Site icon Vistara News

Modi in Karnataka : ಬಂಡಿಪುರದಲ್ಲಿ 20 ಕಿ.ಮೀ ಟೈಗರ್ ಸಫಾರಿ, ತೆಪ್ಪಕಾಡಿನಲ್ಲಿ ಆನೆಗಳಿಗೆ ಕಬ್ಬು ತಿನ್ನಿಸಿದ ಪ್ರಧಾನಿ ಮೋದಿ

Modi safari

Modi

ಬೆಂಗಳೂರು: ಹುಲಿಗಳ ಸಂರಕ್ಷಣೆ ಕುರಿತ ಪ್ರಾಜೆಕ್ಟ್‌ ಟೈಗರ್‌ (Project Tiger) ಯೋಜನೆಗೆ 50 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟದ ಬಂಡಿಪುರ ಅಭಯಾರಣ್ಯಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಮಧುಮಲೈ ಟೈಗರ್‌ ರಿಸರ್ವ್‌ ವ್ಯಾಪ್ತಿಗೆ ಸೇರಿದ ತೆಪ್ಪಕಾಡು ಶಿಬಿರದಲ್ಲಿ ಆನೆಗಳಿಗೆ ಕಬ್ಬು ತಿನ್ನಿಸಿದರು. ಕರ್ನಾಟಕದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಮೋದಿಯವರ ಜತೆಗೆ ರಾಜಕಾರಣಿಗಳ ದಂಡು ಇದ್ದಿರಲಿಲ್ಲ. ಅರಣ್ಯಾಧಿಕಾರಿಗಳ ಜತೆಗೆ ಪ್ರಧಾನಿ ಮೋದಿಯವರು ಬಂಡಿಪುರ ಅರಣ್ಯದಲ್ಲಿ ಭಾನುವಾರ ಬೆಳಗ್ಗೆ ಟೈಗರ್‌ ಸಫಾರಿ ನಡೆಸಿದರು.

ಬೆಳಗ್ಗೆ 7 ಗಂಟೆಗೆ ಮೈಸೂರಿನಿಂದ ಬಂಡಿಪುರಕ್ಕೆ ತೆರಳಿದ ಪ್ರಧಾನಿ ಮೋದಿಯವರು 20 ಕಿ.ಮೀ ದೂರದ ತನಕ ಅರಣ್ಯ ಇಲಾಖೆಯ ಜೀಪ್‌ನಲ್ಲಿ ಸಫಾರಿ ನಡೆಸಿದರು. ಅರಣ್ಯದಲ್ಲಿ ಹೊಂದಿಕೊಳ್ಳುವ ಸಫಾರಿ ಡ್ರೆಸ್‌ನಲ್ಲಿ ಮಿಂಚಿದರು. ಸಫಾರಿ ಉಡುಪಿನಲ್ಲಿ ಬಂಡಿಪುರ ಲೋಗೊ ಇತ್ತು. ಕಪ್ಪು ಬಣ್ಣದ ಟೋಪಿ ಹಾಕಿಕೊಂಡಿದ್ದರು.

ತೆಪ್ಪಕಾಡು ಆನೆಗಳ ಶಿಬಿರದಲ್ಲಿ ಪ್ರಧಾನಿ ಮೋದಿಯವರು ಆನೆಗಳಿಗೆ ಕಬ್ಬು ತಿನ್ನಿಸಿ ಪ್ರೀತಿಯಿಂದ ಮೈದಡವಿದರು. ಆನೆಗಳೂ ಸೊಂಡಿಲನ್ನೆತ್ತಿ ಕಬ್ಬನ್ನು ಸ್ವೀಕರಿಸಿದವು. ಮಾವುತರು ಹಾಗೂ ಕಾವಡಿಗಳೊಂದಿಗೆ ಮಾತನಾಡಿದರು. ಈ ತೆಪ್ಪಕಾಡು ಶಿಬಿರದಲ್ಲಿ ಎಲಿಫೆಂಟ್‌ ವಿಸ್ಪರರ್ಸ್‌ (Elephant Whisperers) ಎಂಬ ಆಸ್ಕರ್‌ ಪ್ರಶಸ್ತಿ ವಿಜೇತ ಡಾಕ್ಯುಮೆಂಟರಿಯಲ್ಲಿ ತೋರಿಸಲಾಗಿರುವ ಆನೆಗಳ ರಕ್ಷಕರಾದ ಬೊಮ್ಮನ್‌ ಮತ್ತು ಬೆಳ್ಳಿ ಅವರ ಜತೆ ಮೋದಿ ಕುಶಲೋಪರಿ ನಡೆಸಿದರು. ಆದರೆ ಅವರು ಸಾಕಿದ ಹಾಗೂ ಡಾಕ್ಯುಮೆಂಟರಿಯಲ್ಲಿ ದಾಖಲಿಸಿದ್ದ ಆನೆಗಳನ್ನು ಮೋದಿಯವರು ಕಂಡರೇ ಎಂಬುದು ಇನ್ನೂ ಖಚಿತವಾಗಿಲ್ಲ. ಪ್ರಾಜೆಕ್ಟ್‌ ಟೈಗರ್‌ ಚಾಲನೆಯಾದ ಬಳಿಕ ದೇಶದಲ್ಲಿ ಹುಲಿಗಳ ಸಂಖ್ಯೆ ಕಳೆದ ಐವತ್ತು ವರ್ಷಗಳಲ್ಲಿ ಏರಿಕೆಯಾಗಿದೆ.

ಸಫಾರಿಯ ಸಂದರ್ಭ ಅರಣ್ಯದ ನೈಸರ್ಗಿಕ ಸೌಂದರ್ಯವನ್ನು ಮೋದಿಯವರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದರು. ಬೈನಾಕ್ಯುಲರ್‌ ಕೈಗೆತ್ತಿಕೊಂಡು ವೀಕ್ಷಿಸಿದರು. ಅಪ್ಪಟ ಪ್ರವಾಸಿಗರಂತೆ ಸಫಾರಿಯನ್ನು ಆನಂದಿಸಿದರು.‌ ವನ್ಯ ಜೀವಿಗಳ ಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಅರಣ್ಯ ಸಿಬ್ಬಂದಿ ವಿವರಿಸಿದರು. ವನ್ಯಜೀವಿಗಳಿಗೆ ಕುಡಿಯುವ ನೀರಿನ ಹೊಂಡ, ನೆಲೆಗಳ ಅಭಿವೃದ್ಧಿ, ಆನೆಗಳ ಶಿಬಿರದ ಬಗ್ಗೆ ಮಾಹಿತಿ ನೀಡಲಾಯಿತು. ಬಂಡಿಪುರದ ಟೈಗರ್‌ ರಿಸರ್ವ್‌ 912.04 ಚದರ ಕಿ.ಮೀ ಪ್ರದೇಶದಲ್ಲಿ ಹರಡಿದೆ. 1973ರಲ್ಲಿ ಇದನ್ನು ಪ್ರಾಜೆಕ್ಟ್‌ ಟೈಗರ್‌ ಅಡಿಗೆ ತರಲಾಗಿತ್ತು.

ಬಂಡಿಪುರ ಉದ್ಯಾನದಲ್ಲಿ ಭಾರತದ ವೈವಿಧ್ಯಮಯ ಸಹಜ ನೈಸರ್ಗಿಕ ಸೌಂದರ್ಯ ಮತ್ತು ವೈವಿಧ್ಯತೆಯನ್ನು ಕಂಡೆ ಎಂದು ಮೋದಿ ಟ್ವೀಟ್‌ ಮಾಡಿದರು. ಆನೆಗಳ ಹಿಂಡು, ಜಿಂಕೆ, ಕಾಡೆಮ್ಮೆ ಮೊದಲಾದ ವನ್ಯ ಜೀವಿಗಳ ಸಂಕುಲಗಳನ್ನು ಮೋದಿ ಚಿತ್ರದಲ್ಲಿ ಸೆರೆ ಹಿಡಿದರು. ಬಳಿಕ ಮೈಸೂರಿಗೆ ಹಿಂತಿರುಗಿದರು.

Exit mobile version