ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಮಂಗಳೂರಿನಲ್ಲಿ ನಡೆಯುವ ಬೃಹತ್ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದು, ಅದಕ್ಕಾಗಿ ಸಕಲ ಸಿದ್ಧತೆಗಳು ನಡೆದಿವೆ. ಈ ನಡುವೆ ಕಾಂಗ್ರೆಸ್ ಈ ಕಾರ್ಯಕ್ರಮಕ್ಕೆ ಸಂಬಂಧಿಸಿ ಹಲವು ಪ್ರಶ್ನೆಗಳನ್ನು ಎತ್ತುವ ಮೂಲಕ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಕೆಣಕಿದೆ.
ಮೋದಿ ಕಾರ್ಯಕ್ರಮಕ್ಕೆ ಬಲವಂತವಾಗಿ ಜನರನ್ನು ಕರೆ ತರಲಾಗುತ್ತಿದೆ ಎಂದು ಹೇಳಿರುವ ಕಾಂಗ್ರೆಸ್ ಜಾಲತಾಣದಲ್ಲಿ ಹಲವು ಪ್ರಶ್ನೆಗಳನ್ನು ಎತ್ತಿ ʻನಿಮ್ ಹತ್ರ ಇದ್ಯಾ ಉತ್ತರʼ ಎಂದು ಹ್ಯಾಶ್ ಟ್ಯಾಗ್‌ನಲ್ಲಿ ಅಭಿಯಾನ ಶುರು ಮಾಡಿದೆ. ಈ ನಡುವೆ ಸಿದ್ದರಾಮಯ್ಯ ಅವರು ೧೨ ಪ್ರಶ್ನೆಗಳನ್ನು ಕೇಳಿದ್ದು, ಮೋದಿ ಅವರು ತಮ್ಮ ಭಾಷಣದಲ್ಲಿ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಕಾಂಗ್ರೆಸ್ ಕಾಲದಲ್ಲಿ ಮಾಡಲಾದ ವಿಕಾಸ ಮತ್ತು ಮೋದಿ ಕಾಲದಲ್ಲಿ ಆಗಿರುವ ವಿದ್ಯಮಾನಗಳನ್ನು ವಿನಾಶ ಎಂದು ಗುರುತಿಸಿ ಇದು ʻವಿನಾಶವೋ? ವಿಕಾಸವೋʼ ಎಂದು ಪ್ರಶ್ನಿಸಿದ್ದಾರೆ.
ದಕ್ಷಿಣ ಕನ್ನಡದ ಜನ ಬ್ಯಾಂಕ್‌ಗಳನ್ನು ಹುಟ್ಟು ಹಾಕಿದ್ದರೆ, ಬಿಜೆಪಿ ಆಡಳಿತಾವಧಿಯಲ್ಲಿ ಅವುಗಳನ್ನು ನಾಶ ಮಾಡಲಾಗಿದೆ. ಕಾಂಗ್ರೆಸ್ ಕಾಲದಲ್ಲಿ ನಿರ್ಮಿಸಿದ್ದ ವಿಮಾನ ನಿಲ್ದಾಣವನ್ನು ಅದಾನಿಗೆ ಅರ್ಪಿಸಿದ್ದೇ ಬಿಜೆಪಿ ಸರಕಾರದ ಸಾಧನೆ ಎಂದು ಸಿದ್ದರಾಮಯ್ಯ ಅವರ ಪ್ರಶ್ನಾವಳಿಯಲ್ಲಿ ಗೇಲಿ ಮಾಡಲಾಗಿದೆ.
ಸಿದ್ದರಾಮಯ್ಯ ಅವರ ಪ್ರಶ್ನಾವಳಿ
೧. ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮಂಗಳೂರಿಗೆ ಸ್ವಾಗತ. ನಿಮ್ಮ ವಿಕಾಸ ದರ್ಶನಕ್ಕೋ, ವಿನಾಶ ದರ್ಶನಕ್ಕೋ? ನಿಮ್ಮ ಇಂದಿನ ಭಾಷಣದಲ್ಲಿ ಈ ಪ್ರಶ್ನೆಗೆ ಉತ್ತರ ಕೊಡಬೇಕೆಂದು ವಿನಯಪೂರ್ವಕ ಮನವಿ.
2. ದಕ್ಷಿಣ ಕನ್ನಡದ ಉದ್ಯಮಶೀಲ ಹಿರಿಯರು ಸಿಂಡಿಕೇಟ್, ಕಾರ್ಪೋರೇಷನ್, ವಿಜಯಾ, ಕೆನರಾ ಮತ್ತು ಕರ್ನಾಟಕ ಹೀಗೆ ಐದು ಬ್ಯಾಂಕ್ ಗಳನ್ನು ಹುಟ್ಟುಹಾಕಿದ್ದರು. ನೀವು ಇವುಗಳಲ್ಲಿ ಮೂರು ಬ್ಯಾಂಕುಗಳ ನಾಮಾವಶೇಷ ಮಾಡಿದ್ದೀರಿ. ಇದು ವಿಕಾಸವೋ? ವಿನಾಶವೋ?
3. ಕಾರ್ಪೋರೇಷನ್ ಬ್ಯಾಂಕ್ ಸ್ಥಾಪಕರು ಹಾಜಿ ಅಬ್ದುಲ್ಲಾ (1906), ಸಿಂಡಿಕೇಟ್ ಬ್ಯಾಂಕ್ ಸ್ಥಾಪಕರು ಟಿಎಂಎ ಪೈ, ಉಪೇಂದ್ರ ಪೈ, ವಾಮನ್ ಕುಡ್ವಾ (1925), ವಿಜಯಾ ಬ್ಯಾಂಕ್ ಸ್ಥಾಪಕರು ಎ.ಬಿ.ಶೆಟ್ಟಿ (1931). ಪ್ರಧಾನಿ ಮೋದಿಯವರೇ ನಿಮ್ಮ ನಡೆ ಈ ಅಮರವೀರರಿಗೆ ಬಗೆದ ದ್ರೋಹವಲ್ಲವೇ?
4. ಬಜ್ಪೆ ವಿಮಾನ ನಿಲ್ದಾಣ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಕೊಡುಗೆ(25-12-1971). ಇದು ಸಂಸದ ಯು. ಶ್ರೀನಿವಾಸ ಮಲ್ಯ ಪ್ರಯತ್ನದ ಫಲ. ಈ ವಿಮಾನ ನಿಲ್ದಾಣವನ್ನು ಉದ್ಯಮಿ ಮಿತ್ರ ಅದಾನಿಯವರಿಗೆ ಅರ್ಪಿಸಿದ (20-10-2020) ಪ್ರಧಾನಿ ಮೋದಿಯವರೇ. ಇದು ವಿಕಾಸವೋ? ವಿನಾಶವೋ?
5. ನವಮಂಗಳೂರು ಬಂದರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕೊಡುಗೆ (1975). ಇದು ಸಂಸದ ಯು.ಶ್ರೀನಿವಾಸ ಮಲ್ಯ ಪ್ರಯತ್ನದ ಫಲ. ನವಮಂಗಳೂರು ಬಂದರನ್ನು ಉದ್ಯಮಿ ಮಿತ್ರ ಅದಾನಿಯವರಿಗೆ ಹಂತಹಂತವಾಗಿ ಮಾರುತ್ತಿರುವುದು ಪ್ರಧಾನಿ ನರೇಂದ್ರ. ಇದು ವಿಕಾಸನೋ? ವಿನಾಶನೋ?
6. ಬಜ್ಪೆ ವಿಮಾನ ನಿಲ್ದಾಣ, ಎನ್ ಎಂಪಿಟಿ, ಎನ್ ಎಚ್-66, ರೀಜನಲ್ ಎಂಜಿನಿಯರಿಂಗ್ ಕಾಲೇಜ್, ಎಂಸಿಎಫ್- ಇವೆಲ್ಲ ಕಾಂಗ್ರೆಸ್ ಸಂಸದರ ಕೊಡುಗೆ. ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಕೊಡುಗೆ ಏನು? ಮಳೆಯಲ್ಲಿ ಮುಳುಗುವ ಮಂಗಳೂರು. ಕೋಮುದ್ವೇಷದ ಬೆಂಕಿಯಲ್ಲಿ ಬೇಯುತ್ತಿರುವ ಮಂಗಳೂರು. ಇದು ವಿಕಾಸವೋ? ವಿನಾಶನೋ?
7. ದಕ್ಷಿಣ ಕನ್ನಡದ ವಿಕಾಸ ಪುರುಷರು ಕಾಂಗ್ರೆಸ್ ಸಂಸದರಾಗಿದ್ದ ಉಳ್ಳಾಲ ಶ್ರೀನಿವಾಸ ಮಲ್ಯ, ಕೆಮ್ತೂರು ಕಾಂತಪ್ಪ ಶೆಟ್ಟಿ ಮತ್ತು ಬೋಳಾರ ಜನಾರ್ಧನ ಪೂಜಾರಿ. ದಕ್ಷಿಣ ಕನ್ನಡದ ವಿನಾಶ ಪುರುಷ- ಬಿಜೆಪಿ ಸಂಸದ ನಳಿನ್.
8. ಜೂನ್ ತಿಂಗಳೊಂದರಲ್ಲಿಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದುವರೆ ಕೋಟಿ ಬೆಲೆಯ ಮಾದಕದ್ರವ್ಯಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಾದಕದ್ರವ್ಯ ಸೇವನೆಯಲ್ಲಿ ದೇಶದಲ್ಲಿಯೇ ದಕ್ಷಿಣ ಕನ್ನಡ ಎರಡನೇ ಸ್ಥಾನದಲ್ಲಿದೆ. ಇದು ವಿಕಾಸನೋ? ವಿನಾಶನೋ?
9. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾಖಲೆಯ ಮಳೆಯಾಗಿದೆ. ಹೆಜ್ಜೆಹೆಜ್ಜೆಗೂ ಗುಂಡಿಬಿದ್ದ ರಸ್ತೆಗಳು, ಕುಸಿದು ಬಿದ್ದಿರುವ ಮನೆಗಳು, ನೆರೆಯಲ್ಲಿ ಕೊಚ್ಚಿಹೋದ ರೈತರ ಬೆಳೆಗಳು.. ಪ್ರಧಾನಿ ಭೇಟಿಗಾಗಿ ಮಳೆ ಹುಳುಕನ್ನು ಮುಚ್ಚಿಟ್ಟು ರಸ್ತೆಗಳಿಗೆ ತೇಪೆ ಹಾಕಲಾಗಿದೆ. ಇದು ವಿಕಾಸನೋ? ವಿನಾಶನೋ?
10. ಕಳೆದ ಮೂರು ವರ್ಷಗಳಲ್ಲಿ ಕಡಲ್ಕೊರೆತ ತಡೆಗೆ ರಾಜ್ಯದ ಬಿಜೆಪಿ ಸರ್ಕಾರ ಖರ್ಚು ಮಾಡಿರುವ ಹಣ ಅಂದಾಜು ರೂ.250 ಕೋಟಿ. ಇದರಲ್ಲಿ 40% ಜನಪ್ರತಿನಿಧಿಗಳ ಜೇಬಿಗೆ, 60% ಕಡಲ ನೀರಿಗೆ. ಕಡಲ್ಕೊರೆತ ಮುಂದುವರಿದಿದೆ. ಇದು ವಿಕಾಸವೋ? ವಿನಾಶನೋ?
11. ಕರಾವಳಿ ಮೀನುಗಾರರ ಮೇಲೆ ಸಿಆರ್ ಜೆಡ್, ಸಿಎಂ ಜೆಡ್ ನಿಯಮಾವಳಿಗಳ ಹೇರಿಕೆ. ಪ್ರವಾಸೋದ್ಯಮದ ಹೆಸರಲ್ಲಿ ರೆಸಾರ್ಟ್, ಥೀಮ್ ಪಾರ್ಕ್ ಗಳಿಗೆ ಮುಕ್ತ ಪರವಾನಿಗೆ. ಇದು ವಿಕಾಸನೋ? ವಿನಾಶನೋ?
12. 48 ಕಿ.ಮೀ. ಅಂತರದಲ್ಲಿ ಬ್ರಹ್ಮರಕೂಟ್ಲು, ಸುರತ್ಕಲ್, ತಲಪಾಡಿ ಮತ್ತು ಹೆಜಮಾಡಿಗಳಲ್ಲಿ 4 ನಿಯಮಬಾಹಿರ ಟೋಲ್ ಗೇಟ್ ಗಳು. ವಾಹನ ಸಂಚಾರಿಗಳ ಜೇಬು ಖಾಲಿ, ಅಕ್ರಮದ ರೂವಾರಿಗಳಾದ ಬಿಜೆಪಿ ಸಂಸದರು ಮತ್ತು ಶಾಸಕರ ಜೇಬು ಭರ್ತಿ. ಇದು ವಿಕಾಸನೋ? ವಿನಾಶನೋ?
ಇದನ್ನೂ ಓದಿ| ಮೋದಿ in Mangaluru | ಬರಿಗೈಲಿ ಹೋದರಷ್ಟೇ ಮೋದಿ ದರ್ಶನ !: ಕರಾವಳಿಯಲ್ಲಿ ಸಂಭ್ರಮ