ವಾಷಿಂಗ್ಟನ್: ಉತ್ತರ ಕನ್ನಡ (UttaraKannada) ಜಿಲ್ಲೆಯ ಶಿರಸಿ ತಾಲೂಕಿನ ಮುಂಡಿಗೆಸರ ಮೂಲದ, ಹುಬ್ಬಳಿಯ ವೈದ್ಯೆ ಶ್ರುತಿ ಹೆಗಡೆ (Shruti Hegde) ಇತ್ತೀಚಿಗೆ ಅಮೆರಿಕದಲ್ಲಿ ಜರುಗಿದ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಅಮೆರಿಕದಲ್ಲಿ ನಡೆದ ಮಿಸ್ ಯೂನಿವರ್ಸಲ್ ಪೆಟೀಟ್ (Ms Universal Petite 2024) ಎನ್ನುವ ಸೌಂದರ್ಯ ಸ್ಪರ್ಧೆಯಲ್ಲಿ ಶ್ರುತಿ 40 ದೇಶಗಳ ಸ್ಪರ್ಧಿಗಳನ್ನು ಹಿಂದಿಕ್ಕಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ವಿಶೇಷ ಎಂದರೆ ಶ್ರುತಿ ಮಿಸ್ ಯೂನಿವರ್ಸಲ್ ಪೆಟೀಟ್ ಟೈಟಲ್ ಗೆದ್ದ ಮೊದ ಭಾರತೀಯ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಈ ಸ್ಪರ್ಧೆಯನ್ನು ಸುಮಾರು 15 ವರ್ಷಗಳಿಂದ ಅಮೆರಿಕದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಮೊದಲ ಬಾರಿಗೆ 2009ರಲ್ಲಿ ಈ ಸ್ಪರ್ಧೆ ನಡೆದಿತ್ತು.
ಶಿರಸಿ, ಹುಬ್ಬಳ್ಳಿ ಮೂಲ
ಶ್ರುತಿ ಅವರು ಶಿರಸಿ ಮತ್ತು ಹುಬ್ಬಳ್ಳಿ ನಂಟು ಹೊಂದಿದ್ದಾರೆ. ಶಿರಸಿ ತಾಲೂಕಿನ ಮುಂಡಿಗೆಸರ ಅಜ್ಜೊರಮನೆ ಕುಟುಂಬದವರಾದ ಶ್ರುತಿ ಸದ್ಯ ತಮ್ಮ ಪಾಲಕರಾದ ಕೃಷ್ಣ ಹೆಗಡೆ, ಕಮಲಾ ಅವರೊಂದಿಗೆ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. 2018ರಲ್ಲಿ ಮಿಸ್ ಕರ್ನಾಟಕ ರನ್ನರ್ ಅಪ್, ಮಿಸ್ ಸೌತ್ ಇಂಡಿಯಾ ಕೀರೀಟ ತೊಟ್ಟುಕೊಂಡಿದ್ದ ಶ್ರುತಿ ಕಳೆದ ವರ್ಷ ಮಿಸ್ ಏಷ್ಯಾ ಇಂಟರ್ ನ್ಯಾಷನಲ್ ಇಂಡಿಯಾ ಪ್ರಶಸ್ತಿ ಗೆದ್ದಿದ್ದರು.
ಎಂ.ಡಿ. ಅಧ್ಯಯನ
ಹುಬ್ಬಳ್ಳಿಯಲ್ಲಿ ಎಂಬಿಬಿಎಸ್ ಓದಿರುವ ಶ್ರುತಿ ಅವರು ಪ್ರಸ್ತುತ ತುಮಕೂರಿನಲ್ಲಿ ಡರ್ಮಟಾಲಜಿಯಲ್ಲಿ ಎಂ.ಡಿ. ಮಾಡುತ್ತಿದ್ದಾರೆ. ಅವರು ಬಹುಮುಖ ಪ್ರತಿಭೆಯೂ ಹೌದು. ಭರತನಾಟ ಕಲಾವಿದೆಯಾಗಿ ವಿವಿಧ ಕಡೆ ಹಲವು ಪ್ರದರ್ಶನ ನೀಡಿದ್ದಾರೆ. ಜತೆಗೆ ಕನ್ನಡದ ಕೆಲವು ಸಿನಿಮಾ, ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. ಈ ಬಾರಿಯ ಸ್ಪರ್ಧೆ ಅಮೆರಿಕದ ಫ್ಲೋರಿಡಾದಲ್ಲಿ ಜೂ. 6ರಿಂದ 10ರವರೆಗೆ ಆಯೋಜಿಸಲಾಗಿತ್ತು. ನ್ಯಾಷನಲ್ ಕಾಸ್ಟ್ಯೂಮ್ ರೌಂಡ್, ಪ್ರಶ್ನೋತ್ತರ ರೌಂಡ್ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಯಿತು.
ಏನಿದು ಮಿಸ್ ಯೂನಿವರ್ಸಲ್ ಪೆಟೀಟ್ ಸ್ಪರ್ಧೆ?
ಮಿಸ್ ಯೂನಿವರ್ಸಲ್ ಪೆಟೀಟ್ ಎನ್ನುವುದು ಕಡಿಮೆ ಎತ್ತರ ಹೊಂದಿರುವವರಿಗಾಗಿ ಇರುವ ಸ್ಪರ್ಧೆ. 5.2 ಅಡಿ ಎತ್ತರದ ಶ್ರುತಿ ಅವರಿಗೆ ಈ ಹಿಂದೆ ಮಿಸ್ ವರ್ಲ್ಡ್, ಮಿಸ್ ಯೂನಿವರ್ಸ್ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಆಗಿರಲಿಲ್ಲ. ಇದೀಗ ಅವರ ಕನಸು ನನಸಾಗಿದೆ. ಹಲವು ವರ್ಷಗಳಿಂದ ನಡೆಸುತ್ತಿದ್ದ ತಯಾರಿಗೆ ಕೊನೆಗೂ ಫಲ ಸಿಕ್ಕಿದೆ ಎಂದು ಅವರು ಈ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Miss World 2024: ಸಿನಿ ಶೆಟ್ಟಿಗೆ ವಿಶ್ವ ಸುಂದರಿ ಕಿರೀಟ ಜಸ್ಟ್ ಮಿಸ್
ಕ್ರಿಸ್ಟಿನಾ ಪಿಸ್ಕೋವಾಗೆ ವಿಶ್ವ ಸುಂದರಿ ಕಿರೀಟ
ಮುಂಬೈ: ಜೆಕ್ ಗಣರಾಜ್ಯ ದೇಶದ ಕ್ರಿಸ್ಟಿನಾ ಪಿಸ್ಕೋವಾ 2024ನೇ ಆವೃತ್ತಿಯ ವಿಶ್ವ ಸುಂದರಿ (Miss World 2024)ಯಾಗಿ ಹೊರಹೊಮ್ಮಿದ್ದಾರೆ. ಮುಂಬೈಯ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಮಾರ್ಚ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಅವರು 71ನೇ ವಿಶ್ವ ಸುಂದರಿ ಕಿರೀಟವನ್ನು ತಮ್ಮದಾಗಿಸಿಕೊಂಡರು. ಕ್ರಿಸ್ಟಿನಾ ಕಾನೂನು ಮತ್ತು ವ್ಯವಹಾರ ಆಡಳಿತ ಎರಡರಲ್ಲೂ ಪದವಿ ಅಧ್ಯಯನ ಮಾಡುತ್ತಿದ್ದಾರೆ ಮತ್ತು ರೂಪದರ್ಶಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. ಅವರು ಕ್ರಿಸ್ಟಿನಾ ಫೌಂಡೇಶನ್ ಅನ್ನು ಸ್ಥಾಪಿಸಿದ್ದಾರೆ ಎಂದು ಮಿಸ್ ವರ್ಲ್ಡ್ ಆರ್ಗನೈಸೇಶನ್ ತಿಳಿಸಿದೆ.
ವಿಶೇಷ ಎಂದರೆ ವಿಶ್ವ ಸುಂದರಿ ಸ್ಪರ್ಧೆಯ ಆತಿಥ್ಯವನ್ನು ಭಾರತ ಬರೋಬ್ಬರಿ 28 ವರ್ಷಗಳ ಬಳಿಕ ವಹಿಸಿತ್ತು. 1996ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯನ್ನು ಭಾರತವು ಕೊನೆಯದಾಗಿ ಆಯೋಜಿಸಿತ್ತು. ಬೆಂಗಳೂರಿನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಗ್ರೀಸ್‌ನ 19ರ ಹರೆಯದ ಐರಿನ್ ಸ್ಕ್ಲಿವಾ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದರು.