ಬೆಂಗಳೂರು: ಗುರುವಾರ ಮುಂಜಾನೆ ನಡೆದ ಎನ್‌ಐಎ ಮತ್ತು ಪೊಲೀಸ್ ದಾಳಿಯಲ್ಲಿ ಮೋಸ್ಟ್ ವಾಂಟೆಡ್ ಶಂಕಿತ ಉಗ್ರ ಯಾಸಿರ್ ಅರಾಫತ್ ಅಲಿಯಾಸ್ ಯಾಸಿರ್ ಹಸ್ಸನ್‌ನನ್ನು ಬೇಟೆಯಾಡಿದ ಕ್ಷಣಗಳೇ ರೋಚಕವಾಗಿದ್ದವು.
ಎನ್‌ಐಎ ಅಧಿಕಾರಿಗಳಿಂದ ರಹಸ್ಯ ಮಿಡ್‌ನೈಟ್ ಕಾರ್ಯಾಚರಣೆ ನಡೆದಿತ್ತು. ಯಾಸಿರ್ ಹಸ್ಸನ್ ಮನೆಯಲ್ಲಿದ್ದ ಮಾಹಿತಿಯನ್ನು ಪಡೆದುಕೊಂಡಿದ್ದ ಎನ್‌ಐಎ ಅಧಿಕಾರಿಗಳು ಆರ್‌ಟಿ ನಗರದ ಬೀಮಣ್ಣ ಗಾರ್ಡನ್‌ನ 4ನೇ ಕ್ರಾಸ್‌ನಲ್ಲಿದ್ದ ಆತನ ಮನೆಯ ಕಡೆಗೆ ಹೋಗಿದ್ದರು. ಈ ಕ್ರಾಸನ್ನು ನಾಲ್ಕೂ ದಿಕ್ಕಿನಿಂದ ಸಿನಿಮೀಯ ರೀತಿಯಲ್ಲಿ ಸುತ್ತುವರಿಯಲಾಗಿತ್ತು. 50ಕ್ಕೂ ಹೆಚ್ಚು ಅಧಿಕಾರಿಗಳು, ಸಿಬ್ಬಂದಿಗಳು ತಡರಾತ್ರಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಶಂಕಿತ ಉಗ್ರ ಯಾಸಿರ್ ಅರಾಫತ್ ಮುಂಜಾನೆ ಮೂರು ಗಂಟೆಗೆ ಗಾಢ ನಿದ್ರೆಯಲ್ಲಿದ್ದಾಗ ಉಗ್ರನ ಮನೆಗೆ ಎನ್‌ಐಎ ತಂಡ ಎಂಟ್ರಿ ಕೊಟ್ಟಿತ್ತು. ಸತತ ಎರಡು ಗಂಟೆಯ ಕಾಲ ಮನೆಯಲ್ಲಿ ಶೋಧಕಾರ್ಯ ನಡೆಸಿ ಯಾಸಿರ್‌ನನ್ನು ಬಂಧಿಸಿ ಕರೆದುಕೊಂಡು ಹೋಗಿದೆ ಎನ್‌ಐಎ ತಂಡ. ಅಧಿಕಾರಿಗಳು ದಾಳಿ ಮಾಡುತ್ತಿರುವ ದೃಶ್ಯಗಳು ಅಕ್ಕಪಕ್ಕದ ಮನೆಯವರು ಅಳವಡಿಸಿಕೊಂಡಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.