ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Modi in Karnataka) ರಾಜ್ಯ ವಿಧಾನಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಬಾರಿಯೂ ಕಮಲ ಅರಳಿಸುವ ಪ್ರಯತ್ನದಲ್ಲಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯಕ್ಕೆ ಸರಣಿ ಭೇಟಿಯನ್ನು ನೀಡುತ್ತಲೇ ಬಂದಿದ್ದಾರೆ. ಈಗ ಮಾರ್ಚ್ 12ರ ಭಾನುವಾರ ರಾಜ್ಯದ ಮಂಡ್ಯ ಹಾಗೂ ಧಾರವಾಡಕ್ಕೆ ಭೇಟಿ ನೀಡಲಿರುವ ಅವರು ಸಾವಿರಾರು ಕೋಟಿ ರೂಪಾಯಿಯ ಕಾಮಗಾರಿಗಳು ಹಾಗೂ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಈ ಮೂಲಕ ಮತದಾರನ ಮನಗೆಲ್ಲಲು ರಣತಂತ್ರ ರೂಪಿಸುತ್ತಿದ್ದಾರೆ. ಮಂಡ್ಯದಲ್ಲಿ ರೋಡ್ ಶೋವನ್ನು ಸಹ ಆಯೋಜಿಸಲಾಗಿದೆ. ಹಳೇ ಮೈಸೂರು ಭಾಗವನ್ನು ಕೇಂದ್ರ ಬಿಜೆಪಿ ಈ ಬಾರಿ ವಿಶೇಷವಾಗಿ ಪರಿಗಣಿಸಿದೆ.
1.45 ಕಿ.ಮೀ. ರೋಡ್ ಶೋ
ಭಾನುವಾರ ಬೆಳಗ್ಗೆ ಮೈಸೂರು ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಬಂದಿಳಿಯುವ ಪ್ರಧಾನಿ ನರೇಂದ್ರ ಮೋದಿ ಅವರು, ಅಲ್ಲಿಂದ ಬೆಳಗ್ಗೆ 11.35ಕ್ಕೆ ಹೆಲಿಕಾಪ್ಟರ್ ಮೂಲಕ ಮಂಡ್ಯದ ಪಿಇಎಸ್ ಕಾಲೇಜು ಆವರಣಕ್ಕೆ ಆಗಮಿಸಲಿದ್ದಾರೆ. ಮುಂದೆ ಮಂಡ್ಯದ ಐಬಿ ವೃತ್ತದಿಂದ ನಂದಾ ಥಿಯೇಟರ್‌ವರೆಗಿನ 1.45 ಕಿ.ಮೀ. ವರೆಗೆ ರೋಡ್ ಶೋ ನಡೆಸಲಿದ್ದಾರೆ. ರೋಡ್ ಶೋದಲ್ಲಿ ಸುಮಾರು 40 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ. ಅಲ್ಲದೆ, ಮೋದಿ ಸ್ವಾಗತಕ್ಕೆ ಬೂದನೂರು ಬಳಿ ಸುಮಾರು 500 ಮಂದಿ ಕಲಾವಿದರು ಸಿದ್ಧರಾಗಿರುತ್ತಾರೆ ಎಂಬ ಮಾಹಿತಿ ಇದೆ. ಬಳಿಕ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ವೀಕ್ಷಣೆ ಮಾಡಲಿದ್ದು, ಅದನ್ನು ಉದ್ಘಾಟಿಸಲಿದ್ದಾರೆ. ಹೆದ್ದಾರಿಯಲ್ಲಿ 50 ಮೀಟರ್ ನಡೆದು ನೂತನ ಹೆದ್ದಾರಿಗೆ ಚಾಲನೆ ನೀಡಲಿದ್ದಾರೆ. ಕಲಾತಂಡಗಳು ಮೋದಿ ಅವರನ್ನು ಸ್ವಾಗತಿಸಲಿವೆ.
ಇದನ್ನೂ ಓದಿ: Bangalore-Mysore Expressway : ಕೇವಲ ಐದು ವರ್ಷದಲ್ಲಿ ಸಿದ್ಧಗೊಂಡ ಹೆದ್ದಾರಿಯ ವೈಭವದ ನೋಟ ಇಲ್ಲಿದೆ ನೋಡಿ!
ಬೃಹತ್ ಸಾರ್ವಜನಿಕ ಸಭೆ, ದಶಪಥ ಹೆದ್ದಾರಿ ಲೋಕಾರ್ಪಣೆ
ಅಲ್ಲಿಂದ ಗೆಜ್ಜಲಗೆರೆಗೆ ಭೇಟಿ ನೀಡಲಿರುವ ಮೋದಿ, ಮಧ್ಯಾಹ್ನ 12.೦5ಕ್ಕೆ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ವೇದಿಕೆಯಲ್ಲಿ ದಶಪಥ ಹೆದ್ದಾರಿ ಲೋಕಾರ್ಪಣೆ ಸಹ ನಡೆಯಲಿದೆ. ಅಲ್ಲದೆ, 3,530 ಕೋಟಿ ರೂಪಾಯಿ ವೆಚ್ಚದ ಮೈಸೂರು- ಕುಶಾಲನಗರ ವರೆಗಿನ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಗೆ ಭೂಮಿಪೂಜೆಯನ್ನು ನೆರವೇರಿಸಲಿದ್ದಾರೆ. ಸಾರ್ವಜನಿಕ ಸಭೆಯಲ್ಲಿ ಎರಡು ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ. ಬಳಿಕ ಮೈಸೂರು-ಕುಶಾಲನಗರ ಹೆದ್ದಾರಿ ಯೋಜನೆಗೆ ಭೂಮಿಪೂಜೆ ನೆರವೇರಿಸಲಿದ್ದಾರೆ. 5700 ಕೋಟಿ ರೂ. ವೆಚ್ಚದ ಯೋಜನೆಗೆ ಚಾಲನೆ ಸಿಗಲಿದೆ.
ಇದಾದ ಬಳಿಕ ಮಂಡ್ಯ ನಗರಕ್ಕೆ 137 ಕೋಟಿ ರೂ. ವೆಚ್ಚದಲ್ಲಿ ಕಾವೇರಿ ನೀರು ಪೂರೈಕೆ ಯೋಜನೆಯನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ. ಅಲ್ಲಿಂದ ಪುನಃ ಮೈಸೂರು ಏರ್‌ಪೋರ್ಟ್‌ಗೆ ಹೋಗಿ ಹುಬ್ಬಳ್ಳಿಗೆ ಹೆಲಿಕಾಪ್ಟರ್ ಮೂಲಕ ತೆರಳಲಿದ್ದಾರೆ.
ಹುಬ್ಬಳ್ಳಿ-ಧಾರವಾಡದಲ್ಲಿ 5 ಸಾವಿರ ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮಧ್ಯಾಹ್ನ 3.15ರ ಹೊತ್ತಿಗೆ ಮೋದಿ ಉದ್ಘಾಟಿಸಲಿದ್ದಾರೆ. ಧಾರವಾಡದಲ್ಲಿ ಐಐಟಿ ಕಟ್ಟಡ, ಜಲಜೀವನ ಯೋಜನೆ, ಜಯದೇವ ಆಸ್ಪತ್ರೆ ಉದ್ಘಾಟನೆಗಳು ಇದರಲ್ಲಿ ಸೇರಿವೆ. ಇದೇ ವೇಳೆ ಮತ್ತೂ ಹಲವು ಯೋಜನೆಗಳಿಗೆ ಶಂಕುಸ್ಥಾಪನೆಯನ್ನು ನೆರವೇರಿಸಲಾಗುವುದು.
ಯಾವ ಯಾವ ಯೋಜನೆಗಳು?
ಹುಬ್ಬಳ್ಳಿಯಲ್ಲಿ 166 ಕೋಟಿ ರೂ.ಗಳ ವೆಚ್ಚದಲ್ಲಿ ಹೈಟೆಕ್ ಕ್ರೀಡಾ ಸಂಕೀರ್ಣವನ್ನು ನಿರ್ಮಾಣ ಮಾಡಲಾಗುತ್ತಿದ್ದು, ಈ ಯೋಜನೆಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅಲ್ಲದೆ, ಹುಬ್ಬಳ್ಳಿ-ಹೊಸಪೇಟೆ ರೈಲು ಮಾರ್ಗ ವಿದ್ಯುದೀಕರಣ ಯೋಜನೆಯನ್ನೂ ಉದ್ಘಾಟಿಸಲಿದ್ದಾರೆ. ಬಳಿಕ ಸಾರ್ವಜನಿಕ ಸಭೆಯನ್ನು ಏರ್ಪಡಿಸಲಾಗಿದ್ದು, 2 ಲಕ್ಷಕ್ಕೂ ಹೆಚ್ಚು ಜನ ಮೋದಿ ಮಾತನ್ನು ಕೇಳಲಿದ್ದಾರೆ.
ಇದನ್ನೂ ಓದಿ: PM Modi: ನಾಳೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್; ಪರ್ಯಾಯ ಮಾರ್ಗಗಳು ಯಾವುವು?
ಐಐಟಿ-ಧಾರವಾಡ ಕ್ಯಾಂಪಸ್ ಹೊರಗಿನ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನಿರ್ಮಿಸಲಾದ ವಿಶ್ವದ ಅತಿ ಉದ್ದನೆಯ ರೈಲ್ವೆ ಪ್ಲಾಟ್‍ಫಾರಂ ಅನ್ನು ಮೋದಿ ಉದ್ಘಾಟಿಸಲಿದ್ದಾರೆ. ತರುವಾಯ ತುಪ್ಪರಿಹಳ್ಳ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.