ಬೆಂಗಳೂರು: ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರವಿದ್ದು, ಇದರಿಂದಾಗಿ ಅಭಿವೃದ್ಧಿಯ ವೇಗ ಹೆಚ್ಚಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಕಳೆದ ೪೦ ವರ್ಷಗಳಿಂದ ಬೆಂಗಳೂರು ಸಬ್‌ಅರ್ಬನ್ ಯೋಜನೆ ನನೆಗುದಿಗೆ ಬೀಳಲು ಕಾರಣವಾದ ಹಿಂದಿನ ಸರ್ಕಾರಗಳನ್ನು ಮೋದಿ ಟೀಕಿಸಿದರು.
ಬೆಂಗಳೂರಿನ ಕೊಮ್ಮಘಟ್ಟದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರು ಸಬ್ ಅರ್ಬನ್ ರೈಲ್ವೆ ಯೋಜನೆಗಳು ಮತ್ತು NHAI ಯೋಜನೆಗಳ ಪ್ರದರ್ಶನವನ್ನು ವೀಕ್ಷಿಸಿ, ಬೆಂಗಳೂರಿನ ಸರ್. ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್, ಯಲಹಂಕ- ಪೆನುಕೊಂಡ ಮತ್ತು ಅರಸೀಕೆರೆ-ತುಮಕೂರು ಜೋಡಿ ರೈಲು ಮಾರ್ಗ ಹಾಗೂ 100% ವಿದ್ಯುದೀಕರಣಗೊಂಡ ಕೊಂಕಣ ರೈಲು ಮಾರ್ಗವನ್ನು ಮೋದಿ ರಾಷ್ಟ್ರಕ್ಕೆ ಸಮರ್ಪಿಸಿ ಮಾತನಾಡಿದರು.
ಇದನ್ನೂ ಓದಿ | Modi In Karnataka | ಕಾರು ನಿಲ್ಲಿಸಿ ಕೈ ಬೀಸಿದ ಮೋದಿ: ಕಾರ್ಯಕರ್ತರು ಫುಲ್ ಖುಷ್
ಕರ್ನಾಟಕದ ಅಭಿವೃದ್ದಿಗಾಗಿ ಡಬಲ್ ಎಂಜಿನ್ ಸರ್ಕಾರ ನೀಡಿದ ಭರವಸೆಗೆ ಇಂದು ಎಲ್ಲರೂ ಸಾಕ್ಷಿಯಾಗುತ್ತಿದ್ದೇವೆ. ಉನ್ನತ ಶಿಕ್ಷಣ, ಸಂಶೋಧನೆ, ಕೌಶಲ, ಆರೋಗ್ಯ ಸೇರಿ ಅನೇಕ ಕ್ಷೇತ್ರದಲ್ಲಿ ಜನಜೀವನವನ್ನು ಸುಗಮಗೊಳಿಸಲಾಗಿದೆ. ಇಲ್ಲಿಗೆ ಆಗಮಿಸುವ ಮೊದಲು ಐಐಎಸ್‌ಸಿ, ಬೇಸ್‌ನಲ್ಲಿ ಶಿಕ್ಷಣ-ಸಂಶೋಧನೆ ಕುರಿತು ತಿಳಿದುಕೊಳ್ಳಲು ಉಪಸ್ಥಿತನಿದ್ದೆ. ಇದೆಲ್ಲದರಿಂದ ನನಗೆ ಹೊಸ ಉತ್ಸಾಹ ಲಭಿಸಿದೆ. ಅಭಿವೃದ್ಧಿ ಪರ್ವದಲ್ಲಿ ಖಾಸಗಿ ಕ್ಷೇತ್ರ ತೊಡಗಿಸಿಕೊಂಡಿರುವುದು ಬಹಳ ಸಂತೋಷ ನೀಡಿದೆ. ನಿಮ್ಮಂತೆಯೇ ನಾನೂ ಇದೆಲ್ಲವನ್ನೂ ಆನಂದಿಸುತ್ತಿದ್ದೇನೆ. ಇಂದಿನ ಎಲ್ಲ ಯೋಜನೆಗಳೂ ಇಲ್ಲಿನ ಯುವಕರು, ರೈತರಿಗೆ ಹೊಸ ಸೌಲಭ್ಯ ಹಾಗೂ ಹೊಸ ಅವಕಾಶ ನೀಡುತ್ತವೆ. ಪೂರ್ಣ ಕರ್ನಾಟಕಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಮೋದಿ ಹೇಳಿದರು.
ಏಕ ಭಾರತ, ಶ್ರೇಷ್ಟ ಭಾರತಕ್ಕೆ ಬೆಂಗಳೂರೇ ಮಾದರಿ. ಬೆಂಗಳೂರು ಅಭಿವೃದ್ಧಿ ಎಂದರೆ ಲಕ್ಷಾಂತರ ಕನಸುಗಳ ಅಭಿವೃದ್ಧಿ. ಬೆಂಗಳೂರಿನಲ್ಲಿ ತಮ್ಮ ಕನಸನ್ನು ನನಸು ಮಾಡಲು ಇರುವವರ ಜೀವನ ಸುಲಭಗೊಳಿಸಲು ಮತ್ತು ಸಂಚಾರ ಸಮಯ ಕಡಿಮೆಗೊಳಿಸಲು ಡಬಲ್ ಎಂಜಿನ್ ಸರ್ಕಾರ ಬದ್ಧವಾಗಿದೆ. ಬೆಂಗಳೂರನ್ನು ಸಂಚಾರ ದಟ್ಟಣೆಯಿಂದ ಮುಕ್ತಗೊಳಿಸಲು ರೈಲು, ಮೆಟ್ರೊ ಸೇರಿ ಎಲ್ಲ ಸಂಭಾವ್ಯ ಮಾಧ್ಯಮಗಳನ್ನು ಜಾರಿಗೊಳಿಸಲು ಸರ್ಕಾರ ಕೆಲಸ ಮಾಡುತ್ತಿದೆ. ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳನ್ನೂ ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.
ಸಬ್ ಅರ್ಬನ್ ವಿಳಂಬಕ್ಕೆ ಹಿಂದಿನ ಸರ್ಕಾರಗಳನ್ನು ಟೀಕಿಸಿದ ಮೋದಿ ʼʼಈ ಯೋಜನೆಯ ಕುರಿತ ಚರ್ಚೆಯಲ್ಲೆ ಹಿಂದಿನ ಸರ್ಕಾರಗಳು ೪೦ ವರ್ಷ ಕಳೆದಿವೆ. ಹಾಗಾದರೆ ಈಗಿನ ಸ್ಥಿತಿ ಏನಿದೆ? ನಮ್ಮ ಅಧಿಕಾರದ ಅವಧಿಯಲ್ಲಿ ಹೀಗೆ ಆಗುವುದಿಲ್ಲ. ಈ ಯೋಜನೆಗಳನ್ನು ಕೇವಲ ೪೦ ತಿಂಗಳಲ್ಲಿ ಪೂರ್ಣಗೊಳಿಸುತ್ತೇನೆ. ಈ ಯೋಜನೆಗಳು ಕಳೆದ ೧೬ ವರ್ಷಗಳಿಂದ ಫೈಲ್‌ನಲ್ಲಿ ಓಡಾಡುತ್ತಿದ್ದವು. ೪೦ ವರ್ಷಗಳ ಹಿಂದೆಯೇ ಈ ಕಾರ್ಯ ಪೂರ್ಣವಾಗಿದ್ದರೆ ಬೆಂಗಳೂರಿನ ಮೇಲೆ ಇಷ್ಟು ಒತ್ತಡ ಆಗುತ್ತಿರಲಿಲ್ಲ. ಆದರೆ ಈ ಬಾರಿ ನನಗೆ ಅವಕಾಶ ಸಿಕ್ಕಿದೆ. ನಾನು ಸಮಯ ವ್ಯರ್ಥ ಮಾಡಲು ಬಯಸುವುದಿಲ್ಲ. ಕ್ಷಣಕ್ಷಣವೂ ದುಡಿಯುತ್ತೇನೆʼʼ ಎಂದು ಮೋದಿ ಹೇಳಿದರು.
“”ಈ ಡಬಲ್ ಎಂಜಿನ್ ಸರ್ಕಾರ ಬೆಂಗಳೂರು ಹಾಗೂ ಕರ್ನಾಟಕದ ಜನರ ಎಲ್ಲ ಕನಸನ್ನೂ ನನಸಾಗಿಸಲು ಕಟಿಬದ್ಧವಾಗಿದೆ. ಸಬ್‌ಅರ್ಬನ್ ಯೋಜನೆಯಿಂದಾಗಿ ಬೆಂಗಳೂರಿನ ಸಾಮರ್ಥ್ಯ ಹೆಚ್ಚಾಗುತ್ತದೆ. ಬೆಂಗಳೂರು ಕೇಂದ್ರದಲ್ಲಿಯೇ ವಾಸ ಮಾಡಬೇಕಾದ ಅನಿವಾರ್ಯತೆಯನ್ನು ಕೊನೆಗೊಳಿಸುತ್ತದೆʼʼ ಎಂದರು.
ಕನ್ನಡದಲ್ಲಿ ಮಾತು ಆರಂಭ
ಪ್ರಧಾನಿ ಮೋದಿಯವರು ಕನ್ನಡದಲ್ಲಿ ಭಾಷಣ ಆರಂಭಿಸಿ ನೆರೆದವರನ್ನು ಸಂತಸಗೊಳಿಸಿದರು. “ಕರುನಾಡ ಜನತೆಗೆ ನನ್ನ ಪ್ರೀತಿಯ ನಮಸ್ಕಾರಗಳು. ಬೆಂಗಳೂರಿನ ಮಹಾಜನತೆಗೆ ವಿಶೇಷವಾದ ನಮಸ್ಕಾರಗಳು. ಕರ್ನಾಟಕ ರಾಜ್ಯದ ಪಾಲಿಗೆ ಇಂದು ಮಹತ್ವದ ದಿನವಾಗಿದೆ. ರಾಜ್ಯದಲ್ಲಿ ಅನೇಕ ಮೂಲಭೂತ ಸೌಕರ್ಯ ಕಲ್ಪಿಸುವ ಯೋಜನೆಗಳನ್ನು ಜಾರಿಗೊಳಿಸಲು ಜಾರಿಸಲು ನನಗೆ ಸಂತೋಷವಾಗುತ್ತದೆ” ಎಂದರು.
ಇದನ್ನೂ ಓದಿ | Modi In Karnataka | ಸರ್‌ಎಂವಿ ಟರ್ಮಿನಲ್ ಉದ್ಘಾಟನೆ, ಸಬ್‌ಅರ್ಬನ್ ಶಂಕು ಸ್ಥಾಪಿಸಿದ ಮೋದಿ