Site icon Vistara News

ಸರ್ಕಾರಿ ಶಾಲೆಯಲ್ಲಿ ಮಾಸಿಕ ₹100 ವಂತಿಗೆ; ಈ ಆದೇಶಕ್ಕೂ ನನಗೂ, ಸಿಎಂಗೂ ಸಂಬಂಧವಿಲ್ಲ: ಬಿ.ಸಿ. ನಾಗೇಶ್‌

BC Nagesh

ಮೈಸೂರು: ಸರ್ಕಾರಿ ಶಾಲೆಯಲ್ಲಿ ಪೋಷಕರು ಮಾಸಿಕವಾಗಿ ೧೦೦ ರೂಪಾಯಿ ವಂತಿಗೆ ನೀಡಬೇಕೆಂಬ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಆಯುಕ್ತರು ಹೊರಡಿಸಿರುವ ಸುತ್ತೋಲೆ ವಿಷಯದಲ್ಲಿ ಶಿಕ್ಷಣ ಮಂತ್ರಿಗಾಗಲಿ, ಮುಖ್ಯಮಂತ್ರಿಗಳಾಗಲಿ ಸಂಬಂಧ ಇಲ್ಲ. ಸುತ್ತೋಲೆ ದುರುಪಯೋಗವಾದರೆ ಹಿಂಪಡೆಯಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಸ್ಪಷ್ಟಪಡಿಸಿದರು.

ಶಾಲೆಗಳ ಶ್ರೇಯೋಭಿವೃದ್ಧಿಗೆ ಪೋಷಕರಿಂದ ಹಣ ಸಂಗ್ರಹ ವಿಚಾರವಾಗಿ ವಿರೋಧ ಪಕ್ಷಗಳ ಸಹಿತ ಸಾರ್ವಜನಿಕರಿಂದ ವ್ಯಾಪಕ ಟೀಕೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಶಿಕ್ಷಣ ಸಚಿವರು, ಇದು ಶಿಕ್ಷಣ ಇಲಾಖೆ ಆಯುಕ್ತರು ಹೊರಡಿಸಿರುವ ಸುತ್ತೋಲೆಯಾಗಿದೆ. ಕೆಲವರು ಸರಿಯಾಗಿ ಓದಿಕೊಳ್ಳದೆ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಲ್ಲ ಸುತ್ತೋಲೆಯನ್ನೂ ಗಮನಕ್ಕೆ ತರಬೇಕೆಂದಿಲ್ಲ
ನನಗೆ ವಿಷಯ ಗೊತ್ತಾದ ತಕ್ಷಣ ನಾನು ಆಯುಕ್ತರನ್ನು ಈ ಬಗ್ಗೆ ಕೇಳಿದ್ದೇನೆ. ಎಸ್‌ಡಿಎಂಸಿಗಳ ಸಲಹೆ ಮೇರೆಗೆ ಈ ಸುತ್ತೋಲೆ ತರಲಾಗಿದೆ. ಹೀಗೆ ಸುತ್ತೋಲೆ ಹೊರಡಿಸಲು ಆಯುಕ್ತರಿಗೆ ಸಂವಿಧಾನದಲ್ಲೇ ಅವಕಾಶ ಕಲ್ಪಿಸಲಾಗಿದೆ.
ಎಲ್ಲ ಸುತ್ತೋಲೆಗಳನ್ನೂ ಸರ್ಕಾರದ ಗಮನಕ್ಕೆ ತಂದೇ ಹೊರಡಿಸಬೇಕು ಎಂದೇನೂ ಇಲ್ಲ ಎಂದು ನಾಗೇಶ್‌ ಹೇಳಿದರು.

ಕಾನೂನು ಪಂಡಿತ ಸಿದ್ದರಾಮಯ್ಯ ರಾಜಕೀಯ ಮಾಡಬಾರದು
ಶಾಲೆಯ ಅಭಿವೃದ್ಧಿಗೆ ಸ್ಥಳೀಯವಾಗಿ ಹಣ ಸಂಗ್ರಹಿಸಲು ಆರ್‌ಟಿಇ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಆರ್‌ಟಿಇ ಒಳ್ಳೆಯ ಕಾಯ್ದೆ, ಅದನ್ನು ಜಾರಿಗೆ ತಂದವರು ಸಿದ್ದರಾಮಯ್ಯ ಅವರ ಸರ್ಕಾರದವರು. ಎಲ್ಲಿಯೂ ಪೋಷಕರು ಕಡ್ಡಾಯವಾಗಿ ಹಣ ಕೊಡಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿಲ್ಲ. ಅವರಾಗಿಯೇ ಕೊಟ್ಟರೆ, ತಿಂಗಳಿಗೆ 100 ರೂಪಾಯಿವರೆಗೆ ಪಡೆದು ರಶೀದಿ ಕೊಡಬೇಕು. ಆದರೆ, ದೇಶದಲ್ಲೇ ಕಾನೂನು ಪಂಡಿತ ಎನಿಸಿಕೊಂಡ ಸಿದ್ದರಾಮಯ್ಯ ಇದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದರು.

ಸುತ್ತೋಲೆ ದುರುಪಯೋಗವಾದರೆ ವಾಪಸ್‌
ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಕೆಲವು ಕಡೆ ಶುರು ಮಾಡಲಾಗಿದೆ. ಅವರಿಗೆ ಸಂಭಾವನೆ ಕೊಡುವ ನಿಟ್ಟಿನಲ್ಲಿ ಆಯಾ ಎಸ್‌ಡಿ‌ಎಂಸಿ ತೀರ್ಮಾನ ಮಾಡುತ್ತವೆ. ಸುತ್ತೋಲೆ ದುರುಪಯೋಗವಾದರೆ ಹಿಂಪಡೆಯಲಾಗುವುದು ಎಂದು ಸಚಿವ ಬಿ.ಸಿ.ನಾಗೇಶ್ ಹೇಳಿದರು.

ಇದನ್ನೂ ಓದಿ | ಶಿಕ್ಷಣ ಇಲಾಖೆಯ ಹೊಸ ವೆಬ್‌ ಶುರು; ಶಿಕ್ಷಣ ಸಚಿವರಿಗೆ ನೇರವಾಗಿ ಪತ್ರ ಬರೆಯಲು ಅವಕಾಶ

Exit mobile version