ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಮಂಡ್ಯ ಲೋಕಸಭೆ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರು ಶುಕ್ರವಾರ ಬಿಜೆಪಿ ಸೇರ್ಪಡೆಯಾದರು. ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದು, ಕಮಲ ಪಾಳಯ ಸೇರಿದ ಅವರನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ಪತಿಪಕ್ಷ ನಾಯಕ ಆರ್.ಅಶೋಕ್ ಸೇರಿ ಬಿಜೆಪಿಯ ಹಲವು ನಾಯಕರು ಸ್ವಾಗತಿಸಿದರು.
ಬಿಜೆಪಿ ಸೇರಿದ ಬಳಿಕ ಮಾತನಾಡಿದ ಸುಮಲತಾ ಅಂಬರೀಶ್, “ಇಂದಿನ ದಿನವು ನನ್ನ ರಾಜಕೀಯ ಜೀವನದಲ್ಲಿ ಮಹತ್ವ ಪಡೆದಿರುವ ಸುದಿನವಾಗಿದೆ. ಐದು ವರ್ಷಗಳ ಹಿಂದೆ ಮಂಡ್ಯ ಕ್ಷೇತ್ರದಲ್ಲಿ ಐತಿಹಾಸಿಕ ಗೆಲುವು ಸಿಕ್ಕಿತ್ತು. ಆ ಚುನಾವಣೆ, ಆ ಸಂದರ್ಭವನ್ನು ಎಂದಿಗೂ ಮರೆಯುವುದಿಲ್ಲ. ಮಂಡ್ಯದ ಜನತೆ, ಅಂಬರೀಶ್ ಅಭಿಮಾನಿಗಳ ಬಳಗವು ನನಗೆ ಬೆನ್ನೆಲುಬಾಗಿ ನಿಂತಿದೆ. 5 ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ನನಗೆ ಬೆಂಬಲ ನೀಡಿದ್ದರು. ಅದನ್ನು ನಾನು ಎಂದಿಗೂ ಮರೆಯುವುದಿಲ್ಲ. ಈಗ ಮತ್ತೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕು ಎಂಬ ದೃಷ್ಟಿಯಿಂದ ಬಿಜೆಪಿ ಸೇರಿದ್ದೇನೆ. ಮುಂದಿನ ದಿನಗಳಲ್ಲೂ ಜನರ ಬೆಂಬಲ ಹೀಗೆಯೇ ಇರಲಿ” ಎಂದು ಹೇಳಿದರು.
ನನಗಿಂತ ಮಂಡ್ಯ, ದೇಶ ಮುಖ್ಯ
“ನರೇಂದ್ರ ಮೋದಿ ಅವರು ನುಡಿದಂತೆ ನಡೆದಿದ್ದಾರೆ. ಅವರು ದೇಶದ ಅಭಿವೃದ್ಧಿಯ ದೃಷ್ಟಿಕೋನವನ್ನು ಬದಲಿಸಿದ್ದಾರೆ. 2047ರ ವೇಳೆಗೆ ದೇಶವನ್ನು ವಿಶ್ವದಲ್ಲೇ ಬಲಿಷ್ಠ ರಾಷ್ಟ್ರವಾಗಿ ರೂಪಿಸುವ ಕನಸು ಹೊಂದಿದ್ದಾರೆ. ಅವರ ಕನಸು ನನಸು ಮಾಡಲು ನಾವೆಲ್ಲರೂ ಒಗ್ಗೂಡಿ ದುಡಿಯೋಣ. ನಾನು ನನ್ನ ಭವಿಷ್ಯದ ದೃಷ್ಟಿಯಿಂದ ಬಿಜೆಪಿ ಸೇರ್ಪಡೆಯಾಗಿಲ್ಲ. ಮಂಡ್ಯ ಹಾಗೂ ದೇಶದ ಹಿತದೃಷ್ಟಿಯಿಂದ ಬಿಜೆಪಿ ಸೇರಿದ್ದೇನೆ” ಎಂದರು.
ಸುಮಲತಾ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಬಳಿಕ ಮಾತನಾಡಿದ ಬಿ.ವೈ.ವಿಜಯೇಂದ್ರ, “ಕರ್ನಾಟಕ ಸೇರಿ ದೇಶಾದ್ಯಂತ ಬಿಜೆಪಿ ಹಾಗೂ ನರೇಂದ್ರ ಮೋದಿ ಪರ ಅಲೆ ಇದೆ. ನರೇಂದ್ರ ಮೋದಿ ಅವರ ನಾಯಕತ್ವವನ್ನು ಮೆಚ್ಚಿ ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇದರಿಂದ ಪಕ್ಷಕ್ಕೆ ಬಲ ಬಂದಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವುದು ನಿಶ್ಚಿತವಾಗಿದೆ” ಎಂದು ಹೇಳಿದರು.
ಬಿಜೆಪಿ ಸೇರುವ ಮೊದಲು ಸುಮಲತಾ ಅಂಬರೀಶ್ ಅವರು ಮೊದಲು ರೆಬೆಲ್ ಸ್ಟಾರ್ ಅಂಬರೀಶ್ ಅವರ ಸಮಾಧಿಗೆ ಭೇಟಿ ನೀಡಿದರು. ಅಂಬರೀಶ್ ಸಮಾಧಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, “ಇದು ನನ್ನ ಜೀವನದಲ್ಲಿ ಹೊಸ ಅಧ್ಯಾಯ” ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿ ಸೇರುವ ಮೊದಲು ಅಂಬಿ ಸಮಾಧಿಗೆ ಸುಮಲತಾ ಭೇಟಿ; ಹೊಸ ಅಧ್ಯಾಯ ಎಂದ ಸಂಸದೆ
ಪಕ್ಷ ಹೇಳಿದ ಕಡೆ ಪ್ರಚಾರ
“ಪಕ್ಷವು ಯಾವ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಹೇಳುತ್ತದೆಯೋ, ಅಲ್ಲೆ ಪ್ರಚಾರಕ್ಕೆ ಹೋಗುತ್ತೇನೆ” ಎಂಬುದಾಗಿ ಸುಮಲತಾ ಸ್ಪಷ್ಟಪಡಿಸಿದರು. ಮಂಡ್ಯ ಮಾತ್ರವಲ್ಲ, ಕರ್ನಾಟಕದ ಎಲ್ಲ 28 ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲ್ಲಬೇಕು. ಎಲ್ಲೆಲ್ಲಿ ನನಗೆ ಪ್ರಚಾರಕ್ಕೆ ಹೋಗಲು ಹೇಳುತ್ತಾರೋ, ಅಲ್ಲಿ ನಾನು ಪ್ರಚಾರ ಮಾಡುತ್ತೇನೆ. ಪಾರ್ಟಿ ಚೌಟ್ಟಿನಲ್ಲಿ ಎಲ್ಲರೂ ಕೂಡ ಕೆಲಸ ಮಾಡಬೇಕು. ನಾನು ಕೂಡ ಮಾಡುತ್ತೇನೆ. ಮಂಡ್ಯದಲ್ಲಿ ನಾನು, ಜೆಡಿಎಸ್ ಅಥವಾ ಎಚ್.ಡಿ.ಕುಮಾರಸ್ವಾಮಿ ಮಾತ್ರ ಬರಲ್ಲ. ಎನ್‌ಡಿಎ ಹೆಚ್ಚಿನ ಸೀಟು ಗೆಲ್ಲಬೇಕು. ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು ಎಂಬುದು ನನ್ನ ಉದ್ದೇಶ” ಎಂದು ಸುಮಲತಾ ಅಂಬರೀಶ್ ತಿಳಿಸಿದರು.
ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮಾಜಿ ಸಂಸದ ಶಿವರಾಮೇಗೌಡ, ಸಚಿವ ಶಿವಾನಂದ ಪಾಟೀಲ್ ಸಹೋದರನ ಮಗ ಶ್ರೀಹರ್ಷ ಪಾಟೀಲ್ ಸೇರಿ ಹಲವರು ಕೂಡ ಬಿಜೆಪಿ ಸೇರ್ಪಡೆಯಾದರು. ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಶಿವಾನಂದ ಪಾಟೀಲ್ ಅವರ ಪುತ್ರಿ ಸಂಯುಕ್ತ ಪಾಟೀಲ್ ಅವರಿಗೆ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಶ್ರೀಹರ್ಷ ಪಾಟೀಲ್ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ