ಬೆಂಗಳೂರು: ಬೆಸ್ಕಾಂನಿಂದ ಕರೆ ಬಂತೆಂದು ವಿದ್ಯುತ್ ಬಿಲ್ ಕಟ್ಟಲು ಹೋಗಿ ಹಿರಿಯ ನಾಗರಿಕರೊಬ್ಬರು ತಮ್ಮ ರಿಟೈರ್‌ಮೆಂಟ್ ಹಣ ಪೂರ್ತಿ ಕಳೆದುಕೊಂಡಿದ್ದಾರೆ. ಇದು ಸೈಬರ್ ಕ್ರೈಂನ ಮುಂದುವರಿದ ಅಧ್ಯಾಯವಾಗಿದೆ! ಕಿಡಂಬಿ ರವಿಚಂದ್ರನ್ ಎಂಬುವರು ಸೈಬರ್ ವಂಚಕರಿಂದ 6 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡು ಪೊಲೀಸರ ಮೊರೆ ಹೋಗಿದ್ದಾರೆ.
ರವಿಚಂದ್ರನ್ ಅವರ ವಾಟ್ಸಾಪ್‌ಗೆ ಅಪರಿಚಿತ (8287969004) ನಂಬರ್‌ನಿಂದ ವಿದ್ಯುತ್ ಬಿಲ್ ಕಟ್ಟುವಂತೆ ಸಂದೇಶ ಬಂದಿತ್ತು. ನಂತರ ಅದೇ ನಂಬರ್‌ನಿಂದ ಕರೆ ಮಾಡಿ ಬಿಲ್ ಪಾವತಿಸದಿದ್ದರೆ ಕರೆಂಟ್ ಕಟ್ ಮಾಡುವುದಾಗಿ ಹೆದರಿಸಿದ್ದರು. ನಂತರ ರವಿಚಂದ್ರನ್ ಅವರಿಗೆ ಟೀಮ್‌ವ್ಯೂವರ್ ಎಂಬ ಸಾಫ್ಟ್‌ವೇರ್ (teamviwer software) ಡೌನ್‌ಲೋಡ್ ಮಾಡಿಕೊಂಡು ಸುಲಭವಾಗಿ ಬಿಲ್ ಪಾವತಿಸುವಂತೆ ಅಪರಿಚಿತರು ಹೇಳಿದ್ದರು. ಈ ಸಾಫ್ಟ್‌ವೇರ್ ಮೂಲಕ ಎಲ್ಲೋ ದೂರದಲ್ಲಿ ಕುಳಿತ ವಂಚಕರು ಬೇರೆಯವರ ಕಂಪ್ಯೂಟರ್ ಮೇಲೆ ನಿಯಂತ್ರಣ ಸಾಧಿಸಿ ವೈಯಕ್ತಿಕ ಮಾಹಿತಿ ಸಂಗ್ರಹಿಸಿ ಯಾಮಾರಿಸಿ ಬಿಡುತ್ತಾರೆ.
ವಂಚಕರ ಮಾತಿಗೆ ಮರುಳಾದ ರವಿಚಂದ್ರನ್, ಟೀಮ್ ವ್ಯೂವರ್ ಸಾಫ್ಟ್‌ವೇರ್ ಡೌನ್‌ಲೋಡ್ ಮಾಡಿಬಿಟ್ಟಿದ್ದರು. ಆ ಬಳಿಕ ಗೂಗಲ್ ಪೇ ಮೂಲಕ ಮೊದಲು 20 ರೂ. ಪಾವತಿಸಲು ಅಪರಿಚಿತರು ಹೇಳಿದರು. ಅವರ ಮಾತನ್ನು ನಂಬಿದ ರವಿಚಂದ್ರನ್ ಹಣ ಪಾವತಿಸಿದರು. ಆದರೆ, ಇದಾದ ಕೆಲವೇ ಗಂಟೆಯೊಳಗೆ ರವಿಚಂದ್ರನ್ ಅವರ ಖಾತೆಯಿಂದ ಹಂತ ಹಂತವಾಗಿ ಸುಮಾರು 6 ಲಕ್ಷ ರೂ. ಕಟ್ ಆಯಿತು! ಕೆಲವೇ ನೂರು ರೂ. ವಿದ್ಯುತ್ ಬಿಲ್ ಕಟ್ಟಲು ಹೋಗಿ ಲಕ್ಷಾಂತರ ರೂ. ಕಳೆದುಕೊಂಡ ರವಿಚಂದ್ರನ್ ಈಗ ಬೆಂಗಳೂರು ದಕ್ಷಿಣ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ವೇಳೆ ಅದೇ ಠಾಣೆಯಲ್ಲಿ ಇದೇ ರೀತಿ ಮತ್ತೊಂದು ಪ್ರಕರಣದ ಬಗ್ಗೆ ದೂರು ದಾಖಲಾಗಿರುವುದು ತಿಳಿದು ಬಂದಿದೆ. ಪ್ರವೀಣ್ ಕುಮಾರ್ ಎಂಬುವವರಿಗೆ ಬೆಸ್ಕಾಂನಿಂದ ಕರೆಂಟ್ ಬಿಲ್ ಎಂದು ನಂಬಿಸಿ ಸುಮಾರು 1 ಲಕ್ಷದ 40 ಸಾವಿರ ರೂ. ವಂಚನೆ ಮಾಡಿರುವ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Cyber Crime | ಸೈಬರ್ ಖದೀಮರಿಗೆ ಗಂಟಲ ಮುಳ್ಳಾಗುತ್ತಿದೆ ಗೋಲ್ಡನ್ ಅವರ್