ಬೆಂಗಳೂರು: ಮುಡಾ ಹಗರಣಕ್ಕೆ (Muda Scam) ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ದಾಖಲಿಸಿದ್ದ ಖಾಸಗಿ ದೂರಿನ ಅರ್ಜಿ ಆದೇಶವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆ.20ಕ್ಕೆ ಕಾಯ್ದಿರಿಸಿದೆ. ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಸಲ್ಲಿಸಿದ್ದ ಖಾಸಗಿ ಅರ್ಜಿ ವಿಚಾರಣೆಯನ್ನು ಆಗಸ್ಟ್ 21ಕ್ಕೆ ಮುಂದೂಡಿದೆ.
ಮುಡಾದಲ್ಲಿ ಕಾನೂನು ಬಾಹಿರವಾಗಿ ನಿವೇಶನ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶಿಸುವಂತೆ ಸಲ್ಲಿಕೆಯಾಗಿದ್ದ ಎರಡು ಖಾಸಗಿ ದೂರಿನ ಅರ್ಜಿಗಳನ್ನು ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಿದೆ. ಮೊದಲಿಗೆ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ಟ ಅವರು, ದೂರಿನ ಸಂಬಂಧ ಅಂತಿಮ ಆದೇಶವನ್ನು ಆ.20ಕ್ಕೆ ಕಾಯ್ದಿರಿಸಿದರು. ಅದೇ ರೀತಿ ಮಾಹಿತಿ ಆರ್‌ಟಿಐ ಟಿ.ಜೆ.ಅಬ್ರಹಾಂ ದಾಖಲಿಸಿದ್ದ ಅರ್ಜಿ ವಿಚಾರಣೆಯನ್ನು ಆ.21ಕ್ಕೆ ಮುಂದೂಡಿದರು.
ಟಿ.ಜೆ.ಅಬ್ರಹಾಂ ವಾದ ಮಂಡನೆ; ನಕಲಿ ದಾಖಲೆ ಸೃಷ್ಟಿಸಿ ಜಾಗ ಮಾರಾಟ ಆರೋಪ
ಪ್ರಕರಣದಲ್ಲಿ ದೂರುದಾರ ಅಬ್ರಹಾಂ ಅವರೇ ವಾದ ಮಂಡಿಸಿ, ಮೈಸೂರಿನ ಹೊರವಲಯದ ಕೆಸರೆ ಗ್ರಾಮ ಹಾಗೂ ದೇವನೂರು ಗ್ರಾಮಗಳಲ್ಲಿ ನಡೆದಿರುವ ಹಗರಣದ ಬಗ್ಗೆ ಮಾಹಿತಿ ನೀಡಿದರು. ಕೆಸರೆ ಗ್ರಾಮದಲ್ಲಿ ದೇವನೂರು ಬಡವಾಣೆ ನಿರ್ಮಾಣ ಮಾಡಲಾಗಿದೆ. ಆದರೆ, ಅಲ್ಲಿ ಜಮೀನೇ ಇಲ್ಲದಿದ್ದರೂ ದೇವರಾಜ್ ನಕಲಿ ದಾಖಲೆ ಸೃಷ್ಟಿಸಿದ್ದಾನೆ. ನಕಲಿ ದಾಖಲೆಗಳ ಮೂಲಕ ಸೃಷ್ಟಿಸಿದ ಜಾಗವನ್ನು ಮಲ್ಲಿಕಾರ್ಜುನಗೆ ಮಾರಾಟ ಮಾಡಿದ್ದ ಎಂದು ತಿಳಿಸಿದರು.
ಇದನ್ನೂ ಓದಿ | Lakshmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ಗೆ ಅಹವಾಲು ಸಲ್ಲಿಸಲು ಸಾಲುಸಾಲು ಜನ
ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ರೆವಿನ್ಯೂ ಲ್ಯಾಂಡ್ ಅನ್ನು ಕನ್ವರ್ಷನ್ ಮಾಡಲಾಗಿದೆ. ಬಳಿಕ 2010ರಲ್ಲಿ ಕಾನೂನು ಬಾಹಿರವಾಗಿ ಗಿಫ್ಟ್ ಡೀಡ್ ಮಾಡಲಾಗಿದೆ. ಅದರ ಫಲಾನುಭವಿ ಸಿದ್ದರಾಮಯ್ಯ ಅವರ ಪತ್ನಿಯಾಗಿದ್ದಾರೆ.
ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಬೋಗಸ್ ಕನ್ವರ್ಷನ್ ಆಗಿದೆ. ಜಿಲ್ಲಾಧಿಕಾರಿ ಜಾಗವನ್ನು ಪರಿಶೀಲನೆ ಮಾಡಿ ಕನ್ವರ್ಷನ್ ಮಾಡ್ಡಿದ್ದೇವೆ ಎನ್ನುವುದು ಸುಳ್ಳು. 2010ರಲ್ಲಿ ಪಾರ್ವತಿಯವರಿಗೆ ಕಾನೂನು ಬಾಹಿರವಾಗಿ ದಾನ ನೀಡಲಾಗಿದೆ ಎಂದು ಟಿ.ಜೆ. ಅಬ್ರಹಾಂ ತಿಳಿಸಿದ್ದಾರೆ.
2013ರ ಚುನಾವಣೆಯಲ್ಲಿ ಈ ಜಾಗದ ಮಾಹಿತಿಯನ್ನು ಸಿದ್ದರಾಮಯ್ಯ ಮುಚ್ಚಿಟ್ಟಿದ್ದಾರೆ. 2011 ರಿಂದ 2014 ರವರೆಗೆ ಲೋಕಾಯುಕ್ತಕ್ಕೆ ಸಿದ್ದರಾಮಯ್ಯ ನೀಡಿದ್ದ ಮಾಹಿತಿಯಲ್ಲೂ ಮುಚ್ಚಿಡಲಾಗಿದೆ. ಇವರು ಹೇಗೆ ದೇವನೂರು ಬಡಾವಣೆಯನ್ನು ಕೆಸರೆ ಗ್ರಾಮ ಮಾಡುತ್ತಾರೆ. ಹೇಗೆ ಬಡಾವಣೆಯನ್ನು ಕೃಷಿ ಭೂಮಿಯಲ್ಲಿ ಮಾಡುತ್ತಾರೆ? ಆದರೂ ಬಹಳ ಅಭಿವೃದ್ಧಿ ಹೊಂದಿದ ಅರ್ಜಿಯನ್ನು 55 ಕೋಟಿ 80 ಲಕ್ಷ ಬೆಲೆಯ ಸೈಟ್‌ಗಳ ನೀಡಿದ್ದಾರೆ. ಅದು ಕೂಡ ತುಂಬಾ ಡೆವಲಪ್ಮೆಂಟ್ ಆಗಿರುವ ಲೇಔಟ್ ನಲ್ಲಿ ನೀಡ್ತಾರೆ.
ಸಿದ್ದರಾಮಯ್ಯ ಪತ್ನಿಯ ಸ್ವಾಧೀನದಲ್ಲೇ ಇಲ್ಲದ ಜಾಗವನ್ನು ಹೇಗೆ ರಿಲೀಸ್ ಡೀಡ್ ನೀಡಲು ಹೇಗೆ ಸಾಧ್ಯ.? ಪಾರ್ವತಿ ಅವರು ಕ್ಲೈಂ ಮಾಡುವ ರೀತಿ ಕೃಷಿ ಭೂಮಿ ಇರಲೇ ಇಲ್ಲ. ಕೇವಲ ದಾಖಲೆಗಳನ್ನು ಮಾತ್ರ ಸೃಷ್ಟಿ ಮಾಡಿ ಪರಿಹಾರ ಪಡೆದಿದ್ದಾರೆ. ಈ ಸಂಬಂಧ ಮೈಸೂರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲಾಗಿದೆ. ಲೋಕಾಯುಕ್ತ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಖಾಸಗಿ ದೂರು ಸಲ್ಲಿಸಲಾಗಿದೆ. ಭ್ರಷ್ಟಾಚಾರ ಕಾಯಿದೆ 17A ಸಿದ್ದರಾಮಯ್ಯ ಅವರಿಗೆ ಅನ್ವಯ ಆಗಲ್ಲ. ಪಿ.ಸಿ.ಆ್ಯಕ್ಟ್ 19ರ ಅಡಿ ಕಾಗ್ನಿಜೆನ್ಸ್ ತೆಗೆದುಕೊಳ್ಳಲು ಕೋರ್ಟ್‌ಗೆ ಟಿ.ಜೆ.ಅಬ್ರಹಾಂ ಮನವಿ ಮಾಡಿದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್, ವಿಚಾರಣೆಯನ್ನು ಆಗಸ್ಟ್ 21ಕ್ಕೆ ಮುಂದೂಡಿತು.
ಏನಿದು ಕೋರ್ಟ್ ಪ್ರಕರಣ?
ಸಿಎಂ ಸಿದ್ದರಾಮಯ್ಯ ಅವರು ಅಧಿಕಾರ ದುರ್ಬಳಕೆ ಮಾಡಿ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ನಿವೇಶನಗಳನ್ನು ತಮ್ಮ ಪತ್ನಿಯ ಹೆಸರಿಗೆ ಪಡೆದುಕೊಂಡಿರುವ ಆರೋಪ ಸಂಬಂಧ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ನಡೆಸುವುದಕ್ಕೆ ಸೂಚನೆ ನೀಡಬೇಕು ಎಂದು ಕೋರಿ ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಮೈಸೂರಿನ ಮಾಹಿತಿ ಹಕ್ಕು ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಎಂಬುವರು ಖಾಸಗಿ ದೂರು ಸಲ್ಲಿಸಿದ್ದರು. ಅದರ ವಿಚಾರಣೆ ನಡೆಯುತ್ತಿರುವ ನಡುವೆಯೇ ಬೆಂಗಳೂರಿನ ಮಾಹಿತಿ ಹಕ್ಕು ಕಾರ್ಯಕರ್ತ ಟಿ.ಜೆ. ಅಬ್ರಾಹಂ ಮತ್ತೊಂದು ದೂರು ಸಲ್ಲಿಸಿದ್ದರು.
ಮೂಲ ಜಮೀನಿಗೆ ಮಾಲೀಕರೇ ಇಲ್ಲ. ಆ ಜಮೀನು ಸಿದ್ದರಾಮಯ್ಯ ಸಂಬಂಧಿಕರ ಹೆಸರಿಗೆ ಬಂದಿದೆ. ಅಲ್ಲಿಂದ ಸಿದ್ದರಾಮಯ್ಯ ಪತ್ನಿ ಹೆಸರಿಗೆ ಉಡುಗೊರೆಯಾಗಿ ಬಂದಿದ್ದು, ಅಂತಹ ಜಮೀನಿಗೆ ಬದಲಿ ನಿವೇಶನ ಪಡೆದುಕೊಳ್ಳಲಾಗಿದೆ. ಇಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಮುಡಾದಲ್ಲಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅಕ್ರಮವಾಗಿ 14 ನಿವೇಶನಗಳನ್ನು ಪಡೆದಿದ್ದಾರೆ ಎಂಬ ಆರೋಪ ಸಂಬಂಧ ಸಿದ್ದರಾಮಯ್ಯ ಸೇರಿ ಐವರು ಆರೋಪಿಗಳ ವಿರುದ್ಧ ವಿಶೇಷ ತನಿಖಾ ದಳ ಅಥವಾ ಬೇರಾವುದೇ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು.