ಬೆಂಗಳೂರು: ಮೊನ್ನೆ ಮೊನ್ನೆವರೆಗೆ ಕಂಡ ಕಂಡ ವಿಷಯಗಳ ಬಗ್ಗೆ ಮಾತನಾಡುತ್ತಿದ್ದ, ಬಿಜೆಪಿಯ ಹಿರಿಯ ನಾಯಕರನ್ನೂ (BJP Leaders) ಬಿಡದೆ ವಾಗ್ದಾಳಿ ನಡೆಸುತ್ತಿದ್ದ ಮೈಸೂರು ಸಂಸದ ಪ್ರತಾಪ್‌ಸಿಂಹ (MP Pratapsimha) ಅವರು ಈಗ ಮಾತನಾಡಿ ಎಂದರೂ ರಾಜಕೀಯದ ಬಗ್ಗೆ ಬಾಯಿಬಿಡುತ್ತಿಲ್ಲ. ಮಾತಿನಮಲ್ಲ ಮೌನಕ್ಕೆ ಶರಣಾದಂತೆ ಕಾಣುತ್ತಿದೆ! ಹೌದು ಮೈಸೂರಿನಲ್ಲಿ ಮಾತನಾಡಿದ ಅವರು ನೇರವಾಗಿಯೇ, ʻರಾಜಕೀಯ ವಿಚಾರವಾಗಿ ನಾನು ಮಾತನಾಡಲ್ಲʼ ಎಂದರು. ಹಾಗಂತ, ಮಾತನಾಡಬೇಡಿ ಎಂದು ಯಾರೂ ನನಗೆ ಸೂಚನೆ ನೀಡಿಲ್ಲ ಎಂದೂ ಸ್ಪಷ್ಟೀಕರಣ ನೀಡಿದರು.
ಪ್ರತಾಪ್‌ಸಿಂಹ ಅವರು ಸಿದ್ದರಾಮಯ್ಯ, ಎಂ.ಬಿ. ಪಾಟೀಲ್ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡಿದ್ದರು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರನ್ನೂ ಬಿಡದೆ ಕಾಡಿದ್ದರು. ಕೊನೆಗೆ ಅವರನ್ನು ಬೆಂಗಳೂರಿನ ಬಿಜೆಪಿ ಪ್ರಧಾನ ಕಚೇರಿಗೆ ಕರೆಸಿ ಹೀಗೆಲ್ಲ ಓಪನ್ ಆಗಿ ಮಾತನಾಡಬೇಡಿ ಎಂದು ಹೇಳಿಕಳುಹಿಸಲಾಗಿತ್ತು. ಅದಾದ ಬಳಿಕವೂ ಸಣ್ಣಗೆ ಅಲ್ಲೊಮ್ಮೆ ಇಲ್ಲೊಮ್ಮೆ ಮಾತನಾಡುತ್ತಿದ್ದ ಪ್ರತಾಪ್ ಸಿಂಹ ಅವರು ಈಗಂತೂ ರಾಜಕೀಯ ಮಾತನಾಡೋದೇ ಇಲ್ಲ ಎಂದುಬಿಟ್ಟಿದ್ದಾರೆ.
ಸೋಮವಾರ ಮೈಸೂರಿನಲ್ಲಿ ಮಾಧ್ಯಮಗಳ ಜತೆಗೆ ಬೇರೆ ವಿಷಯಗಳ ಬಗ್ಗೆ ಮಾತನಾಡಿದ ಅವರು, ಮಹಾಘಟ ಬಂಧನ್, ಜೆಡಿಎಸ್- ಬಿಜೆಪಿ ಮೈತ್ರಿ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದಾಗ ʻನೋ ಕಮೆಂಟ್ಸ್ʼʼ ಎಂದರು.
ʻʻನನ್ನನ್ನು ಏನೂ ಕೇಳಬೇಡಿ, ನನಗೆ ಏನೂ ಗೊತ್ತಿಲ್ಲʼʼ ಎಂದು ಜಾರಿಕೊಂಡ ಪ್ರತಾಪ್ ಸಿಂಹ ಅವರು, ನನ್ನದು ಅಭಿವೃದ್ಧಿ ರಾಜಕಾರಣ, ಅಭಿವೃದ್ಧಿ ಬಗ್ಗೆಯಷ್ಟೇ ತಲೆಕೆಡಿಸಿಕೊಂಡಿದ್ದೇನೆʼʼ ಎಂದರು.
ʻʻಲೋಕಸಭಾ ಚುನಾವಣೆಯಲ್ಲಿ ನನ್ನ ವಿರುದ್ಧ ಯಾರೂ ಸ್ಪರ್ಧೆ ಮಾಡುತ್ತಾರೋ ಅದೂ ಗೊತ್ತಿಲ್ಲʼʼ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ʻʻ ರಾಜಕೀಯ ವಿಚಾರವಾಗಿ ನಾನು ಮಾತನಾಡಲ್ಲ, ಮಾತನಾಡಬೇಡಿ ಎಂದು ಯಾರೂ ನನಗೆ ಸೂಚನೆ ನೀಡಿಲ್ಲʼʼ ಎಂದು ಸ್ಪಷ್ಟನೆ ನೀಡಿದರು.
ʻʻನಾನು ಕೆಲಸ ಮಾಡಿದ್ದೇನೆ, ಏನು ಕೆಲಸ ಮಾಡಿದ್ದೇನೆ ಎಂದು ನೋಡಿಕೊಳ್ಳಲು ಮೇಲೆ ಚಾಮುಂಡಿ ತಾಯಿ ಇದ್ದಾಳೆʼʼ ಎಂದು ದೇವರ ಮೇಲೆ ಭಾರ ಹಾಕಿದರು ಸಂಸದ ಪ್ರತಾಪ್‌ಸಿಂಹ.
ಮೈಸೂರು- ಕುಶಾಲನಗರ ರಸ್ತೆ 2024ರ ಡಿಸೆಂಬರ್ ಅಂತ್ಯಕ್ಕೆ ಪೂರ್ಣ
ಮೈಸೂರು: ಮೈಸೂರು- ಕುಶಾಲನಗರ ರಸ್ತೆ 2024ರ ಡಿಸೆಂಬರ್ ಅಂತ್ಯಕ್ಕೆ ಪೂರ್ಣವಾಗುತ್ತದೆ ಎಂಬ ವಾಗ್ದಾನ ನೀಡುತ್ತಿರುವುದಾಗಿ ಪ್ರಕಟಿಸಿದರು.
ʻʻಮೈಸೂರು- ಕುಶಾಲನಗರ ನಡುವೆ 93 ಕಿ.ಮೀ ಅಕ್ಸಸ್ ಕಂಟ್ರೋಲ್ಡ್ ಹೈವೇ ನಿರ್ಮಾಣ ಮಾಡಲು ಈಗಾಗಲೇ ಭೂಮಿಪೂಜೆ ಮಾಡಲಾಗಿದೆ. ಇದು 4,130 ಕೋಟಿ ರೂ. ಯೋಜನೆ. ನಾಲ್ಕು ಹಂತದ ಕಾಮಗಾರಿಯನ್ನು 3 ಜನ ಗುತ್ತಿಗೆದಾರರು ವಹಿಸಿಕೊಂದಿದ್ದಾರೆ. ಕಾಮಗಾರಿ ಆರಂಭಿಸಲು 6 ತಿಂಗಳು ಸಮಯವಕಾಶವಿದೆ. ಈ ಅವಧಿಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆ, ನೀರು, ವಿದ್ಯುತ್, ನಾಲೆ ಮುಂತಾದವುಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ಬಾಗಶಃ ಮುಗಿಸಿದ್ದೇವೆ. ಕಾಮಗಾರಿ ಪೂರ್ಣಗೊಳಿಸಲು 24 ತಿಂಗಳ ಕಾಲಾವಕಾಶ ಇರುತ್ತದೆ. ಆದರೆ ಅವಧಿಗೂ ಮುಂಚಿತವಾಗಿಯೇ ಕಾಮಗಾರಿ ಮುಗಿಸುತ್ತೇವೆʼʼ ಎಂದು ಹೇಳಿದರು ಪ್ರತಾಪ್ ಸಿಂಹ.
ಇದನ್ನೂ ಓದಿ : MP Pratapsimha: ಶಾಸಕ ಪ್ರದೀಪ್ ಈಶ್ವರ್‌ಗೆ ಓರಿಯೆಂಟೇಷನ್ ಅಗತ್ಯವಿದೆ ಎಂದ ಪ್ರತಾಪ್‌ಸಿಂಹ