ಮಂಗಳೂರು: ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗಿದ್ದು, ನವದೆಹಲಿ ಮಟ್ಟದಲ್ಲಿ ಮಿಂಚಬೇಕೆಂದರೆ ಭಾಷೆಯ ತೊಡಕು ಕರ್ನಾಟಕದ ಅನೇಕ ರಾಜಕಾರಣಿಗಳಿಗೆ ಉಂಟಾಗಿದೆ. ಆದರೆ ಸಿಎಂ ಬಸವರಾಜ ಬೊಮ್ಮಾಯಿ ಅವರು, ತಾವು ಕೇಂದ್ರದ ವರಿಷ್ಠರೊಂದಿಗೆ ಸಂವಹನ ನಡೆಸಲು ಭಾಷೆ ಅಡ್ಡಿಯಾಗುವುದಿಲ್ಲ ಎಂಬುದನ್ನು ಬೃಹತ್ ವೇದಿಕೆ ಮೇಲೆ ಪ್ರದರ್ಶಿಸಿದರು.
ಮಂಗಳೂರಿನ ಗೋಲ್ಡ್‌ಫಿಂಚ್ ಮೈದಾನದಲ್ಲಿ ಆಯೋಜಿಸಿದ್ದ ಸುಮಾರು 3,800 ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳಿಗೆ ಚಾಲನೆ, ಶಂಕುಸ್ಥಾಪನೆ ಹಾಗೂ ಫಲಾನುಭವಿಗಳ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಷಣ ಮಾಡಿದರು.
ಸಾಮಾನ್ಯವಾಗಿ ಮಾತನಾಡುವುದಕ್ಕಿಂತಲೂ ಹೆಚ್ಚು ಆಕ್ರಮಣಕಾರಿಯಾಗಿ ಬೊಮ್ಮಾಯಿ ಮಾತನ್ನು ಆರಂಭಿಸಿದರು. ಡಬಲ್ ಎಂಜಿನ್ ಸರ್ಕಾರ ಇದ್ದರೆ ಏನಾಗಿದೆ ಎಂದು ಅನೇಕರು ಪ್ರಶ್ನೆ ಕೇಳುತ್ತಾರೆ. ಈ ರೀತಿ ಕೇಳಿವವರಿಗೆಲ್ಲ ಮಂಗಳೂರಿನಲ್ಲಿ ಇಂದು ನಡೆಯುತ್ತಿರುವ ಕಾರ್ಯಕ್ರಮವೇ ಉತ್ತರ. ಅಂಥವರು ಇಲ್ಲಿ ಕಣ್ತೆರೆದು ನೋಡಬೇಕು ಎಂದು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಸಿಆರ್‌ಜಡ್ ನಿಯಮಾವಳಿಗೆ ಮೂವತ್ತು ವರ್ಷದ ಹೋರಾಟವಿತ್ತು. ಸಿಆರ್‌ಜಡ್ ಮಾಸ್ಟರ್ ಪ್ಲಾನ್ ಅನ್ನು ಒಪ್ಪಿಗೆ ಮಾಡಿ ಆದೇಶವನ್ನು ನೀಡಲಾಗಿದೆ, ಇದಕ್ಕೆ ಮೋದಿಯವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದ ಬೊಮ್ಮಾಯಿ, ಇದೇ ಮಾತನ್ನು ಹಿಂದಿಯಲ್ಲಿಯೂ ಹೇಳಿದರು. ಮೋದಿಯವರತ್ತ ತಿರುಗಿ ಅತ್ಯಂತ ಸ್ಪಷ್ಟವಾಗಿ ಹಿಂದಿಯಲ್ಲಿ ತಮ್ಮ ಮಾತನ್ನು ವಿವರಿಸಿದರು.
ಇದನ್ನೂ ಓದಿ | Modi in Mangalore | ಉಳ್ಳವರಷ್ಟೇ ಅಭಿವೃದ್ಧಿಯನ್ನು ಸವಿಯುತ್ತಿದ್ದರು: ಪ್ರತಿಪಕ್ಷಗಳಿಗೆ ತಿವಿದ ಮೋದಿ
ನಂತರ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಲ್ಲಿ ಮೀನುಗಾರರಿಗೆ ಅನುಕೂಲವಾಗಲು ಡೀಪ್ ಸೀ ಫಿಷಿಂಗ್‌ಗೆ ಅನುಮತಿಯನ್ನು ಕೇಂದ್ರ ಸರ್ಕಾರ ನೀಡಿದೆ ಎಂದ ಬೊಮ್ಮಾಯಿ, ಮೋದಿಯವರ ಕಡೆ ತಿರುಗಿ ಇದನ್ನೂ ಹಿಂದಿಯಲ್ಲಿ ವಿವರಿಸಿದರು.
ಕರ್ನಾಟಕ ರಾಜಕಾರಣದಲ್ಲಿ ಪ್ರಮುಖರಾಗಿದ್ದ ಅನಂತಕುಮಾರ್ ಅವರು ಕೇಂದ್ರದಲ್ಲಿ ಉನ್ನತ ಸ್ಥಾನ ಗಳಿಸಲು ಹಿಂದಿ ಭಾಷೆಯಲ್ಲಿ ಪ್ರಾವೀನ್ಯತೆಯೂ ಒಂದು ಕಾರಣವಾಗಿತ್ತು. ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದಲ್ಲಿ ಮಾಸ್ ಲೀಡರ್ ಆಗಿದ್ದರೂ ಕೇಂದ್ರ ನಾಯಕರ ಜತೆಗೆ ಸುಲಲಿತವಾಗಿ ಸಂವಹನ ನಡೆಸಲು ಕಷ್ಟವಿದೆ ಎಂಬ ಮಾತುಗಳು ಪಕ್ಷದಲ್ಲಿವೆ. ಇದೀಗ ಕೇಂದ್ರ ಸರ್ಕಾರದಲ್ಲಿ, ಮೋದಿ ತಂಡದಲ್ಲಿ ಪ್ರಮುಖರಾಗಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೂ ಉತ್ತಮ ರೀತಿಯಲ್ಲಿ ಹಿಂದಿಯಲ್ಲಿ ಹಾಗೂ ಇಂಗ್ಲಿಷ್‌ನಲ್ಲೂ ಸಂವಹನ ನಡೆಸಬಲ್ಲವರು.
ಸಿಎಂ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ವಿವಿಧ ತಾಂತ್ರಿಕ ಸಮ್ಮೇಳನಗಳಲ್ಲಿ ಭಾಷಣ ಮಾಡುವಾಗ ನಿರರ್ಗಳವಾಗಿ ಇಂಗ್ಲಿಷ್‌ನಲ್ಲಿ ಮಾತನಾಡುತ್ತಾರೆ.ಆದರೆ ಹಿಂದಿಯಲ್ಲಿ ಮಾತನಾಡುವ ಸನ್ನಿವೇಶಗಳು ಲಭಿಸುವುದಿಲ್ಲ. ಮಂಗಳೂರಿನ ಕಾರ್ಯಕ್ರಮದ ವೇದಿಕೆಯಲ್ಲಿ ಭಾಷಣಕ್ಕೂ ಮುನ್ನವೂ ಬೊಮ್ಮಾಯಿ ಅವರು ಪ್ರಧಾನಿ ಮೋದಿ ಅವರೊಂದಿಗೆ ಅನೇಖ ಹೊತ್ತು ಚರ್ಚೆ ನಡೆಸಿದರು. ವಿವಿಧ ದಾಖಲೆಗಳನ್ನು ತೋರಿಸುತ್ತ ವಿವರಿಸಿದ್ದಕ್ಕೆ ಮೋದಿಯವರಿಂದಲೂ ಉತ್ತಮ ಸ್ಪಂದನೆ ಸಿಗುತ್ತಿದ್ದದ್ದು ಕಂಡುಬರುತ್ತಿತ್ತು.
ರಾಜಕೀಯ ಪಟ್ಟುಗಳನ್ನು ಕರಗತ ಮಾಡಿಕೊಂಡಿರುವ ಬೊಮ್ಮಾಯಿ, ರಾಜ್ಯದ ಎಲ್ಲ ವಿದ್ಯಮಾನಗಳನ್ನೂ ಆಗಿಂದಾಗ್ಗೆ ಕೇಂದ್ರದ ವರಿಷ್ಠರ ಗಮನಕ್ಕೆ ತರುವ, ಉತ್ತಮ ಸಂವಹನ ವ್ಯವಸ್ಥೆಯನ್ನು ರೂಢಿಸಿಕೊಂಡಿದ್ದಾರೆ. ಇದೀಗ ಮಾತಿನ ಮೂಲಕವೂ ಅವರಲ್ಲಿರುವ “ವಿಶಿಷ್ಟ ಕೌಶಲ”ವನ್ನು ಬೊಮ್ಮಾಯಿ ಅನಾವರಣಗೊಳಿಸಿದ್ದಾರೆ. ಇದು ಭವಿಷ್ಯದಲ್ಲಿಯೂ ಬೊಮ್ಮಾಯಿ ಅವರ ಸಹಾಯಕ್ಕೆ ಬರುವ ಸಾಧ್ಯತೆಗಳಿವೆ ಎಂಬ ಮಾತುಗಳಿವೆ.
ಇದನ್ನೂ ಓದಿ | Modi in Mangalore | ರಾಜ್ಯದಲ್ಲಿ ಮೋದಿ ನಂತರ ಜನಪ್ರಿಯ ವ್ಯಕ್ತಿ ಯಡಿಯೂರಪ್ಪ !