ಚಾಮರಾಜನಗರ: ಒಂದೆಡೆ ಕಿತ್ತು ತಿನ್ನುವ ಬಡತನ, ಮತ್ತೊಂದೆಡೆ ಕೈಹಿಡಿದವ ನಡುದಾರಿಯಲಿ ಕೈ ಬಿಟ್ಟು ಓಡಿಹೋದವ, ತನ್ನ ಜೀವನವೇ ಭಾರವಾದ ಸಂದರ್ಭದಲ್ಲಿ ಒಡಲಿಗೆ ಬಂದ ಪುಟ್ಟ ಕಂದಮ್ಮ. ದಿಕ್ಕು ತೋಚದ ಈ ತಾಯಿ ತನ್ನ ನವಜಾತ ಶಿಶುವನ್ನು ಬಸ್ ನಿಲ್ದಾಣದಲ್ಲಿ ಬಿಟ್ಟುಹೋಗಿದ್ದಾಳೆ. ಆದರೆ, ಮುಂದಾಗಿದ್ದೂ ಸಹ ಮನಮಿಡಿಯುವ ಸನ್ನಿವೇಶ. ಕರುಳಿನ ಕೂಗಿಗೆ ಓಗೊಟ್ಟ ಆ ತಾಯಿ ಮತ್ತೆ ಓಡಿಬಂದಳು, ತಬ್ಬಿ ಮುತ್ತಿಟ್ಟಳು.
ಹೌದು. ಇಂಥದ್ದೊಂದು ಮನಕಲಕುವ, ತಾಯಿ-ಮಗುವಿನ ಮಮತೆಯ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು, ಕೊಳ್ಳೇಗಾಲ ತಾಲೂಕಿನ ಮತ್ತೀಪುರ. ಜಿಲ್ಲೆಯ ಮಹಿಳೆಯೊಬ್ಬರಿಗೆ (ಮಾನವೀಯತೆ ದೃಷ್ಟಿಯಿಂದ ಅವರ ವಿವರನ್ನು ಪ್ರಕಟಪಡಿಸಿಲ್ಲ) ಗಂಡು ಮಗು ಜನಿಸಿ ಎರಡು ದಿನಗಳಷ್ಟೇ ಕಳೆದಿತ್ತು. ಆದರೆ, ತನಗೆ ಪೋಷಿಸಲು ಆಗದ ಹಿನ್ನೆಲೆಯಲ್ಲಿ ಬಟ್ಟೆಯಲ್ಲಿ ಮಗುವನ್ನು ಸುತ್ತಿ, ಮತ್ತೀಪುರದ ಬಸ್ ನಿಲ್ದಾಣದ ಬಳಿಯ ಕಸದ ತೊಟ್ಟಿಯ ಸಮೀಪ ಇರಿಸಿ ಹೊರಟು ಹೋಗಿದ್ದಳು. ಕೆಲವು ಸಮಯಗಳ ಬಳಿಕ ಮಗುವನ್ನು ಇಲ್ಲಿ ಬಿಟ್ಟುಹೋಗಿರುವುದು ಸಾರ್ವಜನಿಕರ ಗಮನಕ್ಕೆ ಬಂದಿದ್ದು, ತಕ್ಷಣವೇ ಪೊಲೀಸರ ಗಮನಕ್ಕೆ ತಂದಿದ್ದಾರೆ. ಅಲ್ಲದೆ, ಪೊಲೀಸರು ಬರುವವರೆಗೂ ಆ ಮಗುವನ್ನು ರಕ್ಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಗುವಿಗೆ ಬೀದಿ ನಾಯಿಗಳಿಂದಾಗಲೀ, ಚಳಿ-ಮಳೆ-ಗಾಳಿಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ.
ಇದನ್ನೂ ಓದಿ | ಕಿಮ್ಸ್ ಮಗು ಕಳವು ಪ್ರಕರಣದಲ್ಲಿ ತಾಯಿಯೇ ವಿಲನ್, ಕಾರಣ ಕೇಳಿದ್ರೆ ನಿಜಕ್ಕೂ ಬೇಸರವಾಗ್ತದೆ!
ಕರುಳಿನ ಕೂಗಿಗೆ ಓಡಿ ಬಂದ ತಾಯಿ
ಬಸ್ ನಿಲ್ದಾಣದಲ್ಲಿ ಮಗುವೊಂದು ಅನಾಥವಾಗಿರುವ ವಿಷಯ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದರು. ಅದೇ ವೇಳೆಗೆ ಅಲ್ಲಿ ಕಾಣಿಸಿಕೊಂಡ ಮಹಿಳೆಯೊಬ್ಬಳು ತಾನೇ ಆ ಶಿಶುವಿನ ತಾಯಿ ಎಂದು ಹೇಳಿಕೊಂಡಿದ್ದಾಳೆ. ಇದನ್ನು ಕೇಳಿದ ಪೊಲೀಸರು, ಆಕೆಯನ್ನು ಸಂಪೂರ್ಣವಾಗಿ ವಿಚಾರಿಸಿದ್ದಾರೆ. ಈ ವೇಳೆ ಮಾತನಾಡಿದ ಮಹಿಳೆ, “ತನಗೆ ಕಿತ್ತುತಿನ್ನುವ ಬಡತನವಿದೆ. ಜೀವನ ನಿರ್ವಹಿಸಲಾಗದೆ ಗಂಡ ಮನೆಬಿಟ್ಟು ಹೋಗಿದ್ದಾನೆ. ಒಂದು ತುತ್ತಿಗೂ ಸಹ ನಾನು ಪರದಾಟ ಮಾಡುವ ಸ್ಥಿತಿ ಇದೆ. ನನ್ನನ್ನೇ ನಾನು ಸಾಕಿಕೊಳ್ಳುವ ಶಕ್ತಿ ಇಲ್ಲ. ಇನ್ನು ಈ ನನ್ನ ಕಂದಮ್ಮನನ್ನು ಹೇಗೆ ನೋಡಿಕೊಳ್ಳಲಿ ಎಂಬ ಭಯ ನನ್ನನ್ನು ಕಾಡತೊಡಗಿತು. ಈ ಹಿನ್ನೆಲೆಯಲ್ಲಿ ನನ್ನ ಮಗನಿಗೆ ಒಳ್ಳೇ ಜೀವನ ಸಿಗಲಿ, ಸ್ಥಿತಿವಂತರ ಕೈಸೇರಲಿ ಎಂಬ ಆಸೆಯಿಂದ ಗಟ್ಟಿ ಧೈರ್ಯ ಮಾಡಿ ಬಸ್ ನಿಲ್ದಾಣದಲ್ಲಿ ಸುತ್ತಿ ಹೊರಟು ಹೋದೆ. ಆದರೆ, ಸ್ವಲ್ಪ ದೂರ ಹೋಗುತ್ತಲೇ ನನಗೆ ಅಪರಾಧ ಪ್ರಜ್ಞೆ ಕಾಡಲು ಪ್ರಾರಂಭವಾಯಿತು. ಅಲ್ಲದೆ, ನನ್ನ ಕರುಳ ಕುಡಿಯನ್ನು ಬಿಟ್ಟಿರಲಾರದು ಎಂದೆನಿಸಿತು. ಮಗುವಿಗೇ ಏನಾದರೂ ಅಪಾಯವಾದರೆ ಎಂದು ಭಯವಾಯಿತು. ಹೀಗಾಗಿ ಮತ್ತೆ ಇಲ್ಲಿಗೆ ಓಡಿ ಬಂದೆ” ಎಂದು ಹೇಳಿಕೊಂಡಿದ್ದಾಳೆ.
ಈ ಮಹಿಳೆಯ ಸಂಕಷ್ಟವನ್ನ ಕಂಡು ಅಲ್ಲಿ ಸೇರಿದ್ದ ನಾಗರಿಕರೂ ಸಹ ಮರುಗಿದರು. ಈ ವೇಳೆ ಮಹಿಳೆಗೆ ಬುದ್ಧಿ ಹೇಳಿದ ಪೊಲೀಸರು, ಪರಿಸ್ಥಿತಿ ಹೇಗೇ ಇದ್ದರೂ, ಮಗು ತಾಯಿಯೊಂದಿಗೇ ಇರಬೇಕು ಎಂದು ಹೇಳಿ ಆಕೆಯನ್ನು ಮಗುವಿನ ಜತೆಗೆ ಕಳುಹಿಸಿಕೊಟ್ಟರು.
ಇದನ್ನೂ ಓದಿ | ರಾಕ್ಷಸೀ ಕೃತ್ಯ; ಚಲಿಸುತ್ತಿದ್ದ ಕಾರಿನಲ್ಲಿ ತಾಯಿ-ಪುಟ್ಟ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ