ಮಂಡ್ಯ: ಸಂಸದೆ ಸುಮಲತಾ ಅವರ ಮೇಲೆ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದ್ದಾರೆ. ಸಂಸದೆ ಸುಮಲತಾ ಒಬ್ಬರು ಅಪ್ರಬುದ್ಧ ರಾಜಕಾರಣಿ, ಅನಿರೀಕ್ಷಿತವಾಗಿ ಬಂದಂತಹ ಕೂಸು ಎಂದಿದ್ದಾರೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದ ಹೋಬಳಿ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಕೂಡ ಜೆಡಿಎಸ್ ಶಾಸಕರು ರಮ್ಯಾ ಅವರ ಮೇಲೆ ಇದೇ ರೀತಿಯ ವಾಗ್ದಾಳಿ ನಡೆಸಿದ್ದುದನ್ನು ನೆನಪಿಸಿಕೊಳ್ಳಬಹುದು. ಅಂದು ಚುನಾವಣೆಗೆ ಸ್ಪರ್ಧಿಸಿದ್ದ ರಮ್ಯಾರನ್ನು ಪ್ರಣಾಳ ಶಿಶು ಎಂದು ಮಂಡ್ಯ ಶಾಸಕ ಎಂ. ಶ್ರೀನಿವಾಸ್ ಜರೆದಿದ್ದರು. ಇದೀಗ ಸಂಸದೆ ಸುಮಲತಾ ವಿರುದ್ಧ ಈ ಕೆಲಸವನ್ನು ರವೀಂದ್ರ ಶ್ರೀಕಂಠಯ್ಯ ಮಾಡಿದ್ದಾರೆ.
ಮಂಡ್ಯದಲ್ಲಿ ಇತ್ತೀಚೆಗೆ ಪ್ರೆಸ್‌ಮೀಟ್ ನಡೆಸಿದ ಸಂದರ್ಭ ಜೆಡಿಎಸ್ ಭದ್ರಕೋಟೆ ಬಗೆಗೆ ಸಂಸದೆ ಸುಮಲತಾ ಅಂಬರೀಶ್ ಮಾತನಾಡಿದ್ದರು. ಇತ್ತೀಚೆಗೆ ಮದ್ದೂರಿನಲ್ಲೂ ಜೆಡಿಎಸ್ ಭದ್ರಕೋಟೆ ಛಿದ್ರವಾಗಿದೆ. ಕೋಟೆ ಒಡೆದುಹಾಕುವುದೊಂದೇ ಬಾಕಿ ಎಂದು ಸಂಸದೆ ಹೇಳಿದ್ದರು. ಇದಕ್ಕೆ ಶಾಸಕ ಪ್ರತಿಕ್ರಿಯಿಸಿದ್ದಾರೆ.
ಸುಮಲತಾ ಅವರಿಗೆ ಮಂಡ್ಯ ಜಿಲ್ಲೆ ಏನು, ಜೆಡಿಎಸ್‌ನ ಹಿನ್ನೆಲೆ ಏನು ಗೊತ್ತಿಲ್ಲ. ಜೆಡಿಎಸ್ ಎಲ್ಲಿಂದ ಹುಟ್ಟಿಬಂದಿದೆ ಎಂಬುದನ್ನು ಯೋಚನೆ ಮಾಡುವ ಶಕ್ತಿ ಇಲ್ಲ. ಅವರು ರಾಜಕೀಯಕ್ಕೆ ಅನಿರೀಕ್ಷಿತವಾಗಿ ಬಂದಂತಹ ಕೂಸು. ಅವರಿಗೆ ಪಾಲಿಟಿಕ್ಸ್ ಗೊತ್ತಿಲ್ಲ. ಜೆಡಿಎಸ್ ಪಕ್ಷವನ್ನು ಹಿಂದೆ ಹಾಕಿಬಿಟ್ಟೆ, ಕೋಟೆ ಒಡೆದುಹಾಕಿಬಿಟ್ಟೆ ಎಂಬ ಮಾತುಗಳನ್ನು ಆಡಬೇಡಿ. ಮುಂದೊಂದು ದಿನ ಕಷ್ಟ ಆಗುತ್ತೆ. ಹಳ್ಳಿಗಳ ಮೇಲೆ ಹೋಗ್ತೀರಲ್ಲ ಅದು ಕಷ್ಟ ಆಗುತ್ತೆ. ಯಾಕೆಂದರೆ ಜೆಡಿಎಸ್ ಪಕ್ಷ ಕಟ್ಟಿರುವವರು ರೈತಾಪಿ ವರ್ಗದವರು. ಎಲ್ಲೋ ಕೂತ್ಕೊಂಡು, ಯಾರೋ ಹೇಳಿ ಕರ್ಕೊಂಡು ಬಂದು ಸೇರ್ಕೊಂಡ್ರೆ ಆಗುವುದಿಲ್ಲ. ಪಾಪ, ನೀವು ಇನ್ನೊಂದು ವರ್ಷ ಮಾತನಾಡಿಕೊಳ್ಳಬಹುದು, ಮಾತಾಡಿಕೊಳ್ಳಿ ಎಂದು ರವೀಂದ್ರ ಶ್ರೀಕಂಠಯ್ಯ ಟೀಕಿಸಿದ್ದಾರೆ.
ಇದನ್ನೂ ಓದಿ: Sumalatha Ambareesh: ಬಿಜೆಪಿಗೆ ಬೆಂಬಲ ಕೊಟ್ಟ ಸುಮಲತಾ; ರಂಗಮಂದಿರದಲ್ಲಿದ್ದ ಫೋಟೊ ತೆರವುಗೊಳಿಸಿ ಆಕ್ರೋಶ