ಮೈಸೂರು: ಬಿಜೆಪಿ ಹಾಗೂ ಕಾಂಗ್ರೆಸ್ ನಡೆಸಬೇಕಿದ್ದ ಮೈಸೂರು ನಗರ ಮತ್ತು ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಬಹಿರಂಗ ಚರ್ಚೆ ಕೇವಲ ನಾಟಕೀಯ ಬೆಳವಣಿಗೆಗಳಿಗೆ ಸೀಮಿತವಾಯಿತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ದಂಡು ದಾಳಿ ಸಮೇತ ಚರ್ಚೆಗೆ ಬರಲಿ ಎಂದು ಸಂಸದ ಪ್ರತಾಪ ಸಿಂಹ ಹೇಳಿಕೆ ನೀಡಿದ್ದರು.
ಇದರ ಬೆನ್ನಲ್ಲೇ ಸಂಸದರಿಗೆ ಪತ್ರ ಬರೆದಿದ್ದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಬುಧವಾರ ಮಧ್ಯಾಹ್ನ 12 ಗಂಟೆಗೆ ಸಮಯ ನಿಗದಿ ಪಡಿಸಿದ್ದರು. ಆದರೆ ಇಬ್ಬರ ಮುಖಾಮುಖಿ ಆಗಲೇ ಇಲ್ಲ, ಹೀಗಾಗಿ ಚರ್ಚೆಯೂ ನಡೆಯಲಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ಜನಪ್ರತಿನಿಧಗಳ ಬೀದಿ ಜಗಳಕ್ಕೆ ಮೈಸೂರು ಸಾಕ್ಷಿಯಾಯಿತು.
ಮೈಸೂರಿಗೆ ತಮ್ಮ ಕೊಡುಗೆ ಏನು ಎಂದು ಚರ್ಚೆ ನಡೆಸಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ದಂಡು ದಾಳಿ ಸಮೇತ ಚರ್ಚೆಗೆ ಬರಲಿ ಎಂದು ಸಂಸದ ಪ್ರತಾಪ್ ಸಿಂಹ ಈ ಹಿಂದೆ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸಂಸದರಿಗೆ ಪತ್ರ ಬರೆದಿದ್ದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಬುಧವಾರ ಮಧ್ಯಾಹ್ನ ೧೨ ಗಂಟೆಗೆ ಸಮಯ ನಿಗದಿ ಪಡಿಸಿದ್ದರು. ಆದರೆ ಬುಧವಾರ ಪ್ರತಾಪ್ ಸಿಂಹ ಮತ್ತು ಎಂ.ಲಕ್ಷ್ಮಣ್ ಮುಖಾಮುಖಿ ಆಗಲೇ ಇಲ್ಲ. ಹೀಗಾಗಿ ಚರ್ಚೆಯೂ ನಡೆಯಲಿಲ್ಲ, ಚರ್ಚೆಯ ವಸ್ತುವಾಗಿದ್ದ ಕಾಂಗ್ರೆಸ್- ಬಿಜೆಪಿಯ ಕೊಡುಗೆ ಪ್ರಸ್ತಾಪವೂ ಆಗಲಿಲ್ಲ. ಎರಡೂ ಪಕ್ಷಗಳ ಕಾರ್ಯಕರ್ತರು ನಡು ಬೀದಿಯಲ್ಲಿ ʼನಗೆ ನಾಟಕʼ ಪ್ರದರ್ಶಿಸಿದರು.
ಕುರ್ಚಿ ಮೆರವಣಿಗೆ
ರೈಲ್ವೆ ನಿಲ್ದಾಣ ಸಮೀಪದ ಕಾಂಗ್ರೆಸ್ ಕಚೇರಿ ಎದುರು ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, ಡೊಳ್ಳು- ನಗಾರಿ ಸದ್ದಿಗೆ ಕಿವಿಯಾದರು. ಆಟೋ ರಿಕ್ಷಾವೊಂದರಲ್ಲಿ ಎರಡು ಕುರ್ಚಿ, ಒಂದು ಟೇಬಲ್, ಒಂದಷ್ಟು ದಾಖಲೆಗಳನ್ನು ಜೋಡಿಸಿದರು. ವಕ್ತಾರ ಎಂ.ಲಕ್ಷ್ಮಣ್ ಆಟೋ ಏರಿ ಒಂದು ಕುರ್ಚಿಯಲ್ಲಿ ಆಸೀನರಾದರು. ಡೊಳ್ಳು- ನಗಾರಿ ಸದ್ದಿನೊಂದಿಗೆ ಮೆರವಣಿಗೆ ಜಲದರ್ಶಿನಿ ಅತಿಥಿಗೃಹದತ್ತ ಹೊರಟಿತು.
ಇದನ್ನೂ ಓದಿ | ಬಿಜೆಪಿ ಎಂದರೆ ಬೆಲೆ ಏರಿಕೆ, ಬೆಲೆ ಏರಿಕೆ ಎಂದರೆ ಬಿಜೆಪಿ: ಕುಮಾರಸ್ವಾಮಿ ಕಿಡಿ
ಎಚ್.ಸಿ.ದಾಸಪ್ಪ ಕಚೇರಿಯಲ್ಲಿ ಪೂರ್ವ ನಿಯೋಜನೆಗೊಂಡಿದ್ದ ಪೊಲೀಸರು, ಕಾಂಗ್ರೆಸ್ ಕಾರ್ಯಕರ್ತರನ್ನು ತಡೆದರು. ದೇವರಾಜ ಠಾಣೆ ಇನ್‌ಸ್ಪೆಕ್ಟರ್ ದಿವಾಕರ್, ಲಷ್ಕರ್ ಠಾಣೆ ಇನ್ ಸ್ಪೆಕ್ಟರ್ ಸಂತೋಷ್ ಅವರು ಲಕ್ಷ್ಮಣ್ ಅವರನ್ನು ಮನವೊಲಿಸಲು ಮುಂದಾದರು. ʼಕಾರ್ಯಕರ್ತರು ಬೇಡ, ನಾನೊಬ್ಬನಿಗೆ ಅವಕಾಶ ಕೊಡಿʼ ಎಂದು ಮನವಿ ಮಾಡಿದರು. ಇದಕ್ಕೆ ಪೊಲೀಸರು ಒಪ್ಪದ ಕಾರಣ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಯಲ್ಲೇ ಧರಣಿ ಕುಳಿತರು.
ಕೆಲ ನಿಮಿಷಗಳ ಬಳಿಕ ಪೊಲೀಸರು ಪ್ರಮುಖರನ್ನು ವಶಕ್ಕೆ ಪಡೆದು ಸಿಎಆರ್ ಮೈದಾನಕ್ಕೆ ಕರೆದೊಯ್ದರು.
ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಲಕ್ಷ್ಮಣ್, ಸಂಸದ ಪ್ರತಾಪ ಸಿಂಹ ಮೈಸೂರಿಗೆ ಏನೇನು ಯೋಜನೆ ತಂದಿದ್ದೇನೆ ಎಂಬುದನ್ನು ಜನರಿಗೆ ಹೇಳಲಿ. ಬಿಜೆಪಿ ಸರ್ಕಾರ ನಾಲ್ಕು ವರ್ಷಗಳಿಂದ ಮೈಸೂರಿಗೆ ಏನು ಕೊಡುಗೆ ಕೊಟ್ಟಿದೆ ಎಂಬುದನ್ನೂ ಬಹಿರಂಗಪಡಿಸಲಿ. ಸಂಸದರು ಚರ್ಚೆಗೆ ಬರದೇ ಯಾಕೆ ಕದ್ದು ಓಡಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಶೇ. ೯೯ರಷ್ಟು ಸುಳ್ಳು ಹೇಳುವುದೇ ಅವರ ಕಾಯಕವಾಗಿದೆ. ಪೊಲೀಸರು ಚರ್ಚೆಗೆ ಅವಕಾಶ ಕೊಡುತ್ತಿಲ್ಲ. ಒಬ್ಬನೇ ಹೋಗುತ್ತೇನೆ. ಮನೆ ಮುಂದೆ ಕುಳಿತುಕೊಳ್ಳುತ್ತೇನೆ. ಸುಳ್ಳು ಹೇಳುವುದಿಲ್ಲ. ಧೈರ್ಯ ಇದ್ದರೆ ನಮ್ಮೊಂದಿಗೆ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಮಾಜಿ ಶಾಸಕ ವಾಸು, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ಎಲ್.ಭಾಸ್ಕರ್ ಗೌಡ, ಪ್ರೀತಂಗೌಡ ಮುಂತಾದವರಿದ್ದರು.
ಬಿಜೆಪಿ ಕಾರ್ಯಕರ್ತರ ಬಂಧನ
ಮತ್ತೊಂದೆಡೆ ಸಂಸದ ಪ್ರತಾಪ್ ಸಿಂಹ ಅನುಪಸ್ಥಿತಿಯಲ್ಲಿ ಬಿಜೆಪಿ ಕಾರ್ಯಕರ್ತರೂ ಮೆಟ್ರೋಪಾಲ್ ವೃತ್ತದಲ್ಲಿ ಹೈಡ್ರಾಮಾ ಮಾಡಿದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಯುವ ಮೋರ್ಚಾ ಸದಸ್ಯರು, ಎಂ.ಲಕ್ಷ್ಮಣ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಒಂದು ಕುರ್ಚಿಗೆ ಲಕ್ಷ್ಮಣ್ ಫೋಟೋ ಮತ್ತೊಂದು ಕುರ್ಚಿಗೆ ಬಿಜೆಪಿ ಬಾವುಟ ಕಟ್ಟಿ ಪ್ರದರ್ಶನ ಮಾಡಿದರು. ಒಂದಷ್ಟು ನಿಮಿಷ ಘೋಷಣೆ ಹಾಕಿದ ಬಳಿಕ ಕಾಂಗ್ರೆಸ್ ಕಚೇರಿಯತ್ತ ನುಗ್ಗಲು ಯತ್ನಿಸಿದರು. ಸಜ್ಜಾಗಿ ನಿಂತಿದ್ದ ಪೊಲೀಸರು, ಎಲ್ಲರನ್ನೂ ವಶಕ್ಕೆ ಪಡೆದು ಕರೆದೊಯ್ದರು.
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹಂದಿ, ಬಿಜೆಪಿ ಕಾರ್ಯಕರ್ತರು ಹಂದಿ ಹೊಡೆಯುವವರು…!
ಇದೆಲ್ಲದರ ನಂತರ ಮಾಧ್ಯಮಗಳ ಎದುರು ಪ್ರತಾಪ್ ಸಿಂಹ ಮಾತನಾಡಿದರು. ವೀರರು, ಶೂರರು ಯುದ್ಧಕ್ಕೆ ಬರುವಾಗ ಆನೆ ಏರಿ, ಕುದುರೆ ಏರಿ ಬರುತ್ತಾರೆ. ಈ ಹಂದಿ ಏರಿ, ಕತ್ತೆ ಏರಿ ಯಾರು ಬರುತ್ತಾರೆ? ಈ ಕತ್ತೆ, ಹಂದಿಯನ್ನು ಯಾಕೆ ಕಳುಹಿಸುತ್ತಾರೆ?. ಗುದ್ದಾಡಿದರೂ ಗಂಧದ ಜತೆ ಗುದ್ದಾಡಬೇಕು, ಹಂದಿ ಜತೆ ಅಲ್ಲ ಎಂದು ದಾಸರ ಪದ ಇದೆ. ನೀವ್ಯಾಕ್ರೀ ಹಂದಿ ಕಳುಹಿಸುತ್ತೀರಿ? ನೀವು ಹಂದಿ ಕಳುಹಿಸಿದರೆ ನಾವು ಹಂದಿ ಹೊಡೆಯುವವರನ್ನು ಕಳುಹಿಸುತ್ತೇವೆ. ಹಂದಿ ಹೊಡೆದು ಬಾರಪ್ಪ ಎಂದು ಯುವ ಮೋರ್ಚಾ ಅಧ್ಯಕ್ಷ ಕಿರಣ್ ಗೌಡರನ್ನು ಕಳುಹಿಸಿದ್ದೆ. ಹಂದಿ ಓಡಿ ಹೋಯ್ತಲ್ಲ ಯಾಕೆ? ಎಂದರು.
ನಾನು ಹಿಂದೆ ಸ್ಪಷ್ಟವಾಗಿ ಹೇಳಿದ್ದೇನೆ. ಸಿದ್ದರಾಮಯ್ಯ, ಮಹದೇವಪ್ಪ ಅವರು ಹೇಳಿದ ಟೈಮು, ಕರೆದ ಜಾಗ, ಸಿದ್ಧಪಡಿಸುವ ವೇದಿಕೆಗೆ ಒಬ್ಬನೇ ಬರುತ್ತೇನೆ. ನೀವು ಬೇಕಿದ್ದರೆ ದಂಡು ದಾಳಿ ಜತೆ ಬನ್ನಿ ಎಂದು ಹೇಳಿದ್ದೆ. ಸರಿಯಾದ ವ್ಯಕ್ತಿಯನ್ನು ಕಳುಹಿಸಿ. ಇವರ ಘನತೆ ಏನು ಅನ್ನೋದು ಮೈಸೂರಿನ ಜನರಿಗೂ ಗೊತ್ತಿದೆ. ನಾಲ್ಕು ವರ್ಷಗಳ ಹಿಂದೆ ಪತ್ರಕರ್ತರ ಭವನದಲ್ಲಿ ನಮಸ್ಕಾರ ಮಾಡಿ, ಕಣ್ಣೀರು ಹಾಕಿ, ರಾಜಕೀಯದಿಂದ ಮನೆ-ಕಾರು ಕಳೆದುಕೊಂಡೆ ಅಂತೆಲ್ಲ ಗೋಳಾಡುವ ಪರಿಸ್ಥಿತಿ ಯಾಕೆ ಬರುತ್ತಿತ್ತು?. ಜನ ಅವರನ್ನು ತಿರಸ್ಕಾರ ಮಾಡಿದ್ದಾರೆ.
ಡಾ. ಮಹದೇವಪ್ಪ ಅವರೇ, ನಿಮಗೇನು ಕೆಲಸ ಇದೆ ಹೇಳಿ ಸರ್? ಯಾಕೆ ನೀವು ಚರ್ಚೆಗೆ ಬರಬಾರದು? ಮೈಸೂರು- ಬೆಂಗಳೂರು ಹೆದ್ದಾರಿ ಆಗುವಾಗ ನೀವು ಲೋಕೋಪಯೋಗಿ ಸಚಿವರಾಗಿದ್ದಿರಿ. ನಿಮ್ಮ ಪಾತ್ರ ಏನಿದೆ ಎಂಬುದನ್ನು ಚರ್ಚೆ ಮಾಡೋಣ ಬನ್ನಿ. ಮೈಸೂರು- ಬೆಂಗಳೂರು ಹೆದ್ದಾರಿಗೆ ಖರ್ಚಾಗಿರುವ ೯,೦೦೦ ಕೋಟಿ ರೂ.ಗಳಲ್ಲಿ ನಿಮ್ಮದು ೯ ಪೈಸೆಯೂ ಇಲ್ಲ. ನಂಜನಗೂಡಿಗೆ ಹೋಗಲೋ, ತಿ.ನರಸೀಪುರಕ್ಕೆ ಹೋಗಲೋ ಎಂದು ಚಿಂತಾಕ್ರಾಂತರಾಗಿ ಕುಳಿತಿದ್ದೀರಿ ಎಂದು ಲೇವಡಿ ಮಾಡಿದರು.
ಇದನ್ನೂ ಓದಿ | ʼಇನ್ನು ನಿನ್ನ ಸರದಿʼ; ಉದಯಪುರ ಹತ್ಯೆ ಬೆನ್ನಲ್ಲೇ ಬಿಜೆಪಿ ಉಚ್ಚಾಟಿತ ನವೀನ್ ಜಿಂದಾಲ್‌ಗೆ ಬೆದರಿಕೆ