Site icon Vistara News

Modi in Karnataka : ನೀವು ಮತ ಹಾಕುವುದು ಸರ್ಕಾರ ರಚನೆಗಲ್ಲ, ರಾಜ್ಯವನ್ನು ದೇಶದಲ್ಲೇ ನಂ. 1 ಮಾಡಲು; ಮೋದಿ ಹೊಸ ವ್ಯಾಖ್ಯಾನ

modi-in-karnataka: Your vote is not for government, but for No1 state

modi-in-karnataka: Your vote is not for government, but for No1 state

ಕುಡಚಿ (ಬೆಳಗಾವಿ ಜಿಲ್ಲೆ): ಕರ್ನಾಟಕಕ್ಕೆ ತನ್ನದೇ ಆದ ಘನತೆ ಇದೆ, ಗೌರವವಿದೆ. ಶಿಷ್ಟಾಚಾರವಿದೆ. ಆದರೆ, ಕಾಂಗ್ರೆಸ್‌ನ ನಾಯಕರಿಗೆ ಇತರರನ್ನು ಅಪಮಾನಿಸುವುದೇ ಕಾಯಕವಾಗಿದೆ. ಕರ್ನಾಟಕದ ಮಾನ ಕಳೆಯುವ ಇಂಥವರನ್ನು ಕ್ಷಮಿಸುತ್ತೀರಾ?- ಹೀಗೆಂದು ಮಲ್ಲಿಕಾರ್ಜುನ ಖರ್ಗೆ ಅವರ ವಿಷದ ಹಾವು ಹೇಳಿಕೆಯನ್ನು ಉಲ್ಲೇಖಿಸದೆಯೇ ಪ್ರಶ್ನಿಸಿದರು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi). ಇದೇವೇಳೆ ʻನೀವು ಮತ ಹಾಕುವುದು ಕೇವಲ ಒಂದು ಸರ್ಕಾರದ ರಚನೆಗಾಗಿ ಅಲ್ಲ, ಬದಲಾಗಿ ಕರ್ನಾಟಕವನ್ನು ನಂಬರ್‌ ಒನ್‌ ಮಾಡುವುದಕ್ಕಾಗಿʼʼ ಎಂದು ಹೇಳಿದರು.

ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ (Modi in Karnataka) ಬೆಳಗಾವಿಯ ಕುಡಚಿಗೆ ಬಂದು ಬೃಹತ್‌ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ʻʻನಾವೆಲ್ಲ ಗೌರವಿಸುವ ಬಸವೇಶ್ವರರು ಜಾತಿ ಪಂಥದ ಹೆಸರಲ್ಲಿ ಬೇಧ ಭಾವ ಮಾಡಬಾರದು ಎಂದಿದ್ದರು. ಮಹಾಕವಿ ಕುವೆಂಪು ಅವರು ನಾಡಗೀತೆ ಬರೆದರು. ಸರ್ವ ಜನಾಂಗದ ಶಾಂತಿಯ ತೋಟ ಎಂದು ಕರೆದರು. ಕನಕದಾಸರು ಎಲ್ಲರೂ ಜತೆಯಾಗಿರಬೇಕು ಎಂದು ಹೇಳಿದರು. ಎಲ್ಲ ಹಿರಿಯರು, ದಾರ್ಶನಿಕರು ಸಮಾನತೆಯಿಂದ ಇರಬೇಕು ಎಂದು ಹೇಳಿದ್ದರು. ಆದರೆ, ಕಾಂಗ್ರೆಸ್‌ನ ಕೆಲವು ನಾಯಕರು ಇತರರಿಗೆ ಬೈಯವುದನ್ನೇ ತಮ್ಮ ಕೆಲಸ ಮಾಡಿಕೊಂಡಿದ್ದಾರೆ. ಇದು ತುಂಬ ಬೇಸರದ ಸಂಗತಿ. ಕರ್ನಾಟಕದ ಮಾನ ಕಳೆಯುತ್ತಿರುವ ಇಂಥವರನ್ನು ಕ್ಷಮಿಸುತ್ತೀರಾ?ʼʼ ಎಂದು ಪ್ರಶ್ನಿಸಿದರು.

ʻʻರಾಜ್ಯದಲ್ಲಿ ಸಂಪ್ರದಾಯವೂ ಇದೆ ತಂತ್ರಜ್ಞಾನವೂ ಇದೆ. ಸ್ಟಾರ್ಟಪ್‌ ಮತ್ತು ಸಂಸ್ಕೃತಿ ಜತೆಯಾಗಿ ಸಾಗುತ್ತಿದೆ. ಭಾರತದ ಪುರಾತನ ಮತ್ತು ನೂತನ ಸಂಸ್ಕೃತಿ ಜತೆಗೂಡಿದೆ. ಹೀಗೆಯೇ ಡಬಲ್‌ ಎಂಜಿನ್‌ ಸರ್ಕಾರ ವಿಕಾಸದ ಅದ್ಭುತ ಮಾದರಿ. ಜನಸೇವೆಯನ್ನು ಇಲ್ಲಿ ರಾಷ್ಟ್ರ ಸೇವೆ ಎಂದು ಪರಿಗಣಿಸಲಾಗಿದೆ. ಜನತೆಯನ್ನು ಜನಾರ್ದನ ಎಂದು ಪರಿಗಣಿಸಲಾಗಿದೆʼʼ ಎಂದು ಹೇಳಿದರು ನರೇಂದ್ರ ಮೋದಿ.

ʻʻಮೇ 10ರಂದು ನೀವು ರಾಜ್ಯವನ್ನು ದೇಶದ ನಂಬರ್‌ ಒನ್‌ ರಾಜ್ಯವಾಗಿಸಲು ಮತ ಹಾಕುತ್ತಿದ್ದೀರಿ. ನಾನು ಕರ್ನಾಟಕದ ಒಬ್ಬ ಸೇವಕನ ರೂಪದಲ್ಲಿ ಸಹಾಯ ಮಾಡಲು ಬಯಸಿದ್ದೇನೆ. ನೀವು ನನಗೆ ಜತೆ ನೀಡುತ್ತೀರಲ್ಲಾ, ಆಶೀರ್ವಾದ ಕೊಡುತ್ತೀರಲ್ಲಾ.ʼʼ ಎಂದು ಹೇಳಿದರು.

ʻʻʻಕರ್ನಾಟಕದ ಅಭಿವೃದ್ಧಿಗಾಗಿ ನಾವು ಒಂದು ದೊಡ್ಡ ತಂಡ ಕಟ್ಟಿದ್ದೇವೆ. ಅದು ಅಮೃತ ಕಾಲದಲ್ಲಿ ರಾಜ್ಯವನ್ನು ಮುನ್ನಡೆಸಲಿದೆ. ಅವರಿಗೆ ನಿಮ್ಮ ಆಶೀರ್ವಾದ ಕೊಡುತ್ತೀರಲ್ಲ,, ಮೊದಲಿಗಿಂತಲೂ ಹೆಚ್ಚು ಆಶೀರ್ವಾದ ಕೊಡುತ್ತೀರಲ್ಲಾ” ಎಂದು ಹೇಳುತ್ತಾ ಬಹುಮತದಿಂದ ಆರಿಸುವಂತೆ ಮನವಿ ಮಾಡಿದರು. ʻʻಈ ಬಾರಿಯ ಸರ್ಕಾರ ಬಹುಮತದ ಬಿಜೆಪಿ ಸರ್ಕಾರʼ ಎಂಬ ಘೋಷಣೆ ಮೊಳಗಿಸಿದರು.

ಮೈತ್ರಿ ಸರ್ಕಾರಗಳಿಂದಲೇ ರಾಜ್ಯಕ್ಕೆ ಹಿನ್ನಡೆ

ʻʻಬಿಜೆಪಿಗಿಂತ ಮೊದಲು ಸೃಷ್ಟಿಯಾಗಿದ್ದ ಮೈತ್ರಿ ಸರ್ಕಾರದ ಎಲ್ಲ ಶ್ರಮ ಕೇವಲ ಸರ್ಕಾರಗಳನ್ನು ಉಳಿಸಿಕೊಳ್ಳುವ ಪ್ರಯತ್ನವಿತ್ತು. ಅಸ್ಥಿರ ಸರ್ಕಾರಗಳಿಂದ ಸಮಸ್ಯೆಯೇ ಹೆಚ್ಚು. ಕರ್ನಾಟಕದಂಥ ಒಂದು ದೊಡ್ಡ ಶಕ್ತಿಯುತ ರಾಜ್ಯ ಅಸ್ಥಿರ ಸರ್ಕಾರಗಳಿಂದ ತೊಂದರೆಗೆ ಒಳಗಾಗಿದೆ. ಇದರಿಂದ ಇಲ್ಲಿನ ಯುವಕರಿಗೆ ತೊಂದರೆಯಾಗಿದೆ. ಖರೀದಿ ರಾಜಕಾರಣಗಳಿಂದ ನಲುಗಿದೆ. ಹೀಗಾಗಿ ಸಂಪೂರ್ಣ ಬಹುಮತದ ಸರ್ಕಾರವನ್ನು ನೀಡಬೇಕಾಗಿದೆʼʼ ಎಂದು ಮನವಿ ಮಾಡಿದರು ನರೇಂದ್ರ ಮೋಡಿ

ʻʻ2014ರಲ್ಲಿ ನೀವು ನಮಗೆ ಅಧಿಕಾರ ನೀಡಿದಾಗ ಭ್ರಷ್ಟಾಚಾರ ಹಿಂಸೆಯ ಕತ್ತಲೆ ಇತ್ತು. ಕಳೆದ ಒಂಬತ್ತು ವರ್ಷಗಳಲ್ಲಿ ನಾವು ಬಸವಣ್ಣನವರ ಸಂದೇಶದಂತೆ ಎಲ್ಲ ವಿಕಾಸ ಮಾಡಿದ್ದೇವೆ. ಕಾಂಗ್ರೆಸ್‌ನ ಕಾಲದಲ್ಲಿ ದಲಿತರು, ಹಿಂದುಳಿದವರು ಎಷ್ಟು ಸಂಕಷ್ಟದಲ್ಲಿದ್ದರು ಅನ್ನೋದು ಗೊತ್ತಿದೆ. ಅವರ ಕಾಲದಲ್ಲಿ ರೇಷನ್‌ ಕೂಡಾ ಸರಿಯಾಗಿ ಸಿಗುತ್ತಿರಲ್ಲಿ. ಎಸ್‌ಸಿ ಎಸ್‌ಟಿ ಸಮಾಜದ ಜನರಿಗೆ ಮೋಸವಾಗುತ್ತಿದೆ. ಡಬಲ್‌ ಎಂಜಿನ್‌ ಸರ್ಕಾರ ಈ ಅನ್ಯಾಯವನ್ನು ದೂರ ಮಾಡಿದೆ. ಅವರಿಗೆಲ್ಲ ಮುಕ್ತ ರೇಷನ್‌ ಸಿಗುತ್ತಿದೆ. ಕಾಂಗ್ರೆಸ್‌ನ ಭ್ರಷ್ಟಾಚಾರದ ಕಾಲದಲ್ಲಿ ಹಗರಣಗಳ ಸರಮಾಲೆಯೇ ನಡೆದಿತ್ತು. ಅದರಿಂದ ತೊಂದರೆಗೆ ಒಳಗಾದವರು ದಲಿತರು ಮತ್ತು ಹಿಂದುಳಿದವರುʼʼ ಎಂದು ಮೋದಿ ಪ್ರತಿಪಾದಿಸಿದರು.

ಬಂಜಾರಾ, ಲಂಬಾಣಿಗಳ ಓಲೈಕೆಗೆ ಮುಂದಾದ ಮೋದಿ

ʻʻಬಂಜಾರಾ ಸಮುದಾಯ, ಗುಮಂತು, ಅರ್ಧ ಗುಮಂತು ಸಮುದಾಯದ ಜನರಿಗೆ ನಾವು ವಿಶೇಷ ಕಲ್ಯಾಣ ಯೋಜನೆ ಮಾಡಿದ್ದೇವೆ. ಇವರೆಲ್ಲ ಕಾಂಗ್ರೆಸ್‌ ಕಾಲದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರು. ಕಾಂಗ್ರೆಸ್‌ ಇಷ್ಟು ವರ್ಷ ಸರಕಾರ ಮಾಡಿದ್ದರೂ ಅವರ ರಕ್ಷಣೆಗೆ, ಜೀವನ ಬದಲಾವಣೆಗೆ ಏನೂ ಮಾಡಿಲ್ಲ. ಅವರು ಇನ್ನೂ ತಾಂಡಾಗಳಲ್ಲಿ ಸಂಕಷ್ಟದಲ್ಲೇ ಬದುಕುವಂತೆ ಮಾಡಲಾಗಿತ್ತು. ಅವರಿಗೆ ಹಕ್ಕುಪತ್ರವನ್ನು ನೀಡಿದ್ದು ಬಿಜೆಪಿ. ತಾಂಡಾಗಳನ್ನು, ಕುರುಬರ ಹಟ್ಟಿಗಳನ್ನು ನಾವು ಅಭಿವೃದ್ಧಿಪಡಿಸಿದ್ದೇವೆ, ಹಕ್ಕುಪತ್ರ ಮಾತ್ರವಲ್ಲ, ಅವರಿಗೆ ಮನೆ, ನೀರು ನೀಡಿದ್ದೇವೆ. ಅವರ ಕಲ್ಯಾಣಕ್ಕಾಗಿ ಪೂರ್ಣ ಸಮರ್ಪಣೆಯ ಭಾವದಿಂದ ಕೆಲಸ ಮಾಡುತ್ತಿದ್ದೇವೆʼʼ ಎಂದು ಮೋದಿ ಹೇಳಿದರು. ಈ ಮೂಲಕ ಕಳೆದ ಮೀಸಲಾತಿ ಪರಿಷ್ಕರಣೆಯ ವೇಳೆ ಸಿಟ್ಟುಗೊಂಡಿದ್ದ ಸಮುದಾಯವನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದರು.

ʻʻನಾವು ಸಮಾಜದ ಎಲ್ಲ ವರ್ಗಗಳಿಗಾಗಿ ಇಷ್ಟೆಲ್ಲ ಕೆಲಸ ಮಾಡಿದ್ದೇವೆ. ಆದರೆ, ಕಾಂಗ್ರೆಸ್‌ ಏನು ಮಾಡಿತು. ಅವರಿಗೆ ನಿಮ್ಮ ವಿಕಾಸ ಬೇಕಾಗಿಲ್ಲ, ಉತ್ಥಾನ ಬೇಕಾಗಿಲ್ಲ. ಅವರಿಗೆ ಒಂದೇ ಕೆಲಸ. ಮೋದಿಗೆ ಬಾಯಿಗೆ ಬಂದಂತೆ ಬೈಯುವುದು. ಯಾರು ದಲಿತರು, ಹಿಂದುಳಿದವರಿಗಾಗಿ ಕೆಲಸ ಮಾಡುತ್ತಾರೋ ಅವರಿಗೆ ಇದೇ ರೀತಿ ಹಿಂಸೆ ಕೊಡುತ್ತದೆ. ತನಗೆ ಕಾಂಗ್ರೆಸ್‌ ಏನೆಲ್ಲ ಹೇಳಿತು, ಹೇಗೆ ನೋವು ಮಾಡಿತು ಎಂದು ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಇದೇ ಬೆಳಗಾವಿಯಲ್ಲಿ ಹೇಳಿದರು. ಕಾಂಗ್ರೆಸ್‌ ಆಗ ಹೇಗಿತ್ತೋ ಈಗಲೂ ಹಾಗೇ ಇದೆʼʼ ಎಂದು ಕೆದಕಿದರು.

ಕುಡಚಿ ಸಮಾವೇಶದಲ್ಲಿ ಮೋದಿ ಮಾತು

ʻʻಕಾಂಗ್ರೆಸ್‌ನ ಸುದೀರ್ಘ ಆಡಳಿತಾವಧಿಯಲ್ಲಿ ಮಾತೆಯರ ಬದುಕು ಕಷ್ಟಕರವಾಗಿಯೇ ಇತ್ತು. ನಮ್ಮ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾದರು. ಟಾಯ್ಲೆಟ್‌ಗಳ ಅಭಾವದಿಂದ ಅತಿ ಹೆಚ್ಚು ತೊಂದರೆಗೆ ಒಳಗಾದವರು ಹೆಣ್ಮಕ್ಕಳು. ಯಾರು ಕುಟುಂಬ ರಾಜಕಾರಣದಲ್ಲಿ ಮುಳುಗಿದ್ದಾರೋ, ಯಾರು ಭ್ರಷ್ಟಾಚಾರದಿಂದಲೇ ಬದುಕಿದರೋ ಅವರಿಗೆ ಈ ದೇಶದ ಬಡವರ ಕಷ್ಟ ಗೊತ್ತಾಗುವುದಿಲ್ಲʼʼ ಎಂದು ನರೇಂದ್ರ ಮೋದಿ ಹೇಳಿದರು.

ಹೆಣ್ಮಕ್ಕಳ ಆಶೀರ್ವಾದ ನಮ್ಮ ಪಾಲಿಗಿದೆ ಎಂದ ಮೋದಿ

ʻʻನಾವು ಮೂರು ಲಕ್ಷ ಮನೆ ಕಟ್ಟಿ ಕೊಟ್ಟಿದ್ದೇವೆ. ಅದರ ಮಾಲೀಕರು ಮಹಿಳೆಯರು. ಹೀಗಾಗಿ ಅವರು ಲಕ್ಷಾಧಿಪತಿಗಳಾಗಿರುವುದು ನಮಗೆ ಹೆಮ್ಮೆ ಎಂದರು ಪ್ರಧಾನಿ ಮೋದಿ. ಮನೆ ಮನೆಗೂ ನೀರು, ಮನೆ ಮನೆಗೂ ಟಾಯ್ಲೆಟ್‌ ಗಳ ಮೂಲಕ ನಾವು ಮಹಿಳೆಯರ ಬದುಕನ್ನು ಹಸನಗೊಳಿಸಿದ್ದೇವೆ. ಹೀಗಾಗಿ ಹೆಣ್ಮಕ್ಕಳ ಆಶೀರ್ವಾದ ನಮಗೆ ಸಿಗಲಿದೆ. ಹೀಗಾಗಿ ಅವರೆಲ್ಲ ಹೇಳುತ್ತಿದ್ದಾರೆ ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರʼʼ ಎಂದರು ಮೋದಿ.

ಕಬ್ಬು ಬೆಳೆಗಾರರಿಗೆ ಸಿಹಿಯನ್ನು ನೀಡಿತು ಬಿಜೆಪಿ

ʻʻನೀವು ಸಹಕಾರಿ ಸಂಘಗಳ ಜತೆ ಹೇಗೆ ಕೆಲಸ ಮಾಡಿದ್ದೀರಿ ಎನ್ನುವುದನ್ನು ನೆನಪಿಸಿಕೊಳ್ಳಿ. ಇದು ರೈತರ ಶಕ್ತಿ. ಅದರಲ್ಲಿ ಕೂಡಾ ತಮಗೆ ಬೇಕಾದವರಿಗೆ ಸಾಲ ಸಿಗುತ್ತಿತ್ತು. ಈಗ ಹಾಗಿಲ್ಲ. ಎಲ್ಲರಿಗೂ ಅದರು ತೆರೆದಿದೆ. ಸಹಕಾರಿ ಕ್ಷೇತ್ರವೂ ಉತ್ಪಾದನಾ ಕ್ಷೇತ್ರಕ್ಕೆ ಇಳಿದಿದೆʼʼ ಎಂದು ನೆನಪಿಸಿದರು.

ʻʻಸಕ್ಕರೆ ಜಿಲ್ಲೆ ಎನ್ನುವುದು ನಮ್ಮ ಬದುಕಿಗೆ ಸಿಹಿ ನೀಡಬೇಕಾಗಿತ್ತು. ಆದರೆ, ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಬಡ ರೈತರು ತೊಂದರೆಗೆ ಒಳಗಾದರು. ಅವರಿಗೆ ಸರಿಯಾಗಿ ಬೆಲೆ ಸಿಗಲಿಲ್ಲ. ಕಬ್ಬು ನೀಡಿದ್ದಕ್ಕೆ ಪ್ರತಿಯಾಗಿ ದುಡ್ಡೇ ಸಿಗಲಿಲ್ಲ. ನಾವು ಎಫ್‌ ಆರ್‌ಪಿ ನಿಗದಿ ಮಾಡಿದೆವು. ನಾವು ಕಬ್ಬಿನಿಂದ ಸಕ್ಕರೆ ಮಾತ್ರ ಮಾಡಲಿಲ್ಲ. ಅದರಿಂದ ಎಥೆನಾಲ್‌ ಉತ್ಪಾದಿಸಿದೆವು. ಇದರಿಂದ ವಾಹನಗಳಿಗೂ ಬಳಕೆಯಾಯಿತು. ಇದರಿಂದ ಕಬ್ಬು ಬೆಳೆಗಾರರಿಗೆ ಲಾಭವಾಯಿತು. ಈಗ ಪೆಟ್ರೋಲ್‌ನಲ್ಲಿ ಕೂಡಾ 20% ಎಥೆನಾಲ್‌ ಬಳಸುತ್ತಿದ್ದೇವೆ. ಇದರಿಂದ ವಿದೇಶಕ್ಕೆ ಹೋಗುತ್ತಿದ್ದ ಹಣ ಉಳಿಯಿತುʼʼ ಎಂದು ವಿವರಿಸಿದರು ನರೇಂದ್ರ ಮೋದಿ.

ಕಾಂಗ್ರೆಸ್‌ನದ್ದು ಕರಪ್ಶನ್‌ ಕಾಲ್‌, ನಮ್ಮದು ಅಮೃತ ಕಾಲ್‌ ಎಂದು ಹೇಳಿದ ಮೋದಿ ಅವರು, ʻʻಇದನ್ನೆಲ್ಲ ಸಹಿಸಲಾಗದ ಕಾಂಗ್ರೆಸ್‌ನವರು ಪ್ರತಿ ದಿನ ಕೇಳುತ್ತಾರೆ ನೀವು ಸಮಾಧಿಯಾಗುವುದು ಯಾವಾಗ ಎಂದು, ಆದರೆ, ನಾವು ಕಮಲ ಅರಳಿಸಲು ಮುಂದಾಗಿದ್ದೇವೆʼʼ ಎಂದು ನರೇಂದ್ರ ಮೋದಿ ನಗುತ್ತಾ ಹೇಳಿದರು.

ಇದನ್ನೂ ಓದಿ : Modi in Karnataka: ಅಂಬೇಡ್ಕರ್‌ಗೇ ರಾಕ್ಷಸ ಅಂದೋರು ನನ್ನನ್ನು ಬಿಡ್ತಾರಾ?: ಖರ್ಗೆ ವಿಷದ ಹಾವು ಹೇಳಿಕೆಗೆ ಮೋದಿ ಉತ್ತರ

Exit mobile version