Site icon Vistara News

ಕದ್ದುಮುಚ್ಚಿ ಮೈ, ಕೈ ಮುಟ್ಟಿದವ್ನಿಗೆ ಗ್ರಹಚಾರ ಬಿಡಿಸಿದ ಯುವತಿ; ಮುಖ ಮುಸುಡಿ ನೋಡದೆ ಚಚ್ಚಿಯೇ ಬಿಟ್ಟಳು!

Molestation case in mandya

ಮಂಡ್ಯ: ಕದ್ದು ಮುಚ್ಚಿ ಮೈ, ಕೈ ಮುಟ್ಟಿ ಅನುಚಿತ ವರ್ತನೆ (Molestation) ಮಾಡಿದವನಿಗೆ ರೊಚ್ಚಿಗೆದ್ದ ಯುವತಿಯೊಬ್ಬಳು ಗ್ರಹಚಾರ ಬಿಡಿಸಿದ ಪ್ರಕರಣ ಮಂಡ್ಯದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಮಂಡ್ಯದಿಂದ ಪಾಂಡವಪುರಕ್ಕೆ ತೆರಳುವ ಬಸ್‌ನಲ್ಲಿ ಯುವತಿಯೊಬ್ಬಳು ಸಂಚಾರ ಮಾಡುತ್ತಿದ್ದಳು. ಆಕೆ ಸೀಟ್‌ನಲ್ಲಿ ಒಬ್ಬಳೇ ಕುಳಿತುಕೊಂಡಿದ್ದಳು. ಇದನ್ನು ಗಮನಿಸಿದ ದುರಳನೊಬ್ಬನು ಆಕೆ ಕುಳಿತಿದ್ದ ಸೀಟಿನ ಹಿಂಬದಿ ಹೋಗಿ ಮೆಲ್ಲಗೆ ಕುಳಿತುಕೊಂಡಿದ್ದಾನೆ.

ಇದನ್ನೂ ಓದಿ: Odisha Train Accident: ಗ್ರೀನ್‌ ಸಿಗ್ನಲ್‌ ಸಿಕ್ಕರೂ ನಡೆಯಿತು ರೈಲು ಅಪಘಾತ, ತನಿಖಾ ವರದಿ ಮಾಹಿತಿಯೇ ಭೀಕರ

ಇಷ್ಟಕ್ಕೆ ಸುಮ್ಮನಾಗದ ಆತ ಹಿಂದಿನಿಂದ ಆಕೆಗೆ ಕೀಟಲೆ ಕೊಡಲು ಶುರು ಮಾಡಿದ್ದಾನೆ. ಮೊದ ಮೊದಲಿಗೆ ಆಕೆಗೆ ಏನಾಗುತ್ತಿದೆ ಎಂದು ಗೊತ್ತಾಗಿಲ್ಲ. ಆದರೆ, ಹಿಂದಿನಿಂದ ಏನೋ ಚಟುವಟಿಕೆ ನಡೆಯುತ್ತಿದೆ ಎಂಬುದು ಗೊತ್ತಾಗಿ ಒಮ್ಮೆ ಹಿಂದೆ ತಿರುಗಿ ನೋಡಿದ್ದಾಳೆ. ಆಗ ಈತ ಮಂಗಾಟ ಮಾಡುತ್ತಿರುವುದು ಗೊತ್ತಾಗಿದೆ. ಆದರೂ, ಒಮ್ಮೆಲೆಗೆ ಆತನಿಗೆ ಏನೂ ಹೇಳಲು ಹೋಗದೆ ಸ್ವಲ್ಪ ಸರಿದು ಕುಳಿತಿದ್ದಾಳೆ. ಅಷ್ಟಕ್ಕೆ ಆತ ಸಮ್ಮನಾಗಬಹುದು ಎಂದು ಭಾವಿಸಿದ್ದಾಳೆ. ಒಮ್ಮೆ ಕಣ್ಣು ಬಿಟ್ಟೂ ಹೆದರಿಸಿದ್ದಾಳೆ.

ಇಷ್ಟಾದರೂ ಆ ಯುವಕ ಮಂಗಾಟವನ್ನು ಮಾತ್ರ ಬಿಟ್ಟಿಲ್ಲ. ಆಕೆಯನ್ನು ಕದ್ದು ಮುಚ್ಚಿ ಆಗಾಗ ಮುಟ್ಟುವುದನ್ನು ಮಾಡುತ್ತಲೇ ಹೋದ. ಆಕೆಗೂ ನೋಡಿ ನೋಡಿ ಸಾಕಾಗಿ ಒಂದು ಬಾರಿ ಆತ ಕೈ ಹತ್ತಿರ ತಂದಾಗ ಗಟ್ಟಿಯಾಗಿಯೇ ಹಿಡಿದುಕೊಂಡಿದ್ದಾಳೆ.

ಕಾಳಿ ಅವತಾರದಲ್ಲಿ ಚಚ್ಚಿ ಹಾಕಿದಳು

ಮೊದಲೇ ಆತನ ಉಪಟಳದಿಂದ ರೋಸಿ ಹೋಗಿದ್ದ ಯುವತಿಗೆ ಸಿಟ್ಟು ಅದೆಲ್ಲಿತ್ತೋ ಏನೋ? ಆತನ ಕೈಯನ್ನು ಹಿಡಿದುಕೊಳ್ಳುತ್ತಿದ್ದಂತೆಯೇ ಜೋರಾಗಿ ಕಿರುಚಾಡಿದ್ದಲ್ಲದೆ, ಮುಖ ಮುಸುಡಿ ನೋಡದೆ ಚಚ್ಚಲು ಶುರು ಮಾಡಿದ್ದಾಳೆ. ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದರಿಂದ ಯುವಕನಿಗೂ ಏನು ಮಾಡಬೇಕೆಂದು ಗೊತ್ತಾಗದೆ, ಬಿಟ್ಟುಬಿಡುವಂತೆ ಗೋಗರೆಯಲು ಶುರು ಮಾಡಿದ್ದಾನೆ. ಆದರೆ, ಮೈ ಮುಟ್ಟುವುದಕ್ಕಿಂತ ಮೊದಲೇ ನಿನಗೆ ಮೈ ಮೇಲೆ ಪ್ರಜ್ಞೆ ಇರಬೇಕಿತ್ತು ಎಂದು ಹೇಳುತ್ತಲೇ ಯುವಕನಿಗೆ ಮತ್ತಷ್ಟು ಬಾರಿಸಿದ್ದಾಳೆ.

ನಿನ್ನ ಅಕ್ಕ-ತಂಗಿಯರಿಗೆ, ನಿನ್ನ ಅಮ್ಮನಿಗಾದರೆ ಹೀಗೇ ಕೈ ಹಾಕುತ್ತಿದ್ದೆಯಾ? ಎಂದು ಹೇಳುತ್ತಲೇ ಮತ್ತೂ ನಾಲ್ಕು ಏಟನ್ನು ಕೆನ್ನೆಗೆ ಹೊಡೆದಿದ್ದಾಳೆ. ಎಲ್ಲರೂ ಈತನನ್ನು ಹಿಡಿದುಕೊಳ್ಳಿ ಎಂದು ಯುವತಿ ಹೇಳುತ್ತಿದ್ದಂತೆ, ಯುವಕ, “ಸಾರಿ… ನನ್ನನ್ನು ಬಿಡಿ..” ಎಂದು ಕೇಳಿದ್ದಾನೆ. ಅದಕ್ಕೆ ಯುವತಿ, “ಏನ್‌ ಸಾರಿ? ಎಂದು ಪ್ರಶ್ನಿಸುತ್ತಾಳೆ. ಅದಕ್ಕೆ ಯುವಕ, “ನನ್ನ ಕಾಲು ಸರಿ ಇಲ್ಲ” ಎಂದು ಹೇಳುತ್ತಾನೆ. ಆಗ ಮತ್ತಷ್ಟು ಸಿಟ್ಟಾಗುವ ಯುವತಿ, “ಏಕೆ ಸುಳ್ಳು ಹೇಳುತ್ತೀಯಾ, ಈಡಿಯಟ್” ಎಂದು ಬೈದಿದ್ದಾಳೆ. ಅಷ್ಟರಲ್ಲಿ ಆತ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಸಾರ್ವಜನಿಕರು ಹಿಡಿದುಕೊಳ್ಳಲು ಪ್ರಯತ್ನಿಸಿದರೂ ತಪ್ಪಿಸಿಕೊಂಡಿದ್ದಾನೆ.

ಇದನ್ನೂ ಓದಿ: Contaminated Water: ಜೀವ ಹಿಂಡುತ್ತಿದೆ ಜೀವಜಲ; ರಾಯಚೂರಲ್ಲಿ ಮತ್ತೆ 35ಮಂದಿ ತೀವ್ರ ಅಸ್ವಸ್ಥ

ವಿಡಿಯೊ ಮಾಡಿದ ಸಾರ್ವಜನಿಕರು

ಯುವತಿಯು ಬಸ್ಸಿನಲ್ಲೇ ಹಿಡಿದು ಹಿಗ್ಗಾಮುಗ್ಗ ಕೆನ್ನೆಗೆ ಬಾರಿಸುತ್ತಿರುವ ದೃಶ್ಯವನ್ನು ಸಹ ಪ್ರಯಾಣಿಕರು ತಮ್ಮ ಮೊಬೈಲ್‌ಗಳಲ್ಲಿ ಚಿತ್ರೀಕರಿಸಿದ್ದಾರೆ. ಆದರೆ, ಈವರೆಗೆ ಈ ಸಂಬಂಧ ಯಾವುದೇ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.

Exit mobile version