Site icon Vistara News

Modi in Karnataka: ಕನ್ನಡದಲ್ಲೇ ವೈದ್ಯಕೀಯ ಶಿಕ್ಷಣಕ್ಕೆ ಡಬಲ್‌ ಇಂಜಿನ್‌ ಸರ್ಕಾರದಿಂದ ಅವಕಾಶ: ಚಿಕ್ಕಬಳ್ಳಾಪುರದಲ್ಲಿ ಮೋದಿ ಮಾತು

modi

ಚಿಕ್ಕಬಳ್ಳಾಪುರ: ಅನೇಕ ಪಕ್ಷಗಳ ಸರ್ಕಾರಗಳು ದೇಶವನ್ನು ಆಡಳಿತ ಮಾಡಿವೆಯಾದರೂ, ಗ್ರಾಮೀಣ ಹಾಗೂ ಬಡವರ ಮನೆಯ ಮಕ್ಕಳು ವೈದ್ಯರಾಗುವುದು ಅವರಿಗೆ ಇಷ್ಟವಿರಲಿಲ್ಲ. ಇದೇ ಕಾರಣಕ್ಕೆ, ಕನ್ನಡದಲ್ಲೂ ಓದಿ ವೈದ್ಯರಾಗುವ ಅವಕಾಶವನ್ನು ಬಿಜೆಪಿ ನೇತೃತ್ವದ ಡಬಲ್‌ ಇಂಜಿನ್‌ ಸರ್ಕಾರ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಶ್ರೀ ಸತ್ಯ ಸಾಯಿ ರಾಜೇಶ್ವರಿ ಮೆಮೋರಿಯಲ್‌ ಬ್ಲಾಕ್‌ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಮಯದಲ್ಲಿ ಅಭಿವೃದ್ಧಿ ಹೊಂದಿದ ದೇಶವಾಗಿ ಬದಲಾವಣೆ ಆಗುವ ಸಂಕಲ್ಪ ಮಾಡಿದ್ದೇವೆ. ಇಷ್ಟು ಕಡಿಮೆ ಸಮಯದಲ್ಲಿ ಭಾರತ ಹೇಗೆ ಅಭಿವೃದ್ಧಿ ಆಗುತ್ತದೆ? ಎಂದು ಅನೇಕರು ಪ್ರಶ್ನೆ ಕೇಳುತ್ತಾರೆ. ಇದಕ್ಕೆ ಒಂದೇ ಉತ್ತರ ಎಂದರೆ, ಎಲ್ಲರ ಪ್ರಯತ್ನದಿಂದ. ದೇಶದ ಪ್ರತಿ ವ್ಯಕ್ತಿಯ ವೈಯಕ್ತಿಕ ಪ್ರಯತ್ನದಿಂದ ಇದು ಸಾಧ್ಯವಾಗುತ್ತದೆ. ಅದಕ್ಕಾಗಿಯೇ ಬಿಜೆಪಿ ಸರ್ಕಾರ ಎಲ್ಲರನ್ನೂ ಒಳಗೊಳ್ಳಲು ಒತ್ತು ನೀಡುತ್ತಿದೆ.

ಇದರಲ್ಲಿ ಸಾಮಾಜಿಕ ಹಾಗೂ ಧಾರ್ಮಿಕ ಸಂಸ್ಥೆಗಳ ಕೊಡುಗೆ ಅಪಾರವಾಗಿದೆ. ಕರ್ನಾಟಕದಲ್ಲಂತೂ ದೇವಸ್ಥಾನ, ಮಠಗಳ ಪಾತ್ರ ಮಹತ್ವವಾದದ್ದು. ಈ ಸಂಸ್ಥೆಯಿಂದ ನಡೆಸುವ ಸಾಮಾಜಿಕ ಕಾರ್ಯವೂ ಎಲ್ಲರನ್ನೂ ಒಳಗೊಳ್ಳುತ್ತದೆ. ಕಳೆದ ಒಂಭತ್ತು ವರ್ಷದಲ್ಲಿ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಅನೇಕ ಕಾರ್ಯ ಮಾಡಲಾಗಿದೆ. ಸರ್ಕಾರದ ಜತೆಗೆ ಬೇರೆ ಸಂಘಟನೆಗಳೂ ಸುಲಭವಾಗಿ ಆಸ್ಪತ್ರೆ ತೆರೆಯುವುದು ಬಹಳ ಸುಲಭವಾಗಿದೆ. ಇವರೆಲ್ಲರ ಪ್ರಯತ್ನದ ಪ್ರಭಾವ ಇಂದು ಕಾಣುತ್ತಿದೆ.

ಮೆಡಿಕಲ್‌ ಕ್ಷೇತ್ರದ ಎದುರು ಹೊಸ ಸವಾಲಿದೆ. ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಕೆಲವು ಪಕ್ಷಗಳು ಭಾಷೆಗಳ ಆಟವಾಡುತ್ತಿವೆ. ಆದರೆ ಭಾಷೆಗಳಿಗೆ ಸಿಗಬೇಕಾದಷ್ಟು ಗೌರವ ಸಿಗಲಿಲ್ಲ. ಕನ್ನಡ ಅತ್ಯಂತ ಸಮೃದ್ಧವಾದ ಭಾಷೆ, ದೇಶದ ಗೌರವ ಹೆಚ್ಚಿಸುವ ಭಾಷೆ. ಆದರೆ ಗ್ರಾಮೀಣ ಪ್ರದೇಶದ, ಬಡವರ ಮಕ್ಕಳೂ ವೈದ್ಯರಾಗುವುದು ಈ ಸರ್ಕಾರಗಳಿಗೆ ಇಷ್ಟ ಇರಲಿಲ್ಲ. ಕನ್ನಡ ಸೇರಿ ಎಲ್ಲ ಭಾರತೀಯ ಭಾಷೆಗಳಲ್ಲೂ ಮೆಡಿಕಲ್‌ ಶಿಕ್ಷಣ ನೀಡುವ ಅವಕಾಶವನ್ನು ಡಬಲ್‌ ಇಂಜಿನ್‌ ಸರ್ಕಾರ ನೀಡುತ್ತಿದೆ ಎಂದರು.

ಈ ದೇಶದಲ್ಲಿ ಬಡವರನ್ನು ವೋಟ್‌ ಬ್ಯಾಂಕ್‌ಗಾಗಿ ಬಳಸಿಕೊಳ್ಳಲಾಯಿತು. ಆದರೆ ನಮ್ಮ ಸರ್ಕಾರ ದೇಶದಲ್ಲಿ ಉತ್ತಮ ಆರೋಗ್ಯ ಸೇವೆಗಳು, ಜನ ಔಷಧಿ ಕೇಂದ್ರಗಳನ್ನು ತೆರೆದಿದ್ದೇವೆ. ಇದರಿಂದಾಗಿ ಕರ್ನಾಟಕದ ಬಡವರ ಕೋಟ್ಯಂತರ ರೂ. ಉಳಿತಾಯ ಆಗಿದೆ. ಆಯುಷ್ಮಾನ್‌ ಭಾರತ್‌ ಯೋಜನೆ ಮೂಲಕ ಬಡವರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಬಡವರ ಪರವಾದ ಬಿಜೆಪಿ ಸರ್ಕಾರ ಡಯಾಲಿಸಿಸ್‌ ಸೇರಿ ಅನೇಕ ಸೇವೆಗಳ ದರ ಕಡಿತ ಮಾಡಿದೆ.

ಇದನ್ನೂ ಓದಿ: TB Mukt Panchayat: 2025ರ ವೇಳೆಗೆ ಭಾರತ ಕ್ಷಯರೋಗ ಮುಕ್ತ; ನರೇಂದ್ರ ಮೋದಿ ವಿಶ್ವಾಸ

Exit mobile version