ಬೆಂಗಳೂರು: ಕಾಂಗ್ರೆಸ್‌ನ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾಗಿ ಕೆಲ ದಿನಗಳ ಹಿಂದಷ್ಟೇ ನೇಮಕಗೊಂಡಿದ್ದ ಹಿರಿಯ ಕಲಾವಿದ ಮುಖ್ಯಮಂತ್ರಿ ಚಂದ್ರು ಪಕ್ಷ ತೊರೆದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಶನಿವಾರ ರಾಜೀನಾಮೆ ಪತ್ರ ಸಲ್ಲಿಸಿರುವ ಚಂದ್ರು, ವೈಯಕ್ತಿಕ ಕಾರಣಕ್ಕಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಬಿಜೆಪಿಯಿಂದ ಕೆಲ ವರ್ಷಗಳ ಹಿಂದಷ್ಟೆ ಹೊರಬಂದಿದ್ದ ಹಿರಿಯ ಕಲಾವಿದ ಇದೀಘ ಮತ್ತೊಂದು ರಾಷ್ಟ್ರೀಯ ಪಕ್ಷವನ್ನೂ ತೊರೆದಿದ್ದಾರೆ.
ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿರುವ ಚಂದ್ರು, ಪತ್ರದ ಪ್ರತಿಯನ್ನು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೂ ತಲುಪಿಸಿದ್ದಾರೆ. ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಿಲ್ಲ. ಸುದೀರ್ಘ ಇತಿಹಾಸವಿರುವ ಕಾಂಗ್ರೆಸ್ ಪಕ್ಷಕ್ಕೆ ಜನಸೇವೆ ಮಾಡುವ ಉದ್ದೇಶದಿಂದ ಸೇರ್ಪಡೆಗೊಂಡಿದ್ದೆ. ಹಾಗೆಯೇ ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ದುಡಿದಿದ್ದೇನೆ. ಇದಕ್ಕೆ ನೆರವಾದ ಎಲ್ಲರಿಗೂ ಧನ್ಯವಾದ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | ʼಕೈʼಬಿಟ್ಟ ಸಿಬಲ್; ಸಮಾಜವಾದಿ ಪಕ್ಷದ ಬೆಂಬಲದಿಂದ ರಾಜ್ಯಸಭೆಗೆ ಸ್ಪರ್ಧೆ
ರಾಮಕೃಷ್ಣ ಹೆಗಡೆ ಅವರ ಒತ್ತಾಯದ ಮೇರೆಗೆ ಗೌರಿಬಿದನೂರಿನಿಂದ ಒಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಮುಖ್ಯಮಂತ್ರಿ ಚಂದ್ರು ಮುಂದಿನ ದಿನಗಳಲ್ಲಿ ಬಿಜೆಪಿ ಸಕ್ರಿಯ ಕಾರ್ಯಕರ್ತರಾಗಿ ಮುಂದುವರಿದರು. ಕರ್ನಾಟಕ ವಿಧಾನ ಪರಿಷತ್‌ನ ಸದಸ್ಯರಾಗಿದ್ದರು. ಬಿಜೆಪಿ ಅವಧಿಯಲ್ಲೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಿಸಲಾಗಿತ್ತು. 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಅಧಿಕಾರಕ್ಕೆ ಬಂದು ಉಳಿದ ಅಕಾಡೆಮಿಗಳ ಅಧ್ಯಕ್ಷರು ಬದಲಾದರೂ ಮುಖ್ಯಮಂತ್ರಿ ಚಂದ್ರು ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ ಮುಂದುವರಿದಿದ್ದರು. ಹಾಗೆಯೇ ನಿಧಾನವಾಗಿ ಕಾಂಗ್ರೆಸ್ ಕಡೆ ಗುರುತಿಸಿಕೊಂಡಿದ್ದರು.
ರಾಜ್ಯಸಭೆ ಟಿಕೆಟ್ ನಿರೀಕ್ಷೆಯಲ್ಲಿದ್ದ ಇವರನ್ನು ಕಾಂಗ್ರೆಸ್ ನಾಯಕರು ಪರಿಗಣಿಸಲಿಲ್ಲ ಎಂಬ ಅಸಮಾಧಾನವೇ ಚಂದ್ರು ಪಕ್ಷ ತೊರೆಯಲು ಪ್ರಮುಖ ಕಾರಣ ಎನ್ನಲಾಗಿದೆ. ಹಾಗಾಗಿಯೇ ರಾಜೀನಾಮೆ ಸಲ್ಲಿಸುವ ಮೂಲಕ ಪಕ್ಷದ ನಾಯಕರ ವಿರುದ್ಧದ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ಹೊರ ಹಾಕಿದ್ದಾರೆ. ಚಂದ್ರು ಅವರು ತಮ್ಮ ಮುಂದಿನ ನಡೆಯ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.
ಇದನ್ನೂ ಓದಿ | ಬಿಜೆಪಿ ಬೆಂಬಲಿತ ಸಂಘಟನೆಗಳು ಗೊಂದಲ ಸೃಷ್ಟಿಸುತ್ತಿವೆ: ಡಿಕೆಶಿ ಆರೋಪ