ಸಿಂಧನೂರು (ರಾಯಚೂರು): ಕರ್ನಾಟಕದಲ್ಲಿ ಸಾಲು ಸಾಲು ಸಮಾವೇಶ, ರ‍್ಯಾಲಿಗಳನ್ನು ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಭಿವೃದ್ಧಿ ಕಾರ್ಯಗಳ ಪ್ರಸ್ತಾಪದ ಜತೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಭಾರಿ ತಿರುಗೇಟು ನೀಡುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರಿಗೆ, “ಲಾಯಕ್” ಎನ್ನುತ್ತಲೇ ಕುಟುಕಿದ್ದಾರೆ.
ಸಿಂಧನೂರಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಮೋದಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್‌ನ ಓಪನಿಂಗ್ ಬ್ಯಾಟ್ಸ್‌ಮನ್ ಎಂದರು. “ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು. ಕಾಂಗ್ರೆಸ್‌ನ ಓಪನಿಂಗ್ ಬ್ಯಾಟ್ಸ್‌ಮನ್ ಆದ ಮಲ್ಲಿಕಾರ್ಜುನ ಖರ್ಗೆ ಅವರು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಖುಷಿಪಡಿಸಲು ನನ್ನನ್ನು ವಿಷದ ಹಾವು ಎಂದರು. ಇನ್ನು ಅವರ ಪುತ್ರ ಕೂಡ ನನ್ನ ವಿರುದ್ಧ ವಾಗ್ದಾಳಿ ನಡೆಸಿದರು. ಆ ಮೂಲಕ ಇಬ್ಬರೂ ಲಾಯಕ್ ಎನಿಸಿದರು. ಲಾಯಕ್ ತಂದೆಯಂತೆ ಪುತ್ರನೂ ಲಾಯಕ್ ಆದರು. ಆದರೆ, ನಾನು ಇದನ್ನು ಪದೇಪದೆ ಪ್ರಸ್ತಾಪಿಸುವುದಿಲ್ಲ. ಕರ್ನಾಟಕದ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡುವುದಿಲ್ಲ” ಎಂದು ಹೇಳಿದರು.
“ಸುಡಾನ್‌ನಲ್ಲಿ ಆಂತರಿಕ ಯುದ್ಧ ನಡೆಯುತ್ತಿದೆ. ಗುಂಡು ಹಾರಿಸಲಾಗುತ್ತಿದೆ, ಬಾಂಬ್ ಎಸೆಯಲಾಗುತ್ತಿದೆ. ಇಂತಹ ಪರಿಸ್ಥಿತಿಯ ಮಧ್ಯೆಯೂ ಸುಡಾನ್‌ನಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆತಂದೆವು. ಆದರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ರಾಜಕೀಯ ಮಾಡಿದರು. ದೇಶಕ್ಕೆ ಯಾವುದೇ ಸಂಕಷ್ಟ ಎದುರಾದರೂ, ಉಕ್ರೇನ್, ಅಫಘಾನಿಸ್ತಾನದಲ್ಲಿ ಬಿಕ್ಕಟ್ಟು ಸೃಷ್ಟಿಯಾದಾಗಲೂ, ಭಾರತೀಯರನ್ನು ಕೇಂದ್ರ ಸರ್ಕಾರ ಕರೆತಂದಿತು. ಆದರೂ, ಇಂತಹ ಪರಿಸ್ಥಿತಿಯಲ್ಲೂ ಕಾಂಗ್ರೆಸ್ ಹಾಗೂ ಜೆಡಿಎಸ್ ರಾಜಕಾರಣ ಮಾಡಿದವು” ಎಂದು ಟೀಕಿಸಿದರು.
ಮೋದಿ ಭಾಷಣದ ಲೈವ್
ರಾಜೀವ್ ಗಾಂಧಿ ಹೇಳಿಕೆ ಉಲ್ಲೇಖ
“ದೆಹಲಿಯಿಂದ 1 ರೂಪಾಯಿ ಹೋದರೆ, ರೈತರಿಗೆ ಕೇವಲ 85 ಪೈಸೆ ತಲುಪುತ್ತದೆ” ಎಂದು ರಾಜೀವ್ ಗಾಂಧಿ ನೀಡಿದ ಹೇಳಿಕೆಯನ್ನು ಪ್ರಸ್ತಾಪಿಸಿ ಕಾಂಗ್ರೆಸ್‌ಗೆ ಮೋದಿ ತಿರುಗೇಟು ನೀಡಿದರು. “ಕಾಂಗ್ರೆಸ್ ಇದುವರೆಗೆ 85 ಪರ್ಸೆಂಟ್ ಕಮಿಷನ್ ಹೊಡೆಯುತ್ತಿತ್ತು. ಹಾಗಾಗಿಯೇ ದೇಶದ ಅಭಿವೃದ್ಧಿ ಆಗಲಿಲ್ಲ. ಒಂದು ರೂಪಾಯಿಯಲ್ಲಿ ಜನರಿಗೆ ಕೇವಲ 85 ಪೈಸೆ ತಲುಪುತ್ತದೆ ಎಂಬುದಾಗಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರೇ ಹೇಳಿದ್ದರು” ಎಂದು ಮೋದಿ ಕುಟುಕಿದರು.
“ರೈತರು ಇರಲಿ, ಗ್ರಾಮ ಇರಲಿ, ಗಲ್ಲಿ ಇರಲಿ, ಪಟ್ಟಣ ಇರಲಿ. ಈ ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ. ಇದೇ ಕಾರಣಕ್ಕಾಗಿ ನಾವು ಸಂಕಲ್ಪ ಪತ್ರ ಹೊರಡಿಸಿದ್ದೇವೆ. ಅನ್ನ, ಅಭಯ, ಅಭಿವೃದ್ಧಿ, ಆದಾಯ, ಅಕ್ಷರ ಹಾಗೂ ಆರೋಗ್ಯಕ್ಕೆ ಬಿಜೆಪಿ ಆದ್ಯತೆ ನೀಡಿದೆ. ಎಲ್ಲ ವಿಷಯಗಳ ಮೇಲೆ ಬಿಜೆಪಿ ಗಮನಹರಿಸಿದೆ. ಕರ್ನಾಟಕದ ಬಿಜೆಪಿಯು ಕರ್ನಾಟಕದ ಗೌರವಕ್ಕಾಗಿ ಬದ್ಧವಾಗಿದೆ. ಇದಕ್ಕೆ ನಾವು ಯಾವುದೇ ಧಕ್ಕೆ ತರಲು ನಾವು ಬಿಡುವುದಿಲ್ಲ” ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಹೆಸರು ಪ್ರಸ್ತಾಪ
“ಕಾಂಗ್ರೆಸ್ ಹಾಗೂ ಜೆಡಿಎಸ್‌ನ ತುಷ್ಟೀಕರಣದ ರಾಜಕಾರಣದ ಎದುರು ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರು ಹಾಗೂ ಮತದಾರರು ನಾಯಕರಾಗಿ ನಿಂತಿದ್ದಾರೆ. ಸಹೋದರ, ಸಹೋದರಿಯರೇ, ಕಲ್ಯಾಣ ಕರ್ನಾಟಕದ ವಿಕಾಸದ ಮಾತು ಬಂದಾಗ, ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಹೆಸರು ನೆನಪು ಮಾಡಿಕೊಳ್ಳಿ. ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರಗಳು ಕಲ್ಯಾಣ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಿದವು. ಅಭಿವೃದ್ಧಿಗೆ ಈ ಸರ್ಕಾರಗಳು ಪ್ರಯತ್ನಿಸಲಿಲ್ಲ. ಆದರೆ, ಬಿಜೆಪಿ ಸರ್ಕಾರವು, ಕಲ್ಯಾಣ ಕರ್ನಾಟಕಕ್ಕಾಗಿ ಸಾವಿರಾರು ಕೋಟಿ ರೂ. ಬಿಡುಗಡೆ ಮಾಡಿದೆ” ಎಂದು ತಿಳಿಸಿದರು.
ಇದನ್ನೂ ಓದಿ: Karnataka Election 2023: ಪ್ರಭು ರಾಮ ಆಯ್ತು, ಈಗ ಹನುಮನನ್ನು ಬಂಧಿಸಿಡಲು ಹೊರಟಿದೆ ಕಾಂಗ್ರೆಸ್: ಪಿಎಂ ಮೋದಿ
ಭಾಷಣದ ಮಧ್ಯೆ ಕನ್ನಡ ಬಳಸಿದ ಮೋದಿ
ಸಾಮಾನ್ಯವಾಗಿ, ಕೇಂದ್ರದ ಯಾವುದೇ ಪಕ್ಷದ ನಾಯಕರು ಕರ್ನಾಟಕಕ್ಕೆ ಬಂದಾಗ, ಕನ್ನಡದಲ್ಲಿಯೇ ಭಾಷಣ ಆರಂಭಿಸುತ್ತಾರೆ. “ನಮಸ್ಕಾರ ಕರ್ನಾಟಕ” ಎಂಬ ಪದಗಳನ್ನಷ್ಟೇ ಬಳಸುತ್ತಾರೆ. ಆದರೆ, ನರೇಂದ್ರ ಮೋದಿ ಅವರು ಭಾಷಣದ ಮಧ್ಯೆ ಕನ್ನಡ ಮಾತನಾಡಿದರು. “ಸಹೋದರ ಸಹೋದರಿಯರೇ”, “ಸ್ನೇಹಿತರೇ”, “ಈ ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ” ಎಂಬ ವಾಕ್ಯಗಳನ್ನು ಮೋದಿ ಕನ್ನಡದಲ್ಲಿಯೇ ಮಾತನಾಡಿದರು.