ಬೆಂಗಳೂರು: ಕೋವಿಡ್‌ನಂತೆ ಮಂಕಿಪಾಕ್ಸ್ (Monkey-pox) ಆತಂಕ ಸೃಷ್ಟಿಸಿದ್ದು ಜನರ ನಿದ್ದೆಗೆಡಿಸಿದೆ. ರಾಜ್ಯದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಮಟ್ಟದಲ್ಲಿ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಎರಡು ಆಸ್ಪತ್ರೆಗಳನ್ನು ಗುರುತಿಸಲಾಗಿದ್ದು, ಪ್ರತ್ಯೇಕ ಬೆಡ್‌ಗಳನ್ನು ಮೀಸಲಿಡಲು ಸೂಚಿಸಲಾಗಿದೆ.
ಆರೋಗ್ಯ ಇಲಾಖೆಯು ತಾಂತ್ರಿಕ ಸಲಹಾ ಸಮಿತಿಯ ಸಲಹೆಯಂತೆ ರಾಜ್ಯದ ಡಿಎಚ್‌ಓ ಮತ್ತು ಸಿಎಚ್‌ಓ ಹಾಗೂ ಜಿಲ್ಲಾ ಆಸ್ಪತ್ರೆಗಳ ನಿರ್ದೇಶಕರ ಜತೆ ಸಭೆ ನಡೆಸಿದೆ. ಮಂಕಿಪಾಕ್ಸ್ ನಿಯಂತ್ರಣಕ್ಕೆ ಸಲಹೆ ಸೂಚನೆ ನೀಡಲಾಗಿದೆ.
ಮೊದಲ ಹಂತವಾಗಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತ್ಯೇಕ ಎರಡು ಬೆಡ್‌ಗಳ ವಾರ್ಡ್ ಹಾಗೂ ಬೆಂಗಳೂರಿನ ಸಿವಿ ರಾಮನ್ ಆಸ್ಪತ್ರೆ ಹಾಗೂ ಮಲ್ಲೇಶ್ವರಂನಲ್ಲಿರುವ ಕೆಸಿ ಜನರಲ್ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ ಸಿದ್ಧತೆ ಮಾಡಿಕೊಳ್ಳಲು ತಿಳಿಸಲಾಗಿದೆ.
ಟ್ರಾವೆಲ್ ಹಿಸ್ಟರಿ ಇಲ್ಲದವನಿಗೂ ಸೋಂಕು
ವಿಶ್ವ ಆರೋಗ್ಯ ಸಂಸ್ಥೆಯು (WHO) ಮಂಕಿಪಾಕ್ಸ್ ಹೆಲ್ತ್ ಎಮರ್ಜೆನ್ಸಿ ಎಂದು ಘೋಷಣೆ ಮಾಡಿದೆ. ಈಗಾಗಲೇ ನೂರಾರು ದೇಶಗಳಲ್ಲಿ ಸಾವಿರಾರು ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿರುವ ಹಿನ್ನೆಲೆ ತಜ್ಞರು ಅಲರ್ಟ್ ಇರುವಂತೆ ತಿಳಿಸಿದ್ದಾರೆ. ಕೇರಳದ ಬಳಿಕ ಇದೀಗ ದೆಹಲಿಯಲ್ಲಿ ವ್ಯಕ್ತಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದೇ ಇದ್ದರೂ ಮಂಕಿಪಾಕ್ಸ್ ಕಾಣಿಸಿಕೊಂಡಿದ್ದು ಆತಂಕ ಮೂಡಿಸಿದೆ. ಈ ನಿಟ್ಟಿನಲ್ಲಿ ನೆರೆ ರಾಜ್ಯಗಳಿಂದ ಸೋಂಕು ಹರಡುವ ಭೀತಿ ಇದ್ದು, ಆರೋಗ್ಯ ಇಲಾಖೆ ಹೆಚ್ಚಿನ ಜಾಗ್ರತೆ ವಹಿಸುತ್ತಿದೆ.