Site icon Vistara News

BJP Politics: ಕೆಲಸಕ್ಕೆ ಬಾರದ ಪ್ರಣಾಳಿಕೆ ಸೇರಿ ಬಿಜೆಪಿ ಸೋಲಿಗೆ 8 ಕಾರಣ ನೀಡಿದ ರೇಣುಕಾಚಾರ್ಯ!

MP Renukacharya

#image_title

ದಾವಣಗೆರೆ: ಕಳೆದ ವಿಧಾನಸಭಾ ಚುನಾವಣೆಯಲ್ಲಿನ (Karnataka Assembly Election 2023) ಬಿಜೆಪಿ ಸೋಲಿನ ಆತ್ಮಾವಲೋಕನ (BJP Politics) ಬೀದಿ ಬೀದಿಗಳಲ್ಲಿ ನಡೆಯುತ್ತಿದೆ. ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಗಳಲ್ಲಂತೂ ಭಾರಿ ವಾಗ್ವಾದಗಳೇ ನಡೆಯುತ್ತಿವೆ. ಇದರ ನಡುವೆ ಎಲ್ಲ ನಾಯಕರು ಸೋಲಿನ ಕಾರಣಗಳನ್ನು ನೇರವಾಗಿಯೇ ಹೇಳುತ್ತಿದ್ದಾರೆ. ಈಗ ಆ ಸರದಿ ಹೊನ್ನಾಳಿಯ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ (MP Renukacharya) ಅವರದ್ದು.

ಮಂಗಳವಾರ ಹೊನ್ನಾಳಿಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರದ ತಪ್ಪು ನಿರ್ಧಾರಗಳು, ಕೆಲಸಕ್ಕೆ ಬಾರದ ಪ್ರಣಾಳಿಕೆ, ಪ್ರಮುಖ ನಾಯಕರಿಗೆ ಟಿಕೆಟ್‌ ನೀಡದೆ ಇದ್ದದ್ದು ಸೋಲಿಗೆ ಕಾರಣ ಎಂದು ಪಟ್ಟಿ ಮಾಡಿದರು.

ಅವರು ಪಟ್ಟಿ ಮಾಡಿದ ಪ್ರಮುಖ ಅಂಶಗಳು ಇಲ್ಲಿವೆ.

  1. ಬಿಜೆಪಿ ಚುನಾವಣೆಯಲ್ಲಿ ಸೋಲಲು ಸರ್ಕಾರದ ತಪ್ಪು ನಿರ್ಧಾರಗಳೇ ಕಾರಣ. ತಪ್ಪು ನಿರ್ಧಾರಗಳಿಂದಲೇ ನಾವು ಸೋತಿದ್ದು. ಒಳ ಮೀಸಲಾತಿ ಗೆ ಕೈ ಹಾಕಬೇಡಿ ಎಂದು ಹೇಳಿದರೂ ಕೈ ಹಾಕಿದರು‌. ಮೀಸಲಾತಿಯ ಗೊಂದಲದ ನಿರ್ಣಾಯಗಳೇ ಸೋಲಿಗೆ ಕಾರಣವಾಗಿದೆ.
  2. ಬಡ ಜನರ ತಿನ್ನುವ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡಿದರು‌. ಹತ್ತು ಕೆಜಿ ಅಕ್ಕಿ ನೀಡುವುದು ಬಿಟ್ಟು ಕಡಿತ ಮಾಡಿದ್ದು ನಮಗೆ ಹಿನ್ನಡೆಯಾಯಿತು.
  3. ಎನ್ ಪಿ ಎಸ್ ನೌಕರರ ಮನವಿಯನ್ನು ಸ್ವೀಕಾರ ಮಾಡಿ ಎಂದು ಹೇಳಿದರೂ ಮಾಡಲಿಲ್ಲ.
  4. ಬಿ.ಎಸ್‌. ಯಡಿಯೂರಪ್ಪನವರನ್ನು ಸಿಎಂ‌ ಸ್ಥಾನದಿಂದ ಕೆಳಗೆ ಇಳಿಸಬಾರದಿತ್ತು.
  5. ಜಗದೀಶ್‌ ಶೆಟ್ಟರ್‌, ಕೆ.ಎಸ್‌. ಈಶ್ವರಪ್ಪ ಅವರಂಥ ಹಿರಿಯ ನಾಯಕರಿಗೆ ಟಿಕೆಟ್‌ ನಿರಾಕರಿಸಿದ್ದರಿಂದ ಬೇರೆಯೇ ಸಂದೇಶ ರವಾನೆಯಾಗಿದೆ.
  6. ಪ್ರಣಾಳಿಕೆ ಸಮಿತಿಗೆ ಡಾ, ಸುಧಾಕರ್‌ ಅವರನ್ನು ತಂದು ಕೂರಿಸಿದ್ದೇ ತಪ್ಪು. ಕೆಲಸಕ್ಕೆ ಬಾರದ ಪ್ರಣಾಳಿಕೆ ಮಾಡಿದ್ದಾರೆ.
  7. ಹಿರಿಯ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ರನ್ನು ಜೈಲಿಗೆ ಕಳುಹಿಸಿದರು. ಅವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ಗೆ ಟಿಕೆಟ್ ಕೊಡಬೇಕಿತ್ತು, ಅಲ್ಲಿ ಕೂಡ ತಪ್ಪು ಮಾಡಿದರು.
  8. ರಾಜ್ಯದ ಅಧ್ಯಕ್ಷರು ಗೊಂದಲದ ಹೇಳಿಕೆ ನೀಡುತ್ತಾ ಬಂದಿದ್ದಾರೆ‌. ಒಮ್ಮೆ ರಾಜೀನಾಮೆ ನೀಡಿದ್ದೇನೆ ಎನ್ನುತ್ತಾರೆ, ಇನ್ನೊಮ್ಮೆ ಕೊಟ್ಟಿಲ್ಲ ಅಂತ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ.

ನಾನು ಕೂಡಾ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ

ಬಿಜೆಪಿ ಸೋಲಿನಿಂದ ರೇಣುಕಾಚಾರ್ಯಗೆ ಒಬ್ಬನಿಗೇ ಅಲ್ಲ ರಾಜ್ಯದ ಎಲ್ಲ ಕಾರ್ಯಕರ್ತರಿಗೆ ನೋವಾಗಿದೆ ಎಂದು ಹೇಳಿದರು ರೇಣುಕಾಚಾರ್ಯ. ಪಕ್ಷವನ್ನು ಮರಳಿ ಗೆಲುವಿನ ಹಳಿಗೆ ತರಲು ಒಳ್ಳೆಯ ರಾಜ್ಯಾಧ್ಯಕ್ಷರ ಆಯ್ಕೆ ಆಗಬೇಕಾಗಿದೆ. ನಾನೂ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ಸಮರ್ಥನಿದ್ದೇನೆ. ಶಾಸಕನಾಗಿ, ಸಚಿವನಾಗಿ ಅನುಭವ ಇದೆ ಎಂದು ರೇಣುಕಾಚಾರ್ಯ ಹೇಳಿದರು. ಆದರೆ, ಈ ಹುದ್ದೆಯನ್ನೇ ಕೊಡಿ ಎಂದು ಒತ್ತಡ ಹಾಕುವುದಿಲ್ಲ ಎಂದ ರೇಣುಕಾಚಾರ್ಯ ವಿ. ಸೋಮಣ್ಣ ಅವರು ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಬೇಡಿಕೆ ಇಟ್ಟದ್ದರ ಬಗ್ಗೆ ಮಾಹಿತಿ ಇಲ್ಲ ಎಂದರು.

ಲೋಕಸಭಾ ಚುನಾವಣೆಗೂ ರೇಣುಕಾ ಆಸಕ್ತಿ

ʻʻಜಿಲ್ಲೆಯ ಎಲ್ಲ ಕಡೆ ನನಗೆ ಎಂಪಿ ಚುನಾವಣೆಗೆ ಸ್ಪರ್ಧೆ ಮಾಡಿ ಎಂದು ಒತ್ತಡ ಹಾಕುತ್ತಿದ್ದಾರೆ. ಒತ್ತಡ ಹೆಚ್ಚಾದ ಕಾರಣ ನಾನು ಕೂಡ ಪ್ರಬಲ ಅಕಾಂಕ್ಷಿಯಾಗಿದ್ದೇನೆ ಎಂದು ರೇಣುಕಾಚಾರ್ಯ ಅವರು ತಮ್ಮ ಎರಡನೇ ಆಸೆ ವ್ಯಕ್ತಪಡಿಸಿದರು.

ʻʻಯಡಿಯೂರಪ್ಪನವರು ಹಾಲಿ ಸಂಸದರಾಗಿರುವ ಜಿಎಂ ಸಿದ್ದೇಶ್ವರ್ ಅವರೇ ದಾವಣಗೆರೆಯ ಎಂಪಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ನಾನು ಕೂಡ ಎಂಪಿ ಚುನಾವಣೆಯ ಪ್ರಬಲ ಆಕಾಂಕ್ಷಿ ಎಂದು ತಿಳಿಸುತ್ತೇನೆʼʼ ಎಂದು ಎಂಪಿ ರೇಣುಕಾಚಾರ್ಯ ಹೇಳಿದರು.

ಟಿಕೆಟ್‌ ವಿಚಾರದಲ್ಲಿ ಆರೆಸ್ಸೆಸ್‌ ಒತ್ತಡವಿರಲಿಲ್ಲ

ʻʻಟಿಕೆಟ್ ಹಂಚಿಕೆ ವಿಚಾರದಲ್ಲಿ ಆರ್ ಎಸ್ ಎಸ್ ಹಸ್ತಕ್ಷೇಪ ಮಾಡಿಲ್ಲ. ಯಾರು ರಾಷ್ಟ್ರ ಭಕ್ತರಿರುತ್ತಾರೋ ಅವರಿಗೆ ಸಲಹೆ ಸೂಚನೆ ನೀಡಿದ್ದಾರೆ ಅಷ್ಟೇʼʼ ಎಂದು ಎಂಪಿ ರೇಣುಕಾಚಾರ್ಯ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಬೇರೆ ಪಕ್ಷದವರಿಂದ ಪಕ್ಷಕ್ಕೆ ಅಶಿಸ್ತು ಬಂದಿದೆ ಎಂದು ಈಶ್ವರಪ್ಪ ಹೇಳಿಕೆಗೆ ಉತ್ತರ ನೀಡದೆ ಮೌನ ವಹಿಸಿದರು ರೇಣುಕಾಚಾರ್ಯ.

ಆಟೋ ಚಾಲಕರಿಗೆ, ಖಾಸಗಿ ಬಸ್‌ನವರಿಗೆ ವ್ಯವಸ್ಥೆ ಮಾಡಿ

ʻʻರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ತಿಂಗಳು 10 ದಿನ ಅಗಿದೆ. ಡಿಕೆ ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ರಾಜ್ಯದಲ್ಲಿ ಭರವಸೆಗಳ ಗ್ಯಾರಂಟಿ ನೀಡಿದ್ದರು. ಅದನ್ನು ಭರಿಸಲು ಹೆಣಗಾಡುತ್ತಿದ್ದಾರೆ. ವಿದ್ಯುತ್‌ ಬಿಲ್‌ ಬರಲ್ಲ ಅಂದವರು ಈಗ ದುಪ್ಪಟ್ಟು ಬಿಲ್‌ ಹಾಕಿದ್ದಾರೆ. ಕೆಇಆರ್‌ಸಿ ವಿದ್ಯುತ್‌ ದರ ಏರಿಕೆ ಪ್ರಸ್ತಾವನೆ ತಂದಾಗ ಬಿಜೆಪಿ ಸರ್ಕಾರ ಅದನ್ನು ತಿರಸ್ಕರಿಸಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಸಹಿ ಮಾಡಿ ಜಾರಿ ತಂದಿದೆ. ಇದನ್ನು ತಿರಸ್ಕರಿಸುವ ಅಧಿಕಾರ ಮುಖ್ಯಮಂತ್ರಿಗೆ ಇರುತ್ತದೆ. ಆದರೆ, ಅವರು ಹಿಂಪಡೆಯಲಿಲ್ಲ ಎಂದು ರೇಣುಕಾಚಾರ್ಯ ಹೇಳಿದರು.

ಉಚಿತ ಬಸ್‌ ಪ್ರಯಾಣದಿಂದಾಗಿ ಆಟೋ ಚಾಲಕರು ಮತ್ತು ಖಾಸಗಿ ಬಸ್‌ಗಳಿಗೆ ಸಮಸ್ಯೆಯಾಗಿದೆ. ಹೀಗಾಗಿ ಅವರಿಗೆ ಏನಾದರೂ ಬೇರೆ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು ರೇಣುಕಾಚಾರ್ಯ.

Exit mobile version