Site icon Vistara News

Monkeypox | ಕರ್ನಾಟಕಕ್ಕೆ ಮಂಕಿಪಾಕ್ಸ್​ ಆತಂಕ: ರಾಜ್ಯದ 21 ಪ್ರಯಾಣಿಕರ ಮೇಲೆ ನಿಗಾ

Monkey pox

ಮಂಗಳೂರು: ನೆರೆ ರಾಜ್ಯ ಕೇರಳದಲ್ಲಿ ಎರಡು ಇಬ್ಬರು ವ್ಯಕ್ತಿಗಳಲ್ಲಿ ಕಾಣಿಸಿಕೊಂಡಿರುವ ಮಂಕಿಪಾಕ್ಸ್​​​​ ಇದೀಗ ಕರ್ನಾಟಕದಲ್ಲೂ ಆತಂಕ ಮೂಡಿಸಿದೆ. ಕೇರಳದಲ್ಲಿ ಸೋಂಕು ಖಚಿತಪಟ್ಟಿರುವ ಎರಡನೇ ವ್ಯಕ್ತಿಯ ಸಂಬಂಧ ಇದೀಗ ಕರ್ನಾಟಕದಲ್ಲೂ 21 ವಿಮಾನ ಪ್ರಯಾಣಿಕರ ಮೇಲೆ ನಿಗಾ ವಹಿಸಲಾಗಿದೆ.

ಜುಲೈ 13ರಂದು ದುಬೈನಿಂದ ಮಂಗಳೂರು ವಿಮಾನ ನಿಲ್ದಾಣದ‌ ಮೂಲಕ ಕೇರಳಕ್ಕೆ ವ್ಯಕ್ತಿ ತೆರಳಿದ್ದರು. ಕೇರಳದ ಕಣ್ಣೂರಿನವರಾದ ವ್ಯಕ್ತಿಗೆ ಜ್ವರ ಹಾಗೂ ಮೈ ಮೇಲೆ ಸಣ್ಣ ಗುಳ್ಳೆಗಳು ಕಾಣಿಸಿಕೊಂಡಿದ್ದವು. ಆಗಲೇ ಮಂಕಿಪಾಕ್ಸ್‌ ಲಕ್ಷಣಗಳು ಕಾಣಿಸಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ರಕ್ತದ ಮಾದರಿಯನ್ನು ಪುಣೆಯಲ್ಲಿರುವ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿಗೆ ಕಳಿಸಲಾಗಿತ್ತು. ತಪಾಸಣೆಯ ವರದಿ ಬಂದಿದ್ದು, ಮಂಕಿಪಾಕ್ಸ್‌ ಇರುವುದು ದೃಢಪಟ್ಟಿದೆ. ಸದ್ಯ ಕಣ್ಣೂರಿನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದುಬೈನಿಂದ ನೇರ ಮಂಗಳೂರಿಗೆ ಆಗಮಿಸಿದ್ದ ಆ ವಿಮಾನದಲ್ಲಿ 191 ಪ್ರಯಾಣಿಕರಿದ್ದರು. ಮಂಕಿಫಾಕ್ಸ್ ಪತ್ತೆಯಾದ ವ್ಯಕ್ತಿಯ ಜತೆ ಹಾಗೂ ಅಕ್ಕಪಕ್ಕದ ಆಸನಗಳಲ್ಲಿ ಇದ್ದ 35 ಜನರನ್ನು ಗುರುತಿಸಲಾಗಿದೆ. ಇವರಿಗೆ ಪ್ರತ್ಯೇಕ ವಾಸವಾಗಿರುವಂತೆ ಸೂಚಿಸಲಾಗಿದೆ. ಇವರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 15 ,ಉಡುಪಿಯ 6, ಕೇರಳದ 13 ಜನರಿದ್ದಾರೆ. ವಿಮಾನ ನಿಲ್ದಾಣದ ಅಧಿಕಾರಿಗಳಿಗೂ 21 ದಿನಗಳು ಪ್ರತ್ಯೇಕ ವಾಸವಿರುವಂತೆ ಸೂಚಿಸಲಾಗಿದೆ.

ಮೊಟ್ಟ ಮೊದಲು ಇಂಗ್ಲೆಂಡ್‌ನಲ್ಲಿ ಕಾಣಿಸಿಕೊಂಡ ಮಂಕಿಪಾಕ್ಸ್‌ ಭಾರತಕ್ಕೆ ಕಾಲಿಟ್ಟಿದ್ದು ಜುಲೈ 15ರಂದು. ಅದೂ ಕೇರಳದಲ್ಲೇ. ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಿಂದ ಬಂದ ವ್ಯಕ್ತಿಯೊಬ್ಬರಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿದ್ದವು. ಅವರ ರಕ್ತದ ಮಾದರಿಯನ್ನು ಪುಣೆಯ ವೈರಾಲಜಿ ಲ್ಯಾಬ್‌ನಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಮಂಕಿಪಾಕ್ಸ್‌ ಇರುವುದು ದೃಢಪಟ್ಟಿತ್ತು. ಅಂದು ಮೊದಲ ಕೇಸ್‌ ದಾಖಲಾದಾಗಲೇ ಪ್ರತಿಕ್ರಿಯೆ ನೀಡಿದ್ದ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್‌, ಮಂಕಿಪಾಕ್ಸ್‌ ವ್ಯಾಪಕವಾಗಿ ಹರಡದಂತೆ ಎಲ್ಲ ರೀತಿಯ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದರು.

ಇದನ್ನೂ ಓದಿ | ಕೊರೊನಾ ನಡುವೆ ಮಂಕಿಪಾಕ್ಸ್ ಭೀತಿ: ದೇಶದೆಲ್ಲೆಡೆ ಹೈ ಅಲರ್ಟ್‌

Exit mobile version