ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಎಂದಿನಂತೆ ತಮ್ಮ ಭಾಷಣದಲ್ಲಿ ಕನ್ನಡ ಪ್ರೀತಿಯನ್ನು, ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲೂ ಮೆರೆದರು. ಉತ್ತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿರುವ 26ನೇ ರಾಷ್ಟ್ರೀಯ ಯುವ ಜನೋತ್ಸವದಲ್ಲಿ (National Youth Festival) ಭಾಗವಹಿಸಿ, ನೆರೆದಿದ್ದ ಬೃಹತ್ ಯುವಸ್ತೋಮವನ್ನುದ್ದೇಶಿಸಿ ಮಾತನಾಡಿದರು.
ಹಾವೇರಿಯ ಏಲಕ್ಕಿಯಿಂದ ರೂಪಿಸಿದ್ದ ವಿಶೇಷ ಪೇಟ, ಧಾರವಾಡಲ್ಲಿ ತಯಾರಾದ ಖಾದಿ ತ್ರಿವರ್ಣ ಧ್ವಜವನ್ನು ಉಡುಗೊರೆಯಾಗಿ ಪಡೆದ ನಂತರ ಕನ್ನಡದಲ್ಲೇ ಮಾತನ್ನು ಆರಂಭಿಸಿದರು.
ಮೂರು ಸಾವಿರ ಮಠ, ಸಿದ್ಧಾರೂಢ ಮಠದಂತಹ ಅನೇಕ ಮಠಗಳ ಕ್ಷೇತ್ರಕ್ಕೆ ನಮ್ಮ ನಮಸ್ಕಾರಗಳು. ರಾಣಿ ಚೆನ್ನಮನ ನಾಡು, ರಾಯಣ್ಣನ ಬೀಡು, ಈ ಪುಣ್ಯ ಭೂಮಿಗೆ ನನ್ನ ನಮಸ್ಕಾರಗಳು” ಎಂದರು.
ಕರ್ನಾಟಕದ ಈ ಪ್ರದೇಶ ಸಂಸ್ಕೃತಿ ಹಾಗೂ ಜ್ಞಾನಕ್ಕೆ ಪ್ರಸಿದ್ಧಿ. ಇಲ್ಲಿನ ಅನೇಕ ಗಣ್ಯರಿಗೆ ಜ್ಞಾನಪೀಠದಿಂದ ಸನ್ಮಾನಿಸಲಾಗಿದೆ. ಈ ದೇಶಕ್ಕೆ ಒಬ್ಬರಿಗಿಂತ ಒಬ್ಬರು ಮಹಾನ್ ಸಂಗೀತಗಾರರನ್ನು ನೀಡಿದೆ. ಕುಮಾರ ಗಂಧರ್ವ, ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್, ಪಂಡಿತ್ ಬಸವರಾಜ ರಾಜಗುರು, ಪಂಡಿತ್ ಭೀಮಸೇನ ಜೋಶಿ, ವಿದುಷಿ ಗಂಗೂಬಾಯಿ ಹಾನಗಲ್ ಅವರಿಗೆ ನಾನು ನಮಿಸುತ್ತೇನೆ ಎಂದು ಹೇಳಿದರು.
ಕೆಲವೇ ದಿನಗಳ ಹಿಂದೆ ಕರ್ನಾಟಕ ಮಣ್ಣಿನ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ದೇಹಾಂತ್ಯ ಮಾಡಿದ್ದಾರೆ. ಶ್ರೀ ಸಿದ್ದೇಶ್ವರ ಸ್ವಾಮೀಜಿಯವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದು ಭಾಷಣವನ್ನು ಮುಂದುವರಿಸಿದರು.
ಕನ್ನಡದಲ್ಲಿ ಮಾತನಾಡತ್ತಿದ್ದಂತೆ, ಸಿದ್ದೇಶ್ವರ ಸ್ವಾಮೀಜಿಯವರನ್ನು ಸ್ಮರಿಸುತ್ತಿದ್ದಂತೆಯೇ ನೆರೆದಿದ್ದ ಯುವಸಮೂಹ ಘೋಷಣೆ ಮೂಲಕ ಸ್ವಾಗತಿಸಿತು.
ಇದನ್ನೂ ಓದಿ | National Youth Festival | ಡಿಜಿಟಲ್ ಪೇಮೆಂಟ್ ಅಸಾಧ್ಯ ಎಂದರು; ಈಗ ನಾವೇ ನಂ.1: ಎದುರಾಳಿಗಳಿಗೆ ಮೋದಿ ತಿರುಗೇಟು