Site icon Vistara News

Muda Scam: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ; ಲೋಕಾಯುಕ್ತಕ್ಕೆ ಪ್ರಮುಖ ದಾಖಲೆ ಸಲ್ಲಿಕೆ

Muda Scam

ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ಎದುರಾಗಿದೆ. ಬದಲಿ ನಿವೇಶನಗಳ ಹಂಚಿಕೆ ಹಗರಣಕ್ಕೆ (Muda Scam) ಸಂಬಂಧಿಸಿದಂತೆ ಮತ್ತಷ್ಟು ದಾಖಲೆಗಳನ್ನು ಸಹಿತ ಸಿಎಂ ಸಿದ್ದರಾಮಯ್ಯ ಮತ್ತು ಕುಟುಂಬಸ್ಥರು ಹಾಗೂ ಕೆಲ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಕಚೇರಿಗೆ ದೂರುದಾರರು ಒದಗಿಸಿದ್ದಾರೆ.

ಮುಡಾ ಹಗರಣಕ್ಕೆ ಸಂಬಂಧಿಸಿ ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌ ಅವರು ಇತ್ತೀಚೆಗೆ 400 ಪುಟ ದಾಖಲೆ ಸಹಿತ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇದೀಗ ಅದೇ ಪ್ರಕರಣಕ್ಕೆ ಸಂಬಂಧಿಸಿದ 25 ಪುಟಗಳ ಮತ್ತಷ್ಟು ಮಹತ್ವಪೂರ್ಣ ದಾಖಲೆಗಳನ್ನು ಸಲ್ಲಿಸಿದ್ದಾರೆ.

ಪತ್ರದಲ್ಲ ಏನಿದೆ?

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಕಾನೂನುಬಾಹಿರವಾಗಿ ಬದಲಿ ನಿವೇಶನಗಳನ್ನು ಹಂಚಿಕೆ ಮಾಡುವ ಮೂಲಕ ಸರ್ಕಾರಕ್ಕೆ 60 ಕೋಟಿ ರೂಪಾಯಿಗಳನ್ನು ವಂಚನೆ ಮಾಡಿರುವ ʼಬದಲಿ ನಿವೇಶನಗಳ ಹಂಚಿಕೆ” ಹಗರಣಕ್ಕೆ ಸಂಬಂಧಿಸಿದಂತೆ ಸುಮಾರು 400 ಪುಟಗಳ ಸಂಪೂರ್ಣ ದಾಖಲೆಗಳ ಸಹಿತ ಜುಲೈ 20ರಂದು ಸಿಎಂ ಸಿದ್ದರಾಮಯ್ಯ ಮತ್ತವರ ಕುಟುಂಬಸ್ಥರು ಹಾಗೂ ಕೆಲವು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಕಚೇರಿಯಲ್ಲಿ ದೂರು ನೀಡಲಾಗಿದೆ.

ಅದೇ ಪ್ರಕರಣಕ್ಕೆ ಸಂಬಂಧಿಸಿದ ಮತ್ತಷ್ಟು ಮಹತ್ವಪೂರ್ಣ ದಾಖಲೆಗಳು ಈಗ ನಮಗೆ ದೊರೆತಿದ್ದು, ಅವುಗಳನ್ನು ಈ ಪತ್ರದೊಂದಿಗೆ ಲಗತ್ತಿಸಲಾಗಿದೆ. 1997-98 ರ ಅವಧಿಯಲ್ಲಿ L&T ಸಂಸ್ಥೆಯ ಮೂಲಕ ಮುಡಾ ಸಂಪೂರ್ಣ ಅಭಿವೃದ್ಧಿ ಡಾಂಬರೀಕರಣಗೊಂಡ ರಸ್ತೆಗಳು, ಪಾದಚಾರಿ ಮಾರ್ಗಗಳು, ಚರಂಡಿಗಳು, ಕುಡಿಯುವ ನೀರಿನ ಪಡಿಸಿ ಕೊಳವೆಗಳು, ಒಳಚರಂಡಿ ಕೊಳವೆಗಳು ಮತ್ತು ಬೀದಿ ದೀಪಗಳನ್ನು ಒಳಗೊಂಡ ‘ದೇವನೂರು 3ನೇ ಹಂತದ ಬಡಾವಣೆಯಲ್ಲಿನ ನಿವೇಶನಗಳನ್ನು ಅರ್ಜಿದಾರರಿಗೆ ಹಂಚಿಕೆ ಮಾಡಲಾಗಿತ್ತು. ಮೂರ್ನಾಲ್ಕು ವರ್ಷಗಳಲ್ಲಿಯೇ ಆ ಬಡಾವಣೆಯಲ್ಲಿ ಹತ್ತಾರು ಕಟ್ಟಡಗಳು ತಲೆ ಎತ್ತಿದ್ದವು. ಆದರೆ, ಆದಾಗಲೇ ಅಭಿವೃದ್ಧಿಗೊಂಡಿದ್ದ ಬಡಾವಣೆಯಲ್ಲಿ 3.16 ಎಕರೆ ವಿಸ್ತೀರ್ಣದ ಪ್ರದೇಶವನ್ನು “ಭೂ ಪರಿವರ್ತನೆ” ಮಾಡಿ ಕೊಡುವಂತೆ 2004ರ ಡಿ.1ರಂದು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ, ಅಂದಿನ ಜಿಲ್ಲಾಧಿಕಾರಿಗಳು, ತಹಶೀಲ್ದಾರರ ವರದಿಯನ್ನಾಧರಿಸಿ 2005ರ ಜೂನ್‌ 17ರಂದು ಖುದ್ದು ಸ್ಥಳ ಪರಿಶೀಲನೆ ಮಾಡಿ “ಮೈಸೂರು ತಾಲೂಕು, ಕಸಬಾ ಹೋಬಳಿ, ಕೆಸರೆ ಗ್ರಾಮದ ಸರ್ವೆ ನಂ: 464 ರ 3.16 ಎಕರೆ ವಿಸ್ತೀರ್ಣದ ವ್ಯವಸಾಯದ ಜಮೀನನ್ನು ವಸತಿ ಉದ್ದೇಶಕ್ಕೆ ಬಳಸಲು ಭೂ ಪರಿವರ್ತನೆ ಮಾಡಲು ಅನುಮತಿ ನೀಡಲಾಗಿದೆ’ ಎಂದು “ಸ್ಥಳ ತನಿಖಾ ಟಿಪ್ಪಣಿ”ಯಲ್ಲಿ ಲಿಖಿತವಾಗಿ ತಿಳಿಸಿದ್ದರು.

2005ಕ್ಕೂ ಏಳೆಂಟು ವರ್ಷಗಳ ಹಿಂದೆಯೇ ಸಂಪೂರ್ಣ ಅಭಿವದ್ಧಿ ಪಡಿಸಲಾಗಿದ್ದ ದೇವನೂರು 3ನೇ ಹಂತದ ಬಡಾವಣೆಯಲ್ಲಿ ವ್ಯವಸಾಯದ ಜಮೀನು ಇರಲು ಹೇಗೆ ಸಾಧ್ಯ. 2004-2006 ರ ಅವಧಿಯಲ್ಲಿ ಧರ್ಮಸಿಂಗ್‌ ಅವರ ಸಚಿವ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಆಗಿದ್ದ ಸಿದ್ಧರಾಮಯ್ಯನವರ ರಾಜಕೀಯ ಪ್ರಭಾವಕ್ಕೆ ಮತ್ತು ಒತ್ತಡಗಳಿಗೆ ಒಳಗಾಗಿದ್ದ ಆಗಿನ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್‌ಗಳು ಈ ರೀತಿಯ ಹಾಸ್ಯಾಸ್ಪದ ಮತ್ತು ಕಾನೂನು ಬಾಹಿರವಾದ ಭೂ ಪರಿವರ್ತನೆ ಕಾರ್ಯಕ್ಕೆ ಅನುಮೋದನೆ ನೀಡಿರುವುದು ಅತ್ಯಂತ ಸ್ಪಷ್ಟವಾಗಿರುತ್ತದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Puja Khedkar: ನಕಲಿ ದಾಖಲೆ ಸೃಷ್ಟಿ; ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ನೇಮಕ ರದ್ದು, ಪರೀಕ್ಷೆಯಿಂದಲೇ ಯುಪಿಎಸ್‌ಸಿ ಬ್ಯಾನ್!

ಇದೇ ಜಮೀನಿಗೆ ಸಂಬಂಧಿಸಿ ದಂತೆ, ದೇವನೂರು 03ನೇ ಹಂತದ ಬಡಾವಣೆ ನಿರ್ಮಾಣಕ್ಕೆಂದು ಭೂಸ್ವಾಧೀನಪಡಿಸಿಕೊಂಡಿದ್ದ ಅಷ್ಟೂ ಜಮೀನುಗಳ ಮಾಲೀಕರುಗಳಿಗೆ ಮೂಡಾದ ಆಯುಕ್ತರು, ಭೂಸ್ವಾಧೀನ ಅಧಿಕಾರಿ ಮತ್ತು ಮುಖ್ಯ ಲೆಕ್ಕಾಧಿಕಾರಿಗಳು ಮೈಸೂರಿನ ಪ್ರಧಾನ ಸಿವಿಲ್‌ ನ್ಯಾಯಾಲಯ ದಲ್ಲಿ ಒಟ್ಟು 1,50,59,642.70 ಗಳಷ್ಟು ಸಂಪೂರ್ಣ ಪರಿಹಾರ ಧನವನ್ನು ಠೇವಣಿ ಇಟ್ಟಿರುತ್ತಾರೆ. ಪ್ರಸ್ತುತ ತನಿಖಾ ಹಂತದಲ್ಲಿರುವ ಮೂಡಾದ ಈ ಬದಲಿ ನಿವೇಶನಗಳ ಹಗರಣದ ತನಿಖೆಗೆ, ಈ ಪತ್ರದೊಂದಿಗೆ ಲಗತ್ತಿಸಿರುವ 25 ಪುಟಗಳ ಎರಡು ದಾಖಲೆಗಳು ಅತ್ಯಂತ ಪ್ರಮುಖ ದಾಖಲೆಗಳಾಗುತ್ತವೆ ಎಂಬುದನ್ನು ಮಾನ್ಯ ಲೋಕಾಯುಕ್ತರ ಗಮನಕ್ಕೆ ತರಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Exit mobile version