Site icon Vistara News

Muda Scam: ರಾಜ್ಯಪಾಲರನ್ನು ಭೇಟಿಯಾದ ಟಿ.ಜೆ.ಅಬ್ರಹಾಂ; ಸಿಎಂ ವಿರುದ್ಧ ತನಿಖೆಗೆ ಮತ್ತಷ್ಟು ದಾಖಲೆ

MUDA scam

ಬೆಂಗಳೂರು: ಮುಡಾ ಹಗರಣ (Muda Scam) ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದ ಆರ್‌ಟಿಐ ಕಾರ್ಯಕರ್ತ ಟಿ. ಜೆ. ಅಬ್ರಹಾಂ ಅವರು ಇದೀಗ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರನ್ನು ಭೇಟಿಯಾಗಿದ್ದಾರೆ. ಈಗಾಗಲೇ ಸಿಎಂ ವಿರುದ್ಧ ಅನೇಕ ದಾಖಲೆಗಳನ್ನು ನೀಡಿದ್ದ ಅಬ್ರಹಾಂ, ಇದೀಗ ಮತ್ತಷ್ಟು ದಾಖಲೆಗಳನ್ನು ನೀಡಿದ್ದಾರೆ.

ರಾಜಭವನಕ್ಕೆ ಬರುವಂತೆ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಸೂಚಿಸಿದ ಹಿನ್ನೆಲೆಯಲ್ಲಿ ಅಬ್ರಹಾಂ ಭೇಟಿಯಾಗಿದ್ದರು. ಮುಡಾ ಹಗರಣ ಕುರಿತು ಮತ್ತಷ್ಟು ದಾಖಲೆಗಳನ್ನು ರಾಜ್ಯಪಾಲರು ಕೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ ರಾಜ್ಯಪಾಲರು ಅನುಮತಿ ಕೊಡುತ್ತಾರಾ ಎಂಬ ಪ್ರಶ್ನೆಗಳು ಮೂಡಿವೆ.

ಆರೋಪದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದೇನೆ ಎಂದ ಟಿ.ಜೆ. ಅಬ್ರಹಾಂ

ರಾಜ್ಯಪಾಲರ ಭೇಟಿ ಬಳಿಕ ಟಿ.ಜೆ. ಅಬ್ರಹಾಂ ಮಾತನಾಡಿ, ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ನನ್ನ ಬೇಡಿಕೆ ಏನಿತ್ತೋ ಅದರ ಮೇರೆಗೆ ಸರ್ಕಾರಕ್ಕೆ ರಾಜ್ಯಪಾಲರು ಶೋಕಾಸ್ ನೊಟೀಸ್ ಕೊಟ್ಟಿದ್ದರು. ಆದರೆ ಸಚಿವ ಸಂಪುಟ ಸಿಎಂ ತಪ್ಪಿಲ್ಲ, ರಾಜ್ಯಪಾಲರು ನೋಟಿಸ್ ಕೊಟ್ಟಿರೋದೇ ತಪ್ಪು ಅಂತ ನಿರ್ಣಯ ಮಾಡಿದೆ. ಅಬ್ರಹಾಂ ಸರಿಯಿಲ್ಲ ಅಂತಲೂ ಸರ್ಕಾರ ಆಪಾದನೆ ಮಾಡಿದೆ. ಹೀಗಾಗಿ ಪ್ರಕರಣದ ಬಗ್ಗೆ ರಾಜ್ಯಪಾಲರಿಗೆ ಸ್ಪಷ್ಟನೆ ಕೊಟ್ಟಿದ್ದೇನೆ ಎಂದು ತಿಳಿಸಿದರು.

ಸರ್ಕಾರ ನನ್ನ ಮೇಲೆ ಮಾಡಿರುವ ಆರೋಪ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದೇನೆ. ನನಗೆ ತಿಳಿದ ಮಟ್ಟಿಗೆ ರಾಜ್ಯಪಾಲರು ಸಿಎಂಗೆ ಎರಡನೇ ಶೋಕಾಸ್ ನೋಟಿಸ್ ಕೊಟ್ಟಿಲ್ಲ. ರಾಜ್ಯಪಾಲರು ಸ್ಪಷ್ಟನೆ ಕೇಳಿದ್ದಾರೆ ಎಂದರೆ ಅವರಿಗೆ ಪ್ರಕರಣವನ್ನು ಮುಂದುವರಿಸಲು ಆಸಕ್ತಿ ಇದೆ ಎಂದರ್ಥ. ಕಳೆದ ಗುರುವಾರ ರಾಜ್ಯಪಾಲರ ಸಮಯ ಕೇಳಿದ್ದೆ, ಇವತ್ತು ಬರಲು ಹೇಳಿದ್ದರು, ಬಂದು ಸ್ಪಷ್ಟೀಕರಣ ಕೊಟ್ಟಿದ್ದೇನೆ ಎಂದರು.

ನನ್ನ ವಿರುದ್ಧ ಯಾವ ದೂರೂ ಇಲ್ಲ. ಸರ್ಕಾರಕ್ಕೆ ನಾನು ನೇರ ಸವಾಲ್ ಹಾಕುತ್ತೇನೆ. ನನ್ನ ವಿರುದ್ಧ ಕೇಸ್ ಹುಡುಕಿ, ಹುಡುಕಲು ಆಗದಿದ್ದರೆ ಹೇಗೆ ಹುಡುಕಬೇಕು ಅಂತ ನನ್ನ ಕೇಳಿ ಎಂದು ಕಿಡಿಕಾರಿದ್ದಾರೆ.

ಏನಿದು ಪ್ರಕರಣ?

ಮುಡಾ ನಿವೇಶನ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಆರ್‌ಟಿಐ ಕಾರ್ಯಕರ್ತ ಟಿ.ಜೆ. ಅಬ್ರಾಹಂ, ರಾಜ್ಯಪಾಲರಿಗೆ ದೂರು ನೀಡಿದ್ದರು. ಇದೇ ದೂರು ಸಿಎಂ ಸಿದ್ದರಾಮಯ್ಯನವರಿಗೆ ಸಂಕಷ್ಟ ತಂದಿಟ್ಟಿದೆ. ಟಿ.ಜೆ. ಅಬ್ರಾಹಂ ನೀಡಿದ ದೂರಿನ ಮೇರೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನಿಮ್ಮ ವಿರುದ್ಧ ಯಾಕೆ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಬಾರದು ಎಂದು ಸಿದ್ದರಾಮಯ್ಯಗೆ ಶೋಕಾಸ್​ ನೋಟಿಸ್ ನೀಡಿದ್ದರು. ​

ಸಿಎಂಗೆ ನೀಡಿರುವ ನೋಟಿಸ್ ವಾಪಸ್ ಪಡೆಯಬೇಕೆಂದು ಸಚಿವ ಸಂಪುಟ ನಿರ್ಣಯ ಅಂಗೀಕರಿಸಿತ್ತು. ಆದರೆ ರಾಜ್ಯಪಾಲರು ಸಚಿವ ಸಂಪುಟದ ನಿರ್ಣಯ ಧಿಕ್ಕರಿಸಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡುತ್ತಾರಾ? ಅಥವಾ ನೋಟಿಸ್ ವಾಪಸ್ ಪಡೆಯುತ್ತಾರಾ ಎಂಬುವುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ | L K Advani: ಬಿಜೆಪಿ ಹಿರಿಯ ನಾಯಕ ಎಲ್‌ ಕೆ ಅಡ್ವಾಣಿ ಮತ್ತೆ ಆಸ್ಪತ್ರೆಗೆ ದಾಖಲು

MUDA scam: ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಪಾಲರಿಗೆ ಮತ್ತೊಂದು ದೂರು ದಾಖಲಾಗಿದೆ. ತಮ್ಮ ಪ್ರಭಾವ ಬೀರಿ ಅಕ್ರಮವಾಗಿ ಜಮೀನು ಡಿನೋಟಿಫೈ ಮಾಡಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ (MUDA scam) ವಿರುದ್ಧ ಪ್ರಕರಣ ದಾಖಲಿಸಲು ಕೋರಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಎಂಬುವವರು ದೂರು ರಾಜ್ಯಪಾಲರಿಗೆ ನೀಡಿದ್ದಾರೆ.

ರಾಜ್ಯಪಾಲರಿಗೆ ದಾಖಲೆ ಸಮೇತ ದೂರು ನೀಡಿರುವ ಮೈಸೂರು ಮೂಲದ ಸ್ನೇಹಮಯಿ ಕೃಷ್ಣ, 1979ರಲ್ಲಿ ಮೈಸೂರು ತಾಲೂಕು ವರುಣದ ಉತ್ತನಹಳ್ಳಿಯಲ್ಲಿ ಆಶ್ರಯ ಮನೆಗಳಿಗಾಗಿ ಭೂಸ್ವಾಧೀನ ಮಾಡಿದ್ದ ಜಮೀನಿಗೆ 30 ವರ್ಷದ ಬಳಿಕ ಡಿನೋಟಿಫೈ ಮಾಡುವಂತೆ ಸಿದ್ದರಾಮಯ್ಯ ಪತ್ರ ಬರೆದಿದ್ದರು. ಮರಪ್ಪ ಎಂಬುವವರ ಹೆಸರಿಗೆ 1.39 ಎಕರೆ ಜಮೀನು ಡಿನೋಟಿಫೈ ಮಾಡುವಂತೆ ಸಿದ್ದರಾಮಯ್ಯ ಶಿಫಾರಸು ಮಾಡಿದ್ದರು. ಮರಪ್ಪ ಎಂಬುವವರಿಗೆ ಸಂಬಂಧವೇ ಇರದಿದ್ದರೂ ನಕಲಿ ದಾಖಲೆ ಆಧರಿಸಿ ಮರಪ್ಪ ಹೆಸರಿಗೆ ಡಿನೋಟಿಫೈ ಮಾಡಲಾಗಿದೆ ಎಂದು ದೂರುದಾರ ಆರೋಪಿಸಿದ್ದಾರೆ.

ಸಿದ್ದರಾಮಯ್ಯ ಪತ್ರ ಆಧರಿಸಿ 14 ತಿಂಗಳ ಬಳಿಕ 1.39 ಎಕರೆಯನ್ನು ಅಂದಿನ ಮೈಸೂರು ಡಿಸಿ ಡಿನೋಟಿಫೈ ಮಾಡಿದ್ದರು. ಆದರೆ, ಡಿಸಿ ಆದೇಶ ಪ್ರಶ್ನಿಸಿ ಫಲಾನುಭವಿಗಳು ಮರು ದೂರು ಸಲ್ಲಿಸಿದ್ದರು. ಮೂಲ ಜಮೀನಿನ ಮಾಲೀಕರು ಮರಪ್ಪ ಅಲ್ಲ, ಆದರೂ ಅವರ ಹೆಸರಿಗೆ ಡಿನೋಟಿಫೈ ಮಾಡಲಾಗಿದೆ. ಡಿನೋಟಿಫೈ ಪ್ರಕ್ರಿಯೆಯಲ್ಲಿ ಸಿದ್ದರಾಮಯ್ಯ ಕೂಡ ಭಾಗಿಯಾದ ಹಿನ್ನೆಲೆ ಸಿಎಂ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ನೇಹಮಯಿ ಕೃಷ್ಣ ಮನವಿ ಮಾಡಿದ್ದಾರೆ.

ಇದನ್ನೂ ಓದಿ | Gruha Lakshmi Scheme: ಮಹಿಳೆಯರಿಗೆ ಗುಡ್‌ ನ್ಯೂಸ್‌; ಇಂದಿನಿಂದಲೇ 2 ತಿಂಗಳ ಗೃಹಲಕ್ಷ್ಮೀ ಯೋಜನೆ ಹಣ ಖಾತೆಗೆ ಜಮೆ

ಸಿಎಂಗೆ ಪ್ರಾಸಿಕ್ಯೂಷನ್‌ ಭಯ

ಮುಡಾ ಅಕ್ರಮದಲ್ಲಿ ಸಿಎಂ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಈಗಾಗಲೇ ಸಚಿವ ಸಂಪುಟ ರಾಜ್ಯಪಾಲರಿಗೆ ಉತ್ತರ ನೀಡಿದೆ. ರಾಜ್ಯ ಸರ್ಕಾರ ಕಳುಹಿಸಿರುವ ನಿರ್ಣಯವನ್ನು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಪರಿಶೀಲನೆ ಮಾಡುತ್ತಿದ್ದಾರೆ. ಒಂದೆಡೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಕೊಡಲು ಸಿದ್ಧತೆ ನಡೆಸುತ್ತಿದ್ದರೆ, ಮತ್ತೊಂದೆಡೆ ಸಿದ್ದರಾಮಯ್ಯ ಟೀಮ್‌ನಿಂದ ಕಾನೂನು ಹೋರಾಟಕ್ಕೆ ಸಿದ್ಧತೆ ಶುರುವಾಗಿದೆ.

Exit mobile version