ಮೈಸೂರು: ಪ್ರಾಜೆಕ್ಟ್ ಟೈಗರ್‌ನ 50ನೇ ವರ್ಷಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿನ ರ‍್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ತಂಗಲಿದ್ದಾರೆ. ಏಪ್ರಿಲ್ 8 (ಶನಿವಾರ) ರಾತ್ರಿ ಇಲ್ಲಿಗೆ ಆಗಮಿಸಲಿರುವ ಅವರು ರಾತ್ರಿಯಿಡೀ ತಂಗಲಿದ್ದಾರೆ.
ಮೈಸೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಈ ಖಾಸಗಿ ಹೋಟಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ತಂಗಲಿದ್ದು, ತಮ್ಮಲ್ಲಿ ಉಳಿಯುವ ವಿಶೇಷ ಅತಿಥಿಗೆ ಹೋಟೆಲ್ ಕಡೆಯಿಂದ ವಿಶೇಷ ಗೌರವ ನೀಡಲಾಗುತ್ತಿದೆ. ಒಟ್ಟು 140 ರೂಂಗಳಿರುವ ಹೋಟೆಲನ್ನು ಎಸ್‌ಪಿಜಿ ತಂಡ ಸಂಪೂರ್ಣ ಹೋಟೆಲ್ ವಶಕ್ಕೆ ಪಡೆದಿದೆ.
ಹೋಟೆಲ್‌ನ ದರ್ಬಾರ್ ಸೂಟ್ ನಲ್ಲಿ ಮೋದಿ ವಾಸ್ತವ್ಯಕ್ಕೆ ಸಿದ್ಧತೆ ಮಾಡಲಾಗಿದ್ದು, ದರ್ಬಾರ ಸೂಟ್ ಮೋದಿ ಮಯಗೊಳಿಸಲಾಗಿದೆ. ಮೋದಿ ಬಳಸುವ ಪ್ರತಿಯೊಮದು ವಸ್ತುಗಳ ಮೇಲೆ ಅವರ ಫೋಟೊವನ್ನು ಚಿತ್ರಸಿ ಅಲಂಕಾರ ಮಾಡಲಾಗಿದೆ. ಟವಲ್, ಬ್ಲಾಂಕೆಟ್, ಬೆಡ್ ಶೀಟ್, ತಲೆದಿಂಬಿನ ಕವರ್, ಟೇಬಲ್ ಮೇಲಿನ ಬಟ್ಟೆ ಸೇರಿ ಹಲವು ವಸ್ತುಗಳ ಮೇಲೆ ಮೋದಿ ಚಿತ್ರವನ್ನು ಹಾಕಲಾಗಿದೆ.
ಚಂದದ ಬರಹಗಳ ಚಿತ್ತಾರ
ʻʻThe splender of mysore welcomes back. The pride of India. Your leadership inspire usʼ ಎಂದು ಬರೆದ ವಸ್ತುಗಳನ್ನು ಒಳಗೊಂಡ ವಸ್ತುಗಳನ್ನು ಇಲ್ಲಿ ಬಳಸಲಾಗುತ್ತದೆ.
ಮೋದಿ ಸ್ವಾಗತಕ್ಕೆ ಜನಪ್ರತಿನಿಧಿಗಳು, ಪಕ್ಷದ ಮುಖಂಡರಿಲ್ಲ
ಮೋದಿ ಯಾವುದಾದರೂ ನಗರಕ್ಕೆ ಹೋದಾಗ ಅಲ್ಲಿನ ಜನಪ್ರತಿನಿಧಿಗಳು ಮತ್ತು ಬಿಜೆಪಿ ಮುಖಂಡರು ಸ್ವಾಗತ ಕೋರುವುದು ವಾಡಿಕೆ. ಅದರೆ, ಈ ಬಾರಿ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮೋದಿ ಸ್ವಾಗತಕ್ಕೆ ಜನಪ್ರತಿನಿಧಿಗಳು ಹಾಗೂ ಬಿಜೆಪಿ ಮುಖಂಡರಿಗೆ ಅವಕಾಶ ನೀಡಲಾಗಿಲ್ಲ.
ಮೋದಿ ಆಗಮನ ಮತ್ತು ನಿರ್ಗಮನದ ವೇಳೆ ಜನಪ್ರತಿನಿಧಿಗಳು, ಬಿಜೆಪಿ ಮುಖಂಡರು ಅವರಿಗೆ ವಂದನೆ ಸಲ್ಲಿಸುವುದಕ್ಕೆ ಬ್ರೇಕ್ ಹಾಕಲಾಗಿದೆ.
ಮೋದಿ ಪ್ರವಾಸದ ಸಂಪೂರ್ಣ ವಿವರ
- ಏಪ್ರಿಲ್ 8ರ ರಾತ್ರಿ 8.45ಕ್ಕೆ ಚೆನ್ನೈನಿಂದ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮನ. ಬಳಿಕ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ.
- ಏಪ್ರಿಲ್ 9ರ ಬೆಳಗ್ಗೆ 6.20ಕ್ಕೆ ಮೈಸೂರು ವಿಶೇಷ ಹೆಲಿಪ್ಯಾಡ್ನಿಂದ ಚಾಮರಾಜನಗರದ ಮೇಲುಕಾಮನಹಳ್ಳಿ ಹೆಲಿಪ್ಯಾಡ್ಗೆ ಪ್ರಯಣ.
- ಬೆಳಗ್ಗೆ 7.15ಕ್ಕೆ ಬಂಡೀಪುರಕ್ಕೆ ಭೇಟಿ, ಸಫಾರಿ ನಡೆಸಲಿರುವ ಮೋದಿ.
- ಅಲ್ಲಿಂದ ರಸ್ತೆ ಮಾರ್ಗವಾಗಿ ತೆಪ್ಪಕಾಡು ಆನೆ ಕ್ಯಾಂಪ್ಗೆ ಭೇಟಿ.
- ಸುಮಾರು 2 ಗಂಟೆಗಳ ಕಾಲ ಅರಣ್ಯದಲ್ಲಿ ಕಾಲ ಕಳೆಯಲಿರುವ ಪ್ರಧಾನಿ.
- ಬೆಳಗ್ಗೆ 10.20ಕ್ಕೆ ಮೈಸೂರಿಗೆ ವಾಪಸ್ ಆಗಲಿರುವ ನರೇಂದ್ರ ಮೋದಿ.
- ಮೈಸೂರು ವಿಶ್ವವಿದ್ಯಾನಿಲಯದ ಓವೆಲ್ ಮೈದಾನದ ವಿಶೇಷ ಹೆಲಿಪ್ಯಾಡ್ಲ್ಲಿ ಇಳಿಯಲಿರುವ ಮೋದಿ.
- 10.30ಕ್ಕೆ ಕರ್ನಾಟಕ ಮುಕ್ತ ವಿವಿ ಘಟಿಕೋತ್ಸವ ಭವನಕ್ಕೆ ಆಗಮನ.
- ಹುಲಿ ಯೋಜನೆ 50ನೇ ವರ್ಷದ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗಿ.
- ಕಾರ್ಯಕ್ರಮದಲ್ಲಿ ದೇಶ ವಿದೇಶಗಳ ಗಣ್ಯರು ಭಾಗಿ.
- ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿಷೇಧ.
- 12.10 ಹೆಲಿಕಾಪ್ಟರ್ ಮೂಲಕ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ವಾಪಸ್.
- 12.40ಕ್ಕೆ ದೆಹಲಿಗೆ ವಾಪಸ್ ಆಗಲಿರುವ ಪ್ರಧಾನಿಗಳು.
- ಮಂಡಕಳ್ಳಿ ವಿಮಾನ ನಿಲ್ದಾಣದಿಂದ ದೆಹಲಿಗೆ ಪಯಣ
ಇದನ್ನೂ ಓದಿ : Tiger Census : ಏಪ್ರಿಲ್ 9ರಂದು ಹುಲಿ ಗಣತಿ ಬಿಡುಗಡೆ ಮಾಡಲಿದ್ದಾರೆ ಪಿಎಂ ಮೋದಿ, ಕರ್ನಾಟಕವೇ ನಂಬರ್ ಒನ್?