Site icon Vistara News

ಚರ್ಚೆಗೆ ಬರಲು ಸಿದ್ದರಾಮಯ್ಯ ಬಾಯಿ ಬಿದ್ದು ಹೋಗಿದೆಯಾ?: ಪ್ರತಾಪ್ ಸಿಂಹ ಕಿಡಿ

Pratap Simha ಮಂಗಳೂರು ಸ್ಫೋಟ narasimharaja constituency combing operation

ಮೈಸೂರು: ಮೈಸೂರು ಅಭಿವೃದ್ಧಿ ವಿಚಾರದ ಬಗ್ಗೆ ಕಾಂಗ್ರೆಸ್ ಬಹಿರಂಗ ಚರ್ಚೆಗೆ ಬರಲಿ, ಸಿದ್ದರಾಮಯ್ಯ ಮತ್ತು ಡಾ.ಎಚ್.ಸಿ.ಮಹದೇವಪ್ಪ ಯಾವುದೇ ಸಂದರ್ಭದಲ್ಲಿ ಕರೆದರೂ ನಾನು ಚರ್ಚೆಗೆ ಸಿದ್ಧ. ಅವರು ದಂಡು ದಾಳಿ ಸಮೇತ ಬರಲಿ. ನಾನು ಒಬ್ಬನೇ ಬರುತ್ತೇನೆ. 48 ಗಂಟೆ ಮುಂಚಿತವಾಗಿ ನನಗೆ ಸ್ಥಳ ಸಮಯ ತಿಳಿಸಿದರೆ ಸಾಕು. ನಿಮ್ಮ ಪಂಥಾಹ್ವಾನವನ್ನು ಸ್ವೀಕರಿಸಿದ್ದೇನೆ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.

ಮೈಸೂರು ಅಭಿವೃದ್ಧಿ ವಿಚಾರ ಬಹಿರಂಗ ಚರ್ಚೆಗೆ ಬಿಜೆಪಿ ನಾಯಕರು ಬರಲಿ ಎಂಬ ಕಾಂಗ್ರೆಸ್‌ ನಾಯಕರ ಹೇಳಿಕೆಗೆ ಸುದ್ದಿಗೋಷ್ಠಿಯಲ್ಲಿ ಬುಧವಾರ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರೇ ನೀವು ಚರ್ಚೆಗೆ ಬರುವುದು ಬಿಟ್ಟು ಗ್ರಾಮ ಪಂಚಾಯಿತಿಯನ್ನೂ ಗೆಲ್ಲದ ವಕ್ತಾರರನ್ನು ಕಳುಹಿಸುತ್ತೇನೆಂದರೆ ಹೇಗೆ? ವೀರ, ಶೂರರು ಆನೆ ಕುದುರೆ ಏರಿ ಯುದ್ಧಕ್ಕೆ ಬರುತ್ತಾರೆ. ನೀವೇನು ಹಂದಿ, ಕತ್ತೆ ಏರಿ ಯುದ್ಧಕ್ಕೆ ಬರುತ್ತೀನಿ ಎನ್ನುತ್ತೀರಾ? ನನ್ನ ಜತೆ ಚರ್ಚೆ ಮಾಡಲು ನಿಮಗೆ ಬಾಯಿ ಬಿದ್ದು ಹೋಗಿದೆಯಾ? ಎಂದು ಕುಟುಕಿದರು.

ಖಾಲಿ‌ ಕುಳಿತಿರುವ ಮಹದೇವಪ್ಪ ಫೇಸ್‌ಬುಕ್‌ನಲ್ಲಿ ಉದ್ದುದ್ದ ಪೋಸ್ಟ್ ಹಾಕುತ್ತಾರೆ. ನನ್ನ ಜತೆ ಚರ್ಚೆಗೆ ಬರಲು ಏನು ಕಷ್ಟ? ಜಯ, ವಿಜಯನ ಥರ ನೀವು ಮೈಸೂರು ಭಾಗದಲ್ಲಿದ್ದೀರಾ. ನನ್ನ ಜತೆ ಚೆರ್ಚೆ ಮಾಡಲು ನಿಮಗೆ ಅಹಂ ಅಡ್ಡ ಬರುತ್ತಿದೆಯೇ ಅಥವಾ ಭಯವೇ ಎಂದು ಪ್ರಶ್ನಿಸಿದರು. ಮೈಸೂರಿಗೆ ಬಾಡೂಟಕ್ಕೆ, ಬೀಗರ ಊಟಕ್ಕೆ ವಾರಕ್ಕೆ ಎರಡು ಬಾರಿ ಸಿದ್ದರಾಮಯ್ಯ ಬರುತ್ತಾರೆ. ಅದೇ ಸಮಯದಲ್ಲಿ ಅರ್ಧ ಗಂಟೆ ಬಿಡುವು ಮಾಡಿಕೊಂಡು ಬನ್ನಿ. ನೀವು ಮಾಡಿರುವ ಅಭಿವೃದ್ಧಿ ಕಾರ್ಯವನ್ನು ಹೇಳಿಕೊಳ್ಳುವುದಕ್ಕೆ ಭಯ ಏಕೆ? ಪಾಯಿಂಟ್‌ ಟು ಪಾಯಿಂಟ್ ಚರ್ಚೆ ಮಾಡುತ್ತೇನೆ. ನೀವು ವಕ್ತಾರರನ್ನು ಚರ್ಚೆಗೆ ಕಳುಹಿಸುವುದಾದರೆ ನಾನು ನಮ್ಮ ಪಕ್ಷದ ತಾಲೂಕು ವಕ್ತಾರರನ್ನೇ ಕಳುಹಿಸುತ್ತೇನೆ ಎಂದರು.

ಜಂಭದ ಕೋಳಿ ಥರಾ ಓಡಾಡುತ್ತಿದ್ದರು, ಅದಕ್ಕೇ ಟೀಕಿಸಿದೆ
ವಕೀಲರಿಗೆ ಪ್ರತಾಪ್ ಸಿಂಹ ಅವಮಾನ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ನಾನು ಸಿದ್ದರಾಮಯ್ಯ ಅವರನ್ನು ವೈಯಕ್ತಿಕವಾಗಿ ಟೀಕಿಸಿದ್ದೇನೆ. ನೀವು ಆರ್ಥಿಕ ತಜ್ಞರಲ್ಲ, ನೀವು ಬರಿ ಎಲ್ಎಲ್‌ಬಿ ಕಾನೂನು ಪ್ರಾಕ್ಟಿಸ್ ಮಾಡಿರುವ ವ್ಯಕ್ತಿ ಎಂದು ಹೇಳಿದ್ದೇನೆ. ಇದರಲ್ಲಿ ವಕೀಲರ ಸಮೂಹಕ್ಕೆ ಅವಮಾನ ಮಾಡುವ ಪ್ರಶ್ನೆ ಎಲ್ಲಿಂದ ಬರುತ್ತೆ? ನನ್ನನ್ನು ಆರ್ಥಿಕ ತಜ್ಞ ಅಲ್ಲ, ಕೇವಲ ಅಂಕಣಕಾರ ಎಂದರೆ ಅದು ಪತ್ರಕರ್ತರಿಗೆ ಮಾಡಿದ ಅವಮಾನವೇ? ಸಿದ್ದರಾಮಯ್ಯ ಬಜೆಟ್ ಮಂಡಿಸಿ ಜಂಭದ ಕೋಳಿ ಥರಾ ಓಡಾಡುತ್ತಿದ್ದರು. ಹಾಗಾಗಿ ಅವರಿಗೆ ಆರ್ಥಿಕತೆಯ ಸಂಪೂರ್ಣ ಜ್ಞಾನ ಇಲ್ಲ ಎಂದು ಹೇಳಿದ್ದೇನೆ ಎಂದರು.

ಬಜೆಟ್ ಮಂಡಿಸಿದ ಸಿಎಂಗಳೆಲ್ಲ ನಾನು ಆರ್ಥಿಕ ತಜ್ಞರೆಂದು ಹೇಳಿಕೊಂಡಿಲ್ಲ. ಕಳೆದ ಹತ್ತು ವರ್ಷಗಳಿಂದ ಬಜೆಟ್ ಸಿದ್ಧ ಮಾಡುತ್ತಿರುವವರು ಹಿರಿಯ ಐಎಎಸ್ ಅಧಿಕಾರಿ ಎ.ಎನ್.ಎಸ್ ಪ್ರಸಾದ್. ಅವರು ಬರೆದು ಕೊಟ್ಟಿದ್ದನ್ನು ಮುಖ್ಯಮಂತ್ರಿಗಳು ಓದುತ್ತಾರೆ. ಇದನ್ನೇ ಸಿದ್ದರಾಮಯ್ಯ ಅವರು ನಾನು ಆರ್ಥಿಕ ತಜ್ಞ ಎಂಬ ರೀತಿ ಹೇಳಿಕೊಳ್ಳುತ್ತಾರೆ‌. ಇದನ್ನೇ ನಾನು ಪ್ರಶ್ನೆ ಮಾಡಿದ್ದೇನೆ, ಇದರಲ್ಲಿ ತಪ್ಪೇನಿದೆ. ಕಾಂಗ್ರೆಸ್ ನವರು ಆರ್‌ಎಸ್‌ಎಸ್ ಚಡ್ಡಿ ಸುಟ್ಟರು.‌ ಈಗ ನನ್ನ ಪೋಸ್ಟರ್ ಸುಡುತ್ತಿದ್ದಾರೆ ಸುಡಲಿ ಬಿಡಿ ನನ್ನನ್ನು ರಾಜಕೀಯವಾಗಿ ಎದುರಿಸಲಾಗದೆ ಈ ರೀತಿ ವಿಚಾರ ತಿಳಿದು ವಿವಾದ ಮಾಡುತ್ತಾರೆ, ಮಾಡಲಿ ಎಂದು ಛೇಡಿಸಿದರು.

ಕಾಂಗ್ರೆಸ್‌ ನಾಯಕರು ತನಿಖೆ ಎದುರಿಸಲಿ
ರಾಹುಲ್ ಗಾಂಧಿ ಇಡಿ ವಿಚಾರಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಮಾತನಾಡಿದ ಅವರು, ಈ ದೇಶದ ಕಾನೂನು ಎಲ್ಲರಿಗೂ ಒಂದೇ. ಇ.ಡಿ ತನಿಖೆಯನ್ನು ಕಾಂಗ್ರೆಸ್ ನಾಯಕರು ಎದುರಿಸಲಿ. ಹಿಂದೆ ಮೋದಿ ಸಿಎಂ ಆಗಿದ್ದಾಗಲೂ ವಿಚಾರಣೆ ಎದುರಿಸಿದ್ದರು. ಅಮಿತ್ ಶಾ ಅವರನ್ನು ಕಾಂಗ್ರೆಸ್ ಜೈಲಿಗೆ ಕಳುಹಿಸಿತ್ತು. ಅದನ್ನೆಲ್ಲ ಅವರು ಎದುರಿಸಿ ನ್ಯಾಯಾಲಯದಲ್ಲಿ ಗೆದ್ದು ಬಂದರು. ಇವರು ತಪ್ಪು ಮಾಡಿಲ್ಲ ಎನ್ನುವುದಾದರೆ ಅದನ್ನು ತನಿಖೆಯಲ್ಲಿ ಹೇಳಲಿ. ಈ ನೆಲದ ಕಾನೂನಿಗೆ ಯಾರೂ ದೊಡ್ಡವರಲ್ಲ ಯಾರೂ ಚಿಕ್ಕವರು ಅಲ್ಲ ಸಂಸದ ಪ್ರತಾಪ ಹೇಳಿದರು.

ಯೋಗ ದಿನಾಚರಣೆ ಗಣ್ಯರ ಪಟ್ಟಿ ಸಿದ್ಧವಾಗುತ್ತಿದೆ
ಯೋಗ ವೇದಿಕೆಗೆ ಆಹ್ವಾನ ಇಲ್ಲ ಎಂಬ ಅಭಿಯಾನ‌ ವಿಚಾರ ಸ್ಪಷ್ಟನೆ ನೀಡಿದ ಸಂಸದ ಪ್ರತಾಪ ಸಿಂಹ,
ನಾನು ಹೇಳಿರುವುದು ಕೇವಲ ಜನಪ್ರತಿನಿಧಿಗಳ ಪಟ್ಟಿ ಮಾತ್ರ‌. ಗಣ್ಯರ ಪಟ್ಟಿ ಇನ್ನೂ ಸಿದ್ಧವಾಗುತ್ತಿದೆ. ಅದಕ್ಕೆ ಮೊದಲು ಸುಳ್ಳು ಹಬ್ಬಿಸಬೇಡಿ. ಮೈಸೂರಿನ ರಾಜವಂಶಸ್ಥರ ಬಗ್ಗೆ ಎಲ್ಲರಗಿಂತ ಅತಿಯಾದ ಗೌರವ ನಮಗೆ ಇದೆ. ಮಾಜಿ ಸಿಎಂ‌ ಸಿದ್ದರಾಮಯ್ಯ ಮೈಸೂರು ಮಹಾರಾಜರ ಹಗುರವಾಗಿ ಮಾತನಾಡಿದಾಗ ಅದರ ವಿರುದ್ಧ ಮೊದಲು ಧ್ವನಿ ಎತ್ತಿದವನು ಈ ಪ್ರತಾಪ್ ಸಿಂಹ. ಸಿದ್ದರಾಮಯ್ಯ ಮಾತನ್ನು ವಿರೋಧಿಸಲು ಬಹುತೇಕರಿಗೆ ಹೆದರಿಕೆ. ಆದರೆ ನಾನು ಅವರಿಗೆ ಉತ್ತರ ಕೊಟ್ಟಿದ್ದೇನೆ. ಹಿಂದೆ ಸಿದ್ದರಾಮಯ್ಯ ಅವರು ಮಹಾರಾಜರ ಕುಟುಂಬಕ್ಕೆ ಆನೇಕ ಕಾಟ ಕೊಟ್ಟು ಅನ್ಯಾಯ ಮಾಡಿದರು. ಅವತ್ತು ಮೈಸೂರಿನಲ್ಲಿದ್ದ ಯಾವ ಜನಪ್ರತಿನಿದಧಿಯೂ ಯಾರೊಬ್ಬರೂ ಧ್ವನಿ ಎತ್ತಲಿಲ್ಲ. ಆದರೆ ಬಿಜೆಪಿ ಇಂಥದನ್ನೆಲ್ಲ ಸಹಿಸದೆ ಮಹಾರಾಜರ ಪರವಾಗಿ ಎಲ್ಲ ಸಂದರ್ಭದಲ್ಲೂ ಧ್ವನಿ ಎತ್ತುತ್ತಿದೆ. ಮೈಸೂರು ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಕ್ಕೆ ಮಹಾರಾಜರ ಹೆಸರು ಇಡುತ್ತಿದ್ದೇವೆ. ಇದು ಮಹಾರಾಜರಿಗೆ ನಾವು ಕೊಡುವ ಗೌರವ. ಯಾವುದೋ ಒಂದು ಪೋಸ್ಟ್ ಹಾಕಿ ನಮಗೆ ಮಹಾರಾಜರ ಬಗ್ಗೆ ತಿಳಿ ಹೇಳಬೇಡಿ ಎಂದು ಟೀಕಿಸಿದರು.

ನಾನು ಆರ್ಥಿಕ ತಜ್ಞ ಎಂದು ಹೇಳಿಕೊಂಡಿಲ್ಲ : ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರಿನ ಅಭಿವೃದ್ಧಿ ಬಹಿರಂಗ ಚರ್ಚೆ ಸವಾಲಿನ ಬಗ್ಗೆ ತೀರ್ಥಹಳ್ಳಿಯಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಪ್ರತಾಪ ಸಿಂಹಗೆ ಚಾಲೆಂಜ್‌ ಹಾಕಿರುವುದು ನಾನಲ್ಲ, ನಮ್ಮ ಪಕ್ಷದ ವಕ್ತಾರರಾದ ಲಕ್ಷ್ಮಣ್‌. ಅವರು ಬಿ.ಇ ಓದಿದ್ದಾರೆ, ಈ ಪ್ರತಾಪ ಸಿಂಹ ಏನು ಓದಿದ್ದಾರೆ?. ಇವರು ಅಂಬೇಡ್ಕರ್‌ ಓದಿದ್ದಾರಾ?, ಮೊದಲು ಲಕ್ಷ್ಮಣ್‌ ಜತೆ ಚರ್ಚೆ ಮಾಡಲಿ, ಆಮೇಲೆ ನೋಡೋಣ ಎಂದರು. ನಾನು ಆರ್ಥಿಕ ತಜ್ಞ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಮನಮೋಹನ್‌ ಸಿಂಗ್‌ ಅವರ ರೀತಿ ಅರ್ಥಶಾಸ್ತ್ರಜ್ಞ ಎಂದು ಎಲ್ಲಿಯಾದರೂ ಹೇಳಿದ್ದೀನಾ?. ನಾನು ಕಾನೂನು ಪದವೀಧರ, ಆದರೂ 13 ಬಜೆಟ್‌ಗಳನ್ನು ಮಂಡನೆ ಮಾಡಿದ್ದೇನೆ. ಪ್ರತಾಪ ಸಿಂಹ ಎಷ್ಟು ಬಜೆಟ್‌ ಮಂಡಿಸಿದ್ದಾರೆ? ಇಷ್ಟಕ್ಕೂ ಬರೆದು ಕೊಟ್ಟ ಬಜೆಟ್‌ ನಾನು ಓದಿದ್ದೇನೆ ಎಂದಾದರೆ, ಯಡಿಯೂರಪ್ಪ ಹಾಗೂ ನರೇಂದ್ರ ಮೋದಿ ಅದೇ ಮಾಡಿರೋದಾ? ನಿರ್ಮಲಾ ಸೀತಾರಾಮನ್‌ ಅವರು ಏನು ಅಧಿಕಾರಿಗಳು ಬರೆದುಕೊಟ್ಟಿದ್ದು ಓದಿದ್ದಾ, ಬಸವರಾಜ್‌ ಬೊಮ್ಮಾಯಿ ಹಾಗೂ ಅರುಣ್‌ ಜೇಟ್ಲಿ ಕೂಡ ಅದನ್ನೇ ಮಾಡಿದ್ದಾ? ಎಂದರು. ಮೋದಿ ಏನು ಓದಿದ್ದಾರೆ? ಪ್ರತಾಪ್‌ ಸಿಂಹ ಲೋಕಸಭಾ ಸದಸ್ಯ ಆದಕೂಡಲೇ ಸರ್ವಜ್ಞನಾ? ಎಂದು ಪ್ರಶ್ನಿಸಿದರು.

ಇದನ್ನು ಓದಿ | ಕಿಮ್ಮನೆ ಪಾದಯಾತ್ರೆಗೆ ಕಿಮ್ಮತ್ತು ನೀಡದ ಡಿಕೆಶಿ: ಸಿದ್ದರಾಮಯ್ಯ ಹಾಜರ್‌

Exit mobile version