ಬೆಂಗಳೂರು: ಅನೇಕ ದಿನಗಳಿಂದ ವಿವಾದದ ಕೇಂದ್ರ ಬಿಂದುವಾಗಿರುವ ಚಾಮರಾಜಪೇಟೆ ಮೈದಾನಕ್ಕೆ ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಹೆಸರಿಡಬೇಕು ಎಂದು ಸಂಸದ ಪಿ.ಸಿ. ಮೋಹನ್ ಆಗ್ರಹಿಸಿದ್ದಾರೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ನಿಯೋಗದೊಂದಿಗೆ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಪಿ.ಸಿ. ಮೋಹನ್ ಮಾತನಾಡಿದರು. ಜುಲೈ 12ರಂದು ಕರೆ ನೀಡಿದ್ದ ಬಂದ್‌ಗೆ ಚಾಮರಾಜಪೇಟೆಯ ಎಲ್ಲ ಜನರೂ ಬಂದ್‌ಗೆ ಸಹಕರಿಸಿದರು, ಅವರಿಗೆ ಧನ್ಯವಾದ. ಆಟದ ಮೈದಾನ ಆಟದ ಮೈದಾನವಾಗಿಯೇ ಇರುತ್ತದೆ. ಅದು ಬಿಬಿಎಂಪಿ ಆಟದ ಮೈದಾನ, ಅಲ್ಲಿ ಆಡುವುದಕ್ಕೆ ಯಾವ ದೊಣ್ಣೆ ನಾಯಕನ ಅನುಮತಿಯೂ ಬೇಕಿಲ್ಲ.
ಸ್ವಾತಂತ್ರ್ಯ ಬಂದು 75ನೇ ವರ್ಷದ ಸಂದರ್ಭದಲ್ಲಿ ರಾಷ್ಟ್ರಧ್ವಜ ಹಾರಿಸಲು ಅನುಮತಿ ನೀಡಬೇಕು. ಅದಕ್ಕೆ ಅಡ್ಡಿ ಉಂಟುಮಾಡುವುದು ರಾಷ್ಟ್ರಕ್ಕೆ ಮಾಡುವ ದ್ರೋಹವಾಗಿದೆ. ಈ ನಿಟ್ಟಿನಲ್ಲಿ ಪಾಲಿಕೆ ಆಯುಕ್ತರಿಗೆ ಅನುಮತಿ ಕೇಳಿದ್ದೇವೆ. ನವೆಂಬರ್ 1, ಅಂಬೇಡ್ಕರ್ ಜಯಂತಿ, ಗಣೇಶ ಉತ್ಸವ ಸೇರಿ ಎಲ್ಲದಕ್ಕೂ ಅನುಮತಿ ನೀಡಬೇಕು ಎಂದು ಮನವಿ ನೀಡಿದ್ದೇವೆ.
ಇದನ್ನೂ ಓದಿ | Chamarajpet Bandh | ಚಾಮರಾಜಪೇಟೆ ಬಂದ್‌ಗೆ ಉತ್ತಮ ಪ್ರತಿಕ್ರಿಯೆ, ಅಂಗಡಿಗಳು ಕ್ಲೋಸ್
ಈ ಮೈದಾನಕ್ಕೆ ಈದ್ಗಾ ಮೈದಾನ, ಎಮ್ಮೆ ಮೈದಾನ ಸೇರಿ ಅನೇಕ ಹೆಸರು ಹೇಳುತ್ತಾರೆ. ಇದಕ್ಕೆ ಜಯಚಾಮರಾಜೇಂದ್ರ ಆಟದ ಮೈದಾನ ಎಂದು ಹೆಸರಿಡಬೇಕು ಎಂದು ಆಗ್ರಹ ಮಾಡಿದ್ದೇನೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇನೆ ಎಂದು ಆಯುಕ್ತರು ಭರವಸೆ ನೀಡಿದ್ದಾರೆ ಎಂದು ಹೇಳಿದರು.
ನಂತರ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಚಾಮರಾಜಪೇಟೆ ಆಟದ ಮೈದಾನ ಸಾರ್ವಜನಿಕ ಉಪಯೋಗಕ್ಕೆ ಎಲ್ಲ ಕಾರ್ಯಕ್ರಮಕ್ಕೂ ಅವಕಾಶ ಮಾಡಿಕೊಡಿ ಎಂದು ಸಂಸದರು ಮನವಿ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಮೇಲೆ ವಕ್ಫ್ ಬೋರ್ಡ್ ಮೈದಾನ ನಮ್ಮ ಆಸ್ತಿ ಎಂದಿದ್ದರು. ಹೀಗಾಗಿ ಅವರಿಗೆ ಎರಡು ನೋಟಿಸ್ ನೀಡಲಾಗಿದೆ. ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ 140/A ನಲ್ಲಿ ಜೆ.ಸಿ ಗೆ ಇದೆ. ನೋಟಿಸ್ ನೀಡಿದ ಮೇಲೆ 25 ದಿನ ಕಾಲಾವಕಾಶ ಇದ್ದು, ಖಾತಗೆ ಬೇಕಿರುವ ದಾಖಲೆ ಸಲ್ಲಿಸದಿದ್ದರೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಇನ್ನು ಮೈದಾನಕ್ಕೆ ಜಯಚಾಮರಾಜೇಂದ್ರ ಆಟದ ಮೈದಾನ ಹೆಸರಿಡಲು ಮನವಿ ಮಾಡಿದ್ದು, ಈ ಸಂಬಂಧ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದರು.
ಬೈಕ್ ರ‍್ಯಾಲಿ ಇರುವುದಿಲ್ಲ
ಜುಲೈ 12ರಂದು ಬಂದ್ ನಡೆಸಿದ ನಂತರ ಶ್ರೀರಾಮಸೇನೆ ಹಾಗೂ ಚಾಮರಾಜಪೇಟೆ ನಾಗರಿಕರ ಒಕ್ಕೂಟದಿಂದ ಬೃಹತ್ ಬೈಕ್ ರ‍್ಯಾಲಿ ನಡೆಸಲು ಚಿಂತನೆ ನಡೆಸಲಾಗಿತ್ತು. ಆದರೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಭೇಟಿ ಮಾಡಿ ಹೊರಬಂದ ಪಿ.ಸಿ. ಮೋಹನ್, ಯಾವುದೇ ಬೈಕ್ ರ್ಯಾಲಿ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ | ಚಾಮರಾಜಪೇಟೆಯಲ್ಲಿ ಈದ್ಗಾ ಮೈದಾನ ಗಲಾಟೆ ಆಯ್ತು, ಈಗ ಪುತ್ಥಳಿ ವಿಚಾರವಾಗಿ ಗುಂಪು ಘರ್ಷಣೆ!