Site icon Vistara News

Modi in Karnataka : ಕಾಂಗ್ರೆಸ್‌ ಕಾಲದಲ್ಲಿ ಇದ್ದಿದ್ದು 85% ಸರ್ಕಾರ; 40% ಕಮಿಷನ್‌ಗೆ ಮೋದಿ ತಿರುಗೇಟು

modi-in-karnataka: Prime minister Modi Dubs congress as 85% commission sarkar

modi-in-karnataka: Prime minister Modi Dubs congress as 85% commission sarkar

ವಿಜಯಪುರ: ಈಗ ಸರ್ಕಾರ ಬಿಡುಗಡೆ ಮಾಡುವ ಪ್ರತಿಯೊಂದು ಪೈಸೆ ಕೂಡಾ ಫಲಾನುಭವಿಗಳ ಮನೆಗೆ ತಲುಪುತ್ತದೆ. ಆದರೆ, ಕಾಂಗ್ರೆಸ್‌ ಆಡಳಿತದಲ್ಲಿ ಸರ್ಕಾರ ಒಂದು ರೂಪಾಯಿ ಬಿಡುಗಡೆ ಮಾಡಿದರೆ ಜನರಿಗೆ ಕೇವಲ 15 ಪೈಸೆ ಮಾತ್ರ ತಲುಪುತ್ತಿತ್ತು. ಅದು 85% ಕಮಿಷನ್‌ ಸರ್ಕಾರವಾಗಿತ್ತು- ಎಂದು ಹೇಳಿದ್ದಾರೆ ಪ್ರಧಾನಿ ನರೇಂದ್ರ ಮೋದಿ (Prime minister Narendra Modi). ಇದು ರಾಜ್ಯದ ಬಿಜೆಪಿ ಸರ್ಕಾರದ ಮೇಲೆ ಕಾಂಗ್ರೆಸ್‌ ಮಾಡುತ್ತಿರುವ 40% ಕಮಿಷನ್‌ ಆರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ ನೀಡಿದ ತಿರುಗೇಟಿನ ಹಾಗೆ ಕಂಡಿತು.

ವಿಜಯಪುರದ ಸೈನಿಕ ಶಾಲೆ ಆವರಣದಲ್ಲಿ ನಡೆದ ಬಿಜೆಪಿಯ ನವಕರ್ನಾಟಕ ಸಂಕಲ್ಪ ಸಮಾವೇಶದಲ್ಲಿ (Modi in Karnataka) ಅವರು ಮಾತನಾಡಿದರು. ರಾಜ್ಯ ವಿಧಾನಸಭಾ ಚುನಾವಣೆಯ ಭಾಗವಾಗಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂಬ ಘೋಷಣೆಗಳನ್ನು ಮೊಳಗಿಸಿದರು.

ವಿಜಯಪುರ ಸಮಾವೇಶದಲ್ಲಿ ಮಹಿಳೆಯರ ಜೋಶ್‌

ಇದನ್ನು ಅವರದೇ ಪ್ರಧಾನಿ ಹೇಳಿದ್ದು!

ʻʻಕಾಂಗ್ರೆಸ್‌ ಸರ್ಕಾರ ಮಾಡಿದ ಯಾವುದೇ ಯೋಜನೆಗಳು ಜನರಿಗೆ ತಲುಪಲಿಲ್ಲ. ಅದೆಲ್ಲವೂ ಕೆಲವೇ ನಾಯಕರ ಪಾಲಾಯಿತು. ಒಂದು ರೂಪಾಯಿ ಕಳಿಸಿದರೆ ಅದರಲ್ಲಿ 15 % ಮಾತ್ರ ಜನರಿಗೆ ತಲುಪುತ್ತದೆ ಎಂದು ಆಗಿನ ಪ್ರಧಾನಿಯೇ ಒಪ್ಪಿಕೊಂಡಿದ್ದರು. ಅಂದರೆ 85% ಸರ್ಕಾರ್‌ ಅವರದಾಗಿತ್ತು. ಪರಿಸ್ಥಿತಿ ಹೀಗಿದೆ ಎಂದು ಗೊತ್ತಿದ್ದರೂ ಅದನ್ನು ಸರಿಪಡಿಸುವುವುದಕ್ಕೆ ಯಾವುದೇ ಪ್ರಯತ್ನವನ್ನು ಕಾಂಗ್ರೆಸ್‌ ಮಾಡಲಿಲ್ಲʼʼ ಎಂದು ನರೇಂದ್ರ ಮೋದಿ ಹೇಳಿದರು.

ʻʻಪ್ರಧಾನಿ ಆಗಿದ್ದವರೇ ಈ ವಿಚಾರವನ್ನು ಒಪ್ಪಿಕೊಂಡಿದ್ದರು ಎಂದರೆ ಅವರು ಬಡವರ ಅದೆಷ್ಟು ಹಣವನ್ನು ಲೂಟಿ ಮಾಡುತ್ತಿದ್ದರು ಎನ್ನುವುದು ಗೊತ್ತಾಗುತ್ತದೆ. ಈಗ 29 ಲಕ್ಷ ಕೋಟಿ ರೂಪಾಯಿ ಜನರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಹೋಗಿ ಬೀಳುತ್ತದೆ. ಇವತ್ತು ದಿಲ್ಲಿಯಿಂದ ಒಂದು ರೂಪಾಯಿ ಹೊರಟರೆ ನೂರು ಪೈಸೆ ಕೂಡಾ ಖಾತೆಗೆ ಹೋಗುತ್ತದೆ. ಈಗ ಕಾಂಗ್ರೆಸ್‌ ಸರ್ಕಾರ ಇರುತ್ತಿದ್ದರೆ 24 ಲಕ್ಷ ಕೋಟಿ ರೂ. ಕಾಂಗ್ರೆಸ್‌ ನಾಯಕ ಜೇಬು ಸೇರುತ್ತಿತ್ತುʼʼ ಎಂದು ಮೋದಿ ಹೇಳಿದರು.

ಅವರು ಹಣ ಮಾತ್ರವಲ್ಲ, ರೇಷನ್‌ನಲ್ಲಿಯೂ 50% ನುಂಗುತ್ತಿದ್ದರು. ಈಗ ಪ್ರತಿಯೊಬ್ಬರಿಗೆ ನಿಗದಿಯಾದ ರೇಷನ್‌ ಅವರಿಗೆ ನೇರವಾಗಿ ಸಿಗುವಂತೆ ಕ್ರಮ ಕೈಗೊಂಡಿದ್ದೇವೆ ಎಂದರು ನರೇಂದ್ರ ಮೋದಿ.

ವಿಜಯಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ

ರೈತರ ಸಾಲ ಮನ್ನಾದ ಉಪಯೋಗ ಶ್ರೀಮಂತರಿಗೆ ಮಾತ್ರ

ʻʻಕಾಂಗ್ರೆಸ್‌ ಸರ್ಕಾರದ ರೈತರ ಸಾಲ ಮನ್ನಾ ಯೋಜನೆಯ ಉಪಯೋಗ ಶ್ರೀಮಂತರಿಗೆ ಮಾತ್ರ ಸಿಗುತ್ತಿದೆ, ಬಡವರಿಗೆ ಸಿಗುತ್ತಿಲ್ಲ. ನಮ್ಮ ಪಿಎಂ ಕಿಸಾನ್‌ ಸಮ್ಮಾನ್‌ ಹಣ ಪೂರ್ತಿಯಾಗಿ ಜನರಿಗೆ ತಲುಪುತ್ತಿದೆ. ನೀವು ನೆನಪಿಡಬೇಕು, ಕಾಂಗ್ರೆಸ್‌ ಸರಕಾರ ಇರುತ್ತಿದ್ದರೆ ಈ ಹಣ ನಿಮಗೆ ತಲುಪುತ್ತಿರಲಿಲ್ಲʼʼ ಎಂದರು ಪ್ರಧಾನಿ ನರೇಂದ್ರ ಮೋದಿ.

ಕಾಂಗ್ರೆಸ್‌ಗೆ ಕೃಷಿಕರ ಕಷ್ಟ ಅರ್ಥವಾಗುತ್ತಿರಲಿಲ್ಲ. ಆದರೆ, ಬಿಜೆಪಿ ಸರ್ಕಾರ ಎಲ್ಲರ ಕಷ್ಟ ಅರಿಯುತ್ತದೆ. ತೊಗರಿ ಬೆಳೆಗಾರರಿಗೆ ಸಮಸ್ಯೆಯಾದರೆ, ಲಿಂಬೆಗೆ ಸಮಸ್ಯೆಯಾದರೆ ನಾವು ಸಹಾಯ ಮಾಡಿದ್ದೆವು. ಈ ಭಾಗದಲ್ಲಿ ಬೆಳೆಯುವ ಜೋಳವನ್ನು ದೊಡ್ಡ ಮಟ್ಟದಲ್ಲಿ ವಿಶ್ವ ಮಟ್ಟಕ್ಕೇ ಏರಿಸಿದೆ ಎಂದು ಹೇಳಿದರು.

ವಿಜಯಪುರಕ್ಕೆ ನೀರಾವರಿ ಬಿಜೆಪಿ ಸರ್ಕಾರದ ಕೊಡುಗೆ ಎಂದ ಮೋದಿ

ಇದು ಪಂಚನದಿಗಳ ನಾಡು. ಆದರೆ, ಇಲ್ಲಿ ನೀರು ತರುವ ಕೆಲಸ ಮೊದಲು ಆಗಬೇಕಾದಷ್ಟು ಆಗಿಲ್ಲ. ಬಿಜೆಪಿ ಸರ್ಕಾರ ಅನೇಕ ಯೋಜನೆಗಳನ್ನು ತಂದಿದೆ. ಕಳಸಾ ಬಂಡೂರಿ, ಕೃಷ್ಣ ಮೇಲ್ದಂಡೆ, ನಾರಾಯಣಪುರ ಜಲಾಶಯ, ಮುಳವಾಡ ಏತ ನೀರಾವರಿ, ರೇವಣ ಸಿದ್ದೇಶ್ವರ ನೀರಾವರಿ ಯೋಜನೆಗೆ ಹಣ ಕೊಟ್ಟಿದ್ದೇವೆ ಎಂದು ನರೇಂದ್ರ ಮೋದಿ ವಿವರಿಸಿದರು.

ಮಹಿಳೆಯರ ಬದುಕು ಹಸನು ಮಾಡಿದ ಬಿಜೆಪಿ

ನೀರಾವರಿ ಮಾತ್ರವಲ್ಲ ಕುಡಿಯವ ನೀರಿಗೂ ಸಹಾಯ ಮಾಡಿದ್ದೇವೆ. ಕೇವಲ ಮೂರುವರೆ ವರ್ಷದಲ್ಲಿ ಮನೆ ಮನೆಗೆ ನಳದಿಂದ ಜಲ ಯೋಜನೆ ಬಂದಿದೆ. ಇದರಿಂದ ನಮ್ಮ ತಾಯಂದಿರು, ಸೋದರಿಯರ ಬದುಕು ಬದಲಾಗಿದೆ ಎಂದು ಹೇಳಿದರು ನರೇಂದ್ರ ಮೋದಿ.

ʻʻನಮ್ಮ ಮಹಿಳೆಯರು ಕಾಂಗ್ರೆಸ್‌ನಿಂದ ನಿರ್ಲಕ್ಷಿತರಾಗಿದ್ದರು. ಆದರೆ, ಮೊದಲ ಬಾರಿ ಅವರ ಬಗ್ಗೆ ಯೋಚಿಸಿದ್ದು ಬಿಜೆಪಿ ಸರ್ಕಾರ. ಆಯುಷ್ಮಾನ್‌ ಭಾರತ್‌ ಮೂಲಕ ಮಹಿಳೆಯರು, ತಾಯಂದಿರು ಮತ್ತು ಮಕ್ಕಳನ್ನು ಅನಾರೋಗ್ಯದಿಂದ ರಕ್ಷಿಸಲಾಗಿದೆ. ಮನೆಯ ಆರ್ಥಿಕ ವ್ಯವಸ್ಥೆಯಲ್ಲಿ ಮೊದಲು ಮಹಿಳೆಯರಿಗೆ ಯಾವುದೇ ಹಿಡಿತ ಇರಲಿಲ್ಲ. ಈಗ ಜನಧನ್‌ ಅಕೌಂಟ್‌ ಮೂಲಕ ಅವರಿಗೆ ಬಲ ಸಿಕ್ಕಿದೆ. ಅವರು ಮನೆಯನ್ನು ನಡೆಸುವ ಶಕ್ತಿ ನೀಡಲಾಗಿದೆ. ನಾವು ಮುದ್ರಾ ಯೋಜನೆ ಮೂಲಕ ಮಹಿಳೆಯರ ಸ್ವೋದ್ಯೋಗಕ್ಕೆ ಬಲ ನೀಡಿದ್ದೇವೆ. ಮಹಿಳಾ ಸ್ವಸಹಾಯ ಸಂಘಗಳಿಗೆ ಹಣ ನೀಡಲಾಗಿದೆʼʼ ಎಂದು ಪ್ರಧಾನಿ ಹೇಳಿದರು.

ಹೇಗಿತ್ತು ಸೈನಿಕ ಶಾಲೆಯ ಆವರಣದ ಜೋಶ್‌

ಸೈನಿಕ ಶಾಲೆ ಆವರಣ ನಮೋ‌ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರಿಂದ ಕಿಕ್ಕಿರಿದು ತುಂಬಿತ್ತು. ಪ್ರಮುಖ ವೇದಿಕೆ ಮೇಲೆ ವಿಜಯಪುರ ಲೋಕಸಭಾ ಸದಸ್ಯ ರಮೇಶ ಜಿಗಜಿಣಗಿ, ವಿಜಯಪುರ ಕ್ಷೇತ್ರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಹಾಗೂ ಅಭ್ಯರ್ಥಿ ಎ.ಎಸ್.ಪಾಟೀಲ್ ನಡಹಳ್ಳಿ, ಬಾಗಲಕೋಟೆ ಜಿಲ್ಲೆಯ ಸಂಸದ ಪಿ.ಸಿ.ಗದ್ದಿಗೌಡರ, ಬಬಲೇಶ್ವರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ್, ಸಿಂದಗಿ ಅಭ್ಯರ್ಥಿ ಹಾಗೂ ಶಾಸಕ ರಮೇಶ ಭೂಸನೂರ, ದೇವರ ಹಿಪ್ಪರಗಿ ಮತಕ್ಷೇತ್ರದ ಅಭ್ಯರ್ಥಿ ಸೋಮನಗೌಡ ಪಾಟೀಲ್ ಸಾಸನೂರ, ಇಂಡಿ ಮತಕ್ಷೇತ್ರದ ಅಭ್ಯರ್ಥಿ ಹಾಗೂ ರೈತಮೋರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ, ನಾಗಠಾಣ ಎಸ್.ಸಿ ಮೀಸಲು ಮತಕ್ಷೇತ್ರದ ಅಭ್ಯರ್ಥಿ ಸಂಜೀವ ಐಹೊಳೆ, ಜಮಖಂಡಿ ಮತಕ್ಷೇತ್ರದ ಅಭ್ಯರ್ಥಿ ಜಗದೀಶ ದುಡಗುಂಟಿ, ಬಿಜೆಪಿ ವಿಜಯಪುರ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ (ಕೂಚಬಾಳ), ಜಿಲ್ಲಾ ಪ್ರಧಾನ‌ ಕಾರ್ಯದರ್ಶಿ ಹಾಗೂ ಮಹಾನಗರ ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟೆ ಮತ್ತು ಇತರರಿದ್ದರು.

ಖರ್ಗೆಗೆ ಎಚ್ಚರಿಕೆ ನೀಡಿದ ಬಸನಗೌಡ ಪಾಟೀಲ್‌ ಯತ್ನಾಳ್‌

ಸ್ವಾಗತ ಭಾಷಣ ಮಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು, ಮೋದಿ ಅವರನ್ನು ವಿಷದ ಹಾವು ಎಂದು ಕರೆದ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವರದೇ ಭಾಷೆಯಲ್ಲಿ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದನ್ನೂ ಓದಿ : Karnataka Election : ದಯವಿಟ್ಟು ನನ್ನದೊಂದು ಕೆಲಸ ಮಾಡಿಕೊಡ್ತೀರಾ? ಮೋದಿ ಕೇಳಿದ್ದು ಮತವಲ್ಲ, ಮತ್ತೇನು?

Exit mobile version