ಬೆಂಗಳೂರು: ಬೆಂಗಳೂರಿನ ಕೇಂದ್ರ ಭಾಗ ಮಲ್ಲೇಶ್ವರದ ಶಾಸಕರಾಗಿದ್ದ, ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಎಂ.ಆರ್. ಸೀತಾರಾಮ್ ಪಕ್ಷ ತೊರೆಯಲು ಬಹುತೇಕ ನಿಶ್ಚಯ ಮಾಡಿದ್ದಾರೆ. ತಮ್ಮ ಹಿರಿತನ ಹಾಗೂ ಪ್ರಾಮಾಣಿಕತೆಗೆ ಸತತವಾಗಿ ಆದ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ಬೆಂಗಳೂರು ಅರಮನೆ ಮೈದಾನದಲ್ಲಿ ಶುಕ್ರವಾರ ಬೃಹತ್ ಸಮಾವೇಶ ನಡೆಸುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಸಂದೇಶ ರವಾನಿಸಿದ್ದಾರೆ.
ಈ ಹಿಂದೆ ಮಲ್ಲೇಶ್ವರ ಕ್ಷೇತ್ರದ ಶಾಸಕರಾಗಿದ್ದ ಸೀತಾರಾಮ್, ನಂತರ ಡಾ. ಸಿ.ಎನ್. ಅಶ್ವತ್ಥನಾರಾಯಣ್ ವಿರುದ್ಧ ಸೋಲುಂಡರು. ವಿಧಾನ ಪರಿಷತ್‌ನಿಂದ ಆಯ್ಕೆಯಾಗಿ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರೂ ಆಗಿದ್ದರು. 2018ರಲ್ಲಿ ಅದೇ ಕ್ಷೇತ್ರದ ಟಿಕೆಟ್ ನೀಡಲು ಪಕ್ಷ ಬಯಸಿತಾದರೂ ನಿರಾಕರಿಸಿದರು. ವಿಧಾನ ಪರಿಷತ್ ಮಾರ್ಗವನ್ನೇ ಆಯ್ಕೆ ಮಾಡಿಕೊಂಡಿದ್ದರು. ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆವರೆಗೆ ಪ್ರತಿ ಬಾರಿ ಪ್ರಯತ್ನ ನಡೆಸಿದರೂ ಸಫಲರಾಗಲಿಲ್ಲ.
ಇನ್ನೊಂದೆಡೆ ಸೀತಾರಾಮ್ ಪುತ್ರ ರಕ್ಷಾ ರಾಮಯ್ಯ ಹಾಗೂ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ನಡುವೆ ಯುವ ಕಾಂಗ್ರೆಸ್ ಸ್ಥಾನಕ್ಕೆ ಪ್ರಬಲ ಪೈಪೋಟಿ ನಡೆದಿತ್ತು. 2021ರ ಜನವರಿ 10ರಂದು ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಆಗ ನಡೆದ ಆನ್‌ಲೈನ್ ಮತದಾನದ ಫಲಿತಾಂಶ ಪ್ರಕಟಿಸಲಾಗಿತ್ತು. ರಕ್ಷಾ ರಾಮಯ್ಯ ಗೆಲ್ಲುತ್ತಾರೆ ಎಂದು ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರೂ ಊಹಿಸಿದ್ದರು. ಆದರೆ ಅಚ್ಚರಿಯ ಫಲಿತಾಂಶದಲ್ಲಿ ನಲಪಾಡ್ ಹೆಚ್ಚು ಮತ ಪಡೆದಿದ್ದರು. ಈ ಬಗ್ಗೆ ಅನೇಕರ ಆಕ್ಷೇಪಗಳು ಪಕ್ಷದಲ್ಲೂ ವ್ಯಕ್ತವಾಗಿತ್ತು. ಹ್ಯಾಕ್ ಮಾಡಿ ನಕಲಿ ಮತದಾನ ಮಾಡಲಾಗಿದೆ ಎಂಬ ಶಂಕೆಯೂ ವ್ಯಕ್ತವಾಗಿತ್ತು. ಭಾರೀ ಮತಗಳಿಕೆ ಹಿಂದೆ ಮೊಹಮ್ಮದ್ ನಲಪಾಡ್ ಕೈವಾಡ ಇದೆ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಗಂಭೀರವಾದ ಚರ್ಚೆಗಳು ನಡೆದು, ಕೊನೆಗೆ ರಕ್ಷಾ ರಾಮಯ್ಯ ಅವರನ್ನೇ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು. ಆದರೆ ಅವರೊಬ್ಬರಿಗೇ ಅಲ್ಲದೆ, ರಕ್ಷಾ ರಾಮಯ್ಯ ಹಾಗೂ ನಲಪಾಡ್ ಅಧಿಕಾರ ಹಂಚಿಕೊಳ್ಳುವ ವಿಚಿತ್ರ ನಿರ್ಧಾರ ಮಾಡಲಾಯಿತು. ಅದರಂತೆ 2022ರ ಫೆಬ್ರವರಿಯಲ್ಲಿ ನಲಪಾಡ್ ಅಧಿಕಾರ ವಹಿಸಿಕೊಂಡಿದ್ದಾರೆ.
ಈ ವಿಚಾರದಲ್ಲೂ ಡಿ.ಕೆ. ಶಿವಕುಮಾರ್ ತಮ್ಮ ಪರ ವಹಿಸಲಿಲ್ಲ ಎಂಬ ಅಸಮಾಧಾನ ಸೀತಾರಾಮ್ ಹಾಗೂ ಕುಟುಂಬಕ್ಕಿದೆ. ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಾದರೂ ಅವಕಾಶ ನೀಡಬಹುದು ಎಂಬುದೂ ಸುಳ್ಳಾಯಿತು. ಅದಕ್ಕಾಗಿಯೇ ಅರಮನೆ ಮೈದಾನದಲ್ಲಿ ನಡೆದ ಚಿಂತನಾ ಸಭೆಗೆ ರಕ್ಷಾ ರಾಮಯ್ಯ ಹಾಗೂ ಸೀತಾರಾಮ್ ಗೈರಾಗಿದ್ದರು. ಸಮಾಧಾನಪಡಿಸುವ ಕೊನೆಯ ಪ್ರಯತ್ನವಾಗಿ ರಕ್ಷಾ ರಾಮಯ್ಯ ಅವರನ್ನು ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಿ ಡಿ.ಕೆ. ಶಿವಕುಮಾರ್ ಆದೇಶಿಸಿದರು.
ಡಿ.ಕೆ. ಶಿವಕುಮಾರ್ ವಿರುದ್ಧ ಆಕ್ರೋಶ
ಅರಮನೆ ಮೈದಾನದಲ್ಲಿ ತಮ್ಮ ಬೆಂಬಲಿಗರ ಬೃಹತ್ ಸಮಾವೇಶವನ್ನು ಶುಕ್ರವಾರ ಆಯೋಜಿಸಿರುವ ಸೀತಾರಾಮ್, ಡಿ.ಕೆ. ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ಹರಿಹಾಯ್ದಿದ್ದಾರೆ. ಜಾಲಪ್ಪನವರು ನನ್ನನ್ನು ನವ ದೆಹಲಿಗೆ ಕರೆದುಕೊಂಡು ಹೋಗಿದ್ದರು. ತಮಗೆ ವಯಸ್ಸಾಗಿದೆ, ತಮ್ಮ ಬದಲಿಗೆ ಇವರಿಗೆ ಕೊಡಿ ಎಂದು ಸೋನಿಯಾಗಾಂಧಿ ಅವರಿಗೆ ಮನವಿ ಮಾಡಿದ್ದರು. ಜಾಲಪ್ಪನವರು ನಿಸ್ವಾರ್ಥ ರಾಜಕಾರಣಿ. ಆದರೆ ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣೆಯಲ್ಲಿ ಮೊಯ್ಲಿ ನನ್ನನ್ನು ಹೈಜಾಕ್ ಮಾಡಿದರು. ಆಗಲೂ ನಾನು ಪಕ್ಷಕ್ಕಾಗಿ ದುಡಿದೆ. ನಾನು ಸ್ಪರ್ಧಿಸಿದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರೇ ನನ್ನನ್ನು ಸೋಲಿಸಿದರು. 2018, 2020, 2022 ರಲ್ಲಿ ಮೂರು ಬಾರಿ ನನಗೆ ಪರಿಷತ್ ಟಿಕೆಟ್ ಕೊಡಲಿಲ್ಲ. ಇದಕ್ಕಾಗಿ ದೆಹಲಿಯಿಂದಲೇ ಪಿತೂರಿ ಮಾಡಿದರು. ಟಿಕೆಟ್ ಅಂತಿಮವಾದ ಮೇಲೆಯೂ ಪಕ್ಷದ ಅಧ್ಯಕ್ಷರು ದೆಹಲಿಗೆ ಹೋಗಿ ಬಂದರು. ಆಮೇಲೆ ಏನಾಯಿತು ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದರು.ಯುವ ಕಾಂಗ್ರೆಸ್ ಚುನಾವಣೆ ಬಗ್ಗೆ ಪ್ರಸ್ತಾಪಿಸಿದ ಸೀತಾರಾಮ್, ಯೂತ್ ಕಾಂಗ್ರೆಸ್ ಎಲೆಕ್ಷನ್‌ನಲ್ಲಿ ರಕ್ಷಾ ರಾಮಯ್ಯ ಸ್ಪರ್ಧಿಸಿದ್ದರು. ಇದೇ ಅಧ್ಯಕ್ಷರು, ಡಿಸ್‌ಕ್ವಾಲಿಫೈ ಆದ ಅಭ್ಯರ್ಥಿಯನ್ನು ರೆಕಮೆಂಡ್ ಮಾಡಿ ಸ್ಪರ್ಧೆಗೆ ಇಳಿಸಿದ್ದರು. ಒಂದು ವರ್ಷ ರಕ್ಷಾ ರಾಮಯ್ಯ, ಉಳಿದ ವರ್ಷ ಇನ್ನೊಬ್ಬರು ಯೂತ್ ಕಾಂಗ್ರೆಸ್ ಪ್ರೆಸಿಡೆಂಟ್ ಆಗುತ್ತಾರೆ ಎಂದು ಎಂದು ಕಂಡಿಶನ್ ಹಾಕಿದರು. ಅವಧಿ ಮುಗಿಯುವ ಮೂರು ದಿನ ಮೊದಲೇ ರಕ್ಷಾ ರಾಮಯ್ಯ ರಾಜೀನಾಮೆ ಕೊಟ್ಟು ಬಂದಿದ್ದರು. ಇದು ನಮ್ಮ ಕುಟುಂಬದ ಸಂಸ್ಕೃತಿ ಎಂದು ಡಿ.ಕೆ. ಶಿವಕುಮಾರ್ ವಿರುದ್ಧ ಆಕ್ರೋಶ ಹೊರಹಾಕಿದರು.
ಕೆಲವರಿಗೆ ಮಿನಿಸ್ಟರ್ ಪಟ್ಟ ಸಿಕ್ಕರೆ ಬ್ಯುಸಿನೆಸ್ ಮಾಡುತ್ತಾರೆ. ನಾನು ಕೊಡಗು ಜಿಲ್ಲಾ ಉಸ್ತುವಾರಿಯಾಗಿದ್ದಾಗ ಯಾವ ರೀತಿ ಕೆಲಸ ಮಾಡಿದ್ದೆ ಎಂದು ಅಲ್ಲಿಯೇ ಹೋಗಿ ಕೇಳಿಕೊಳ್ಳಲಿ. ಪಕ್ಷದಲ್ಲಿ ನನಗೆ ಪ್ರೀತಿ, ವಾತ್ಸಲ್ಯ ಸಿಗುತ್ತಿಲ್ಲ. ಪಕ್ಷದ ಚುಕ್ಕಾಣಿ ಹಿಡಿದಿರುವ ನಾಯಕರ ಮೇಲೆ ಬೇಜಾರಾಗಿದೆ. ಕಾಂಗ್ರೆಸ್ ಪಕ್ಷದ ಮೇಲೆ ನನಗೆ ಬೇಜಾರಿಲ್ಲ. ರಾಜ್ಯದ ಕಾಂಗ್ರೆಸ್ ಉಸ್ತುವಾರಿ ಮೇಲೆ ಅಸಮಧಾನವಿದೆ ಎಂದರು.
ಪಕ್ಷದ ಮುಖಂಡರಲ್ಲಿ ನಿಸ್ವಾರ್ಥ ಸೇವೆಯ ವರ್ತನೆ ಬರಬೇಕು. ನಿಮ್ಮ ಒಳ ಮನಸ್ಸು ಏನು ಎಂದು ನನಗೂ ಗೊತ್ತಿದೆ. ಪಕ್ಷದ ಸೇವೆ ಬಹಳ ಪ್ರಾಮಾಣಿಕವಾಗಿ ಮಾಡಿದ್ದೀನಿ. ಮುಂದಿನ ತಿಂಗಳಲ್ಲಿ ಹಿತೈಶಿಗಳ ಜತೆ ಚರ್ಚೆ ಮಾಡುತ್ತೇನೆ. ನಂತರ ಬೃಹತ್ ಸಮಾವೇಶ ಮಾಡಿ, ಐತಿಹಾಸಿಕ ನಿರ್ಣಯ ತೆಗೆದುಕೊಳ್ಳುತ್ತೇನೆ. ಆ ನಿರ್ಣಯ ನನ್ನ ಬೆಂಬಲಿಗರಿಗೂ ಇಷ್ಟ ಆಗುತ್ತದೆ ಎಂದು ಬಿಜೆಪಿ ಸೇರ್ಪಡೆ ಕುರಿತು ಪರೋಕ್ಷ ಸುಳೀವು ನೀಡಿದರು.
ಚಿಕ್ಕಬಳ್ಳಾಪುರದಿಂದ ಲೋಕಸಭೆಗೆ
ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧೆಗೆ ಅವಕಾಶ ನೀಡುವ ಕುರಿತು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಜತೆಗೆ ಸೀತಾರಾಮ್ ಈಗಾಗಲೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಮುಂದಿನ ತಿಂಗಳೂ ಸಮಾವೇಶದಲ್ಲಿ ಬಹಿರಂಗ ಸಮಾವೇಶ ನಡೆಸಿ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಕಾರ್ಯಕ್ರಮದಲ್ಲಿ ಭದ್ರಾವತಿ ಶಾಸಕ ಬಿ. ಕೆ. ಸಂಗಮೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಲಕ್ಷ್ಮೀನಾರಾಯಣ ಸೇರಿ ಅನೇಕರು ಉಪಸ್ಥಿತರಿದ್ದು ಸೀತಾರಾಮ್ ಅವರಿಗೆ ಬೆಂಬಲ ವ್ಯಕ್ತಪಡಿಸಿದರು.
ಇದನ್ನೂ ಓದಿ | ಡಿಕೆಶಿ, ಸಿದ್ದುಗೆ ಸದ್ಬುದ್ಧಿ ಕೊಡವ್ವ ತಾಯಿ: ಬನಶಂಕರಿಗೆ ಕಾಂಗ್ರೆಸ್ ನಾಯಕನ ಮೊರೆ