ಬೆಂಗಳೂರು: ʻʻರಸ್ತೆ ಗುಂಡಿಗಳಿಂದ ಬೆಂಗಳೂರಿಗೆ ಕೆಟ್ಟ ಹೆಸರು ಬರುತ್ತಿದೆ. ಇದನ್ನು ಬಿಬಿಎಂಪಿ ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು . ಮಿಸ್ಟರ್ ಕಮಿಷನರ್, ರಸ್ತೆ ಗುಂಡಿ ಸರಿಪಡಿಸಲು ಏನಾದರೂ ಕಷ್ಟಗಳಿವೆಯೇ?ʼʼ ಎಂದು ಮುಖ್ಯ ನ್ಯಾಯಾಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ಪೀಠ ಪ್ರಶ್ನಿಸಿದೆ.
ಇದನ್ನೂ ಓದಿ | ರಸ್ತೆ ಗುಂಡಿ ಮುಚ್ಚಲು ತಡವಾಗಿದ್ದು ನಿಜ: ಆಯುಕ್ತ ತುಷಾರ್ ಗಿರಿನಾಥ್
ಬೆಂಗಳೂರಿನಲ್ಲಿ ರಸ್ತೆಗುಂಡಿ ಮುಚ್ಚುವ ಸಂಬಂಧ ಗುರುವಾರ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಸಲಾಯಿತು. ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ಬಿಬಿಎಂಪಿ ಎಂಜಿನಿಯರ್ ಎಂ.ಲೊಕೇಶ್ ವಿಚಾರಣೆಗೆ ಹಾಜರಾಗಿದ್ದರು. ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು.
ರಸ್ತೆ ಗುಂಡಿ ವಿಚಾರದಲ್ಲಿ ಬಿಬಿಎಂಪಿಯ ವಿಳಂಬ ಧೋರಣೆ ವಿರುದ್ಧ ಜೂನ್ 28ರಂದು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಗುರುವಾರಕ್ಕೆ ವಿಚಾರಣೆಯನ್ನು ಮುಂದೂಡಿದ ಸಂದರ್ಭದಲ್ಲೂ ರಸ್ತೆ ಗುಂಡಿ ವಿಚಾರವಾಗಿ ಪ್ರಶ್ನೆಗಳ ಸುರಿಮಳೆಯೇ ಕೇಳಿ ಬಂದಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಬಂದಾಗ ದುರಸ್ತಿ ಮಾಡಿದ್ದ ರಸ್ತೆಗಳು ಹಾಳಾಗಿರುವ ವರದಿಗಳಿವೆ ಎಂದು ಹೈಕೋರ್ಟ್ ಕೇಳಿದಾಗ ವಿವರ ನೀಡಿದ ಬಿಬಿಎಂಪಿ ಪರ ವಕೀಲ ಶ್ರೀನಿಧಿ ಅವರು, ಪ್ರಧಾನಿ ಬಳಸಿದ ರಸ್ತೆಗಳು ಹಾಳಾಗಿಲ್ಲ. ಒಳಚರಂಡಿ ಸಮಸ್ಯೆಯಿಂದ ಹಾಳಾದ ಪಕ್ಕದ ರಸ್ತೆಯನ್ನು ಸರಿಪಡಿಸಲಾಗಿದೆ ಎಂದರು.
ಜಂಟಿ ಸರ್ವೆ ಪ್ರಕಾರ 847.56 ಕಿ.ಮೀ ರಸ್ತೆಗುಂಡಿ ಸರಿಪಡಿಸಬೇಕಿದ್ದು, 576 ಕಿ.ಮೀ ರಸ್ತೆ ಗುಂಡಿ ಮುಚ್ಚಲು ಟೆಂಡರ್ ಕರೆಯಲಾಗಿದೆ. 397 ಕಿ.ಮೀ ರಸ್ತೆ ಗುಂಡಿ ರಿಪೇರಿಗೆ ಕಾರ್ಯಾದೇಶ ನೀಡಲಾಗಿದೆ. ಜುಲೈ 15ರಂದು ಟೆಂಡರ್ ಓಪನ್ ಮಾಡಲಾಗುವುದೆಂದು ವಕೀಲ ಶ್ರೀನಿಧಿ ಕೋರ್ಟ್‌ಗೆ ತಿಳಿಸಿದರು.
ಟೆಂಡರ್ ವ್ಯವಸ್ಥೆಯನ್ನು ಪಾರದರ್ಶಕಗೊಳಿಸಲು ಹೈಕೋರ್ಟ್ ಸೂಚನೆ ನೀಡಿದ್ದು, ರಸ್ತೆ ಸರಿಪಡಿಸುವವರೆಗೆ ಪಿಐಎಲ್ ವಿಚಾರಣೆ ಮುಕ್ತಾಯಗೊಳಿಸುವುದಿಲ್ಲ ಎಂದು ಸಿಜೆ ತಿಳಿಸಿದ್ದಾರೆ. ಮುಂದಿನ ವಿಚಾರಣೆಯನ್ನು ಜುಲೈ 27 ಕ್ಕೆ ನಿಗದಿಪಡಿಸಲಾಗಿದೆ.
ಇದನ್ನೂ ಓದಿ | ಪ್ರತಿವಾರ 3,000 ರಸ್ತೆ ಗುಂಡಿ ಪ್ರತ್ಯಕ್ಷ: ಅಧಿಕಾರಿಗಳ ತಪ್ಪು ಮಾಹಿತಿ ಎಂದ ಬಿಬಿಎಂಪಿ