ಮೈಸೂರು: ಪ್ರಾಜೆಕ್ಟ್ ಟೈಗರ್‌ನ 50ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಆಯೋಜಿಸಿರುವ ಹುಲಿ ಸಂರಕ್ಷಣೆ ಸಂಬಂಧಿತ ಕಾರ್ಯಕ್ರಮ ಮತ್ತು ಹುಲಿಗಣತಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೈಸೂರು ಮತ್ತು ಚಾಮರಾಜ ನಗರ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ (ಏಪ್ರಿಲ್ 8) ರಾತ್ರಿಯೇ ಮೈಸೂರಿಗೆ ಬರಲಿದ್ದಾರೆ. ಭಾನುವಾರ (ಏಪ್ರಿಲ್ 9) ಬೆಳಗ್ಗೆ ಅವರು ಚಾಮರಾಜ ನಗರಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಮೈಸೂರು ಮತ್ತು ಚಾಮರಾಜ ನಗರದಲ್ಲಿ ರಸ್ತೆ ಸಂಚಾರದಲ್ಲಿ ಹಲವು ಬದಲಾವಣೆ ಆಗಲಿದೆ.
ಎಲ್ಲೆಲ್ಲಿ ಸಂಚಾರ ಬದಲಾವಣೆ?
ಶನಿವಾರ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 10 ಗಂಟೆವರೆಗೆ, ಬೆಳಗ್ಗೆ 3 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ಮತ್ತು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 01 ಗಂಟೆಯವರೆಗೂ ಬದಲಾವಣೆ ಕೆಲವೊಂದು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ವಾಹನ ಸವಾರರಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.
ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ನಂಜನಗೂಡು ರಿಂಗ್ ರಸ್ತೆ ಜಂಕ್ಷನ್‌ನಿಂದ ಎಲೆತೋಟ ಜಂಕ್ಷನ್, ರಾಜಹಂಸ ಜಂಕ್ಷನ್ ಗನ್ ಹೌಸ್ ಜಂಕ್ಷನ್‌ವರೆಗೆ ಎಲ್ಲ ಮಾದರಿಯ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ನಂಜನಗೂಡು ರಸ್ತೆ ಮೂಲಕ ಸಂಚರಿಸುವ ವಾಹನಗಳು ಕಡಕೊಳ ದಡದಹಳ್ಳಿ ರಮಾಬಾಯಿನಗರ ಶ್ರೀರಾಂಪುರ ರಿಂಗ್ ರಸ್ತೆ ಮೂಲಕ ಅವಕಾಶ ಮಾಡಿಕೊಡಲಾಗಿದ್ದು, ಟಿ.ನರಸೀಪುರ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಬಲ ತಿರುವು ಪಡೆದು ವಾಯುವಿಹಾರ ಮಾರ್ಗದಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.
ಮೈಸೂರಿನಲ್ಲಿ ಬೆಳಗ್ಗೆ ವಾಹನ ಸಂಚಾರ ಇರಲ್ಲ
ಏಪ್ರಿಲ್ 9ರ ಬೆಳಗ್ಗೆ 3 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ರಾಜಹಂಸ ಜಂಕ್ಷನ್‌ನಿಂದ ಮಹಾರಾಣಾ ಪ್ರತಾಪಸಿಂಹ ವೃತ್ತದವರೆಗೆ ಎಲ್ಲ ಮಾದರಿಯ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಬೆಳಗ್ಗೆ 06 ಗಂಟೆಯಿಂದ ಮಧ್ಯಾಹ್ನ 01 ಗಂಟೆಯವರೆಗೆ ಹುಣಸೂರು ರಸ್ತೆ ಅಟಲ್ ಬಿಹಾರಿ ವಾಜಪೇಯಿ ವೃತ್ತದಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದವರೆಗೆ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ರಾಮಸ್ವಾಮಿ ವೃತ್ತದವರೆಗೆ, ಕೆ.ಆರ್.ಬಿ ರಸ್ತೆ ಡಿ.ಸಿ ಕಛೇರಿ ಆರ್ಚ್ ಗೇಟ್ ಜಂಕ್ಷನ್ ನಿಂದ ಏಕಲವ್ಯ ವೃತ್ತದವರೆಗೆ ಹಾಗೂ ರಾಧಾಕೃಷ್ಣ ಮಾರ್ಗ ಕೌಟಿಲ್ಯ ವೃತ್ತದಿಂದ ಮುಡಾ ಜಂಕ್ಷನ್‌ವರೆಗೆ ಎಲ್ಲ ಮಾದರಿಯ ವಾಹನಗಳ ಸಂಚಾರ ನಿರ್ಬಂಧ ವಿಧಿಸಲಾಗಿದೆ.
ಈ ವಿಚಾರಗಳನ್ನು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಸಿಂಗಲ್ ಲ್ಯಾಂಡಿಂಗ್‌ಗಾಗಿ ಶಾಶ್ವತ ಹೆಲಿಪ್ಯಾಡ್
ಸಾಮಾನ್ಯವಾಗಿ ಯಾರಾದರೂ ಗಣ್ಯರು ಬರುವಾಗ ಅವರ ಹೆಲಿಕಾಪ್ಟರ್ ಇಳಿಸಲು ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಲಾಗುತ್ತದೆ. ಆದರೆ, ಈ ಬಾರಿ ಚಾಮರಾಜನಗರ ಜಿಲ್ಲೆ ಮೇಲುಕಾಮನಹಳ್ಳಿ ಗ್ರಾಮದಲ್ಲಿ ಶಾಶ್ವತ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ. ಕಾಂಕ್ರೀಟ್, ಡಾಂಬರು ಬಳಸಿ ಹೆಲಿಪ್ಯಾಡ್ ನಿರ್ಮಾಣವಾಗಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಿರುವ ಮೇಲುಕಾಮನಹಳ್ಳಿಯಲ್ಲಿ ಸಂರಕ್ಷಿತ ಅರಣ್ಯಕ್ಕೆ ಕೇವಲ 2 ಕಿ.ಮೀ. ದೂರದಲ್ಲಿದೆ ಈ ಹೆಲಿಪ್ಯಾಡ್
ಪ್ರಧಾನಿ ಮೋದಿ ಅವರ ಸಂಚಾರದ ಸಂಪೂರ್ಣ ವಿವರ
- ಏಪ್ರಿಲ್ 8ರ ರಾತ್ರಿ 8.45ಕ್ಕೆ ಚೆನ್ನೈನಿಂದ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮನ. ಬಳಿಕ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ.
- ಏಪ್ರಿಲ್ 9ರ ಬೆಳಗ್ಗೆ 6.20ಕ್ಕೆ ಮೈಸೂರು ವಿಶೇಷ ಹೆಲಿಪ್ಯಾಡ್ನಿಂದ ಚಾಮರಾಜನಗರದ ಮೇಲುಕಾಮನಹಳ್ಳಿ ಹೆಲಿಪ್ಯಾಡ್ಗೆ ಪ್ರಯಣ.
- ಬೆಳಗ್ಗೆ 7.15ಕ್ಕೆ ಬಂಡೀಪುರಕ್ಕೆ ಭೇಟಿ, ಸಫಾರಿ ನಡೆಸಲಿರುವ ಮೋದಿ.
- ಅಲ್ಲಿಂದ ರಸ್ತೆ ಮಾರ್ಗವಾಗಿ ತೆಪ್ಪಕಾಡು ಆನೆ ಕ್ಯಾಂಪ್ಗೆ ಭೇಟಿ.
- ಸುಮಾರು 2 ಗಂಟೆಗಳ ಕಾಲ ಅರಣ್ಯದಲ್ಲಿ ಕಾಲ ಕಳೆಯಲಿರುವ ಪ್ರಧಾನಿ.
- ಬೆಳಗ್ಗೆ 10.20ಕ್ಕೆ ಮೈಸೂರಿಗೆ ವಾಪಸ್ ಆಗಲಿರುವ ನರೇಂದ್ರ ಮೋದಿ.
- ಮೈಸೂರು ವಿಶ್ವವಿದ್ಯಾನಿಲಯದ ಓವೆಲ್ ಮೈದಾನದ ವಿಶೇಷ ಹೆಲಿಪ್ಯಾಡ್ಲ್ಲಿ ಇಳಿಯಲಿರುವ ಮೋದಿ.
- 10.30ಕ್ಕೆ ಕರ್ನಾಟಕ ಮುಕ್ತ ವಿವಿ ಘಟಿಕೋತ್ಸವ ಭವನಕ್ಕೆ ಆಗಮನ.
- ಹುಲಿ ಯೋಜನೆ 50ನೇ ವರ್ಷದ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗಿ.
- ಕಾರ್ಯಕ್ರಮದಲ್ಲಿ ದೇಶ ವಿದೇಶಗಳ ಗಣ್ಯರು ಭಾಗಿ.
- ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿಷೇಧ.
- 12.10 ಹೆಲಿಕಾಪ್ಟರ್ ಮೂಲಕ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ವಾಪಸ್.
- 12.40ಕ್ಕೆ ದೆಹಲಿಗೆ ವಾಪಸ್ ಆಗಲಿರುವ ಪ್ರಧಾನಿಗಳು.
- ಮಂಡಕಳ್ಳಿ ವಿಮಾನ ನಿಲ್ದಾಣದಿಂದ ದೆಹಲಿಗೆ ಪಯಣ
ಇದನ್ನೂ ಓದಿ : Tiger Census : ಏಪ್ರಿಲ್ 9ರಂದು ಹುಲಿ ಗಣತಿ ಬಿಡುಗಡೆ ಮಾಡಲಿದ್ದಾರೆ ಪಿಎಂ ಮೋದಿ, ಕರ್ನಾಟಕವೇ ನಂಬರ್ ಒನ್?