Site icon Vistara News

MP Pratapsimha : ಮಗನ ಹೆಗಲ ಮೇಲೆ ಬಂದೂಕು ಇಟ್ಟು ಡಿಕೆಶಿಗೆ ಗುಂಡು ಹೊಡೆದ ಸಿದ್ದರಾಮಯ್ಯ!

Siddaramaiah Pratapsimha Yathindra

ಮೈಸೂರು: ಲೋಕಸಭಾ ಚುನಾವಣೆಯಲ್ಲಿ (Parliament Elections 2024) ಕಾಂಗ್ರೆಸ್‌ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದರೆ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿಯಾಗಲಿದ್ದಾರೆ (Siddaramaiah Full time Chief Minister) ಎಂಬ ಯತೀಂದ್ರ ಸಿದ್ದರಾಮಯ್ಯ (yatindra siddaramaiah) ಅವರ ಹೇಳಿಕೆ ಕಾಂಗ್ರೆಸ್‌ ಮಾತ್ರವಲ್ಲ, ಬಿಜೆಪಿ ವಲಯದಲ್ಲೂ ಭಾರಿ ಚರ್ಚೆಗೆ ಕಾರಣವಾಗಿದೆ. ಈ ವಿದ್ಯಮಾನಕ್ಕೆ ಪ್ರತಿಕ್ರಿಯೆ ನೀಡಿರುವ ಮೈಸೂರು ಸಂಸದ ಪ್ರತಾಪ್‌ಸಿಂಹ (MP Pratapsimha) ಅವರು, ʻʻಸಿದ್ದರಾಮಯ್ಯ ಅವರು ತಮ್ಮ ಮಗನ ಹೆಗಲ ಮೇಲೆ ಬಂದೂಕು ಇಟ್ಟು ಡಿ.ಕೆ.ಶಿವಕುಮಾರ್ ಎದೆಗೆ ಗುಂಡು ಹೊಡೆಯುತ್ತಿದ್ದಾರೆʼʼ ಎಂದು ಹೇಳಿದ್ದಾರೆ.

ಡಿ.ಕೆ. ಶಿವಕುಮಾರ್‌ ನೋಡಿದ್ರೆ ಅಯ್ಯೋಪಾಪ ಅನಿಸ್ತದೆ!

ʻʻಡಿ.ಕೆ.ಶಿವಕುಮಾರ್ ನೋಡಿದರೆ ಅಯ್ಯೋ ಪಾಪ ಅನ್ನಿಸುತ್ತದೆ. ಎಸ್.ಎಂ.ಕೃಷ್ಣ ಬಳಿಕ ಮತ್ತೊಮ್ಮೆ ಸಿಎಂ ಆಗುವ ಅವಕಾಶ ನಿಮ್ಮ ಮನೆ ಬಾಗಿಲಿಗೆ ಬಂದಿದೆ ಅಂತ ಹಳೇ ಮೈಸೂರು ಭಾಗದಲ್ಲಿ ಪ್ರಚಾರ ಮಾಡಿದ್ದರು. ಒಕ್ಕಲಿಗರ ಮನೆ ಮನೆಗೆ ಹೋಗಿ ವೋಟು ಕೇಳಿದ್ದರು. ಕೆಪಿಸಿಸಿ ಅಧ್ಯಕ್ಷರಾಗಿ ಚುನಾವಣೆ ನಾಯಕತ್ವ ವಹಿಸಿದ್ದರು‌. ಮಾತ್ರವಲ್ಲ, ಚುನಾವಣೆಗೆ ಬಂಡವಾಳವನ್ನೂ ಹಾಕಿದ್ದರು. ಈ ಕಾರಣಕ್ಕಾಗಿಯೇ ಎರಡೂವರೆ ವರ್ಷದ ಬಳಿಕ ಸಿಎಂ ಆಗುವ ಭರವಸೆ ಸಿಕ್ಕಿತ್ತು. ಆದರೆ ಸಿದ್ದರಾಮಯ್ಯ ಸಿಎಂ ಚೇರ್‌ಗೆ ಬಂದು ಕುಳಿತ ಮೇಲೆ ವರಸೆ ಬದಲಾಗಿದೆʼʼ ಎಂದು ಪ್ರತಾಪ್‌ಸಿಂಹ ಹೇಳಿದರು.

ವ್ಯವಸ್ಥಿತವಾಗಿ ತಾನೇ ಸಿಎಂ ಎಂದು ಹೇಳಿಸುತ್ತಿದ್ದಾರೆ!

ʻʻಮೊದಲು ಎಂ.ಬಿ‌.ಪಾಟೀಲ್ ಬಾಯಿಂದ ಐದು ವರ್ಷ ನಾನೇ ಸಿಎಂ ಅಂತ ಹೇಳಿಸಿದ್ದರು. ನಂತರ ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್, ಕೆ‌.ಎನ್.ರಾಜಣ್ಣ ಅವರಿಂದ ಹೇಳಿಕೆ ಕೊಡಿಸಿದ್ದಾರೆ. ಸ್ವತಃ ಸಿದ್ದರಾಮಯ್ಯ ಅವರೇ ನಾನೇ ಐದು ವರ್ಷ ಸಿಎಂ ಅಂತ ಹೇಳಿದ್ದರು. ಈಗ ಮಗನ ಮೂಲಕ ಹೇಳಿಸುತ್ತಿದ್ದಾರೆʼʼ ಎಂದು ಹೇಳಿದ ಪ್ರತಾಪ್‌ ಸಿಂಹ ಅವರು, ರಾಜಕೀಯವಾಗಿ ಇದು ದೊಡ್ಡ ಪರಿಣಾಮ ಬೀರಲಿದೆ ಎಂದು ಹೇಳಿದರು.

ಇದನ್ನೂ ಓದಿ : Congress Politics : ಲೋಕಸಭೆ ಗೆದ್ದರೆ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ; ಯತೀಂದ್ರ ಸ್ಫೋಟಕ ಹೇಳಿಕೆ

ಅವರಿಗೆ ಸ್ವಜಾತಿ, ಮುಸ್ಲಿಮರು ಮಾತ್ರ ಮುಖ್ಯ!

ʻʻಡಾ.ಯತೀಂದ್ರ ಅವರು ಹಾಸನದಲ್ಲಿ ನೀಡಿದ ಹೇಳಿಕೆ ಗಮನಿಸಿದ್ದೇನೆ. ನಮ್ಮ ಸಮುದಾಯದವರು, ಮುಸಲ್ಮಾನರು ಸಹಕಾರ ನೀಡಿದ್ದರಿಂದ ಸರ್ಕಾರ ಬಂತು ಅಂತ ಹೇಳಿದ್ದಾರೆ. ನಮಗೆ ಸ್ವಜಾತಿಯವರು, ಮುಸಲ್ಮಾನರು ಮಾತ್ರ ಮುಖ್ಯ ಅನ್ನುವ ಸಂದೇಶ ರವಾನಿಸಿದ್ದಾರೆ. ಚಾಮುಂಡೇಶ್ವರಿಯಲ್ಲಿ ಒಕ್ಕಲಿಗರು, ವರುಣದಲ್ಲಿ ಲಿಂಗಾಯತರು ಮತ ‌ನೀಡದೆ ಕಾಂಗ್ರೆಸ್ ಸರ್ಕಾರ ಬಂತಾ?ʼʼ ಎಂದು ಪ್ರತಾಪ್‌ ಸಿಂಹ ಪ್ರಶ್ನಿಸಿದ್ದಾರೆ.

ʻʻಕಾಂಗ್ರೆಸ್‌ನಿಂದ ಗೆದ್ದವರಲ್ಲಿ 39 ಲಿಂಗಾಯತರು, ಹತ್ತಾರು ಒಕ್ಕಲಿಗರು ಶಾಸಕರಾಗಿದ್ದಾರೆ. ಖರ್ಗೆ ಕಾರಣಕ್ಕೆ ದಲಿತರೂ ಮತ ಹಾಕಿದ್ದಾರೆ. ಇದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು. ರಾಜ್ಯದ ಎಲ್ಲ ಜಾತಿ, ಜನಾಂಗದವರೂ ನಿಮಗೆ ದೋಖಾ ಆಗಿದೆ ಅಂತ ಅರ್ಥ ಮಾಡಿಕೊಳ್ಳಿ’.” ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿದರು.

ಯತೀಂದ್ರ ಸಿದ್ದರಾಮಯ್ಯ ಹೇಳಿದ್ದೇನು?

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಅಣ್ಣೆಚಾಕನಹಳ್ಳಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಯತೀಂದ್ರ ಸಿದ್ದರಾಮಯ್ಯ ಅವರು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹೆಚ್ಚು ಸ್ಥಾನ ಗೆದ್ದರೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಯಾವುದೇ ಅಡೆತಡೆ ಇಲ್ಲದೆ ಮುಂದುವರೆಯಲು ಸಾಧ್ಯವಾಗುತ್ತದೆ ಎಂದಿದ್ದರು.

ʻʻಮುಂದೆ ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ಎದುರಿಸಬೇಕಾಗಿದೆ. ಹೆಚ್ಚು ಸ್ಥಾನಗಳನ್ನು ಗೆದ್ದರೆ ನೈತಿಕವಾಗಿ ಅವರಿಗೆ ಮತ್ತಷ್ಟು ಬೆಂಬಲ ಸಿಗುತ್ತದೆ. ಗ್ಯಾರಂಟಿ ಯೋಜನೆಗೆ ವರ್ಷಕ್ಕೆ 56 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ. ಈ ಹಿಂದೆ ಸಾಮಾಜಿಕ ಕಾರ್ಯಕ್ರಮಕ್ಕಾಗಿ ರಾಜ್ಯದಲ್ಲಿ ಯಾವ ಸರ್ಕಾರವೂ ಇಷ್ಟು ಹಣ ಖರ್ಚು ಮಾಡಿಲ್ಲ. ಇಷ್ಟೊಂದು ಹಣ ಖರ್ಚು ಮಾಡುತ್ತಿರುವಾಗ ಜನರ ಬೆಂಬಲ ಬೇಕು. ಹೆಚ್ಚು ಸ್ಥಾನ ಗೆದ್ದರೆ ನಮಗೆ ಬಲ ಬರುತ್ತೆ. ಇದನ್ನು ಲೋಕಸಭಾ ಚುನಾವಣೆಯಲ್ಲಿ ತೋರಿಸಬೇಕು. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆದ್ದರೆ ಐದು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ ಎಂದ ಸಿಎಂ ಪುತ್ರ ಹೇಳಿದ್ದರು.

Exit mobile version