ಉಡುಪಿ: ಪಟಾಕಿ ಸಿಡಿಸುವಲ್ಲಿ ಇನ್ನೋವೇಟಿವ್ ಐಡಿಯಾ ಮಾಡಿದ ವ್ಯಕ್ತಿಯೊಬ್ಬರು ಅರೆಸ್ಟ್ ಆಗಿದ್ದಾರೆ! ಸಾಮಾನ್ಯವಾಗಿ ಒಂದು ಖಾಲಿ ಜಾಗದಲ್ಲಿ ಪಟಾಕಿ ಬಿಡುವುದು ಕ್ರಮ. ಅದು ಮನೆ ಮುಂದಿನ ವೆರಾಂಡವೂ ಇರಬಹುದು, ರಸ್ತೆಯೂ ಇರಬಹುದು. ಆದರೆ, ಮಣಿಪಾಲದ ಒಬ್ಬ ಸೆಲೂನ್ ಉದ್ಯೋಗಿ ಚಲಿಸುವ ಪಟಾಕಿ ಸ್ಫೋಟದ ಹೊಸ ಕಲ್ಪನೆಯನ್ನು ಪ್ರಸ್ತುತಪಡಿಸಿ ಈಗ ಬಂಧನಕ್ಕೆ ಒಳಗಾಗಿದ್ದಾರೆ!
ಅವರು ಮಾಡಿದ್ದೇನೆಂದರೆ, ಕಾರಿನ ಮೇಲೆ ಒಂದರ ಹಿಂದೊಂದರಂತೆ ಪಟಾಕಿ ಸಿಡಿಯುವಂತೆ ವ್ಯವಸ್ಥೆ ಮಾಡಿದ್ದಾರೆ. ಈ ಕಾರು ಇಡೀ ಪೇಟೆಯಲ್ಲಿ ನಿಧಾನವಾಗಿ ಚಲಿಸುತ್ತಾ ಆಕಾಶಕ್ಕೆ ಪಟಾಕಿಗಳನ್ನು ಹಾರಿಸುತ್ತಾ ಇರುತ್ತದೆ! ಹೀಗೆ ಕಾರಿನ ಮೇಲಿಂದ ಪಟಾಕಿಗಳು ಹಾರುವಂತೆ ಮಾಡಿದವರು ಮಣಿಪಾಲದ ಸೆಲೂನ್ ಉದ್ಯೋಗಿ ವಿಶಾಲ್ ಕೊಹ್ಲಿ (೨೬).
ಮಣಿಪಾಲ ಪೇಟೆಯಲ್ಲಿ ಪಟಾಕಿ ಹಚ್ಚುವ ಕಾರನ್ನು ಓಡಾಡಿಸಿದ್ದಲ್ಲದೆ, ಅದರ ದೃಶ್ಯಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದರು. ಈ ವಿಡಿಯೊ ಜಾಲ ತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಕಾರ್ಯಾಚರಣೆಗೆ ಇಳಿದರು. ವಿಶಾಲ್ ಕೊಹ್ಲಿಯನ್ನು ಅರೆಸ್ಟ್ ಮಾಡಿದರು
ಹುಚ್ಚಾಟ ಮೇರೆದ ಚಾಲಕ ಕೊಹ್ಲಿ ಮೇಲೆ ಪ್ರಕರಣ ದಾಖಲಾಗಿದ್ದು, ಕಾರು ಕೂಡಾ ಸೀಜ್ ಮಾಡಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದೆ.