Site icon Vistara News

Modi Meets Celebrities: ನರೇಂದ್ರ ಮೋದಿ ಭೇಟಿ ನಂತರ ಯಶ್‌, ರಿಷಭ್‌ ಶೆಟ್ಟಿ, ಅನಿಲ್‌ ಕುಂಬ್ಳೆ, ಮನೀಶ್‌ ಪಾಂಡೆ, ಅಯ್ಯೋ ಶ್ರದ್ಧಾ ಹೇಳಿದ್ದೇನು?

modi-meets-celebrities-in karnataka rajbhavan

#image_title

ಬೆಂಗಳೂರು: ಏರೋ ಇಂಡಿಯಾದ 14ನೇ ಆವೃತ್ತಿಯನ್ನು ಉದ್ಘಾಟಿಸುವ ಮುನ್ನಾದಿನ ಭಾನುವಾರ ಪ್ರಧಾನಿ ಮೋದಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದರು. ಭಾನುವಾರ ಸಂಜೆ ರಾಜಭವನದಲ್ಲಿ ನಾಡಿನ ಕ್ರಿಕೆಟಿಗರು, ಯುವ ಉದ್ಯಮಿಗಳು ಹಾಗೂ ಚಿತ್ರನಟರೊಂದಿಗೆ ಔತಣಕೂಟ ಏರ್ಪಡಿಸಿದ್ದರು(Modi Meets Celebrities). ಭೇಟಿ ನಂತರ ಎಲ್ಲರೂ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಅನಿಲ್‌ ಕುಂಬ್ಳೆ, ಕ್ರಿಕೆಟಿಗ
ಪ್ರಧಾನಿಯವರನ್ನು ಐದು ವರ್ಷ ಮೊದಲು ಛತ್ತೀಸ್‌ಗಢದಲ್ಲಿ ಒಂದು ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದೆ. ಈಗ ಮತ್ತೆ ಭೇಟಿ ಮಾಡುತ್ತಿರುವುದು ಗೌರವದ ವಿಚಾರ. ಈಗ ಚೀತಾಗಳು ಬಂದಿವೆ, ಬಂದು ಫೋಟೊ ತೆಗೆದುಕೊಳ್ಳಿ ಎಂದರು. ಕರ್ನಾಟಕದಲ್ಲಿ ಈ ಹಿಂದೆ ವನ್ಯಜೀವಿ ಮಂಡಳಿ ಸದಸ್ಯನಾಗಿದ್ದಾಗ, ಮೋದಿ ಅವರು ಗುಜರಾತ್‌ ಸಿಎಂ ಆಗಿದ್ದರು. ಅವರು ನೀಡಿದ್ದ ಗುಜರಾತ್‌ ಸಿಂಹವು ಮೈಸೂರಿನಲ್ಲಿ ಉತ್ತಮವಾಗಿ ಬೆಳೆಯುತ್ತಿದೆ ಎಂದು ಆಗ ಭೇಟಿ ಮಾಡಿದ ಸಂದರ್ಭದಲ್ಲಿ ತಿಳಿಸಿದ್ದೆ. ಇದೆಲ್ಲವನ್ನೂ ಸ್ಮರಿಸಿಕೊಂಡೆವು.

ಜಾವಗಲ್‌ ಶ್ರೀನಾಥ್‌, ಕ್ರಿಕೆಟಿಗ
ಬಹಳ ಅದ್ಭುತವಾದ ಸಭೆ. ಕ್ರೀಡೆಯ ಬಗ್ಗೆ ಸಾಕಷ್ಟು ಮಾತನಾಡಿದೆವು. ಕ್ರೀಡೆಯನ್ನು ಶಾಲಾ ಪಠ್ಯದಲ್ಲಿ ಒದಗಿಸುವುದು ಅತ್ಯಾವಶ್ಯಕ ಎಂದು ಅವರು ಹೇಳಿದರು. ಇದು ಬಹಳ ಸಂತೋಷವಾಯಿತು. ಈಗಾಗಲೆ ಭಾರತದಲ್ಲಿ ಕ್ರೀಡೆ ಉತ್ತಮವಾಗಿ ಬೆಳೆಯುತ್ತಿದೆ. ಕ್ರೀಡೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಕುರಿತು ಅವರಿಗೆ ಆಳವಾದ ಅರಿವು ಹಾಗೂ ದೂರದರ್ಶಿತ್ವ ಇದೆ ಎನ್ನುವುದು ತಿಳಿಯಿತು.

ಮನೀಶ್‌ ಪಾಂಡೆ, ಕ್ರಿಕೆಟಿಗ
ಮೊದಲ ಬಾರಿಗೆ ಮೋದಿಯವರೊಂದಿಗೆ ಮಾತನಾಡುವ ಅವಕಾಶ ಸಿಕ್ಕಿತು. ಕ್ರೀಡೆ ಹಾಗೂ ಒಟ್ಟಾರೆ ಕ್ರೀಡೆ ಬಗ್ಗೆ ಮಾತನಾಡಿದೆವು. ಕೋಚಿಂಗ್‌ ಹೇಗಿದೆ? ಮತ್ತಷ್ಟು ಉತ್ತಮಗೊಳಿಸುವುದು ಹೇಗೆ ಎನ್ನುವುದರ ಕುರಿತು ಚರ್ಚಿಸಿದೆವು. ಈ ಸಮಯದಲ್ಲಿ ಸಾಕಷ್ಟು ಕಲಿಯಲು ಸಾಧ್ಯವಾಯಿತು.

ಮಯಾಂಕ್‌ ಅಗರ್ವಾಲ್‌, ಕ್ರಿಕೆಟಿಗ
ಮೋದಿಯವರಂತಹ ದೂರದರ್ಶೀ ನಾಯಕನನ್ನು ಭೇಟಿ ಮಾಡುವುದು ಬಹಳ ಸಂತಸದ ವಿಚಾರ. ಅವರು ನಮಗೆಲ್ಲ ಸ್ಪೂರ್ತಿ. ದೇಶಕ್ಕಾಗಿ ಅವರು ನೀಡುತ್ತಿರುವ ಸಮಯ ಹಾಗೂ ಶಕ್ತಿ, ಅವರ ಕಾರ್ಯದ ಕಡೆಗೆ ನಾವೆಲ್ಲರೂ ನೋಡುತ್ತಿದ್ದೇವೆ. ಭಾರತದ ಕುರಿತು ಕನಿಷ್ಠ 10-15 ವರ್ಷ ಮುಂದೆ ಯೋಚನೆ ಮಾಡುತ್ತಿದ್ದಾರೆ ಅವರು.

ನಿಖಿಲ್‌ ಕಾಮತ್‌, ಜೆರೊಧಾ ಸಹ ಸಂಸ್ಥಾಪಕ
ಬಹಳ ಅದ್ಭುತವಾದ. ಎಲ್ಲ ಕ್ಷೇತ್ರಗಳ ಕುರಿತು ಅವರಿಗಿರುವ ಅಪಾರ ಜ್ಞಾನ ಕಂಡೆವು. ನಮ್ಮೊಡನೆ ಇಷ್ಟು ಸಮಯ ಕಳೆದಿದ್ದು ಸಂತೋಷವಾಯಿತು. ಭಾರತದಲ್ಲಿ ನಿರ್ಮಾಣವಾಗಿರುವ ಸ್ಥಿರ ವ್ಯವಸ್ಥೆಯ ಕಾರಣದಿಂದಾಗಿಯೇ ನಾವು ಜೀವಿಸುತ್ತಿದ್ದೇವೆ, ಹಣಕಾಸಿನ ಲಭ್ಯತೆ ಆಗುತ್ತಿದೆ, ವಿಶ್ವದೊಂದಿಗೆ ಸಂಪರ್ಕ ಸಾಧ್ಯವಾಗುತ್ತಿದೆ.

ನಿತಿನ್‌ ಕಾಮತ್‌, ಜೆರೊದಾ ಸಿಇಒ
ಮೋದಿ ಅವರನ್ನು ಭೇಟಿ ಮಾಡಿದ್ದು ಬಹಳ ಸಂತೋಷವಾಯಿತು. ಪ್ರಶ್ನೆಗಳನ್ನು ಕೇಳುವ ಮೂಲಕ ಅನೇಕ ಮಾಹಿತಿಗಳನ್ನು ನಮಗೆ ನೀಡಿದರು. ನಮ್ಮ ಉದ್ಯಮದ ಕುರಿತು ಇಷ್ಟು ಅಗಾಧವಾದ ಮಾಹಿತಿಯನ್ನು ಅವರು ಹೊಂದಿರುವುದನ್ನು ಕಂಡು ಬೆರಗಾಯಿತು. ಅವರಿಗೆ ಉದ್ಯಮದ ಕುರಿತು ಕಾಳಜಿಯು ವ್ಯಕ್ತವಾಯಿತು.

ರಿಷಭ್‌ ಶೆಟ್ಟಿ, ಚಿತ್ರನಟ, ನಿರ್ಮಾಪಕ
ಕನಸು ನನಸಾದ ದಿನ. ಅವರನ್ನು ಒಬ್ಬ ಮಹಾನ್‌ ನಾಯಕ ಎಂದು ನಾನು ಪರಿಗಣಿಸುತ್ತೇನೆ. ಕನ್ನಡ ಹಾಗೂ ಭಾರತೀಐ ಚಿತ್ರೋದ್ಯಮದ ಕುರಿತು ಕೇಳಿದರು. ಮುಂದೆ ಏನೇನು ಮಾಡಬಹುದು ಎಂದು ಕೇಳಿದರು. ಕಾಂತಾರ ಕುರಿತು ಸಾಕಷ್ಟು ಮಾತನಾಡಿದರು. ನಮ್ಮ ಸಂಪ್ರದಾಯ, ಭಾರತೀಯ ಸಂಸ್ಕೃತಿಯ ಕುರಿತು ಕಾಂತಾರ ನಿರ್ಮಾಣ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಅನೇಕ ಬಾರಿ ಕಾಂತಾರ ಹೆಸರನ್ನು ಅವರು ಉಲ್ಲೇಖಿಸಿದ್ದು ಕಂಡು ಖುಷಿಯಾಯಿತು.

ಶ್ರದ್ಧಾ ಜೈನ್‌, ನಟಿ
ಪ್ರಧಾನಿಯವರನ್ನು ಭೇಟಿ ಮಾಡುವುದನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಅವರು ಆಗಮಿಸಿದ ಕೂಡಲೇ, ಅಯ್ಯೋ ಎಂದರು. ನನ್ನ ಮಾತುಗಳನ್ನು ಅವರು ಇಷ್ಟು ಚೆನ್ನಾಗಿ ನೆನಪಿಟ್ಟುಕೊಂಡಿದ್ದಾರೆ ಎನ್ನುವುದನ್ನು ನೆನೆದು ಅಚ್ಚರಿಯಾಯಿತು. ನಮ್ಮ ದೇಶದ ಸಂಸ್ಕೃತಿ, ಸೌದರ್ಯವನ್ನು ದಕ್ಷಿಣ ಭಾರತದ ಸಿನಿಮಾ ಕ್ಷೇತ್ರ ಹೇಗೆ ಪ್ರತಿಬಿಂಬಿಸುತ್ತಿದೆ ಎನ್ನುವುದರ ಕುರಿತು ಅವರು ಸಂತಸ ವ್ಯಕ್ತಪಡಿಸಿದರು.

ತರುಣ್‌ ಮೆಹ್ತಾ, ಏಥರ್‌ ಎನರ್ಜಿ ಸಿಇಒ
ಉದ್ಯಮಿಗಳಿಗಾಗಿ ಸಮಯ ಮಾಡಿಕೊಂಡಿದ್ದು ಬಹಳ ಸಂತೋಷವಾಯಿತು. ದೇಶವನ್ನು ಮುನ್ನಡೆಸಲು ಉದ್ಯಮ ಹೇಗೆ ಬಹುಮುಖ್ಯ ಎನ್ನುವುದನ್ನು ಅವರ ಮಾತಿನಿಂದ ತಿಳಿದುಕೊಂಡೆವು. ಬಹಳ ಅದ್ಭುತ ಅನುಭವ.

ವೆಂಕಟೇಶ್‌ ಪ್ರಸಾದ್‌, ಕ್ರಿಕೆಟಿಗ
ಪ್ರಧಾನಿಯವರನ್ನು ಭೇಟಿ ಮAಡುವುದೇ ಒಂದು ಗೌರವದ ಕೆಲಸ. ಅವರು ಎಲ್ಲ ಭಾರತೀಯರಿಗೂ ಸ್ಫೂರ್ತಿ. ಎಷ್ಟು ವಯಸ್ಸಾಗಿದೆ ನಿಮಗೆ ಎನ್ನುವುದು ಮುಖ್ಯವೇ ಅಲ್ಲ, ಅವರು ಎಲ್ಲರಿಗೂ ಪ್ರೋತ್ಸಾಹಿಸುತ್ತಾರೆ. ಭಾರತವನ್ನು ಮಹಾನ್‌ ಆಗಿಸುವ ಕುರಿತು ಸಾಕಷ್ಟು ಚರ್ಚೆ ನಡೆಯಿತು. ದೇಶಕ್ಕಾಗಿ ಅವರು ನಡೆಸುತ್ತಿರುವ ಕಾರ್ಯ, ಅವರ ಕನಸು ಕೈಗೂಡಲಿ ಎಂದು ಹಾರೈಸುತ್ತೇನೆ ಹಾಗೂ ಎಲ್ಲ ಭಾರತೀಯರೂ ಅವರ ಜತೆಗೆ ಕಾರ್ಯನಿರ್ವಹಿಸೋಣ ಎನ್ನುತ್ತೇನೆ.

ವಿಜಯ್‌ ಕಿರಗಂದೂರ್‌, ಹೊಂಬಾಳೆ ಸಂಸ್ಥೆ
ಪ್ರಧಾನಿಯವರ ಜತೆಗೆ 10-12 ನಿಮಿಷ ಮಾತನಾಡಿದ್ದಕ್ಕೆ ಬಹಳ ಸಂತೋಷವಾಯಿತು. ಭಾರತೀಯ ಚಿತ್ರರಂಗದ ಕುರಿತು ಮಾತನಾಡಿದೆವು, ನಮ್ಮ ಆಲೋಚನೆಗಳನ್ನೂ ಹಂಚಿಕೊಂಡೆವು. ನಮಗೆಲ್ಲ ಒಂದು ಪಾಸಿಟಿವ್‌ ವೈಬ್ರೇಷನ್‌ ಬಂದಿತು. ಬಹಳ ಚೆನ್ನಾಗಿತ್ತು.

ಯಶ್‌, ಚಿತ್ರನಟ
ಮೋದಿಯವರನ್ನು ಭೇಟಿ ಮಾಡಿ ಸಂತೋಷವಾಯಿತು. ನಾವು ಹೇಳಿದ್ದೆಲ್ಲವನ್ನೂ ಕೇಳಿದರು. ಉದ್ಯಮದ ಕುರಿತು ಅವರಲ್ಲಿದ್ದ ಆಲೋಚನೆಗಳನ್ನು, ನಿರೀಕ್ಷೆಗಳನ್ನು ಅವರು ಮುಂದಿಟ್ಟರು. ಉದ್ಯಮವಾಗಿ ದೇಶಕ್ಕಾಗಿ ನಾವೇನು ಮಾಡಬಹುದು ಎನ್ನುವುದನ್ನೂ ತಿಳಿಸಿದರು. ಅವರು ಉದ್ಯಮದ ಕುರಿತು ಹೊಂದಿರುವ ಸಣ್ಣ ಸಣ್ಣ ಮಾಹಿತಿಗಳ ಕುರಿತು ನನಗೆ ಅಚ್ಚರಿಯಾಯಿತು. ಚಿತ್ರೋದ್ಯಮದ ಕುರಿತು ಬಹಳ ನಿರೀಕ್ಷೆಗಳನ್ನು ಹೊಂದಿದ್ದಾರೆ. ಎಂದಿನಂತೆಯೇ ನಮ್ಮ ಪ್ರಧಾನಿ ಮೋದಿಯವರು ಬಹಳ ಆದರ್ಶಪ್ರಾಯರು.

Exit mobile version