋಷಣೆಯ ಬಳಿಕ ಅದಕ್ಕೆ ಬ್ರೇಕ್ ಬಿದ್ದಿದ್ದರಿಂದ ಅವರು ಏಪ್ರಿಲ್ 29ರಂದು (ಶನಿವಾರ) ಬಿಜೆಪಿ ಧ್ವಜ ಹಿಡಿದೇ ಪ್ರಚಾರ ಕಣಕ್ಕೆ ಧುಮುಕಿದರು. ಏಪ್ರಿಲ್ 29, 30, ಮೇ 2 ಮತ್ತು 3, ಮೇ 6 ಮತ್ತು 7, ಹೀಗೆ ಆರು ದಿನಗಳ ಕಾಲ ಪ್ರಚಾರ ನಡೆಸಲಿದ್ದು, ಅದರ ಮೊದಲ ಹಂತವಾಗಿ ಶನಿವಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಂಚರಿಸಿದರು. ಶನಿವಾರ ಅವರು ಹುಮನಾಬಾದ್, ವಿಜಯಪುರ, ಕುಡಚಿ ಮತ್ತು ಬೆಂಗಳೂರಿನಲ್ಲಿ ರೋಡ್ ಶೋ ಮತ್ತು ಸಮಾವೇಶಗಳಲ್ಲಿ ಭಾಗವಹಿಸಿದರು. ಈ ವೇಳೆ ಅವರು ತನ್ನ ಮೇಲೆ ಕಾಂಗ್ರೆಸ್ ತನ್ನ ಮೇಲೆ ಮಾಡಿದ 91 ಬೈಗುಳಗಳ ಲೆಕ್ಕ ಇಟ್ಟಿದ್ದನ್ನು ನೆನಪಿಸಿದರು ಮತ್ತು ಮೊದಲ ದಿನವೇ ಒಂಬತ್ತು ಟಾರ್ಗೆಟ್‌ಗಳನ್ನು ಸ್ಪಷ್ಟಪಡಿಸಿದರು.
ಟಾರ್ಗೆಟ್ ನಂ. 1: ಈ ಬಾರಿಯ ಸರ್ಕಾರ ಬಹುಮತದ ಬಿಜೆಪಿ ಸರ್ಕಾರ
ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಮೈತ್ರಿ ಸರ್ಕಾರದ ವಿರುದ್ಧ ಮುಗಿ ಬೀಳುತ್ತಲೇ ಡಬಲ್ ಎಂಜಿನ್ ಸರ್ಕಾರವನ್ನು ಪ್ರತಿಪಾದಿಸಿದರು. ಅದರ ಜತೆಗೆ ಈ ಬಾರಿ ಬಿಜೆಪಿಗೆ ಪೂರ್ಣ ಬಹುಮತವನ್ನು ನೀಡಬೇಕು ಎನ್ನುವುದನ್ನು ಬಗೆಬಗೆಯಾಗಿ ಹೇಳಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಆಡಳಿತ ನಡೆಸಲೇ ಇಲ್ಲ, ಜನರ ಒಳಿತಿಗಿಂತ ಸರ್ಕಾರದ ರಕ್ಷಣೆಯೇ ದೊಡ್ಡ ಸರ್ಕಸ್ ಆಯಿತು ಎಂದು ಹೇಳಿದರು. ಹೀಗಾಗಿ ಈ ಬಾರಿಯ ಸರ್ಕಾರ ಬಹುಮತದ ಬಿಜೆಪಿ ಸರ್ಕಾರ ಎನ್ನುವುದನ್ನು ಹೋದಲ್ಲೆಲ್ಲ ಪ್ರತಿಪಾದಿಸಿದರು.
ಟಾರ್ಗೆಟ್ ನಂ. 2: ಮಲ್ಲಿಕಾರ್ಜುನ ಖರ್ಗೆಯ ವಿಷದ ಹಾವು
ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ತನ್ನನ್ನು ವಿಷದ ಹಾವು ಎಂದು ಕರೆದಿದ್ದನ್ನು ಚುನಾವಣೆಯ ಪ್ರಚಾರದಲ್ಲಿ ಚೆನ್ನಾಗಿಯೇ ಬಳಸಿಕೊಂಡ ನರೇಂದ್ರ ಮೋದಿ ಅವರು ಇದೆಲ್ಲ ತನಗೆ ಹೊಸದಲ್ಲ ಎಂದರು. ಇದುವರೆಗೆ ಕಾಂಗ್ರೆಸ್ ನಾಯಕರು ತಮ್ಮ ವಿರುದ್ಧ ಚೌಕಿದಾರ್ ಚೋರ್, ಮೌತ್ ಕಾ ಸೌದಾಗರ್ ಸೇರಿದಂತೆ 91 ರೀತಿಯಲ್ಲಿ ಬೈದಿದ್ದಾರೆ ಎಂದು ನೆನಪಿಸಿದರು. ಮಲ್ಲಿಕಾರ್ಜುನ ಖರ್ಗೆಯ ಹೆಸರು ಪ್ರಸ್ತಾಪಿಸದಿದ್ದರೂ ಇದನ್ನು ಕರ್ನಾಟಕಕ್ಕೆ ಕನೆಕ್ಟ್ ಮಾಡಿ, ಇಂಥ ಹೇಳಿಕೆಗಳ ಮೂಲಕ ಕರ್ನಾಟಕದ ಗೌರವಕ್ಕೆ ಮಸಿ ಬಳಿಯುವ ಇಂಥವರನ್ನು ಕ್ಷಮಿಸುತ್ತೀರಾ ಎಂದು ಪ್ರಶ್ನಿಸಿದರು. ಅಂದರೆ ಕಾಂಗ್ರೆಸ್ ಪಕ್ಷಕ್ಕೆ ವೋಟು ಹಾಕುತ್ತೀರಾ ಎಂದು ಪರೋಕ್ಷವಾಗಿ ಟಾರ್ಗೆಟ್ ಮಾಡಿದರು.
ಟಾರ್ಗೆಟ್ ನಂ. 3 : ಮೋದಿ ಪ್ಲೇ ಮಾಡಿದ ದಲಿತ, ಅಂಬೇಡ್ಕರ್ ಕಾರ್ಡ್
ಕಾಂಗ್ರೆಸ್ ನಾಯಕರ ಬೈಗುಳಗಳ ಲೆಕ್ಕ ಹೇಳುತ್ತಲೇ ಮೋದಿ ಅವರು ಈ ಪಕ್ಷ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕೂಡಾ ಇದೇ ರೀತಿಯಾಗಿ ಅಪಮಾನ ಮಾಡಿದೆ. ಅವರನ್ನು ರಾಕ್ಷಸ, ದೇಶದ್ರೋಹಿ ಎಂದೆಲ್ಲ ಜರಿದಿದೆ. ಕಾಂಗ್ರೆಸ್‌ಗೆ ಅಂಬೇಡ್ಕರ್ ಮೇಲೆ ಗೌರವವಿಲ್ಲ, ದಲಿತರು, ಹಿಂದುಳಿದ ವರ್ಗಗಳ ರಕ್ಷಣೆಯ ಕಾಳಜಿ ಇಲ್ಲ ಎಂದು ಮೋದಿ ಆಕ್ರೋಶ ವ್ಯಕ್ತಪಡಿಸಿದರು. ದಲಿತರು, ರೈತರ ಹೆಸರಿನಲ್ಲಿ ಎಲ್ಲವನ್ನು ಕಾಂಗ್ರೆಸ್ ನಾಯಕರೇ ತಿಂದು ತೇಗಿದರು ಎಂದರು. ಈ ಮೂಲಕ ದಲಿತರನ್ನು ಬಿಜೆಪಿ ಕಡೆಗೆ ಸೆಳೆಯಲು ಮೋದಿ ಯತ್ನಿಸಿದರು.
ಟಾರ್ಗೆಟ್ ನಂ. 4: 40% ಕಮಿಷನ್ ಬದಲಿಗೆ 85% ಭ್ರಷ್ಟಾಚಾರದ ಪ್ರಸ್ತಾಪ
ರಾಜ್ಯದಲ್ಲಿ 40% ಕಮಿಷನ್ ಸರ್ಕಾರ ನಡೆಯುತ್ತಿದೆ ಎಂದು ಕಾಂಗ್ರೆಸ್ ದೊಡ್ಡ ಮಟ್ಟದ ಪ್ರಚಾರ ನಡೆಸುತ್ತಿದೆ. ಗುತ್ತಿಗೆದಾರರ ಸಂಘವೇ ಪ್ರಧಾನಿ ನರೇಂದ್ರ ಮೋದಿ ಅವರಿಗೇ ದೂರು ನೀಡಿದರೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸುತ್ತಿದೆ. ಇದಕ್ಕೆ ಪ್ರತಿಯಾಗಿ ಮೋದಿ 85% ಕಮಿಷನ್ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಕೇಂದ್ರದಿಂದ ನೀಡಲಾಗುವ 1 ರೂ.ಯಲ್ಲಿ ಅಂತಿಮ ಫಲಾನುಭವಿಗೆ ಸಿಗುವುದು 15 ಪೈಸೆ ಮಾತ್ರ ಎಂಬ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹೇಳಿಕೆಯನ್ನು ಬಳಸಿಕೊಂಡು ಕಾಂಗ್ರೆಸನ್ನು ಹಣಿಯಲು ಯತ್ನಿಸಿದರು.
ಟಾರ್ಗೆಟ್ ನಂ. 5: ಬಂಜಾರಾ ಮತ್ತು ಲಂಬಾಣಿ ಕೋಪ ಶಮನ ಯತ್ನ
ರಾಜ್ಯದಲ್ಲಿ ಮೀಸಲಾತಿ ಪರಿಷ್ಕರಣೆಯ ಬಳಿಕ ಲಂಬಾಣಿ ಮತ್ತು ಬಂಜಾರಾ ಸಮುದಾಯಗಳು ತಮ್ಮ ಮೀಸಲಿಗೆ ಧಕ್ಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದವು. ಬಿಎಸ್‌ವೈ, ಕುಡಚಿ ರಾಜೀವ್ ಅವರ ಕ್ಷೇತ್ರಗಳಲ್ಲೂ ಪ್ರತಿಭಟನೆಗಳು ನಡೆದಿದ್ದವು. ಹೀಗಾಗಿ ಅವುಗಳ ಆಕ್ರೋಶವನ್ನು ತಣಿಸಲು ಬಿಜೆಪಿ ಸರ್ಕಾರ ಅವರಿಗೆ ಹಕ್ಕುಪತ್ರ ಕೊಟ್ಟಿರುವುದನ್ನು ನೆನಪಿಸಿದ್ದಾರೆ ಮೋದಿ. ಜತೆಗೆ ಕಾಂಗ್ರೆಸ್ ಈ ಸಮುದಾಯಗಳನ್ನು ಅವಗಣಿಸಿದ ಕಥೆ ಹೇಳಿದ್ದಾರೆ.
ಟಾರ್ಗೆಟ್ ನಂ. 6: ಹೆಣ್ಮಕ್ಕಳ ಪಾಲಿಗೆ ಬಿಜೆಪಿಯೇ ಆಧಾರ ಎಂದ ಮೋದಿ
ಚುನಾವಣೆಯಲ್ಲಿ ಮಹಿಳೆಯರನ್ನು ತಮ್ಮ ಪಕ್ಷದ ಪರ ಸೆಳೆಯುವ ಪ್ರಯತ್ನವನ್ನು ಪ್ರಧಾನಿ ಮೋದಿ ನಡೆಸಿದರು. ಕೇಂದ್ರ ಸರ್ಕಾರ ಮನೆ ನೀಡುವಾಗ ಮಹಿಳೆಯರ ಹೆಸರಿಗೇ ನೀಡುವ ಮೂಲಕ ಅವರನ್ನು ಲಕ್ಷಾಧಿಪತಿಗಳನ್ನಾಗಿ ಮಾಡಿದ್ದಾಗಿ ಹೇಳಿದರು. ಉಜ್ವಲಾ ಯೋಜನೆಯಿಂದ ಹೊಗೆ ಸಂಕಷ್ಟದಿಂದ ಪಾರು ಮಾಡಿದ್ದು, ನಳ್ಳಿ ನೀರಿನ ಮೂಲಕ ನೀರು ಹೊರುವ ಕಷ್ಟ ನೀಗಿಸಿದ್ದು, ಜನಧನ್ ಯೋಜನೆ, ಮನೆ ಮನೆ ಶೌಚಾಲಯ ಹೀಗೆ ಹಲವು ರೀತಿಯಲ್ಲಿ ಮಹಿಳೆಯರ ರಕ್ಷಕನಾಗಿ ಬಿಜೆಪಿ ಕೆಲಸ ಮಾಡಿದೆ ಎಂದು ಮೋದಿ ಪ್ರತಿಪಾದಿಸಿದರು.
ಟಾರ್ಗೆಟ್ ನಂ. 7: ಬಿಜೆಪಿಯ ಹೊಸ ನೀರು ಮತ್ತು ಕಾಂಗ್ರೆಸ್‌ನ ಹಳಬರು
ಬಿಜೆಪಿ ಈ ಬಾರಿ ಹೊಸ ಹುರುಪಿನ ಯುವಕರಿಗೆ, ಹೊಸ ಮುಖಗಳಿಗೆ ಟಿಕೆಟ್ ನೀಡಿ ಕಣಕ್ಕೆ ಜೋಶ್ ತುಂಬಿದೆ. ಆದರೆ, ಕಾಂಗ್ರೆಸ್ ಉತ್ಸಾಹ ಕಳೆದುಕೊಂಡ, ಇದು ಕೊನೆಯ ಚುನಾವಣೆ ಎಂದು ಅಂಗಲಾಚುತ್ತಿರುವವರಿಗೆ ಟಿಕೆಟ್ ನೀಡಿದೆ. ಇವರು ಏನು ಹೊಸತನ ತರಬಲ್ಲರು ಎಂದು ಪ್ರಶ್ನಿಸುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಪರೋಕ್ಷವಾಗಿ ಕೆಣಕಿದರು.
ಟಾರ್ಗೆಟ್ ನಂ. 8: ಲಿಂಗಾಯತರನ್ನೂ ಚೋರ್ ಎಂದ ಕಾಂಗ್ರೆಸ್
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಭ್ರಷ್ಟ ಮುಖ್ಯಮಂತ್ರಿಗಳ ಕಥೆ ಹೇಳಿದ್ದನ್ನು ಲಿಂಗಾಯತರಿಗೆ ಚೆನ್ನಾಗಿ ಕನೆಕ್ಟ್ ಮಾಡಿದರು ಮೋದಿ ʻʻದೇಶಕ್ಕಾಗಿ ಕೆಲಸ ಮಾಡುವವರಿಗೆ, ಜನರ ಕೆಲಸ ಮಾಡುವವರಿಗೆ ಅಪಮಾನ ಮಾಡೋದು ಕಾಂಗ್ರೆಸ್‌ನ ಜಾಯಮಾನ. ನನ್ನನ್ನು ಚೌಕಿದಾರ್ ಚೋರ್ ಎಂದರು, ಮೋದಿ ಚೋರ್ ಎಂದರು, ಒಬಿಸಿಗಳನ್ನು ನೀಚರೆಂದರು. ಅದಕ್ಕಿಂತಲೂ ಹೆಚ್ಚಾಗಿ ನನ್ನ ಲಿಂಗಾಯತ ಬಂಧುಗಳನ್ನು ಕಳ್ಳರು ಎಂದು ಕರೆದರು. ಇದು ನನಗೆ ತುಂಬಾ ಬೇಸರವಾಗಿದೆʼʼ ಎಂದು ಹೇಳಿದರು. ಈ ಮೂಲಕ ಲಿಂಗಾಯತ ಮತ ಬ್ಯಾಂಕ್ ಭದ್ರಗೊಳಿಸುವ ಪ್ರಯತ್ನ ನಡೆಸಿದರು.
ಟಾರ್ಗೆಟ್ ನಂ. 9: ಉಚಿತ ಭರವಸೆಗಳೆಲ್ಲ ಬೋಗಸ್
ಕಾಂಗ್ರೆಸ್, ಜೆಡಿಎಸ್ ಸರ್ಕಾರಗಳು ರೈತರಿಗೆ ಸಾಲ ಮನ್ನಾದ ನಾಟಕ ಮಾಡುತ್ತಿದ್ದವು. ಅದರೆ, ಸಾಲ ಮನ್ನಾ ಯಾರಿಗೂ ಆಗುತ್ತಿರಲಿಲ್ಲ. ಛತ್ತೀಸ್‌ಗಢ, ರಾಜಸ್ಥಾನ, ಹಿಮಾಚಲದಲ್ಲಿ ನೀಡಿದ ಯಾವ ಭರವಸೆಯೂ ಈಡೇರಿಲ್ಲ. ಸಾಲ ಮನ್ನಾದ ಲಾಭ ಪಕ್ಷದ ಕೆಲವರಿಗೆ ಮಾತ್ರ ಸಿಗುತ್ತಿತ್ತು ಅಷ್ಟೆ. ಆದರೆ, ಕೋಟ್ಯಂತರ ಬಡ ರೈತರಿಗೆ ನೆರವು ಸಿಗಲಿಲ್ಲ. ಹೆಚ್ಚಿನ ಬಡ ರೈತರಿಗೆ ಬ್ಯಾಂಕ್ ಖಾತೆ ಇರಲಿಲ್ಲ, ಲೋನ್ ಸಿಗುತ್ತಿರಲಿಲ್ಲ, ಹೀಗಾಗಿ ಅವರು ಕೈಸಾಲ ಮಾಡುತ್ತಿದ್ದರು. ಅವರ ಸಾಲ ಎಲ್ಲಿ ಮನ್ನಾ ಆಗುತ್ತದೆʼʼ ಎಂದು ಕೇಳಿದರು ನರೇಂದ್ರ ಮೋದಿ. ಈ ಮೂಲಕ ಉಚಿತ ಭರವಸೆಗಳೆಲ್ಲ ಬೋಗಸ್ ಎಂದರು.
ಇದನ್ನೂ ಓದಿ : Rahul Gandhi: ಮೋದಿ ಸರ್ನೇಮ್ಗೆ ಅಪಮಾನ ಪ್ರಕರಣ; ಮೇ 2ಕ್ಕೆ ವಿಚಾರಣೆ ಮುಂದೂಡಿದ ಗುಜರಾತ್ ಹೈಕೋರ್ಟ್