ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ₹280 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಮಿದುಳು ಸಂಶೋಧನಾ ಕೇಂದ್ರವನ್ನು ಲೋಕಾರ್ಪಣೆಗೊಳಿಸಿದರು ಹಾಗೂ ₹425 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣ ವಾಗಲಿರುವ ಬಾಗ್ಚಿ- ಪಾರ್ಥಸಾರಥಿ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ದಾನಿಗಳಾದ ಕ್ರಿಸ್ ಗೋಪಾಲಕೃಷ್ಣನ್ ದಂಪತಿ ಹಾಗೂ ಬಾಗ್ಚಿ ಮತ್ತು ಪಾರ್ಥಸಾರಥಿ ಕುಟುಂಬದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಧಾನಿ ಮೋದಿಯವರಿಗೆ ಐಐಎಸ್‌ಸಿ ನಿರ್ದೇಶಕ ಗೋವಿಂದನ್ ರಂಗರಾಜನ್ ಅವರು ಯೋಜನೆಯನ್ನು ವಿವರಿಸಿದರು. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮಧುಮೇಹ ಕಡಿಮೆಯಿದೆ, ಆದರೆ ಡಿಮೆನ್ಷಿಯಾ ಹೆಚ್ಚಳವಾಗಿದೆ. ಇದೆಲ್ಲದ ಕುರಿತು ಬಹು ದೊಡ್ಡ ಪ್ರಮಾಣದಲ್ಲಿ ಅಧ್ಯಯನ ನಡೆಸಲಾಗುತ್ತದೆ ಎಂದು ತಿಳಿಸಿದರು. ಈ ಕುರಿತು ಕೆಲವು ಪ್ರಶ್ನೆಗಳನ್ನು ಕೇಳಿದ ಮೋದಿ, ಮತ್ತಷ್ಟು ಹೆಚ್ಚಿನ ಮಾಹಿತಿ ಪಡೆದರು.
ಆಸ್ಪತ್ರೆಗೆ ದಾನ ನೀಡಿದ ಬಾಗ್ಚಿ-ಪಾರ್ಥಸಾರಥಿ ಅವರಿಗೆ ಮೋದಿ ಧನ್ಯವಾದ ಸಲ್ಲಿಸಿದರು. ಕೆಲ ಹೊತ್ತು ದಾನಿಗಳ ಜತೆಗೆ ನಿಂತು ಮಾತನಾಡಿದರು. ತಮ್ಮಂತಹ ದಾನಿಗಳಿಂದಾಗಿ ಇಷ್ಟು ಉತ್ತಮ ಯೋಜನೆ ಹಮ್ಮಿಕೊಳ್ಳಲು ಸಾಧ್ಯವಾಗುತ್ತಿದೆ ಎಂದರು. ಅದಕ್ಕೆ ದಾನಿಗಳು, “ಸಮಾಜಕ್ಕೆ ನೀಡಿದ್ದೇವೆ, ನಮ್ಮದೇನೂ ಹೆಚ್ಚುಗಾರಿಕೆ ಇಲ್ಲʼʼ ಎಂದು ಅಷ್ಟೇ ನಮ್ರವಾಗಿ ಹೇಳಿದರು.
ಇದನ್ನೂ ಓದಿ | Modi in Karnataka | ಮೋದಿ ಶಂಕು ಸ್ಥಾಪನೆ ಮಾಡುವ ಆಸ್ಪತ್ರೆಗೆ ₹425 ಕೋಟಿ ಕೊಟ್ಟವರು ಯಾರು?