ಮೈಸೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಾಲು ಸಾಲು ಸಮಾವೇಶ, ರ‍್ಯಾಲಿ, ರೋಡ್ ಶೋ, ಪ್ರಚಾರದ ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನ ನಂಜನಗೂಡಿನಲ್ಲಿರುವ ನಂಜುಂಡೇಶ್ವರ ದೇವಾಲಯಕ್ಕೆ ಮೋದಿ ಭೇಟಿ ನೀಡಲಿದ್ದಾರೆ. ನಂಜನಗೂಡು ಹೊರವಲಯದಲ್ಲಿ ಚುನಾವಣೆ ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ ಮೋದಿ ಅವರು ಶ್ರೀಕಂಠೇಶ್ವರನ ಸನ್ನಿಧಿಗೆ ತೆರಳಲಿದ್ದಾರೆ.
ನಂಜನಗೂಡು ಹೊರವಲಯದಲ್ಲಿ ಸಮಾವೇಶ ಮುಗಿಸಿ ದೇವಸ್ಥಾನಕ್ಕೆ ಮೋದಿ ತೆರಳಲಿದ್ದಾರೆ. ಸಮಾವೇಶ ಮುಕ್ತಾಯದ ನಂತರ ಕಳಲೆ, ದೇವಿರಮ್ಮನಹಳ್ಳಿ ಗೇಟ್, ಹುಲ್ಲಹಳ್ಳಿ ಸರ್ಕಲ್ ಮಾರ್ಗವಾಗಿ ಚಾಮರಾಜನಗರ ಬೈಪಾಸ್ ರಸ್ತೆ ಮೂಲಕ ದೇವಸ್ಥಾನಕ್ಕೆ ಮೋದಿ ತೆರಳಲಿದ್ದಾರೆ. ಅರ್ಧ ಗಂಟೆ ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ಮೋದಿ ಕಾಲ ಕಳೆಯಲಿದ್ದಾರೆ.
ದೇವಾಲಯ ಆವರಣದ ಪ್ರವೇಶಿಸುತ್ತಿದ್ದಂತೆ ಮಂಗಳ ವಾದ್ಯಗಳಿಂದ ಭವ್ಯ ಸ್ವಾಗತ ದೊರೆಯಲಿದೆ. ಮೊದಲಿಗೆ ಮಹಾಗಣಪತಿ ದರ್ಶನ ಪಡೆಯಲಿರುವ ಅವರು, ಬಳಿಕ ಶ್ರೀ ಕಂಠೇಶ್ವರ ಸನ್ನಿಧಿಗೆ ತೆರಳಿ ದೇವರ ದರ್ಶನ ಪಡೆಯಲಿದ್ದಾರೆ. ಇದೇ ವೇಳೆ, ದೇವರ ಬಳಿ ಪ್ರಧಾನಿ ನರೇಂದ್ರ ಮೋದಿ ಸಂಕಲ್ಪ ಮಾಡಲಿದ್ದಾರೆ. ಲೋಕ ಕಲ್ಯಾಣಕ್ಕಾಗಿ ಶ್ರೀ ಕಂಠೇಶ್ವರನ ಮುಂದೆ ಸಂಕಲ್ಪ ಮಾಡಲಿದ್ದಾರೆ. ಕೆಲ ಕಾಲ ದೇವರ ಮುಂದೆ ಕುಳಿತು ಪ್ರಾರ್ಥನೆ ಸಲ್ಲಿಸಿ, ದೇವಾಲಯದ ಒಳಭಾಗದಲ್ಲಿರುವ ಪಾರ್ವತಿ ದೇವಿಯ ದರ್ಶನ ಪಡೆದು ಹಿಂದಿರುಗಲಿದ್ದಾರೆ.
ಇದನ್ನೂ ಓದಿ: Modi In Karnataka: ಹೂಮಳೆ, ಉದ್ಘೋಷದೊಂದಿಗೆ ಮೋದಿ ರೋಡ್ ಶೋ ಸಂಪನ್ನ, ಇಲ್ಲಿವೆ ಫೋಟೊಗಳು
ಕೊನೆಗೆ ಮೈಸೂರು ಊಟಿ ಮಾರ್ಗದ ರಸ್ತೆ ಮೂಲಕ ಮೈಸೂರು ಏರ್‌ಪೋರ್ಟ್‌ಗೆ ತೆರಳಲಿರುವ ಅವರು, ಅಲ್ಲಿಂದ ದೆಹಲಿಗೆ ಹಾರಲಿದ್ದಾರೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೋದಿ ಅವರು ಕಳೆದ ಮೂರು ದಿನಗಳಿಂದ ರಾಜ್ಯದ ಹಲವೆಡೆ ಚುನಾವಣೆ ಸಮಾವೇಶ, ರ‍್ಯಾಲಿ, ರೋಡ್ ಶೋ ನಡೆಸಿದ್ದಾರೆ. ಭಾನುವಾರ ಅವರ ಪ್ರಚಾರ ಮುಗಿಯಲಿದೆ.