Site icon Vistara News

ಕಿಮ್ಸ್‌ ಮಗು ಕಳವು ಪ್ರಕರಣದಲ್ಲಿ ತಾಯಿಯೇ ವಿಲನ್‌, ಕಾರಣ ಕೇಳಿದ್ರೆ ನಿಜಕ್ಕೂ ಬೇಸರವಾಗ್ತದೆ!

ಸಲ್ಮಾ

ಹುಬ್ಬಳ್ಳಿ: ಇಲ್ಲಿನ ಕಿಮ್ಸ್ ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ ಎನ್ನಲಾದ ಮಗು ಕಳ್ಳತನ ಪ್ರಕರಣದಲ್ಲಿ ದೊಡ್ಡ ತಿರುವು ಸಿಕ್ಕಿದೆ. ನನ್ನ ಮಗುವನ್ನು ಯಾರೋ ಕಳವು ಮಾಡಿದ್ದಾರೆ ಎಂದು ಜೂನ್‌ 13ರಂದು ಪೊಲೀಸರಿಗೆ ದೂರು ನೀಡಿದ್ದ ತಾಯಿ ಸಲ್ಮಾಳೇ ಈಗ ವಿಲನ್‌ ಆಗಿದ್ದಾಳೆ!

ತಾಯಿಯೇ ಮಗುವನ್ನು ಬಾತ್‌ರೂಮ್ ಕಿಟಕಿಯ ಮೂಲಕ‌ ಹೊರಗೆ ಎಸೆದಿರುವುದು ವಿಚಾರಣೆಯ ಬಳಿಕ‌ ಬಯಲಾಗಿರುವುದರಿಂದ ವಿದ್ಯಾನಗರ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಏನಾಗಿತ್ತು ಆವತ್ತು?
ಸಲ್ಮಾಗೆ ತಿಂಗಳ ಹಿಂದೆ ಹೆರಿಗೆಯಾಗಿದ್ದು, ಆಕೆ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ನಡುವೆ, ಜೂನ್‌ 13ರಂದು ಆಕೆ ತನ್ನ ಮಗುವನ್ನು ಯಾರೋ ಸೆಳೆದುಕೊಂಡು ಹೋದರು ಎಂದು ರಂಪ ಎಬ್ಬಿಸಿದ್ದಾಳೆ. ಬಾತ್‌ರೂಂಗೆ ಹೋಗಿ ಬರುವಾಗ ಎಳೆದುಕೊಂಡು ಹೋದರು ಎಂದು ಹೇಳಿದ್ದರು. ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿತ್ತು.

ಎಲ್ಲೂ ದಾಖಲಾಗಿರಲೇ ಇಲ್ಲ!
ಆಸ್ಪತ್ರೆಯಿಂದಲೇ ಮಗುವನ್ನು ತಾಯಿಯ ಕೈಯಿಂದಲೇ ಸೆಳೆದುಕೊಂಡು ಹೋಗಿದ್ದಾರೆ ಎಂಬ ದೂರು ಭಾರಿ ಆತಂಕಕ್ಕೆ ಕಾರಣವಾಗಿತ್ತು. ಹಾಗಾಗಿ ಪೊಲೀಸರೂ ಇದನ್ನು ಗಂಭೀರವಾಗಿ ಪರಿಗಣಿಸಿದ್ದರು. ಮಗುವನ್ನು ಕದ್ದೊಯ್ದ ಅಥವಾ ಯಾರಾದರೂ ತೆಗೆದುಕೊಂಡ ಹೋದ ದೃಶ್ಯಗಳು ಸಿಸಿ ಕ್ಯಾಮರಾಗಳಲ್ಲಿ ಸೆರೆ ಆಗಿವೆಯೇ ಎಂದು ಪರಿಶೀಲಿಸಿದರು. ವಿಚಿತ್ರವೆಂದರೆ ಕಿಮ್ಸ್‌ ಆಸ್ಪತ್ರೆಯಲ್ಲಿ ೩೦೦ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳಿವೆ, ಎಲ್ಲಿಯೂ ಆ ದೃಶ್ಯಗಳು ಕಾಣಿಸಿರಲಿಲ್ಲ.

ತಾಯಿಯ ವಿಚಾರಣೆ
ಸಿಸಿ ಕ್ಯಾಮೆರಾಗಳಿದ್ದರೂ ಎಲ್ಲೂ ಅಂಥ ಘಟನೆ ದಾಖಲಾಗದೆ ಇದ್ದುದರಿಂದ ಸ್ವಲ್ಪ ಸಂಶಯದಿಂದ ಮತ್ತು ಇನ್ನು ಹೆಚ್ಚಿನ ಮಾಹಿತಿ ಪಡೆಯುವ ಉದ್ದೇಶದಿಂದ ಪೊಲೀಸರು ತಾಯಿ ಸಲ್ಮಾ ಅವರನ್ನೇ ವಶಕ್ಕೆ ಪಡೆದಿದ್ದರು. ಜತೆಗೆ ಮಗು ಕಾಣೆಯಾದ ಬಳಿಕ ಸಲ್ಮಾ ಅವರ ವರ್ತನೆ ಕೂಡಾ ಸ್ವಲ್ಪ ಸಂಶಯ ಮೂಡಿಸುವಂತೆ ಇರುತ್ತಿತ್ತು.

ಸಲ್ಮಾ ಬಾಯಿ ಬಿಟ್ಟಳು ಸತ್ಯ!
ಪೊಲೀಸರ ತೀವ್ರ ವಿಚಾರಣೆ ವೇಳೆ ಸಲ್ಮಾ ತಾನೇ ಮಗುವನ್ನು ಬಾತ್‌ ರೂಂನ ಕಿಟಕಿಯಿಂದ ಹೊರಗೆ ಎಸೆದಿದ್ದಾಗಿ ಒಪ್ಪಿಕೊಂಡಳು. ಇದನ್ನು ಪರಿಗಣಿಸಿ ಅಕೆಯನ್ನು ಬಂಧಿಸಲಾಗಿದೆ. ಹುಬ್ಬಳ್ಳಿಯ ‌ಒಂದನೇ ಅಧಿಕ ದಿವಾಣಿ ಹಾಗೂ ಜೆಎಂಎಫ್‌ಸಿ ಯಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಸಲ್ಮಾಗೆ 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

ಹಾಗಿದ್ದರೆ ಎಸೆದುದು ಯಾಕೆ?
ತಾನೇಕೆ ಹಾಗೆ ಮಾಡಿದೆ ಎಂಬುದಕ್ಕೆ ತಾಯಿ ಸಲ್ಮಾ ಕೊಟ್ಟ ಕಾರಣ ಕೇಳಿದ್ರೆ ನಿಜಕ್ಕೂ ಎಂಥವರೂ ಬೇಸರ ಪಡಬೇಕು. ಈ ಮಗುವಿನ ಮೆದುಳು ಬೆಳವಣಿಗೆ ಆಗಿಲ್ಲ ಎಂದು ವೈದ್ಯರು ಹೇಳಿದ್ದರಂತೆ. ಹೀಗಾಗಿ ಮಗುವನ್ನು ಮುಂದೆ ಸಾಕುವುದು ಹೇಗೆ ಎಂಬ ಆತಂಕದಲ್ಲಿ ಆಕೆ ಇಂಥ ಅತಿರೇಕದ ಕ್ರಮಕ್ಕೆ ಮುಂದಾಗಿದ್ದಾಳೆ. ಹಾಗಿದ್ದರೆ ಆಕೆ ಗರ್ಭಿಣಿಯಾದ ಆರಂಭದಲ್ಲೇ ಸ್ಕ್ಯಾನಿಂಗ್‌ ಮಾಡಿಸಿರಲಿಲ್ಲವೇ? ಆಗಲೂ ಗೊತ್ತಾಗಿರಲಿಲ್ಲವೇ ಎಂಬ ಪ್ರಶ್ನೆಗೆ ಸರಿಯಾದ ಉತ್ತರ ಸಿಕ್ಕಿಲ್ಲ.

ಹಾಗಿದ್ದರೆ ಮಗು ಏನಾಯಿತು?
ಇಲ್ಲಿ ಕಾಡುವ ಇನ್ನೊಂದು ಪ್ರಶ್ನೆ ಎಂದರೆ, ಆವತ್ತು ಸಲ್ಮಾ ಬಾತ್‌ ರೂಂ ಕಿಟಕಿಯಿಂದ ಎಸೆದ ಮಗು ಎಲ್ಲಿ ಹೋಯಿತು? ನಿಜವೆಂದರೆ, ಜೂನ್‌ ೧೪ರಂದು ಅದೇ ಆಸ್ಪತ್ರೆಯ ಹೊರಗಡೆ ಒಂದು ಮಗು ಸಿಕ್ಕಿತ್ತು. ಅದನ್ನು ಕಿಮ್ಸ್‌ ಆಸ್ಪತ್ರೆಯಲ್ಲೇ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಈಗ ಅದಕ್ಕೆ ೪೦ ದಿನಗಳು ತುಂಬಿವೆ. ಜೈಲುಪಾಲಾಗಿರುವ ತಾಯಿಯ ಕೈಗೇ ಈ ಮಗುವನ್ನು ಕೊಡುತ್ತಾರಾ? ಮೆದುಳು ಬೆಳೆಯದ ಮಗುವಿನ ಮುಂದಿನ ಚಿಕಿತ್ಸೆ ಹೇಗೆ ಎನ್ನುವ ಪ್ರಶ್ನೆಗಳಿಗೆ ಸದ್ಯ ಉತ್ತರ ಸಿಕ್ಕಿಲ್ಲ.

ಇದನ್ನೂ ಓದಿ| ಪ್ರೀತಿಗಾಗಿ ಹೆತ್ತ ತಾಯಿಯನ್ನೇ ಕೊಲ್ಲಲು ಮುಂದಾದ ಅಪ್ರಾಪ್ತ ಮಗಳು

Exit mobile version